ಮಂಗಳೂರು ವಿದ್ಯಾರ್ಥಿನಿಯ ಸ್ವಗತ

ಪ್ರಚಲಿತ

ಮಂಗಳೂರು ವಿದ್ಯಾರ್ಥಿನಿಯ ಸ್ವಗತ

ನಿನ್ನೆ‌ಮೊನ್ನೆಯವರೆಗೂ ಗೆಳತಿಯರಾಗಿದ್ದ ನಾನು- ಸಂಗೀತಾ ಇಂದು ಹಿಂದೂ ಮುಸ್ಲಿಂರಾಗಿದ್ದೇವೆ. ಪ್ರಾಣ ಸ್ನೇಹಿತರಂತಿದ್ದ ಅನಿಲ್ ಮತ್ತು ಅನ್ವರ್ ಕಥೆಯೂ ಬೇರೆಯಾಗುಳಿದಿಲ್ಲ. ‘ನೀನ್ ಟಿಫಿನ್ ಬಾಕ್ಸ್ ತಂದಿಲ್ಲಂತ್ಯಾಕ್ ಯೋಚಿಸ್ತ ಬಾರೆ ನಮ್ಮಮ್ಮಾ ಮಾಡಿದ್ ಸೀಗಡಿ ಮೀನ್ಸಾರು ಅನ್ನ ತಿನ್ವ’ ಎಂದು ಹಂಚಿಕೊಂಡು ತಿಂದ ಸೌಂದರ್ಯಾ-ಅಮೀನಾ ದೂರಾಗಿದ್ದಾರೆ. ‘ಏಯ್ ಮಚ್ಚಾ ಮನೆಲಿ‌ ನಿಮ್ಮಪ್ಪಾ ಅಮ್ಮಾ ಬೈದಾರೇನೋ ಯಾಕೆ ಇಷ್ಟೊಂದು ಡಲ್ಲಾಗಿದಿಯಾ ? ಬಾ ಬಿಂದಾಸ್ ಅಗಿ ತಿಂಡಿ ತಿಂದು ಬರೋಣ’ ಎಂದು ಒಂದೆ ಪ್ಲೇಟಲ್ಲಿ ಒಂದೆ ದೋಸೆ ಹಂಚಿಕೊಂಡು ತಿಂದ ಸೈಯದ್ ಮತ್ತು ಪವನ್ ಶೆಟ್ಟಿ ಮುಖ ನೋಡದವರಂತಾಗಿದ್ದಾರೆ.

ಪ್ರೆಸರ್ಸ್ ಪಾರ್ಟಿ ಮಾಡಿ ಹೂಗಳನ್ನು ಹಂಚಿಕೊಂಡ ಕೈಗಳಲ್ಲಿಂದು ಧರ್ಮಾಂಧ ಚಿಹ್ನೆಗಳಿವೆ. ಅಷ್ಟೇ ಯಾಕೆ ನ್ಯೂ ಇಯರ್ ಪಾರ್ಟಿ ಮಾಡಿ ಪುನಿತ್ ರಾಜಕುಮಾರ್, ಯಶ್ ಹಾಡಿಗೆ ಡಾನ್ಸ್ ಮಾಡಿ ಎಲ್ಲರೂ ಎಲರಿಗೂ ವಿಶ್ ಮಾಡಿದ ನೆನಪುಗಳು ಮಸುಕಾಗತೊಡಗಿವೆ. ಸದಾ ಮುಗುಳ್ನಗೆ, ಮಂದಹಾಸ, ತುಂಟತನ ತುಂಬಿರುತ್ತಿದ್ದ ನನ್ನ ಸ್ನೇಹಿತರ ತುಟಿಗಳಿಂದು ಶರೀಯತ್, ಇಸ್ಲಾಂ, ಹಿಜಾಬ್‌, ಕೇಸರಿಶಾಲು, ದೇಶದ್ರೋಹ, ಪಾಕಿಸ್ತಾನ ಎಂದೆಲ್ಲಾ ಮಾತನಾಡುತ್ತಿವೆ.

ಹೌದು, ನಮ್ಮ ಮನಸ್ಸಿನ ಮೇಲೆ ಮತ್ತು ಸ್ನೇಹದ ಮೇಲೆ ಧೂಳು ಬಿದ್ದಿದೆ. ಹಿಜಾಬ್ ಮತ್ತು ಕೇಸರಿ ಶಾಲಿನ ಧೂಳು.! ಅದು ಶಾಲೆಯಲ್ಲಿನ ಧೂಳಲ್ಲಾ, ಶಾಲೆಯ ಕಂಪೌಂಡಿನಾಚೆಯ ರಾಜಕೀಯದಲ್ಲಿನ ಧೂಳು.!!

ಹಾಗಾಗಿ ನಮ್ಮ ಊರವರೆ, ನಮ್ಮ ಒಡನಾಡಿಗಳೇ, ನಮ್ಮ ಜೊತೆಗಾರರೇ, ಒಂದೆ ಬೆಂಚಿನಲ್ಲಿ ಕುಳಿತು ಹೊಟ್ಟೆ ಹುಣ್ಣಾಗುವಂತೆ ನಕ್ಕವರು, ಎಂಜೆಲೆನ್ನದೆ ಒಂದೆ ತಟ್ಟೆಯಲ್ಲಿ ಒಂದೆ ತುತ್ತನ್ನು ಹಂಚಿಕೊಂಡು ತಿಂದವರು, ಒಬ್ಬರಿಗೊಬ್ಬರು ತಿನಿಸಿದವರು, ಬರ್ತಡೇ ಪಾರ್ಟಿ ಮಾಡಿ ಕೇಕ್ ತಿನಿಸಿ-ತಿಂದು ಜಾತಿ, ಧರ್ಮ ಮರೆತು ಅಷ್ಟೇ ಏಕೆ ಇಡೀ ಜಗತ್ತೆ ಮರೆತು ಬಾನಾಡಿಗಳಂತೆ ಕುಣಿದು ಕುಪ್ಪಳಿಸಿದವರು, ನಮ್ಮ ನಮ್ಮ ಗೆಳೆಯ ಗೆಳತಿಯರನ್ನು ಪರಕೀಯರಂತೆ ಹಾಗು ವೈರಿಗಳಂತೆ ಕಾಣುತ್ತಿದ್ದೇವೆ.

ಒಂದು ವಾರದಿಂದ ಈ ಹಿಜಾಬ್ ಮತ್ತು ಕೇಸರಿ ಶಾಲನ್ನು ತುಂಬಿಕೊಂಡ ಮನಸ್ಸು ಗಲೀಜಾಗಿದೆ. ಹೃದಯಭಾರವಾಗಿದೆ. ಕೆಲವೊಮ್ಮೆ ಗೊತ್ತಿಲ್ಲದೆ ಕಣ್ಣೀರೂ ಸುರಿಯುತ್ತಿದೆ. ಶಿಕ್ಷಕರಲ್ಲೆ ಅಪ್ಪಾ ಅಮ್ಮನನ್ನು ಕಂಡುಕೊಂಡ ಅನಾಥಶ್ರಮದಲ್ಲಿರುವ ಅನುಪಮಾ ನಿನ್ನೆ ಮನೆಗೆ ಬಂದು ನನಗಿಂತಾ ಹೆಚ್ಚು ದು:ಖಿಸಿ ಹೋದಳು. ಪ್ರತಿದಿನ‌ ರಾತ್ರಿ ಕಾಲ್‌ ಅಥವಾ ವಾಟ್ಸಪ್‌ ಮಾಡೋ ರೀತಿಕಾ ಈಗ ಪೂರ್ತಿ ಸುಮ್ಮನಾಗಿದ್ದಾಳೆ.

ಕ್ಲಾಸಿಗೆ ಟಾಪ್ ಬರಲು ಪೈಪೋಟಿಗಿಳಿದ ನನ್ನ ತರಗತಿಯ ಕೆಲವು ಸ್ನೇಹಿತರು ಇದಾವುದನ್ನೂ ತಲೆಗೆ ಹಚ್ಚಿಕೊಳ್ಳದೆ ಓದುತ್ತಿದ್ದಾರೆ ಪುಸ್ತಕದ ಕ್ರೀಮಿಗಳಂತೆ. ನಾನೋ ಸ್ನೇಹ ಜೀವಿ ನಮ್ಮ ತರಗತಿಯಲ್ಲಿನ ತಮಾಷೆ, ಚೇಷ್ಟೆ, ಸ್ನೇಹ, ಪಾಠ, ಆಟ-ತುಂಟಾಟ, ನೆನೆಸಿಕೊಂಡು ಹೃದಯವಂತೂ ಕ್ಷಣಕ್ಷಣಕ್ಕೂ ಕಣ್ಣೀರು ಹಾಕುತ್ತಿದೆ. ಪಾಠದೊಂದಿಗೆ ನೀತಿಯನ್ನೂ ಹೇಳುವ ಅಪ್ಪ ಅಮ್ಮನನ್ನು ಮರೆಸುವ ಅಪರೂಪದ ನನ್ನ ಪ್ರೀತಿಯ ಮೇಡಂನ್ನು ನೋಡೋ ಆಸೆಯಾಗುತ್ತಿದೆ.

ಒಮ್ಮೊಮ್ಮೆಯಂತೂ ಈ‌ ಹಿಜಾಬ್-ಕೇಸರಿ ಶಾಲು ಎರಡನ್ನು ಕಿತ್ತು ಬಿಸಾಕಿ ಓಡಿಹೋಗಿ ಸ್ನೇಹಿತರನ್ನು ಬಿಗಿದಪ್ಪಿ ಒಂದೆರಡು ಕಣ್ಣೀರು ಹನಿ‌ಹಾಕಿ ಮತ್ತೆ ಒಂದಾಗೋಣ ಎಂದೆನಿಸುತ್ತಿದೆ.

ಪಾಪಿ, ಈ ದುಷ್ಟ ಸಮಾಜ ಮತ್ತು ಸರಕಾರ ನಮ್ಮನ್ನು ಬಿಡಬೇಕಲ್ಲ; ನಮ್ಮ ಗೆಳೆತನ ಉಳಿಸಿಕೊಳ್ಳಲು ಮತ್ತು ಮನುಷ್ಯತ್ವದ ಮಕರಂದ ಬೀರಲು.!!

Don`t copy text!