ಚಮಕೇರಿಯಲ್ಲಿ ಗಡಿನಾಡು ಉತ್ಸವ:
ಕನ್ನಡಕ್ಕೆ ಅಳಿವಿಲ್ಲ, ಜಾಗತೀಕರಣಕ್ಕೆ ತಮ್ಮನ್ನು ತೆರೆದುಕೊಳ್ಳಲಿ
– ಸಮ್ಮೇಳನಾಧ್ಯಕ್ಷೆ ರೋಹಿಣಿ ಯಾದವಾಡ
ಕನ್ನಡ ಭಾಷೆಗೆ ಎರಡೂವರೆ ಸಾವಿರ ವರುಷಗಳ ಭವ್ಯ ಇತಿಹಾಸವಿದೆ. ಸಾಂಸ್ಕೃತಿಕ ಹಿನ್ನೆಲೆ ಇದೆ. ವಿವಿಧತೆಯಲ್ಲಿ ಏಕತೆ ಕಾಣುವ ನಾಡು ನಮ್ಮದು. ಇಂದು ವಿವಿಧ ಕಾರಣಗಳಿಂದ ನಾಡಿನವರಿಂದ ದೂರವಾಗುತ್ತಿರುವುದನ್ನು ಕಂಡುಬರುತ್ತಿದೆ. ನಾವೆಲ್ಲ ಇಂದು ಭಾಷಾಭಿಮಾನದಿಂದ ನಾಡಿನಲ್ಲಿ, ಜೊತೆಗೆ ಹೊರಗೂ ಪಸರಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ದೇಶಿಕಲೆಗಳು ಈ ನೆಲದ ಸಂಸ್ಕೃತಿಯನ್ನು ಉನ್ನತಿಕರಿಸಿವೆ. ಆದ್ದರಿಂದ ಜಾಗತೀಕರಣದ ಇಂದಿನ ದಿನಗಳಲ್ಲಿ ಕಲಾವಿದರು ತಂತ್ರಜ್ಞಾನಕ್ಕೆ ತಮ್ಮನ್ನು ಹೊಂದಿಸಿಕೊಳ್ಳಬೇಕು ಎಂದು ಗಡಿನಾಡ ಕನ್ನಡ ಸಾಂಸ್ಕ್ರತಿಕ ಉತ್ಸವದ ಸಮ್ಮೇಳನಾಧ್ಯಕ್ಷೆ ಸಾಹಿತಿ ರೋಹಿಣಿ ಯಾದವಾಡ ಅವರು ಅಭಿಪ್ರಾಯ ಪಟ್ಟರು.
ಅಥಣಿ ತಾಲೂಕಿನ ಚಮಕೇರಿ ಗ್ರಾಮದಲ್ಲಿ ಕನ್ನಡಿಗರ ಸಾಹಿತ್ಯ ಸಾಂಸ್ಕೃತಿಕ ಟ್ರಸ್ಟ್ (ರಿ) ಹಾಗೂ ಕನ್ನಡ ಮತ್ತು ಸಂಸ್ಖತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ಗಡಿನಾಡು ಸಾಂಸ್ಕೃತಿಕ ಉತ್ಸವದಲ್ಲಿ ಅವರು ಮಾತನಾಡುತ್ತ, ಜನಪದ ಗೀತೆ, ಕೋಲಾಟ, ಚೌಡಕಿ, ಥ್ವಪದ, ಭಜನೆ, ಯಕ್ಷಗಾನ, ಪಾರಿಜಾತ, ಸೋಬಾನೆ ಬೀಸುಕಲ್ಲು , ಜೋಗುಳ ಪದಗಳನ್ನು ಕಲಿಯಲು ಯುವಜನತೆ ಕಲಿಯುವ ಆಸಕ್ತಿ ತೋರಬೇಕು. ಆಡಳಿತ ಸುಗಮ ಹಾಗೂ ದಕ್ಷತೆ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯಲ್ಲಿ ಇನ್ನೊಂದು ಜಿಲ್ಲೆಯನ್ನಾಗಿ ಮಾಡಬೇಕು. ವಲಸೆ ಹೋಗುವ ಪರಿಸ್ಥಿತಿಗೆ ಶಾಶ್ವತ ಪರಿಹಾರ ಬೇಕು ಎಂದರು.
ಸಾನಿಧ್ಯವನ್ನು ವಹಿಸಿದ್ದ ಕಕಮರಿಯ ಅಭಿನವ ಗುರುಲಿಂಗ ಸ್ವಾಮೀಜಿ ಮಾತನಾಡಿ, ಕನ್ನಡ ಉಳಿವು ಕೇವಲ ಘೋಷಣೆ, ಜಯಕಾರದಿಂದ ಸಾಲದು. ಮಾತು ಆಚರಣೆಯಾಗಬೇಕು.ಪಠ್ಯ ಪುಸ್ತಕ ಒದಗಿಸುವಲ್ಲಿ ಕರ್ನಾಟಕ ಸರಕಾರ ಮಹಾರಾಷ್ಟ್ರ ನೀತಿ ಅನುಸರಿಸಲಿ. ಶಾಲೆ ಪ್ರಾರಂಭವಾಗುವ ಮುಂಚೆನೆ ಒದಗಿಸುವಂತಾಗಬೇಕೆಂದು ಆಗ್ರಹಿಸಿದರು.
ವಾದ್ಯ ನುಡಿಸುವ ಮೂಲಕ ಉದ್ಘಾಟನೆ ನೆರವೇರಿಸಿದ ಲಲಿತಕಲಾ ಅಕಾಡೆಮಿ ಮಾಜಿ ಸದಸ್ಯ ಡಾ.ಪ್ರತಾಪ ಬಹುರೂಪಿ ಮಾತನಾಡಿ ಕನ್ನಡ ಭಾಷೆಗೆ ಹೃದಯದಲ್ಲಿ ಸ್ಥಾನಕೊಟ್ಟು ಗೌರವಿಸಿ ಎನ್ನುತ್ತ, ಕಾಣದ ದೇವರಿಗೆ ಕೈಮುಗಿಯುವದಕ್ಕಿಂತ ಹೆತ್ತವರ ಸೇವೆ ಮಾಡಬೇಕು. ಈ ನಿಟ್ಟಿನಲ್ಲಿ ಮಹಾದೇವ ಬಿರಾದರ ಅವರು ಅಪ್ಪ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಎಂದರು. ಪರಮಾನಂದವಾಡಿಯ ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ ಮಾತನಾಡಿ ಭಾಷೆ ಉಳಿದರೆ ಭಾಷೆ ಉಳಿಯುವುದು ಎಂದರು.
ಈ ಸಮಯದಲ್ಲಿ ಕನ್ನಡಿಗರ ಸ್ಥಿತಿಗತಿ ಕುರಿತು ಪ್ರಕಾಶ ಪೂಜಾರಿ ಮಾತನಾಡಿದರು. ಗಣಿತಜ್ಞ ಬೆಳಗಾವಿಯ ಡಾ. ರವೀಂದ್ರ ತೋಟಗೆರ, ಡಾ.ಮಹಾಂತೇಶ ಉಕ್ಕಲಿ, ಶಿವಪುತ್ರ ಯಾದವಾಡ, ಪ್ರಿಯಂವದಾ ಹುಲಗಬಾಳಿ, ಎಸ್ ಕೆ ಹೊಳೆಪ್ಪನವರ, ವಿಜಯಪೂರ ಸಿಪಿಐ ಮಲ್ಲಿಕಾರ್ಜುನ ಸಿಂಧೂರ, ಅರುಣಕುಮಾರ ರಾಜಮಾನೆ, ಪ್ರಕಾಶ ಖೋತ , ಕರವೇಯ ಅಣ್ಣಾಸಾಹೇಬ ತೆಲಸಂಗ, ರವಿ ಪೂಜಾರಿ, ರೈತ ಸಂಘದ ಮಹಾದೇವ ಮಡಿವಾಳ ಮೊದಲಾದವರು ಉಪಸ್ಥಿತರಿದ್ದರು.
ಈ ಸಮಯದಲ್ಲಿ ಭರತನಾಟ್ಯ, ಜಾನಪದ ನೃತ್ಯ, ಕೇರಳ ನೃತ್ಯ, ಭಜನೆ, ಡೊಳ್ಳು ಕುಣಿತ ಮೊದಲಾದ ಕಲೆಗಳ ಪ್ರದರ್ಶನ ನಡೆಯಿತು. ಸಂಜಯ ಪಾರ್ಥನಳ್ಳಿ ಅವರಿಂದ ಸುಗಮ ಸಂಗೀತ ನಡೆಯಿತು
ಇದೇ ಸಮಯದಲ್ಲಿ ಶತಮಾನದ ಕವನಗಳು , ಭೀಮ ಬೆಳಕು ಕೃತಿ ಬಿಡುಗಡೆಗೊಡವು. ಪ್ರಾರಂಬದಲ್ಲಿ ಚಮಕೇರಿಯ ಮಹಾದೇವ ಬಿರಾದಾರ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಸುನೀಲ ಕಬ್ಬೂರ, ಟಿ.ಎಸ್ ಒಂಟಗೂಡಿ ವಂದಿಸಿದರು.