ಶರಣ ಬಹುರೂಪಿ ಚೌಡಯ್ಯನವರ ಐಕ್ಯ ಸ್ಥಳ ಭೈರಿದೇವರ ಕೊಪ್ಪ (ಹುಬ್ಬಳ್ಳಿ )
12 ನೇ ಶತಮಾನದಲ್ಲಿ ಕಲ್ಯಾಣವು ಅನೇಕ ಶರಣರ ಸಾಧಕರ ಕೇಂದ್ರಯಾಗಿತ್ತು .ಹಲವು ವೃತ್ತಿಯ ಜನರು ಕಲ್ಯಾಣಕ್ಕೆ ಬಂದು ತಮ್ಮ ಕಾಯಕ ನಡೆಸಿಕೊಂಡು ಸಮತೆ ಶಾಂತಿ ಪ್ರೀತಿಯ ಸಹ ಬಾಳ್ವೆ ನಡೆಸಿದರು. ವರ್ಗ ವರ್ಣ ವಿರುದ್ಧ ಸಮರ ಸಾರಿದ ಶರಣರು ಜಗತ್ತಿನ ಸಮತೆಯ ಶಿಲ್ಪಿಗಳು . ಇಂತಹ ಒಂದು ಅಪೂರ್ವ ಚಳುವಳಿಯಲ್ಲಿ ಒಬ್ಬ ಬಸವ ಪ್ರೇಮಿ ದಿಟ್ಟ ಶರಣ ಬಹುರೂಪಿ ಚೌಡಯ್ಯ ಬಹುರೂಪಿಯ ಕಾಯಕದ ಶ್ರೇಷ್ಠ ಕಲಾವಿದ ಅತ್ಯಂತ ಸುಂದರ ಅನುಭಾವದಿಂದ ಶರಣರ ಮಾನವ ಗೆದ್ದ ಧೀಮಂತ ಶರಣನು .
ಶರಣ ಬಹುರೂಪಿ ಚೌಡಯ್ಯ .ಇವನ ಹುಟ್ಟೂರು ರೇಕಳಿಕೆ ಬಾಲ್ಯದಿಂದಲೇ ಆಧ್ಯಾತ್ಮಿಕ ಮಾರ್ಗಕ್ಕೆ ಮನ ಸೋತು ವೇಷ ಭೂಷಣ ಬಹು ಪಾತ್ರಾಭಿನಯದ ಮೂಲಕ ಜನರನ್ನು ರಂಜಿಸುವ ಜೊತೆಗೆ ಅವರ ಆಪ್ತ ಮಾರ್ಗ ದರ್ಶಕನಾಗಿದ್ದನು.ಕಲ್ಯಾಣದ ಶರಣರಲ್ಲಿ ಬಹು ಮುಖ್ಯ ಪಾತ್ರ ವಹಿಸಿದ ಶರಣ ಬಹುರೂಪಿ ಚೌಡಯ್ಯ ರೇಕಣ್ಣ ಪ್ರಿಯ ನಾಗಿನಾಥ ಎಂಬ ಅಂಕಿತದೊಂದಿಗೆ 66 ವಚನಗಳನ್ನು ರಚಿಸಿದ್ದಾರೆ. ಇವನ ದೀಕ್ಷಾ ಗುರು ರೇಕನಾಥ ಜ್ಞಾನ ಗುರು ನಾಗಿನಾಥ . ಈತನು ನಾಥ ಪರಂಪರೆಯಿಂದ ಪ್ರಭಾವಿತನಾಗಿ ಕಲ್ಯಾಣವನ್ನೇ ತನ್ನ ಕಾರ್ಯ ಕ್ಷೇತ್ರವನ್ನಾಗಿ ಮಾಡಿಕೊಂಡವನು.
ಗಣ ಸಹಸ್ರ ನಾಮ ,ಗುರುರಾಜ ಚರಿತ್ರೆ ,ವೀರಶೈವಾಮೃತ ಮಹಾಪುರಾಣ , ಭೈರವೇಶ್ವರ ಕಾವ್ಯದ ಕಥಾ ಮಣಿ ಸೂತ್ರ ರತ್ನಾಕರ , ಕೃತಿಗಳಲ್ಲಿ ಜಾನಪದ ಹಾಡು ಹಂತಿ ಪದ ಲಾವಣಿ ಪದ ಸುಗ್ಗಿ ಪದಗಳಲ್ಲಿ ಶರಣ ಬಹುರೂಪಿ ಚೌಡಯ್ಯನವರ ಉಲ್ಲೇಖ ದಾಖಲೆ ಕಾಣುತ್ತೇವೆ.ಬಹುರೂಪಿಯಾ ವೃತ್ತಿ ಈತನ ಪೂರ್ವಜರಿಂದ ಬಂದ ಬಳುವಳಿ. ಆದರೆ ಶರಣ ಬಹುರೂಪಿ ಚೌಡಯ್ಯ ಈ ಸುಂದರ ಕಲೆಯನ್ನು ಬಳಸಿಕೊಂಡ ಅಪ್ಪ ಬಸವಣ್ಣನವರ ಕಾಯಕ ದಾಸೋಹ ಸಿದ್ಧಾಂತದಲ್ಲಿ ನಂಬಿಕೆ ಶೃದ್ಧೆ ರೂಢಿಸಿಕೊಂಡು ಶರಣರ ಆಚರಣೆ ವೃತ ನೇಮಗಳು ಹೇಗಿರಬೇಕು ಎಂದು ಬೇರೆ ಬೇರೆ ಪಾತ್ರಗಳಲ್ಲಿ ರಸವತ್ತಾಗಿ
ಹಾಸ್ಯ ,ಶೃಂಗಾರ ,ವಿಡಂಬನೆ ಟೀಕೆಗಳ ಮೂಲಕ ಜನರನ್ನು ಎಚ್ಚರಿಸುವ ದಿಟ್ಟ ಗಣಾಚಾರ ಈತನದಾಗಿತ್ತು..
ಗುರು ಎನ್ನ ಮುಟ್ಟಿ ಗುರು ಶುದ್ಧವಾದನಯ್ಯ.
ಲಿಂಗ ಎನ್ನ ಮುಟ್ಟಿ ಲಿಂಗ ಶುದ್ಧವಾಯಿತ್ತಯ್ಯ.
ಜಂಗಮ ಎನ್ನ ಮುಟ್ಟಿ ಜಂಗಮ ಶುದ್ಧವಾದನಯ್ಯ.
ಪ್ರಸಾದ ಎನ್ನ ಮುಟ್ಟಿ ಪ್ರಸಾದ ಶುದ್ಧವಾಯಿತ್ತಯ್ಯ.
ಈ ಚತುರ್ವಿಧ ಎನ್ನ ಮುಟ್ಟಿ ಶುದ್ಧವಾಯಿತ್ತು ಕಾಣಾ
ರೇಕಣ್ಣಪ್ರಿಯ ನಾಗಿನಾಥಾ. ಸಮಗ್ರ ವಚನ ಸಂಪುಟ: 8 ವಚನದ ಸಂಖ್ಯೆ: 151
ಪ್ರಾಯಶ ತಾನಿಲ್ಲದೆ ಗುರುವಿನ ಅಸ್ತಿತ್ವವೇ ಇಲ್ಲ , ತನ್ನತನದಿಂದ ಗುರುವು ಶುದ್ಧನಾಗುವನು ಎಂದು ಹೇಳುವ ದಿಟ್ಟತನ ಅಮೋಘವಾದದ್ದು. ಲಿಂಗ ಎನ್ನ ಮುಟ್ಟಿ ಲಿಂಗ ಶುದ್ಧವಾಯಿತ್ತಯ್ಯ. ಲಿಂಗವೆಂಬ ಸಮಷ್ಟಿ ಭಾವವು ಸಾಧಕನ ಕುರುಹಿಗೆ ತಲುಪಿ ತನ್ಮೂಲಕ ಲಿಂಗವು ಶುದ್ಧವಾಯಿತು.ಜಂಗಮ ಅಂದರೆ ಸಮಾಜವು ಶರಣನ ವ್ಯಕ್ತಿ ತತ್ವ ನಿಷ್ಠೆಯಿಂದ ಜಂಗಮವು ಶುದ್ಧೀಕರಣಗೊಂಡಿತ್ತು . ಪ್ರಸನ್ನ ಪ್ರಸಾದ ಭಾವವು ತನ್ನ ಆತ್ಮಕ್ಕೆ ಚುಳುಕಾಗಿ ಪ್ರಸಾದವು ಶುದ್ಧೀಕರಣಗೊಂಡಿತ್ತು . ಈ ಚತುರ್ವಿಧ ಎನ್ನ ಮುಟ್ಟಿ ಶುದ್ಧವಾಯಿತ್ತು ಕಾಣಾ ರೇಕಣ್ಣಪ್ರಿಯ ನಾಗಿನಾಥಾ. ಹೀಗೆ ಸತ್ಯ ಶುದ್ಧ ಕಾಯಕದಲ್ಲಿದ್ದವನ ಭಕ್ತಿಯ ಸ್ಪರ್ಶದಿಂದ ಗುರು ಲಿಂಗ ಜಂಗಮ ಪ್ರಸಾದ ಗಳು ಶುದ್ಧಗೊಂಡವು ಎಂದು ಅಭಿಮಾನ ವಿಧೇಯತನದಿಂದ ಆತ್ಮ ವಿಶ್ವಾಸಕ್ಕೆ ದಾರಿಯಾಗುತ್ತಾನೆ ಬಹುರೂಪಿ ಚೌಡಯ್ಯ .
ಬಹುರೂಪಿ ಚೌಡಯ್ಯನವರ ವಚನಗಳಲ್ಲಿ ಗಣಾಚಾರ ಲಿಂಗಾಯತ ಧರ್ಮ ತತ್ವದ ನಿಷ್ಠತೆ ,ಲಿಂಗಾಂಗ ಸಾಮರಸ್ಯ ,ಜಂಗಮ ನಿಷ್ಠೆ ,ನಿಷ್ಟುರ ನೇರ ನುಡಿಗಳು, ಬಹಳಷ್ಟು ವಚನಗಳಲ್ಲಿ ಬೆಡಗಿನ ವೈಭವವನ್ನು ಕಾಣಬಹುದು. ಬಹುತೇಕ ವಚನಗಳಲ್ಲಿ ಕೊನೆಗೆ ರೇಕಣ್ಣಪ್ರಿಯ ನಾಗಿನಾಥಾ ಬಸವನಿಂದ ಬದುಕಿತೀ ಲೋಕವೆಲ್ಲಾ ಎಂದು ಕೊನೆಗೊಳಿಸಿ ತನ್ನ ಭಕ್ತಿ ಭಾವವನ್ನು ವ್ಯಕ್ತ ಪಡಿಸುತ್ತಾನೆ.
ಗಾರುಡಿಗನ ವಿಷವಡರಬಲ್ಲುದೆ ?
ಸೂರ್ಯನ ಮಂಜು ಮುಸುಕಬಲ್ಲುದೆ ?
ಗಾಳಿಯ ಮೊಟ್ಟೆಯ ಕಟ್ಟಬಹುದೆ ?
ಅಗ್ನಿಯ ಕೈಯಿಂದ ಆಕಾಶ ಬೇಯಬಲ್ಲುದೆ ?
ನಿಮ್ಮನರಿದ ನಿಜಯೋಗಿಗೆ ಕರ್ಮಪಾಶವೆಲ್ಲಿಯದೊ
ರೇಕಣ್ಣಪ್ರಿಯ ನಾಗಿನಾಥ .
ಹಾವನ್ನು ಆಡಿಸುವವ ಗಾರುಡಿಗನಿಗೆ ಹಾವು ಕಚ್ಚ ಬಲ್ಲುದೇ ? ಮಂಜು ಎಷ್ಟೇ ದಟ್ಟವಾಗಿದ್ದಾರೂ ಸೂರ್ಯನಿಗೆ ಮುಸುಕಾಗಬಲ್ಲುದೆ ಗಾಳಿಯನ್ನು ಮೂಟೆಯಲ್ಲಿ ಕಟ್ಟಿ ಹಿಡಿಯಬಹುದೇ? ಅಗ್ನಿಯಿಂದ ಆಕಾಶವನ್ನು ಬೇಯಿಸಬಲ್ಲುದೆ. ನಿಮ್ಮನರಿದ ನಿಜಯೋಗಿಗೆ ಕರ್ಮಪಾಶವೆಲ್ಲಿಯದೊ
ರೇಕಣ್ಣಪ್ರಿಯ ನಾಗಿನಾಥ .ಇಲ್ಲಿ ಸಮಷ್ಟಿಯನ್ನು ಅರಿಯುವ ಪ್ರಜ್ಞೆ ಇದ್ದಾರೆ ಅವನಿಗೆ ಕರ್ಮಾ ಪಾಶವು ಕಟ್ಟಿ ಹಾಕಲು ಸಾಧ್ಯವಿಲ್ಲ.
ಬಹುರೂಪಿ ಚೌಡಯ್ಯನವರ ವಚನಗಳಲ್ಲಿ ಬಸವಣ್ಣ ಚೆನ್ನ ಬಸವಣ್ಣ ಅಲ್ಲಮ ಮಡಿವಾಳ ಮಾಚಿದೇವ ಮುಂತಾದವರನ್ನು ಪ್ರಾಸಂಗಿಕವಾಗಿ ನೆನೆದಿರುವುದನ್ನು ಕಾಣಬಹುದು. ಬಹುರೂಪಿ ಚೌಡಯ್ಯನವರ ವಚನಗಳಲ್ಲಿ ಬೆಡಗು ಇದ್ದರೂ ಅವುಗಳಲ್ಲಿನ ಸರಳತೆ ಸೊಬಗು ಅಪಾರವಾಗಿದೆ.
ಕೈಯ ಮರದು ಕಾದುವ ಅಂಕವದೇನೊ ?
ಭಾವ ಮರದು ನೋಡುವ ನೋಟವದೇನೊ ?
ಭಯವ ಮರದು ಮಾಡುವ ಭಕ್ತಿಯದೇನೊ ?
ರೇಕಣ್ಣಪ್ರಿಯ ನಾಗಿನಾಥನಲ್ಲಿ ಗುರುವ ಮರದು
ಲಿಂಗವನೊಲಿಸಿದೆನೆಂದಡೆ ಆ ಉಭಯ ಗುರುಲಿಂಗವೆರಡೂ ಇಲ್ಲ.
ಭಕ್ತನಾದವನು ಹೇಗಿರಬೇಕು ಎನ್ನುವ ಉದಾಹರಣೆಯನ್ನು ಹೀಗೆ ಹೇಳುತ್ತಾನೆ . ಖಡ್ಗವಿಲ್ಲದೆ ಕಾದಾಡುವ ಸೈನಿಕನು ದಡ್ಡತನ .ಯಾವುದೇ ಭಾವಯಿಲ್ಲದೆ ನೋಡುವ ಶೂನ್ಯ ನೋಟದ ಗಮ್ಯತೆ ಪ್ರಯೋಜನ ,ಭಯ ಶೃದ್ಧೆ ನಿಷ್ಠೆಯಿಲ್ಲದೆ ಮಾಡುವ ಸೇವೆ ಭಕ್ತಿ ರೇಕಣ್ಣ ಪ್ರಿಯ ನಾಗನಾಥನಲ್ಲಿ ಅರಿವೆಂಬ ಗುರುವ ಮರೆತು ಲಿಂಗವನೊಲಿಸುವೆಡೆ ಅಲ್ಲಿ ಗುರು ಲಿಂಗಗಳ ಅಸ್ತಿತ್ವವೇ ಇಲ್ಲ ಎಂದು ದಿಟ್ಟವಾಗಿ ಹೇಳಿದ್ದಾನೆ. ವಚನಗಳಲ್ಲಿ ದಿಟ್ಟತನ ಸಾಮಾಜಿಕ ಕಳಕಳಿಯನ್ನು ಕಾಣಬಹುದು .
ಅಲ್ಲಿಯ ಬಹುರೂಪ ಇಲ್ಲಿಗೆ ಬಂದಿತ್ತು.
ಇಲ್ಲಿಯ ಬಹುರೂಪ ಎಲ್ಲಿ ಅಡಗಿತ್ತೋ?
ಎನ್ನ ಬಹುರೂಪ ಬಲ್ಲವರಾರೋ ?
ನಾದ ಹರಿದು ಸ್ವರವು ಸೂಸಿದ ಬಳಿಕ
ಈ ಬಹುರೂಪ ಬಲ್ಲವರಾರೋ ?
ರೇಕಣ್ಣಪ್ರಿಯ ನಾಗಿನಾಥನಲ್ಲಿ
ಬಸವಣ್ಣನಿಂದ ಬದುಕಿತೀ ಲೋಕವೆಲ್ಲ.
ಬಹುರೂಪಿ ಚೌಡಯ್ಯನು ರೆಕಳಿಕೆ ಗ್ರಾಮದವನು ಅವರ ಕುಲ ಕಸುಬು ಬಹುರೂಪದ ಪಾತ್ರ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ಜಾನಪದ ಕಲೆಯ ವೃತ್ತಿ . ಇದನ್ನು ಅತ್ಯಂತ ಸೂಕ್ಷ್ಮವಾಗಿ ಹೀಗೆ ಹೇಳಿದ್ದಾನೆ.ಅಲ್ಲಿಯ ಬಹುರೂಪ ಇಲ್ಲಿಗೆ ಬಂದಿತ್ತು. ಅಂದರೆ ಅವನ ಪೂರ್ವಾಶ್ರಮದ ಕುಲ ಕಸಬು ಕಲ್ಯಾಣಕ್ಕೆ ಬಂದಿತ್ತು . ಕಲ್ಯಾಣಕ್ಕೆ ಕುಲ ಕಸಬು ಬಂದ ಮೇಲೆ ಕಾಯಕದ ಜೊತೆಗೆ ಅನುಭಾವ ದಾಸೋಹ ಮಾಡಿದ ಶರಣ ಬಹುರೂಪಿ ಚೌಡಯ್ಯನು ಇಲ್ಲಿನ ಬಹುರೂಪತನವು ಎತ್ತ ಹೋಯಿತು ಎಂಬ ಅರಿವಿಲ್ಲ ಲೆಕ್ಕವಿಲ್ಲವೆಂದಿದ್ದಾನೆ.
ತಾನು ವ್ಯಕ್ತಿಗತ ಮಾಡಿದ ಕ್ರಿಯೆಯ ಬಹುರೂಪದ ಲೆಕ್ಕ ಬಲ್ಲವರಾರು .ತನ್ನನ್ನು ಪ್ರಶ್ನಿಸಬೇಕೆನ್ನುವ ಅಭಿಲಾಷೆ ಚೌಡಯ್ಯನದು. ಉತ್ತಮ ಆತ್ಮ ನಿವೇದನೆ ವಿಮರ್ಶೆಗೆ ಒಳಪಡುವ ಸುಂದರ ವಿಶ್ಲೇಷಣೆಯನ್ನು ವಚನಗಳಲ್ಲಿ ಕಾಣಬಹುದು.
ನಾದ ಹರಿದು ಸ್ವರವು ಸೂಸಿದ ಬಳಿಕ ಮನುಷ್ಯನು ಅಸ್ತಂಗತನಾದ ಮೇಲೆ ತೀರಿದ ಮೇಲೆ ಆತನ ಬಹುರೂಪತನವನ್ನು ಯಾರು ಅಳೆಯುವರು ಎಂದು ಕೇಳಿದ್ದಾನೆ, ನಾದ ಬಿಂದು ಕಳಾತೀತವಾದ ಈ ಜಗತ್ತು ಬಸವಣ್ಣನಿಂದ ಬದುಕಿತೀ ಲೋಕವೆಲ್ಲ ಎಂದು ಹೆಮ್ಮೆಯಿಂದ ಬಸವಣ್ಣನವರ ಬಗೆಗಿನ ಬಗ್ಗೆ ಚೌಡಯ್ಯನವರಿಗಿರುವ ಅಪಾರ ಗೌರವ ಹೊರ ಹಾಕಿದ್ದಾನೆ.
ಕಲ್ಯಾಣ ಕ್ರಾಂತಿಯ ನಂತರ ರಕ್ತ ಸಿಕ್ತ ಹೋರಾಟದಲ್ಲಿ ಚೆನ್ನ ಬಸವಣ್ಣನವರ ನೇತೃತ್ವದಲ್ಲಿ ಮಡಿವಾಳ ಮಾಚಿದೇವರು ಕಕ್ಕ್ಯಯ್ಯ ಚೌಡಯ್ಯನವರು ಶರಣ ಸೇನೆಯನ್ನು ಹುರುದುಂಬಿಸಿ ಶರಣರ ವಚನಗಳ ಕಟ್ಟನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ಸೋವಿದೇವನ ಸೈನಿಕರಿಗೆ ಪ್ರತಿರೋಧ ತೋರಿಸುತ್ತಾ. ಮಾದನ ಹಿಪ್ಪರಗಿ ಮಾರ್ಗವಾಗಿ ತಮ್ಮ ಸಂಘರ್ಷ ಮುಂದುವರೆಸುತ್ತಾರೆ . ಬೆಳಗಾವಿ ಜಿಲ್ಲೆ ಕಲ್ಯಾಣ ಕ್ರಾಂತಿಯ ರಕ್ತದ ಕಲೆಗಳನ್ನು ಗುರುತಿಸುವ ಭೂ ಪ್ರದೇಶ ,ಖಾನಾಪುರ ಉಳವಿ ಇದು ಕದ೦ಬರ ಆಡಳಿತಕ್ಕೆ ಒಳಪಟ್ಟಿತ್ತು.ಕದ೦ಬರ ವಿಕ್ರಮಾದಿತ್ಯ .ಕಲ್ಯಾಣ ಚಾಲುಕ್ಯ ವಂಶದ ನೂರ್ಮಡಿ ತೈಲಪ ಅರಸನ ದಾಯಾದಿಗಳು. ನೂರ್ಮಡಿ ತೈಲಪನನ್ನು ಪಲ್ಲಟಗೊಳಿಸಿ ಅರಾಜಕತೆ ಹುಟ್ಟುಹಾಕಿದ ಕಳಚೂರ್ಯರ ಮೇಲೆ ಆಕ್ರೋಶ ಹೊಂದಿದ ಕದಂಬರು ಬಿಜ್ಜಳನ ವಿರುದ್ಧ ಶರಣರಿಗೆ ಆಶ್ರಯ ನೀಡಲು ಯೋಚಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ಬರುವ ಬಸವನ ಕುಡಚಿ ಹಿರೆಬಾಗೆವಾಡಿ ಚಿಕ್ಕ ಬಾಗೇವಾಡಿ ಹುಣಶಿಕಟ್ಟಿ ತಲ್ಲೂರು (ತಲೆ ಉರುಳಿಸಿದ ಊರು.) .ಮುರಗೋಡ ಕಾರಿಮನಿ. ಕಾದ್ರೋಳಿ ,ಜಗಳ ಬೆಟ್ಟ ,ಲಿಂಗನಮಠ ಇಲ್ಲಿಂದ ಮುಂದೆ ಹೆಣ ಕೊಳ್ಳ , ಕೊನೆಗೆ ಉಳವಿಗೆ ಒಂದು ತಂಡ ಹೋಯಿತು.ಇನ್ನೊಂದು ತಂಡವು ಮುರುಗೋಡದಿಂದ ಕಟಕೋಳ ಗೊಡಚಿ ತೊರಗಲ್ಲು ಮುನವಳ್ಳಿ ಸವದತ್ತಿ ಧಾರವಾಡ ಮಾರ್ಗವಾಗಿ ಉಳವಿಗೆ ಒಂದು ತಂಡ ಇನ್ನೊಂದು ತಂಡವು ಹುಬ್ಬಳಿಯ ಮಾರ್ಗವಾಗಿ ಬೇರೆ ಬೇರೆ ಪ್ರದೇಶಕ್ಕೆ ಹೋಗಿರುವುದನ್ನು ಅನೇಕರ ಅಭಿಪ್ರಾಯ ಮತ್ತು ಸಂಶೋಧನೆಯಿಂದ ತಿಳಿದು ಬರುತ್ತದೆ.
ಧಾರವಾಡದಲ್ಲಿ ಕೆಲ ಕಾಲ ತಂಗಿದ್ದ ಚೆನ್ನ ಬಸವಣ್ಣ ಮತ್ತು ಅನೇಕ ಶರಣರು ಹುಬ್ಬಳಿಗೆ ಹೆಜ್ಜೆ ಹಾಕುತ್ತಾರೆ ದಾರಿ ಮಧ್ಯೆ ಅಂದರೆ ಹುಬ್ಬಳ್ಳಿಗೆ 10 ಕಿಲೋ ಮೀಟರ್ ಅಂತರದಲ್ಲಿರುವ ಭೈರಿ ದೇವರ ಕೊಪ್ಪವು (ಬಹು ರೂಪಿ ದೇವರ ಕೊಪ್ಪ) ಅಲ್ಲಿ ತನ್ನ ಕಾಯಕದ ಸಹಾಯಕರೊಂದಿಗೆ ಹಲವು ವರ್ಷಗಳಿದ್ದು ಅಲ್ಲಿಯೇ ಐಕ್ಯರಾಗುತ್ತಾರೆ.
ಭೈರಿದೇವರಕೊಪ್ಪದಲ್ಲಿ ಬಹುರೂಪಿ ಚೌಡಯ್ಯನವರು ಐಕ್ಯರಾಗಿದ್ದರ ಬಗ್ಗೆ ಅನೇಕ ಐತಿಹ್ಯಗಳಿವೆ. ಅಲ್ಲಿಂದ ಕೆಲ ಅಂತರದಲ್ಲಿ ಸಾವಿರಾರು ಶರಣರು
ಕೆಲ ಕಾಲ ಉಳಿದುಕೊಂಡರು ಕಲ್ಯಾಣದ ನೆನೆಪಿಗೊಸ್ಕರ ಕೆರೆ ಕಟ್ಟಿಕೊಂಡು ಅಂದು ಶರಣರು ಉಳಿದ ಕಲ್ಯಾಣವೇ ಇಂದಿನ ಉಣಕಲ್ಲ . ಅನೇಕ ದಿನಗಳಿಂದ ನನ್ನನ್ನು ಕಾಡುತ್ತಿರುವ ಸಮಾಧಿಯ ಶೋಧನೆಗೆ ಸಹಾಯಕ್ಕೆ ಬಂದವರು ಶ್ರೀ ಬಿ ಜಿ ಹೊಸಗೌಡರು ನವನಗರದಲ್ಲಿ ವಾಸವಾಗಿರುವ ಅಪ್ಪಟ ಬಸವ ಭಕ್ತರು . ಅವರನ್ನು ಹಲವು ಬಾರಿ ಯೋಚಿಸಿದಾಗ ಅವರು ನನ್ನಅಲ್ಲಿಗೆ ಕರೆದುಕೊಂಡು ಹೋದರು. ಭೈರಿದೇವರ ಕೊಪ್ಪದ ಊರೊಳಗೆ ಒಂದು ಸುಂದರ ಶಾಂತವಾದ ಗವಿಯು ಕಂಡು ಬಂತು.ಅಲ್ಲಿರುವ ಅನೇಕರನ್ನು ಮತ್ತು ಪೂಜಾರಿಗಳನ್ನು ಪ್ರಶ್ನಿಸಿದಾಗ ಅವರು ಇದು ಹನ್ನೆರಡನೆಯ ಶತಮಾನದ ಶರಣರೊಬ್ಬರ ಸಮಾಧಿಯೆಂದು ಹೇಳಿದರು. ಅಲ್ಪ ಸ್ವಲ್ಪ ಓದಿದ ಅವರಿಗೆ ಇತಿಹಾಸ ಚರಿತ್ರೆಯ ಮಾಹಿತಿ ಇರಲಿಲ್ಲ.
ಬಸವ ಕಲ್ಯಾಣದ ಮಾದರಿಯಲ್ಲಿನ ಅರುಹಿನ ಮನೆ ಒಳಗೆ ಇನ್ನೊಂದು ಪುಟ್ಟ ಗುಹೆ. ರೈಲ್ವೆ ಹಳಿಗಳನ್ನು ದಾಟಿ ಹೋದಾಗ ಅಲ್ಲಿಯೂ ಮೂರು ಅಜ್ಞಾತ ಶರಣರ ಸಮಾಧಿಗಳು ಕಂಡು ಬಂದವು. ಇವು ಬಹುರೂಪಿ ಚೌಡಯ್ಯನವರ ಸಹಚರರ ಸಮಾಧಿಗಳಿರ ಬಹುದು.
ನಮಗೆ ಇದು ಬಹುರೂಪಿ ಚೌಡಯ್ಯನವರ ಸಮಾಧಿ ಎನ್ನಲು ಇನ್ನೊಂದು ಪ್ರಬಲ ಸಾಕ್ಷಿ ಮಾಹಿತಿ ಎಂದರೆ ಭೈರಿದೇವರಕೊಪ್ಪದಲ್ಲಿ ಬಹುರೂಪಿ ಚೌಡಯ್ಯನವರ ಸಮಾಧಿ ಬಳಿ ಕಾಡ ಸಿದ್ಧೇಶ್ವರರ ಫೋಟೋ ಮತ್ತು ಕಟ್ಟಿಗೆಯ ದಂಡ ಕಂಡು ಬಂತು. ಕ್ರಿಶ 1725 ರಲ್ಲಿ ಬರುವ ಸಿದ್ಧ ಪರಂಪರೆಯ ಕಾಡ ಸಿದ್ಧೇಶ್ವರರು ಸುಮಾರು 500 ವಚನಗಳನ್ನು ರಚಿಸಿದ್ದಾರೆ. ಒಂದು ಪ್ರಕಾರ ಸಿದ್ಧ ಪರಂಪರೆಗೂ ನಾಥ ಪರಂಪರೆಗೂ ಸ್ವಲ್ಪ ಸಾಮ್ಯತೆ ಇದ್ದು ಅಧ್ಯಯನ ಆಶ್ರಯ ಸಾಧನೆ ಯೋಗಗಲ್ಲಿ ಸಹ ಭಾಗಿತ್ವವು ಕಂಡು ಬರುವುದು ಸಹಜ .
ಅಷ್ಟೇ ಅಲ್ಲದೆ ಹದಿನಾರನೆಯ ಶತಮಾನದಲ್ಲಿ ಪರಿಷ್ಕರಣೆಗೊಂಡ ವಚನಗಳಲ್ಲಿನ ವೀರಶೈವ ಪದ ಬಳಕೆಯಾಗಿದ್ದನ್ನು ನೋಡಿದರೆ ಮತ್ತು ಬಹುರೂಪಿ ಚೌಡಯ್ಯನವರ ಒಂದೆರಡು ವಚನಗಳಲ್ಲಿ ವೀರಶೈವ ಪದ ಬಳಕೆಯಾಗಿದ್ದನ್ನು ಕಂಡರೆ ಕಾಡಸಿದ್ದೇಶ್ವರ ಶರಣರು ತಮ್ಮ ವಚನಗಳ ಜೊತೆಗೆ ಬಹುರೂಪಿ ಚೌಡಯ್ಯನವರ ವಚನಗಳನ್ನು ಪಾಠಾಂತರ ಮಾಡಿರುವ ಸಾಧ್ಯತೆ ಇದೆ,ಹೀಗಾಗಿ ಈ ಗವಿಯಲ್ಲಿರುವ ಸಮಾಧಿಯು ಹನ್ನೆರಡನೆಯ ಶತಮಾನದ ಬಹುರೂಪಿ ಚೌಡಯ್ಯನವರ ಸಮಾಧಿ ಎಂದು ಹೇಳಲು ಹೆಚ್ಚು ಪುಷ್ಠಿ ಸಿಗುತ್ತದೆ.
ಶರಣರ ಸಮಾಧಿಯ ಅನ್ವೇಷಣೆಯಲ್ಲಿ ನನ್ನನ್ನು ನಾನು ಕಳೆದ ಮೂವತ್ತು ವರುಷಗಳಿಂದ ತೊಡಗಿಸುವದರಿಂದ . ಶರಣ ಸಮಾಧಿ ಕಾಲ ಇತಿಹಾಸ ಚರಿತ್ರೆಯ ಆಳವಾದ ಅಧ್ಯಯನದ ಅಗತ್ಯವಿದೆ ಎಂದು ನನ್ನ ಅಭಿಮತ.
ನಾನು (M.PHARM Ph.D)ಔಷಧಶಾಸ್ತ್ರ ಸ್ನಾತ್ತಕೋತ್ತರ ಮತ್ತು ಪಿ ಎಚ್ ಡಿ ಪಡೆದ ಪ್ರಾಧ್ಯಾಪಕ ಆದರೆ ಬಾಲದಿಂದಲೂ ಶರಣ ತತ್ವ ಬಸವ ಪ್ರಜ್ಞೆಗೆ ಮಾರು ಹೋಗಿ ಅವರ ಚರಿತ್ರೆ ಇತಿಹಾಸ ವಚನ ನಿರ್ವಚನ,ಈಗ ಸಮಾಧಿಯ ವಿಷಯದಲ್ಲಿ ಆಸ್ಥೆ ವಹಿಸಿ ಅಧ್ಯಯನ ಮಾಡುವವನು .
ನನ್ನ ಅಧ್ಯಯನದಲ್ಲಿ ಬರುವ ಸಾಧ್ಯತೆ ಸಂಭಾವ್ಯತೆಗಳನ್ನು ಕೂಲಂಕುಷವಾಗಿ ಅಧ್ಯಯನಮಾಡಿ ಪರಾಮರ್ಶೆಗೆ ಒಳಪಡಿಸಿ ನಿರ್ಧರಿಸುತ್ತೇನೆ. ರೇಕಣ್ಣಪ್ರಿಯ ನಾಗಿನಾಥ ಬಹುರೂಪಿ ಚೌಡಯ್ಯನವರ ಅಂಕಿತ ಭೈರಿದೇವರ ಕೊಪ್ಪದ ಸಮಾಧಿಯ ಮುಂದೆ ಒಂದು ಕಲ್ಲಿನಲ್ಲಿ ಈಶ್ವರ ಲಿಂಗ ಮತ್ತು ನಾಗರ ಹಾವು ಲಿಂಗವ ಸುತ್ತಿಕೊಂಡಿರುವುದು ನನ್ನ ದೃಢತೆಗೆ ಕಾರಣವಾಯಿತು.
ಮುಂಬರುವ ದಿನಗಳಲ್ಲಿ ಹೀಗೆ ಅನೇಕ ಶರಣರ ಸಮಾಧಿಯ ವಿಷಯವಾಗಿ ತಮ್ಮ ಮುಂದೆ ನಾನು ನನ್ನ ಅಧ್ಯಯನದ ವಿಷಯ ಹಂಚಿಕೊಳ್ಳ ಬಲ್ಲೆ.
ಅತ್ಯಂತ ಪ್ರೀತಿ ಆಗ್ರಹದಿಂದ ಒತ್ತಾಯ ಮಾಡಿದ e-ಸುದ್ದಿ ಸಂಪಾದಕ ಶ್ರೀ ವೀರೇಶ ಸೌದ್ರಿ ಅವರಿಗೆ ಧನ್ಯವಾದಗಳು.
ಶರಣು.
ಓದಿ ತಾವು ಕೂಡ ಸಂಶೋಧನೆಗೆ ಕಾದಿರುವ ಶರಣರ ಸಮಾಧಿಗಳು.ಇಂತಹ ಅಭಿಯಾನದಲ್ಲಿ ಪಾಲ್ಗೊಂಡರೆ ನಾವು ಶರಣರಿಗೆ ಸಲ್ಲಿಸುವ ಅಲ್ಪ ಮಟ್ಟದ ಕೃತಜ್ಞತೆ ಎಂದು ನಾನು ತಿಳಿದಿದ್ದೇನೆ. ಶರಣಾರ್ಥಿ.
ಡಾ.ಶಶಿಕಾಂತ.ಪಟ್ಟಣ ರಾಮದುರ್ಗ 9552002338