ಚಿಂಚೋಳಿಯ ಸೂರ್ಯಕಾಂತ ಮತ್ತು ಅವನ ಹಾಡಿನ ಕಾರ್ಪೊರೇಟ್ ಕಥನ

ಚಿಂಚೋಳಿಯ ಸೂರ್ಯಕಾಂತ ಮತ್ತು ಅವನ ಹಾಡಿನ ಕಾರ್ಪೊರೇಟ್ ಕಥನ

ಕತೆ, ಸಾರಾಂಶ, ಫಲಿತಾಂಶ ಎಲ್ಲವೂ ನೀನೇ. ವಾಸ್ತವವಾಗಿ ನಿನ್ನ ಗಾಯನದ ಗುಣಮಟ್ಟಕ್ಕೆ ಈ ಸ್ಪರ್ಧೆ ಚಿಕ್ಕದಾಯ್ತು. ಅಷ್ಟು ಗುಣಾತ್ಮಕ ಎತ್ತರದ ನಿಲುವು ನಿನ್ನ ಗಾಯನ ಶಕ್ತಿಯದು. ಪೂರ್ವಜನ್ಮದಲ್ಲಿ ನೀನು ಗಾಯನ ಚಕ್ರವರ್ತಿಯೇ ಆಗಿರಬೇಕು. ಅದೇನೋ ಯಡವಟ್ಟಾಗಿ ಇದೀಗ ಸೂರ್ಯಕಾಂತನ ರೂಪದಲ್ಲಿ ನಮ್ಮೆದುರು ನಿಂತಿರುವಿ. ಯಾವುದೋ ಮಾರುವೇಷದಲ್ಲಿ ರಾಜನೊಬ್ಬ ಭಿಕ್ಷುಕನಾಗಿ ಬಂದಿರುವಂತಿದೆ. ಬೆಳಗಿನಿಂದ ಸೂರ್ಯನ ಬೆಳಕಿನಪ್ರಖರತೆ ಏರುತ್ತಾ ಏರುತ್ತಲೇ ಹೋದರೀತಿಯಲ್ಲಿ ನಿನ್ನ ಹಾಡುಗಾರಿಕೆಯ ಪ್ರಖರತೆ, ಸುತ್ತಿನಿಂದ ಸುತ್ತಿಗೆ ಪ್ರಜ್ವಲಿಸುತ್ತಲೇ ಮುನ್ನಡೆದಿದೆ.

ಅನೇಕ ವರ್ಷಗಳ ಕಾಲ ಇಂತಹ ಅನೇಕ ಗಾಯನ ಸ್ಪರ್ಧೆಗಳ ತೀರ್ಪುಗಾರನಾಗಿ ನಾನು ಕೆಲಸ ಮಾಡಿದ್ದೇನೆ. ಆದರೆ ನಿನ್ನಂಥವನನ್ನು ನಾನು ಕಂಡದ್ದು, ಕೇಳಿದ್ದು ಇದೇ ಪ್ರಥಮ.
ನಿನ್ನ ಅಮೋಘ ಪ್ರತಿಭಾ ಶಕ್ತಿಯನ್ನು ನೀನೇ ಕಾಪಾಡಿಕೊಳ್ಳುವ ಶಕ್ತಿ ನಿನ್ನದಾಗಿರಲಿ. ನಿನ್ನದು ಅಭಿಪ್ರಾಯ ಮೀರಿದ ಸಂಗೀತ ಪ್ರಕಟಣೆ ಎಂದು ಘೋಷಣೆ ಮಾಡುವಂತಹದು. ಅದೊಂದು ಬಣ್ಣಿಸಲಾಗದ ಅಮೂರ್ತರೂಪ. ನಿನ್ನ ಸಂಗೀತ ಶಕ್ತಿಗೆ ನನ್ನ ಸಲಾಮ್. ನಿನ್ನನ್ನು ಹೆತ್ತ ನಿನ್ನ ತಾಯಿಗೆ ಸಾಷ್ಟಾಂಗ ನಮಸ್ಕಾರ. ನೀನು ಹುಟ್ಟಿಬಂದ ನೆಲಕ್ಕೆ ಹೃತ್ಪೂರ್ವಕ ನಮಸ್ಕಾರ. ಇಂದು ನಮ್ಮಈ ವೇದಿಕೆ ಪಾವನ ಆಯಿತು. ನಿನ್ನ ಹಾಡಿನ ಮುಂದೆ ನಾವೆಲ್ಲರೂ ಮೂಕ ವಿಸ್ಮಿತರಾಗಿದ್ದೇವೆ. ಅದನ್ನು ಬಣ್ಣಿಸಲು ನನ್ನ ಬಳಿ ಪದಗಳೇ ಇಲ್ಲ.

ಮೇಲಿನ ಅಪಾರ ಮೆಚ್ಚುಗೆಯ ಓತಪ್ರೋತ ಮಾತುಗಳನ್ನು ಹೇಳಿದ್ದು ಯಾರೊಬ್ಬ ಸಾಮಾನ್ಯ ಮನುಷ್ಯನಲ್ಲ. ನಮ್ಮ ನಡುವಿನ ಹೆಸರಾಂತ ಮತ್ತು ಸುಂದರ ಗಾಯಕ ರಾಜೇಶ ಕೃಷ್ಣನ್. ಹಾಗೆ ನೋಡಿದರೆ ರಾಜೇಶ ಕೃಷ್ಣನ್ ಅಷ್ಟು ಸುಲಭವಾಗಿ ಯಾರನ್ನೂ ಹೊಗಳುವ ಪೈಕಿಯ ತೀರ್ಪುಗಾರನಲ್ಲ. ತುಂಬಾ ಕಂಜೂಷ್ ತೀರ್ಪುಗಾರ. ಅಂತಹ ಸಂಗೀತ ವಿದ್ವಾಂಸ ರಾಜೇಶ್ ಕೃಷ್ಣನ್ ಇಷ್ಟೆಲ್ಲಾ ಮೆಚ್ಚುಗೆಯ ಮಾತಾಡುತ್ತಾರೆಂದರೆ ಅದು ಉತ್ಪ್ರೇಕ್ಷೆ ಆಗಿರಲಿಕ್ಕಿಲ್ಲ ಅಂತ ಎಂಥವರಿಗೂ ಅನಿಸದಿರಲಾರದು. ಇದೆಲ್ಲ ಮುರ್ನಾಲ್ಕು ತಿಂಗಳ ಹಿಂದೆ ಕಲರ್ಸ್ ಕನ್ನಡ ವಾಹಿನಿಯ “ಎದೆತುಂಬಿ ಹಾಡುವೆನು” ರಿಯಾಲಿಟಿ ಷೋ ಕಾರ್ಯಕ್ರಮದ ಒಂದು ರಿಯಲ್ ಝಲಕ್. ಕಲಬುರ್ಗಿ ಜಿಲ್ಲೆಯ ಗಡಿ ಲಿಂಗದಹಳ್ಳಿಯ ಹುಡುಗ ಸೂರ್ಯಕಾಂತ ಖುದ್ದು ತಾನೇ ಹಾರ್ಮೋನಿಯಂ ನುಡಿಸುತ್ತಾ..,
*ಯಾಕ ಮಾಡತಿದಿ ನೀ ಒಣಚಿಂತಿ/*
*ನಿನಗ ಬಡಕೊಂಡಾದ*
*ಮಾಯದ ಭ್ರಾಂತಿ//* ಎಂಬ ಕಡಕೋಳ ಮಡಿವಾಳಪ್ಪನವರ ತತ್ವಪದ ಹಾಡುವುದನ್ನು ಕೇಳಿ ಮಂತ್ರಮುಗ್ದರಾಗಿ ಹೇಳಿದ ಮರೆಯಲಾಗದ ಮಾತುಗಳಿವು.

ಹಾಗೆ ನೋಡಿದರೆ ರಾಜೇಶ್ ಕೃಷ್ಣನ್, ಗಾಯಕ ಸೂರ್ಯಕಾಂತನನ್ನು ಮೆಚ್ಚಿ ತಾರೀಫು ಮಾಡಿದ್ದು ಇದೇ ಮೊದಲಲ್ಲ.‌ ಎದೆತುಂಬಿ ಹಾಡುವೆನು ಸ್ಪರ್ಧೆಯ ಸೂರ್ಯಕಾಂತನ ಆಯ್ಕೆಯ ಸಂದರ್ಭದಲ್ಲಿ ಇದೇ ಬಗೆಯ ಮಾತುಗಳನ್ನು ರಾಜೇಶ್ ಕೃಷ್ಣನ್ ” ಫಲಿತಾಂಶಕ್ಕೆ ಮುನ್ನವೇ ನೀನು ಗೆದ್ದಿರುವೆ ” ಎಂದು ಹಾರೈಕೆ ಸ್ವರದ ನುಡಿಗಳನ್ನು ಆಡಿದ್ದರು‌. ಅವರೊಬ್ಬರೇ ಮಾತ್ರವಲ್ಲ. ಅವರ ಜೊತೆ ಸಹತೀರ್ಪುಗಾರರಾಗಿದ್ದ ರಘು ದೀಕ್ಷಿತ್, ಹರಿಕೃಷ್ಣ ಕೂಡಾ ಅಂತಹದ್ದೇ ಸಹೃದಯದ ಮಾತುಗಳನ್ನು ಹೇಳಿದ್ದರು.

ಅವತ್ತು ಸ್ಪರ್ಧಾ ಕಣಕ್ಕೆ ಆಯ್ಕೆಯ ಸನ್ನಿವೇಶದಲ್ಲಿ ಸೂರ್ಯಕಾಂತ ಹಾಡಿದ್ದು ಅದೇ ನಮ್ಮ ಕಡಕೋಳ ಮಡಿವಾಳಪ್ಪನವರ ಮೂಕನಾಗಬೇಕು/ ಜಗದೊಳು ಜ್ವಾಕ್ಯಾಗಿರಬೇಕು// ಎಂಬ ತತ್ವಪದ. ಸೂರ್ಯಕಾಂತ ಹಾಡಿದ ಮೂಕನಾಗಬೇಕು ಗಝಲ್ ಶೈಲಿಯ ತತ್ವಪದ ಪ್ರಸಾರಗೊಂಡ ಎರಡೇ ಎರಡು ತಾಸಿನಲ್ಲಿ ಹತ್ತುಲಕ್ಷಕ್ಕೂ ಮಿಕ್ಕಿ ಶ್ರೋತೃಪ್ರೇಕ್ಷಕರ ಮನಮುಟ್ಟಿದ ಪ್ರೀತಿಕಾಂಕ್ಷೆಯ ಶಿಖರ ತಲುಪಿತ್ತು. ಅದು ಅಕ್ಷರಶಃ ಅತ್ಯಂತ ಮಹತ್ವದ ದಾಖಲೆ. ಆಗಲೇ ಕಲರ್ಸ್ ಕನ್ನಡ ವಾಹಿನಿಯ “ಟಿಆರ್ಪಿ” ನಿರೀಕ್ಷೆಯ ಗೆರೆಗಳನ್ನು ದಾಟಿ ದೂರ ಜಿಗಿದಿತ್ತು.

ಸೂರ್ಯಕಾಂತ ಎದೆತುಂಬಿ ಹಾಡಿದ ‘ಮೂಕನಾಗಬೇಕು’ ತತ್ವಪದ ಅದೆಷ್ಟು ಪ್ರಸಿದ್ದಿ ಆಯ್ತು ಅಂದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನ ಸೆಳೆಯಿತು. ಸೂರ್ಯಕಾಂತನ ಊರು ಚಿಂಚೋಳಿ ತಾಲೂಕಿನ ಗಡಿ ಲಿಂಗದಹಳ್ಳಿಗೆ ಅದುವರೆಗೆ ಸಾರಿಗೆ ವ್ಯವಸ್ಥೆಯೇ ಇರಲಿಲ್ಲ. ಅದೇ ತಾಲೂಕಿನ ವೀರೇಂದ್ರ ಪಾಟೀಲರು ಎರಡುಬಾರಿ ಮುಖ್ಯಮಂತ್ರಿ ಆಗಿದ್ದರೂ ಗಡಿಲಿಂಗದಹಳ್ಳಿಗೆ ಬಸ್ಸಿನ ಸೌಲಭ್ಯ ಸಿಕ್ಕಿರಲಿಲ್ಲ. ಸೂರ್ಯಕಾಂತನಿಂದಾಗಿ ಆ ಊರು ಬೊಮ್ಮಾಯಿ ಗಮನಕ್ಕೆ ಬರುತ್ತಿದ್ದುದೇ ತಡ ಮುಖ್ಯಮಂತ್ರಿಗಳೇ ಆ ಊರಿಗೆ ಬಸ್ಸಿನ ವ್ಯವಸ್ಥೆ ಮಾಡಿಸಿದರು. ಒಂದು ಹಾಡು ಅಷ್ಟೆಲ್ಲ ಪವಾಡಗಳಿಗೆ ಕಾರಣವಾಯಿತು. ಅದನ್ನು ಹಾಡಿದ ಸೂರ್ಯಕಾಂತ ಅದರ ಕಾರಣಪುರುಷ.

ಆರಂಭದ ಆಯ್ಕೆಯ ಸಂದರ್ಭದಲ್ಲಿ ಸೂರ್ಯಕಾಂತನ ಪರಿಚಯ ಮಾಡಿ ಕೊಡುತ್ತಿರುವಾಗ ಅವನೊಬ್ಬ ಉಗ್ಗ ಎಂಬುದು ತಿಳಿಯಿತು. ಆದರೆ ಪರಮ ಅಚ್ಚರಿ ಎಂದರೆ ಹಾಡುವಾಗ ಮಾತ್ರ ಗಾಯಕ ಸೂರ್ಯಕಾಂತನ ಸಿರಿಕಂಠದ ಸನಿಹ ‘ಉಗ್ಗು’ ಸುಳಿಯುವುದೇ ಇಲ್ಲ. ಮಡಿವಾಳಪ್ಪನ ಇವೆರಡೂ ತತ್ವಪದಗಳನ್ನು ಸೂರ್ಯಕಾಂತ ಗಝಲ್ ಶೈಲಿಯಲ್ಲಿ ಹಾಡಿದ್ದು. ಮಡಿವಾಳಪ್ಪನ ತತ್ವಪದಗಳ ಸತ್ವಯುತ ಶಕ್ತಿಯೇ ಅಂತಹದ್ದು. ಅಂತಹ ಶಕ್ತಿಗೆ ಖ್ಯಾತ ಗಝಲ್ ಗಾಯಕ ರವೀಂದ್ರ ಹಂದಿಗನೂರು ರಾಗ ಸಂಯೋಜನೆ ಮಾಡಿದ್ದು. ಗಝಲ್ ಧಾಟಿಯ ಎರಡೇ ಎರಡು ತತ್ವಪದಗಳ ಅನನ್ಯತೆಯ ಮೂಲಕ ಸೂರ್ಯಕಾಂತನ ನಸೀಬು ಖುಲಾಯಿಸಿತೆಂಬ ವಾತಾವರಣ ನಿರ್ಮಾಣಗೊಂಡೇ ಬಿಟ್ಟಿತು. ಗೆಲುವಿನ ಅಂತಹದ್ದೊಂದು ಭರಪೂರ ಭರವಸೆಯ ಹೊಳೆಯೇ ಉಕ್ಕಿ ಹರಿಯಿತು. ಅಂತೆಯೇ ಅವನ ಸಿರಿಕಂಠಕೆ ತೀರ್ಪುಗಾರರಿಂದ ಮೆಚ್ಚುಗೆಯ ಮಹಾಪೂರದ ಮಹಾಮಳೆಯೇ ಸುರಿದು ಸಂಪನ್ನಗೊಂಡಿತು. ನೋ ಡೌಟ್ ಅವನ ಗೆಲುವು ನೂರಕ್ಕೆ ನೂರು ನಿಶ್ಚಿತ ಎನ್ನುವ ಹವಾ ಎಲ್ಲ ದಿಕ್ಕುಗಳಲ್ಲೂ ಅನುರಣಿಸಿತು.

ಆದರೆ ಆಗಿದ್ದೇ ಬೇರೆ. ಫಲಿತಾಂಶದ ದಿಕ್ಕುದೆಶೆ ಪೂರ್ಣ ಬದಲಾಗಿ ಹೋಗಿಬಿಟ್ಟಿತು. ಹೌದು ಹೈದ್ರಾಬಾದ್ ಕರ್ನಾಟಕದ ನಮ್ಮವರದು ಬದ್ ನಸೀಬ್, ಯಾವತ್ತೂ ಖರಾಬ್. ಖುಷಿಯ ವಿಷಯವೆಂದರೆ ಗೆದ್ದದ್ದು ಬಳ್ಳಾರಿಯ ಚಿನ್ಮಯ ಜೋಷಿ ಎಂಬ ನಮ್ಮ ಕಲ್ಯಾಣ ಕರ್ನಾಟಕದ ಪ್ರತಿಭೆ. ನೆನಪಿರಲಿ ಬಳ್ಳಾರಿ ಮೂಲತಃ ಹೈ. ಕ. ಪ್ರದೇಶವಲ್ಲ. ಅದು ಮದ್ರಾಸ್ ಪ್ರಾಂತ್ಯ. ಅದೊತ್ತಟ್ಟಿಗಿರಲಿ ಜಾತಿ, ಮತ, ಪಂಥ, ಪ್ರಾದೇಶಿಕತೆ ಮೀರಿದ್ದು ಸಾಂಸ್ಕೃತಿಕ ಸ್ಪರ್ಧೆ. ಅಲ್ಲಿ ಅದ್ಯಾವುದು ಗಣನೆಯಾಗಲ್ಲ ಅಂತಲೇ ಅಂದುಕೊಳ್ಳೋಣ. ಆದರೆ ಸಾಂಸ್ಕೃತಿಕ ರಾಜಕಾರಣವನ್ನು ಗುಪ್ತಗಾಮಿನಿಯಂತೆ ಹರಿಸುವುದೇ ಕಾರ್ಪೊರೇಟ್ ಕಲ್ಚರ್. ಹೀಗಾಗಿ ಸೂರ್ಯಕಾಂತನ ನಸೀಬು ಸಿನೆಮಾ ಹಾಡುಗಳಲ್ಲಿ ಖುಲಾಯಿಸಲಿಲ್ಲ ಎಂಬ ಸಮಾಧಾನವೇ ನಮಗೆ ಗತಿಯಾಯಿತು. ಸಿನೆಮಾ ಹಾಡುಗಳೇನು ಸುಲಭದ್ದಲ್ಲ.

ಹಾಗಾದರೆ ಸೂರ್ಯಕಾಂತನ ಕುರಿತಾದ ತೀರ್ಪುಗಾರರ ಅಗಾಧ ಮೆಚ್ಚುಗೆಗೆ ಏನರ್ಥ.? ಅದೆಲ್ಲ ಹೊಗಳಿಕೆ ಹುಸಿಯೆಂದು ಭಾವಿಸಲಾದೀತೇ.? ಖಂಡಿತಾ ಹುಸಿ ಆಗಿರಲಾರದು. ಸೂರ್ಯಕಾಂತನ ಸಂಗೀತ ಪ್ರತಿಭೆ ನಿಸ್ಸಂದೇಹವಾಗಿ ಪ್ರಶ್ನಾತೀತ. ಇತ್ತೀಚಿನ ದಿನಮಾನಗಳಲ್ಲಿ ಜನಪ್ರಿಯ ರಿಯಾಲಿಟಿ ಷೋಗಳಲ್ಲಿ ಭಾಗವಹಿಸಲೆಂದೇ ಸಿದ್ಧಗೊಳ್ಳುತ್ತಿರುವ ಸ್ಪರ್ಧಿಗಳು, ಪಾಠಶಾಲೆಗಳು ಕಲಿಯಬೇಕಾದ ಪ್ರಮುಖ ಪಾಠಗಳಿವೆ. ಸೋಲು ಗೆಲುವನ್ನು ಬದಿಗಿಟ್ಟು ಎಲ್ಲ‌ಸ್ಪರ್ಧಿಗಳಿಗೆ ತಾನು ಭಾಗವಹಿಸಿ ಬಂದ ವೇದಿಕೆಗಳ ಕುರಿತು ಒಂದು ಬಗೆಯ ಹೇಳಲಾಗದ ಮತ್ತು ಹೇಳದಿರಲಾಗದ ಅಮೂರ್ತ ಅಭಿಮಾನ. ಅದೇನು ಬಿಗುಮಾನವಲ್ಲ. ಪ್ರಾಯಶಃ ಸೂರ್ಯಕಾಂತ ಸಹಿತ ಅದಕ್ಕೆ ಹೊರತಲ್ಲ.

ಬಹುಪಾಲು ರಿಯಾಲಿಟಿ ಷೋಗಳ ರಿಯಾಲಿಟಿ ಚೆಕ್ ಮಾಡುವುದಾದರೆ ಆಳದಲ್ಲಿ ಅವು ಅಪಸವ್ಯಗಳ ಆಗರವೇ ಆಗಿರ್ತವೆ. ಅವು ನಮಗೆ ತೋರಿಸುವುದೇ ಒಂದು. ಅಲ್ಲಿರುವುದೇ ಮತ್ತೊಂದು. ಹೇಗಾದರೂ ಮಾಡಿ ನೋಡುಗರನ್ನು ಕೇಳುಗರನ್ನು ನಂಬಿಸುವಲ್ಲಿ ದೂರದರ್ಶನ ವಾಹಿನಿಗಳು ಯಶಸ್ವಿಯಾಗಿವೆ. ಅಂತಹ ಯಶಸ್ಸಿನ ಕುರಿತು ಅನುಮಾನಕ್ಕೆ ಅವಕಾಶವೇ ಇಲ್ಲದಂತಹ ರಂಗೋಲಿ ಕೆಳಗೆ ನುಸುಳುವ ಎಲ್ಲಬಗೆಯ ತಂತ್ರಗಳನ್ನು ಕರತಲಾಮಲಕ ಮಾಡಿಕೊಂಡಿವೆ.

ಅದು ಕಾರ್ಪೊರೇಟ್ ಲೋಕದ ಬಹುದೊಡ್ಡ ಹುನ್ನಾರವೇ ಆಗಿದೆ. ಹಣ ಹೂಡಿಕೆ ಮತ್ತು ಹೂಡಿದ ಹಣದ ಹತ್ತಾರುಪಟ್ಟು ಹೆಚ್ಚಿನ ಹಣ ಗಳಿಕೆಯೇ ಕಾರ್ಪೊರೇಟ್ ಮಾಯಾ ಬಜಾರಿನ ಒಳಹೇತು. ಇದು ಯಾರೂ ಅರಿಯದ ಒಳಸತ್ಯವೇನಲ್ಲ. ಆದರೆ ಸಾಂಸ್ಕೃತಿಕ ಜಗತ್ತಿನ ಗ್ರಾಮ್ಯಜನ್ಯ ಪ್ರತಿಭೆಗಳು ನಿಸರ್ಗ ಸುಬಗದ ನಿಷ್ಪತ್ತಿ ಹಣ್ಣಾಗುವ ಬದಲು ಒತ್ತಾಸೆಯ ಫಲವಾಗಿ ಬೇಗನೆ ಉದುರಿ ಹೋಗಿ ಬಿಡುವ ಸಾಧ್ಯತೆಗಳೇ ಅಧಿಕ. ಅದಕ್ಕಾಗಿ ಅವು ಅವರ ತಾಳಕ್ಕೆ ತಕ್ಕಂತೆ ಕುಣಿಯಲೇ ಬೇಕಾಗಿದೆ. ಅದು ಕುರುಡು ಕಾಂಚಾಣದ ಕುಣಿತ. ಅಂತೆಯೇ ಅಲ್ಲಿ ಶಾಸ್ತ್ರೀಯ ನೃತ್ಯ, ಸಂಗೀತದಲ್ಲಿ ನಿಪುಣತೆ ಹೊಂದಿದವನು ಸಹಿತ ಅವರ ಆಣತಿಯಂತೆ ವೇಷತೊಟ್ಟು ಕುರುಡು ಕುಣಿತ ಕುಣಿಯಲೇಬೇಕು.

ನೃತ್ಯ, ಸಂಗೀತ ಇತರೆ ಯಾವುದೇ ಕಲಾಪ್ರಕಾರದ ಪ್ರತಿಭಾ ಸ್ಪರ್ಧಿಗಳ ಪ್ರದರ್ಶನಗಳ ಪಾರಮ್ಯಗಳಿಗಿಂತ ತೀರ್ಪುಗಾರರ ಕಮೆಂಟುಗಳದ್ದೇ ಉತ್ಕಟ ವಾಂಛೆ. ಅವು ಪಡಕೊಳ್ಳುವ ಆದ್ಯತೆಗಳ ಮೇರೆಗೆ ಸೋಲು ಗೆಲುವಿನ ಮೇಲಾಟ. ಬಹುತೇಕ ಸಂದರ್ಭಗಳಲ್ಲಿ ತೀರ್ಪುಗಾರರ ಸಹಮತದ ಏಕತಾನತೆ. ಟಿಆರ್ಪಿ ದರವನ್ನು ಏರಿಸಲು ಅಭಿಜಾತ ಪ್ರತಿಭೆಗಳನ್ನು ಅಗದೀ ಶ್ಯಾಣೇತನದಿಂದ ಬಳಸಿಕೊಳ್ಳುವ ಚಾತುರ್ಯದ ಚದುರಂಗದಾಟವೇ ಅದಾಗಿವೆ. ಅಷ್ಟುಮಾತ್ರವಲ್ಲ ಅವು ಟಿಆರ್ಪಿ ಆಟವನ್ನು ಮುಂದುವರೆಸಿಕೊಂಡು ಹೋಗಬಲ್ಲ ಸಕಲೆಂಟು ಕಲೆಗಳ ಕೂಟವೇ ಆಗಿವೆ. ಹಾಗಿದ್ದಲ್ಲಿ ಸೂತಕದಂತಿರುವ ಹೊಲಿಮನಿಗಳು ಶಿಶುನಾಳಧೀಶನ “ಹಸನಾದ ಹಾಡುಗಳಮನಿ ” ಆಗುವುದು ಯಾವಾಗ.?


ಮಲ್ಲಿಕಾರ್ಜುನ ಕಡಕೋಳ
‌ 9341010712

Don`t copy text!