ಕದಂಬ ಮಾರಿ ತಂದೆ ಜೀವನ ಚರಿತ್ರೆಯ ಮೇಲೆ ಹೊಸಬೆಳಕು

ಕದಂಬ ಮಾರಿ ತಂದೆ ಜೀವನ ಚರಿತ್ರೆಯ ಮೇಲೆ ಹೊಸಬೆಳಕು

ಕಲ್ಯಾಣದಲ್ಲಿ ಕಂಬದ ಮಾರಿ ತಂದೆ ಎಂದು ಪ್ರಸಿದ್ಧಗೊಂಡ ವಚನಕಾರ ಕಾದಂಬದ ರಾಜ್ಯದ ಇಂದಿನ ಪೊಂಡ ತಾಲೂಕಿನ ಕಾವಳೆ ಪುಟ್ಟ ಹಳ್ಳಿಯ ಮೀನುಗಾರನು. ಬಸವಾದಿ ಶರಣರ ಅನುಭಾವ ಕ್ರಾಂತಿಗೆ ಆಕರ್ಷಿತನಾಗಿ ಕಲ್ಯಾಣಕ್ಕೆ ಹೆಜ್ಜೆ ಹಾಕಿದ ದಿಟ್ಟ ಕಾಯಕದ ಶರಣನನು.ವೃತ್ತಿಯಲ್ಲಿ ಮೀನುಗಾರನು. ಕದಂಬ ತಪ್ಪು ಉಚ್ಚಾರದಿಂದ ಕಂಬದ ಮಾರಿ ತಂದೆಯಾಗಿದೆ ಅಥವಾ ಆತನು ತನ್ನ ಮೀನು ಹಿಡಿಯಲು ಬಳಸುವ ಕಂಬದಿಂದ ಆತನಿಗೆ ಕಂಬದ ಮಾರಿ ತಂದೆ ಬಂದಿರ ಬಹುದು ಎಂದು ನನ್ನ ತರ್ಕ.
ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಶರಣರ ಮತ್ತು ಸೋವಿದೇವನ ಸೈನಿಕರಲ್ಲಿ ಘೋರ ಯುದ್ಧ ನಡೆಯಿತು ಬಹುತೇಕ ಶರಣರು ಚೆನ್ನ ಬಸವಣ್ಣನವರ
ನೇತೃತ್ವದಲ್ಲಿ ವಿರೋಧಿ ಸೈನಿಕರನ್ನು ಎದುರಿಸುತ್ತಾ, ಕಾದ್ರೊಳ್ಳಿ ಮುರುಗೋಡ ಮುನವಳ್ಳಿ ಸವದತ್ತಿ, ಮಾರ್ಗವಾಗಿ ಒಂದು ತಂಡ ಇನ್ನೊಂದು ತಂಡವು ಜಗಳಬೆಟ್ಟ .ಕಕ್ಕೇರಿ ಲಿಂಗನಮಠ, ಹೀಗೆ ಉಳವಿಗೆ ಹೋದರು. ಕಕ್ಕೇರಿಯಿಂದ ಖಾನಾಪುರ ಮಾರ್ಗವಾಗಿ ಕಂಬದ ಮಾರಿ ತಂದೆ ತನ್ನ ಹುಟ್ಟೂರು ಕಾವಳೆ (ಕೋಳಿ ಬೆಸ್ತರು ಮೀನುಗಾರರು ಸಮಾಜದವರಿಂದ ಈ ಊರಿಗೆ ಕಾವಳೆ ಅಂತ ಬಂದಿರಬಹುದು) ಹೋಗಿರಬಹುದು.

ನನ್ನ ಊಹೆಗೆ ತರ್ಕಕ್ಕೆ ಕಾರಣಗಳು.
1) ಅಲ್ಲಿರುವ ಶಾಂತ ದುರ್ಗಾ ದೇವಸ್ಥಾನ ಗೌಡ ಸಾರಸ್ವತ ಬ್ರಾಹ್ಮಣರ ಕುಲ ದೇವತೆ. ಗೌಡ ಸಾರಸ್ವತ ಅಂದರೆ ಒಕ್ಕಲುತನ ಪ್ರಧಾನ ಶೈವ ವರ್ಗ ,ಕಾಮತ, ಪ್ರಭು ಶೆಣೈ,ಪೈ,ಕಾಮತ ಅಂದರೆ ಕಮತ ಮಾಡುವವನು ನೇಗಿಲಯೋಗಿ .ಬಸವಣ್ಣನವರು ಕೂಡ ಕಮ್ಮೆ ಕುಲಕ್ಕೆ ಸೇರಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಉದ್ಧೇಶವು ತಾವು ಮೂಲತಃ ಕೃಷಿಕರು ಎಂದರ್ಥ. ಅಲ್ಲಿರುವ ಶಿವನಾಕಾರದ ಪ್ರತಿಮೆ ಕೊರಳಲ್ಲಿ ಕರಡಾಗಿ ಲಿಂಗವು ಒಂದು ಸೋಜಿಗ ಮತ್ತು ಕುತೂಹಲ ಕೆರಳಿಸುವದ್ದಾಗಿತ್ತು.
2) ಇನ್ನೊಂದು ಪ್ರಮುಖ ಕಾರಣವೆಂದರೆ ಕಾವಳೆ ಗ್ರಾಮದಲ್ಲಿ ಶ್ರೀಮದ್ ಸ್ವಾಮಿಗಳ ಮಠವಿದೆ . ಆ ಮಠಕ್ಕೆ ಗೌಡ ಸಾರಸ್ವತ ಮತ್ತು ಕೋಳಿ ಸಮಾಜ ಬೆಸ್ತರು ಮತ್ತು ಮೀನುಗಾರರು ವಿಶೇಷವಾಗಿ ಕುಲದೇವರು ಎಂದು ನಂಬಿ ನಡೆದುಕೊಳ್ಳುತ್ತಾರೆ. ಆ ಮಠವು ಶರಣ ಸಂಪ್ರದಾಯದ ಮಠದಂತೆ ಕಾಣುತ್ತದೆ.
ಆದರೆ ನಮ್ಮ ಲಿಂಗಾಯತ ಸಮಾಜದ ನಿರ್ಲಕ್ಷಕ್ಕೆ ಒಳಗಾದ ಸ್ಥಳಗಲ್ಲಿ ಇದು ಒಂದು ಇರಬಹುದು.
3) ಪೋರ್ಚುಗೀಜರು ಹದಿನಾರನೆಯ ಶತಮಾನದಲ್ಲಿ ಕಾವಳೆ ಶಾಂತ ದುರ್ಗಾ ಮಂದಿರವನ್ನು ನಾಶ ಮಾಡಿದ್ದರ ಉಲ್ಲೇಖವಿದೆ.ಆಗ ಅಲ್ಲಿರುವ ಬಹುತೇಕ ಸ್ಮಾರಕಗಳು ಶಾಸನಗಳು ಸಮಾಧಿಗಳು ನಾಶವಾಗಿವೆ.

ಶರಣ ಸಾಹಿತ್ಯವು ಜಗವು ಕಂಡ ಸಾರ್ವಕಾಲಿಕ ದಯೆ , ಸಮತೆ, ಶಾಂತಿ ,ಪ್ರೀತಿ, ಬೀರಿದ ಸರ್ವ ಶ್ರೇಷ್ಠ ದೇಸಿ ಜನಪರ ಸಾಹಿತ್ಯವಾಗಿದೆ.ಬಸವಣ್ಣ ಅಲ್ಲಮ ಚೆನ್ನಬಸವಣ್ಣ,ಸಿದ್ಧರಾಮ , ಅಕ್ಕ ಮಹಾದೇವಿ ,ಮುಕ್ತಾಯಕ್ಕ ಆಯ್ದಕ್ಕಿ ಲಕ್ಕಮ್ಮ ಸತ್ಯಕ್ಕ ಕಾಳವ್ವೆ ,ಗಂಗಮ್ಮ ಮುಂತಾದ ಅನೇಕರಿಂದ ಹುಟ್ಟು ಪಡೆದ ಇಂತಹ ಕ್ರಾಂತಿಕಾರಕ ವಚನಕಾರರಿಂದ ಕವಿಗಳಿಂದ ಯಾವುದೇ ಪೂರ್ವಭಾವಿ ತಯಾರಿಲ್ಲದೆ ರಚಿತಗೊಂಡ ವಚನ ಸಾಹಿತ್ಯವು ಶರಣ ಸಾಹಿತ್ಯವು ಬದುಕಿನ ಎಲ್ಲಾ ಮಗ್ಗಲನ್ನು ಕಂಡು ಸತ್ಯ ದರ್ಶನ ,ಧರ್ಮ ಸಾಮಾಜಿಕ ರಾಜಕೀಯ ಆರ್ಥಿಕ ನೈತಿಕ ಕ್ಷೇತ್ರಗಳ ಒಳ ಪದರನ್ನು ಬಿಚ್ಚಿ ಇಟ್ಟಿದ್ದಾರೆ.ವಚನಗಳು ಕನ್ನಡದ ಆಸ್ತಿ .ಶರಣರು ಅಪ್ಪಟ ಕನ್ನಡದ ಹೋರಾಟಗಾರರು. . ಕನ್ನಡ ನಾಡು ನುಡಿಗೆ ದುಡಿದ ಸಾಂಸ್ಕೃತಿಕ ಹರಿಕಾರರು.
ವಚನ ಸಾಹಿತ್ಯವು ಕಲ್ಯಾಣ ಕ್ರಾಂತಿಯ ನಂತರ 300 ವರ್ಷಗಳ ವರೆಗೆ ಕಾಲ ಗರ್ಭದಲ್ಲಿ ಹುದುಗಿ ಹೋಗಿತ್ತು

16 ನೇ ಶತಮಾನದಲ್ಲಿ ಹಂಪಿಯ ಪ್ರೌಢದೇವದೇವರಾಯನ ಕಾಲದಲ್ಲಿ ಮತ್ತೆ ಸಂಕಲನ ನಡೆಯಿತು . ಆಗ ಅನೇಕ ವಚನಕಾರರ ಚರಿತ್ರೆ ವಚನಗಳು ವಿಕ್ಷಿಪ್ತಗೊಂಡವು.

.16 ನೇ ಶತಮಾನದ ಅಂತ್ಯದಲ್ಲಿ ಎಡೆಯೂರು ಶ್ರೀ ಸಿದ್ಧಲಿಂಗ ಯತಿಗಳು ನೂರೊಂದು ವಿರಕ್ತರನ್ನು ಸಂಘಟಿಸಿ ಹಳ್ಳಿಗೆ ಏಕ ರಾತ್ರಿ ಪಟ್ಟಣಕ್ಕೆ ಪಂಚ ರಾತ್ರಿಯಾಗಿ ಸಂಚಾರಗೊಳಿಸಿ ಮರೆತು ಹೋಗಿದ್ದ ವಚನ ಸಾಹಿತ್ಯವನ್ನು ಮತ್ತೆ ಬೆಳಕಿಗೆ ತಂದು ಸಂಸ್ಕರಿಸಿ ಸಂಕಲಿಸಿ ಎರಡನೆಯ ಅಲ್ಲಮನೆನಿಸಿಕೊಂಡರು.

17 ನೇ ಶತಮಾನದಲ್ಲಿ ಲಿಂಗಾಯತ ಚಳುವಳಿಯಲ್ಲಿ ವೀರಶೈವ ಪದ ಸೇರಿಕೊಂಡಿತು .
ಶೂನ್ಯ ಸಂಪಾದನೆಯು ಕೃತಿಯು ಪ್ಲೇಟೋನ ಸಂಭಾಷಣೆಗಿಂತ ಉತ್ಕೃಷ್ಟವಾಗಿದ್ದರೂ ಅದರಲ್ಲಿ ವೈಭವೀಕರಣ ,ಪ್ರಕ್ಷಿಪ್ತತೆ , ಐತಿಹಾಸಿಕ ಚಾರಿತ್ರಿಕ ತಪ್ಪುಗಳು ದೋಷಗಳನ್ನು ಸ್ವಲ್ಪ ಮಟ್ಟಿಗೆ ತಿದ್ದಿದಾದರೆ ಅದಕ್ಕೆ ಜಗತ್ತಿನ ಎಲ್ಲಾ ಪ್ರಶಸ್ತಿಗಳನ್ನೂ ಮೀರುವ ಮೌಲಿಕ ಗ್ರಂಥವೆನಿಸುತ್ತದೆ.
ಅದೇ ರೀತಿ ಅನೇಕ ಕೆಳಸ್ತರದ ವಚನಕಾರರ ಅನುಭವವನ್ನು ಮುಚ್ಚಿ ಹಾಕುವ ಕ್ರೂರ ಕಾರ್ಯಕ್ಕೆ ಕೆಲ ಶೈವ ಸಂಕಲನಕಾರರು ಉದ್ದೇಶಪೂರಿತವಾಗಿ ವಚನಕಾರರ ಕಾಯಕ ನಾಮ ವೃತ್ತಿ ಬದಲಿಸುವದುದರ ಜೊತೆಗೆ ಮಡಿವಂತಿಕೆ ಮುಂದುವರೆಸಿಕೊಂಡು ಹೋದರು. ಇಂತಹ ತಪ್ಪುಗಳನ್ನು ತಿದ್ದುವ ವಚನ ಸಾಹಿತ್ಯದಲ್ಲಿ ಪರಿಷ್ಕರಣೆ ಕಾರ್ಯ ನಡೆಯಲೇ ಇಲ್ಲ . ಡಾ ಫ ಗು ಹಳಕಟ್ಟಿ ಪ್ರೊ ಎಸ ಎಸ ಬಸವನಾಳ ಡಾ ಆರ್ ಸಿ ಹಿರೇಮಠ , ಡಾ ಎಂ ಎಮ್ ಕಲ್ಬುರ್ಗಿ ಡಾ ಎಂ ಚಿದಾನಂದ ಮೂರ್ತಿ ಅವರು ಸಹಿತ ಇಂತಹ ಪ್ರಮಾದಗಳನ್ನು ಸರಿಪಡಿಸಲಿಲ್ಲ. ಇದು ಅವರ ಮೇಲೆ ಆರೋಪವಲ್ಲ . ಅವರಿಗೂ ಕೂಡಾ ಸರಿ ಯಾವುದು ತಪ್ಪು ಯಾವುದು ಎಂದು ನಿರ್ಣಯಿಸಲಾಗಲಿಲ್ಲ. ಈಗ ವಚನಗಳು ಕರ್ನಾಟಕ ಸರಕಾರದ ಜನಪ್ರಿಯ ಸಮಗ್ರ ವಚನ ಸಂಪುಟಗಳಾಗಿ ಹೊರ ಹೊಮ್ಮಿವೆ. ಶರಣ ಸಾಹಿತ್ಯ ಅಧ್ಯಯನ,ವಚನಾಸಕ್ತರ ಸಂಖ್ಯೆ ಹೆಚ್ಚಿದೆ .
ಶರಣರ ವಚನಗಳು ಅವುಗಳ ಮೂಲ ,ಆಶಯ, ತತ್ವಗಳನ್ನು ಅರಿತಾಗ ತಪ್ಪು ಗ್ರಹಿಕೆಗೆ ಒಳಗಾದ ಅಭಿಮತಗಳನ್ನು ತಿದ್ದುವ ಕಾರ್ಯ ಮತ್ತು ಆ ದಿಶೆಯಲ್ಲಿ ಚಿಂತಿಸುವ ಕಾರ್ಯ ನಡೆದಿದೆ.ಇಂತಹ ಒಂದು ಪ್ರಯತ್ನವನ್ನು ನಾನು ಮಾಡಲಾರಂಭಿಸಿದೆನು. ಆ ಪರಿಣಾಮವಾಗಿ ಹಲವು ವಿಷಯಗಳು ಇತ್ತೀಚಿಗೆ ಬೆಳಕಿಗೆ ಬರಲಾರಂಭಿಸಿವೆ.ಇಂತಹ ಸಣ್ಣ ಪ್ರಮಾಣದ ಶೋಧನೆ ,ಸಂಶೋಧನೆ ಪರಿಷಕರಣೆ ಅಗತ್ಯವಾಗಿದೆ.

ವಚನಕಾರನ ಹೆಸರಿನಲ್ಲಿ, ಕಾಯಕದಲ್ಲಿ ಆದ ಬದಲಾವಣೆ ತಿದ್ದುಪಡಿ ,ಅಥವಾ ಸಂಕಲನದ ಸಮಯದಲ್ಲಿ ಘಟಿಸಿದ ಪ್ರಮಾದ ಅಥವಾ ಉದ್ಧೇಶ ಪೂರಿತ ಪ್ರಕ್ಷಿಪ್ತತೆ ಎಲ್ಲವನ್ನೂ ಗಣನೆಗೆ ತಗೆದುಕೊಂಡು ಅವುಗಳನ್ನು ತಕ್ಕ ಮಟ್ಟಿಗೆ ಪರಿಷ್ಕರಣೆ ಮಾಡುವ ಪ್ರಾಮಾಣಿಕ ಪ್ರಯತ್ನವನ್ನು ಇಲ್ಲಿ ಕಾಣಬಹುದು.
ವಚನಕಾರರು ಅನೇಕರು ತಮ್ಮ ವೃತ್ತಿಯನ್ನು ತಮ್ಮ ತಮ್ಮ ವಚನಗಳಲ್ಲಿ ನಮೂದಿಸಿದ್ದಾರೆ. ಹೀಗೆ ಬದಲಾವಣೆ ಪಲ್ಲಟವಾದ ವಚನಕಾರರ ಹೆಸರು ಅವರ ವಚನಗಳ ಅರ್ಥ ತಂಪಾಗಿ ಅರ್ಥೈಸುವ ಪದಗಳ ಸೇರ್ಪಡೆ, ಸಂಪಾದಕರ ಕಲ್ಪನೆ ಊಹೆ ಗ್ರಹಿಕೆಯಿಂದ ತಪ್ಪು ತಿಳುವಳಿಕೆಯನ್ನು ಅನಗತ್ಯ ಸಂಸ್ಕೃತ ಪದಗಳ ಶ್ಲೋಕಗಳ ತಗೆದು ಹಾಕುವ ಸರಿ ಪಡಿಸುವ ಕಾರ್ಯ ನಡೆಯಬೇಕಿದೆ. ಸತ್ಯಾಸತ್ಯತೆಯ ನಿಷ್ಕರ್ಷ ಪರಮಾರ್ಶೆ ಆಗಬೇಕಿದೆ.

ಇಂತಹ ಅನೇಕ ವಿಷಯಗಳಲ್ಲಿ ಅತ್ಯಂತ ಜಾಗೃತನಾಗಿ ಶರಣ ಸಾಹಿತ್ಯ ಸಮ್ಮತ ವಚನಕಾರರ ಮೂಲ ಆಶಯಗಳಿಗನುಗುಣವಾಗಿ ವಚನಗಳಲ್ಲಿನ ಮಾರ್ಪಾಡು, ಪರ್ಯಾಯ ಪದ ಜೋಡಣೆಯಲ್ಲಿ ಆದ ದೋಷಗಳನ್ನು ಸರಿಪಡಿಸುವ ಕಾರ್ಯ ಅತ್ಯಂತ ತೀವ್ರವಾಗಿ ನಡೆಯಬೇಕಿದೆ. ಕಾಲ ಘಟ್ಟದಲ್ಲಿ ನಡೆದ ಹೋದ ಪ್ರಮಾದವನ್ನು ಪರಿಷ್ಕರಿಸಿ ವಚನಾಸಕ್ತರಿಗೆ ನೀಡುವುದು ನಮ್ಮ ಆದ್ಯ ಕರ್ತವ್ಯವಾಗಬೇಕಿದೆ.

ಈ ನಿಟ್ಟಿನಲ್ಲಿ ನನಗೆ ಕಂಡು ಬಂದ ವಿರಳ ವಚನಕಾರ ಕದಂಬ ಮಾರಿತಂದೆ (ಪ್ರಕ್ಷಿಪ್ತಗೊಂಡಿದ್ದು ಕಂಬದ ಮಾರಿ ತಂದೆ )ಗಳ ಜೀವನ ಚರಿತ್ರೆ ಬಗ್ಗೆ ಈ ಲೇಖನದಲ್ಲಿ ಹಲವು ಅಂಶಗಳನ್ನು ಹೊರ ಹಾಕಿದ್ದೇನೆ.

ಕದಂಬ ಮಾರಿ ತಂದೆಯ (ಕಂಬದ ಮಾರಿ ತಂದೆ )ಜೀವನ ವೃತ್ತಾಂತದ ಸತ್ಯ ಸಂಶೋಧನಾ

ಬಸವ ಸಮಕಾಲೀನ ವಚನಕಾರರಲ್ಲಿ ಅಗ್ರ ಬಹು ಮುಖ್ಯ ಹಾಗು ಅಷ್ಟೆ ಕೂತುಹಲ ಮೂಡಿಸಿದ ಶ್ರೇಷ್ಠ ಶರಣ ಕಂಬದ ಮಾರಿ ತಂದೆಯ (ಕದಂಬ ಮಾರಿ ತಂದೆ )
ಇಲ್ಲಿಯ ವರೆಗೆ ಈತನ ಜೀವನ ವೃತ್ತಾಂತ ತಿಳಿದು ಬಂದಿಲ್ಲಾ. ಕಲ್ಯಾಣ ಕ್ರಾಂತಿಯಲ್ಲಿ ಅನೇಕ ವಚನಗಳು ನಶಿಸಿ ಹೋಗಿದ್ದು ಮತ್ತು ಪಾಠಾ೦ತರ ಕಾಲದಲ್ಲಿ ನಡೆದ ಪ್ರಕ್ಷಿಪ್ತತೆ ವಚನ ತಿದ್ದುಪಡೆ ಹಾಗೂ ವಚನಕಾರರ ಸಮಗ್ರ ಜೀವನ ಚಿತ್ರಣ ಕೊಡುವಲ್ಲಿ ಇತಿಹಾಸಕಾರರು ಸಂಶೋಧಕರು ಗಮನ ನೀಡಿಲ್ಲ ಅಥವಾ ಸಿಕ್ಕ ದಾಖಲೆಗಳ ಆಧಾರದ ವಚನಗಳ ಮೇಲೆ ಸಂಶೋಧಕರು ತಮ್ಮ ತರ್ಕ ಊಹೆ ಕಲ್ಪನೆಗೆ ಅನುಗುಣವಾಗಿ ಶರಣರ ಚರಿತ್ರೆ ನಿರ್ಧರಿಸಿದ್ದಾರೆ . ವಚನಕಾರರ ಶರಣ ಜೀವನ ಕಾಲ ಮತ್ತು ವೃತ್ತಿ ಅವರ ಮೂಲ ಸ್ಥಳಗಳ ಸಮಗ್ರ ಮಾಹಿತಿ ಸಂಗ್ರಹಿಸುವ ಖಚಿತ ಪಡಿಸುವ ಕಾರ್ಯ ಇನ್ನು ಆಗಿಲ್ಲ.

ಕದಂಬ ಮಾರಿ ತಂದೆಯ (ಕಂಬದ ಮಾರಿ ತಂದೆ ) 12 ನೆ ಶತಮಾನದ ವಚನಕಾರ.ಅವನ 11 ವಚನಗಳು ಬೆಳಕಿಗೆ ಬಂದಿವೆ. ಕದಂಬ ರಾಜ್ಯದ ಮೀನುಗಾರ .,
ತನ್ನ ಅಧ್ಯಾತ್ಮಿಕ ಧಾರ್ಮಿಕ ಜೀವನ ಉನ್ನತಿಗೆ ಇವನು ಆಯ್ಕೆ ಮಾಡಿದ್ದು ಕದಂಬ ರಾಜನ ಸಂಬಂಧಿ ಕಲ್ಯಾಣ ಕಳಚೂರ್ಯರ ನೂರ್ಮಡಿ ತೈಲಪನ ಆಶ್ರಯವನ್ನು ಹಾಗೂ ಬಸವಣ್ಣನವರ ಸಾಮಾಜಿಕ ಚಳುವಳಿಯಲ್ಲಿ ಭಾಗವಹಿಸಬೇಕೆನ್ನುವ ಉತ್ಕಟ ಇಚ್ಛೆ ಹೊಂದಿದ್ದನು .
ಕದಂಬ ಮಾರಿ ತಂದೆಯ ವಚನದಲ್ಲಿ ತಿರುವು ತೆಪ್ಪ ಮತ್ಸ್ಯ ಗಾಳ ಕೀಟ ಬಲೆ ಸೇಳೆಗೋಲು ಮುಂತಾದ ಪದಗಳು ಬರುವದರಿಂದ ಇವನು ಮೀನುಗಾರನೆ ಎಂದು ಖಚಿತ ಪಡಿಸಬೇಕು .

ನನ್ನ ಗ್ರಹಿಕೆಯ ಪ್ರಕಾರ ಈತ ಮೀನುಗಾರ ಮತ್ತು ಕರಾವಳಿಯ ಕಡೆಯಿಂದ ಬಂದವನಾಗಿದ್ದು ಕದ೦ಬ ರಾಜ್ಯದ ಆಡಳಿತಕ್ಕೆ ಒಳಪಟ್ಟ ಪ್ರದೇಶದವನಾಗಿದ್ದು , ಮುಂದೆ ಕಲ್ಯಾಣ ರಾಜ್ಯದ ಅನುಭಾವಿ ಶರಣ ಪ್ರಮುಖ ವಚನಕಾರನಾಗಿ ಈತ ಪ್ರಮುಖನಾಗಿ ಕಾಣಿಸುತ್ತಾನೆ , ಕದಂಬ ಪದವು ಅಪಭ್ರ೦ಶವಾಗಿ ಕ೦ಬದ ಮಾರಿತಂದೆ ಎಂದು ಆಗಿರಲೂ ಬಹುದು.

ಕದಂಬ ರಾಜ್ಯದ ಪೊಂಡಾದಲ್ಲಿ ಮಂಗೇಶ ದೇವಸ್ಥಾನ ಒಂದು ಶೈವ ದೇವಸ್ಥಾನವಿದೆ ಮತ್ತು ಅಲ್ಲಿಂದ ಕೆಲ ದೂರದಲ್ಲಿ ಶಾಂತ ದುರ್ಗಾಶಿವ ಮಂದಿರ ಕಂಡು ಬಂದಿರುವುದು. ಬಹುತೇಕವಾಗಿ ಕದಂಬ ಮಾರಿ ತಂದೆ ಆ ಭಾಗದವನಾಗಿರಲು ಸಾಕು. ಮೀನು ಹಿಡಿಯುವ ಕಾಯಕದವನಾಗಿದ್ದು ಅಂತಹ ಆಹಾರ ಪದ್ದತಿಯ ಜನರಿಗೆ ಮೀನು ಹಿಡಿದು ಮಾರುತ್ತಿದ್ದನು.

ಇನ್ನು ಮಾರಿ ತಂದೆ ಎನ್ನುವ ಪದ ಅನೇಕ ವಚನಕಾರರ ಮುಂದೆ ಅಂಟಿಕೊಂಡಿದೆ ಉದಾ – ಅರಿವಿನ ಮಾರು ತಂದೆ ನಗೆ ಮಾರಿ ತಂದೆ ಕೂಗು ಮಾರಿ ತಂದೆ ಕಂಬದ ( ಕದಂಬ) ಮಾರಿ ತಂದೆ ಹೀಗೆ ಸುಮಾರು ಹತ್ತಾರು ವಚನಕಾರರ ಮುಂದೆ ಮಾರಿ ತಂದೆ ಬಂದಿದೆ. ಮಾರು ಹೋಗುವವರು ಅಂದರೆ ಅಲೆಮಾರಿಗಳು (Nomads ) ಎಂದು ಸೂಚಿತವಾಗುತ್ತದೆ. ನಿರ್ದಿಷ್ಟ ಕಾಯಕವನ್ನು ಸಾಂಧರ್ಭಿಕವಾಗಿ ಬೇರೆ ಬೇರೆ ಪ್ರದೇಶಗಳಲ್ಲಿ ಕಾಯಕ ಮಾಡುವವರಿಗೆ ಮಾರಿ ತಂದೆ (ಅಲೆಮಾರಿ )ಎಂದು ಕರೆದಿರಬಹುದು.
ಕದಂಬ ಮಾರಿ ತಂದೆ ತನ್ನ ವೃತ್ತಿ ಮೀನುಗಾರಿಕೆಯ ಪರಿಭಾಷೆಯಲ್ಲಿ ತನ್ನ ಆಧ್ಯಾತ್ಮಿಕ ನಿಲುವನ್ನು ವಚನಗಳಲ್ಲಿ ವ್ಯಕ್ತ ಪಡಿಸಿದ್ದಾನೆ.ಅವನೊಬ್ಬ ಪ್ರಮುಖ ವಚನಕಾರನಾಗಿದ್ದನು.
ಅವನ ವಚನದಲ್ಲಿ ತನ್ನ ಅನುಭವವನ್ನು ಈ ರೀತಿ ಹೇಳುತ್ತಾನೆ.

ಕಾಯದಿಂದ ಕರ್ಮವ ಕಂಡು.
ಭಾವದಿಂದ ಲಿಂಗವ ಕಂಡು,
ಲಿಂಗದಿಂದ ಸ್ವಾನುಭಾವವಾಗಿ ,
ಅಂಗದ ಸಂಗಕ್ಕೆ ಹೊರಗಾಯಿತ್ತು,
ಕದ೦ಬಲಿಂಗವನರಿಯಲಾಗಿ.

ಸಂಕೀರ್ಣ ವಚನ ಸಂಪುಟ -2 -ಪುಟ 1-ಕಂಬದ ಮಾರಿ ತಂದೆಯ ವಚನ )

ತನ್ನ ಶರೀರದಿಂದ ತಾನು ತನ್ನ ಕಾಯಕವನ್ನು ಕಂಡು .ಭಾವನೆಯಿಂದ ಲಿಂಗ ಪ್ರಜ್ಞೆಯ ಕಂಡು ಲಿಂಗವೇ ಸಮಾಜವೆಂಬ ಸ್ವಾನುಭಾವವು ಕಂಡು ,ಅಂತಹ ಸ್ವಾನುಭವದ ಅರಿವಿನ ಕುರುಹು ಅಂಗಕ್ಕೆ ಸೊಂಕಿಸಿದಾಗ ಸಮುದಾಯದ ಹಿತ ಸುಖ ಅರಿಯದೆ ಲಿಂಗತತ್ವ ಅರಿಯದೆ ಲಿಂಗವ ಕಟ್ಟಿದರೆ ಅದು ಹೊರಗಾಗಿತ್ತು ಎಂದು ವಿಡ0ಭನವಾಗಿ ಹೇಳುತ್ತಾನೆ .

ಜಂಗಮ ತತ್ವ ಲಿಂಗ ಪ್ರಜ್ಞೆ ಅರಿಯದೆ ದೇಹಕ್ಕೆ ಲಿಂಗವ ಕಟ್ಟಿದರೆ ಪ್ರಯೋಜನವಿಲ್ಲ ಎಂದು ಎಚ್ಚರಿಸುವ ಮೂಲಕ ಸ್ಥಾವರ ಭಾವದಿಂದ ಜಂಗಮ ಪ್ರಜ್ಞೆಗೆ ಕರೆದೊಯ್ಯುವ ದಿಟ್ಟ ಶರಣರ ಆಶಯ ಮಹತ್ತರವಾದದ್ದು. ಭಾವಲಿಂಗ ಪ್ರಾಣಲಿಂಗವಾಗಿ ಬದುಕು ನಡೆಸುವ ಶರಣರ ಜೀವನವೇ ಲಿಂಗಮಯವಾಗಿರುತ್ತದೆ,

ಗಂಪಕ್ಕೆ ಸಿಕ್ಕೆ ,ಬಲೆಗೊಳಗಾಗೆ
ಗೂಳಿಯ ಇರಿತದ ಡಾವರಕ್ಕೆ ನಿಲ್ಲೇ ,
ಸೆಳೆಗೊಲೀನ ಗಾನದ ಕೀಟವನೊಲ್ಲೆ .
ನಿನ್ನಾಟ ಅದೇತರ ಮಡುವಿನಾಟ ಹೇಳಾ
ಕದಕತನ ಬೇಡ ಕದಂಬಲಿಂಗ. ಸ.ವ.ಸ೦ 2 ಪುಟ 2 ಸಂಖ್ಯೆ 3

ಇಲ್ಲಿ ತಾನು ಹಿಡಿಯುವ ಮೀನು ತನಗೆ ಸಿಗದೇ ಬಲೆಯಲ್ಲಿ ಸಿಲುಕದೆ ಕೀಟವನ್ನೊಲ್ಲದೆ ದೊಡ್ಡ ಮೀನದ ಇರಿತಕ್ಕೂ ಬಗ್ಗದೆ ಕಾಡುತ್ತಿರುವ ಪ್ರಸಂಗವನ್ನು ವಿವರಿಸುತ್ತಾ ಏನು ನಿನ್ನಾಟ ಮಡುವಿನಾಟ ತನ್ನೊಂದಿಗೆ ಮೋಸಗಾರಿಕೆ ದ್ರೋಹ ಮಾಡಬೇಡ ಎಂದು ಎಚ್ಚರಿಸುತ್ತಾನೆ..

ಸಾಲು ಕೊಡಬೆಗೆ ಹುಗದು
ಆರು ಕೊಡಬೆಗೆ ಬಾರದು
ಮೂರು ಕುಳಿಗೆ ಸಿಕ್ಕಿದು ನೋಡಾ !
ಬಸವಣ್ಣನ ಅಂಗದಲ್ಲಿ ಹರಿದು
ಚೆನ್ನಬಸವಣ್ಣನ ಹೃದಯದಲ್ಲಿ ಮೂಡಿ
ಪ್ರಭುದೇವರ ಕರದಲ್ಲಿ ಸಿಕ್ಕೆದೆಯಲ್ಲಾ
ಸಿಕ್ಕಿ ನಿನ್ನ ಕುಲಿಶದ ಹೊಳಸೇಕೆ
ಇಂತಿ ತ್ರಿವಿದದ ಕಲಾಸಾಟವ ಬಿಡು
ಕದತನ ಬೇಡಾ ಕದಂಬಲಿಂಗಾ . ಸ.ವ ಸ೦.2 ವಚನ 10 ಪುಟ 9

ಇದು ತನ್ನ ವೃತ್ತಿಯ ಮೀನುಗಾರಿಕೆಯ ಪಾರಿಭಾಷೆಯ ಗತ್ತಿನಲ್ಲಿ ಬರೆದ ವಚನ .ಸಾಲಾದ ಮೀನು ಹಿಡಿಯುವ ಬುಟ್ಟಿಯಲ್ಲಿ (ಕೊಡಬೆ) ಮೀನು ಪ್ರವೇಶ ಮಾಡದು .ಆರು ಮೀನು ಹಿಡಿಯುವ ಬುಟ್ಟಿಯಲ್ಲಿ ಮೀನುಬಾರದು . ಆದರೆ ಚಿಕ್ಕದಾದ ತೋಡಿದ ಹಳ್ಳದಲ್ಲಿ ಮೀನವು ಸಿಕ್ಕತು .ಅಂತಹ ತುಂಟ ಮೀನವು ಬಸವಣ್ಣನ ಅಂಗದಲ್ಲಿ ಹರಿದು ,ಚೆನ್ನಬಸವಣ್ಣನ ಹೃದಯದಲ್ಲಿ ಮೂಡಿ ಪ್ರಭುದೇವರ ಕರದಲ್ಲಿ ಸಿಕ್ಕೆದೆಯಲ್ಲಾ ಎಂದು ಕುಲಿಶವೆಂಬ ಮೀನವನ್ನು ಪ್ರಶ್ನಿಸುತ್ತಾರೆ .
ನೀನು ಇಂತಹ ಪವಿತ್ರ ಪುಣ್ಯ ಪುರುಷರ ಸ್ಪರ್ಶದಿಂದಾ ಪಾವನವಾಗಿರುವಾಗ ತ್ರಿವಿದದ ಕಲಸಾಟ ಬಿಡು ನಾನು ನಂಬಿದ ವೃತ್ತಿಗೆ ಮೋಸ ಮಾಡಬೇಡಾ ಕದಂಬಲಿಂಗ ಎಂದು ಹೇಳಿದ್ದಾರೆ.

ಡಾ.ಶಶಿಕಾಂತ.ಪಟ್ಟಣ.ಪೂನಾ .ರಾಮದುರ್ಗ.

Don`t copy text!