ಸಹನೆ ಮೀರಿದರೆ ಗಣಾಚಾರಿಗಳಾಗುವೆವು-ವೀರಶೈವ ಲಿಂಗಾಯತ ಸ್ವಾಮೀಜಿಗಳ ಆಕ್ರೋಶ
e-ಸುದ್ದಿ ಮಸ್ಕಿ
ಪ್ರತಿಯೊಬ್ಬರಿಗೂ ಲೇಸನ್ನೇ ಬಯಸುವ ಇತರರಿಗೆ ಸಮಾನತೆಯನ್ನು ಕಲ್ಪಿಸಿದ ವೀರಶೈವ ಲಿಂಗಾಯತ ಸಮುದಾಯದ ನೌಕರರ ಮೇಲೆ ಅನಗತ್ಯವಾಗಿ ಹಲ್ಲೆ, ಕಿರುಕುಳದಂತಹ ಘಟನೆಗಳು ನಡೆಯುತ್ತಿರುವದು ಖಂಡನೀಯ ಎಂದು ಕಲ್ಯಾಣ ಆಶ್ರಮದ ಮುದಗಲ್ ಮಹಾಂತಸ್ವಾಮೀಜಿ ಹೇಳಿದರು.
ಪಟ್ಟಣದ ಸಿಂಧನೂರು ರಸ್ತೆಯಲ್ಲಿರುವ ಬಸವೇಶ್ವರ ವೃತ್ತದ ಬಳಿ ವೀರಶೈವ ಲಿಂಗಾಯತ ಸಮುದಾಯದವರು ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ವೀರಶೈವ ಲಿಂಗಾಯತರ ಮೇಲೆ ಇತ್ತೀಚೆಗೆ ಹಲ್ಲೆ ನಡೆಯುತ್ತಿರುವದನ್ನು ನೋಡಿ ಸಮಾಜ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಸಮಾಜ ಬಾಂಧವರಲ್ಲಿ ಆಂತರಿಕ ಕುದಿ ಹೆಚ್ಚುತ್ತಿದೆ. ಇದಕ್ಕೆಲ್ಲ ಅವಕಾಶ ಮಾಡಿಕೊಡಬಾರದು. ಪ್ರತಿಯೊಬ್ಬರನ್ನು ಅಪ್ಪಿಕೊಳ್ಳುವುದು ಗೊತ್ತು. ತಿರುಗಿ ಬಿದ್ದವರಿಗೆ ಪಾಠ ಕಲಿಸುವುದು ಗೊತ್ತು ಎಂದು ಮುದಗಲ್ ಮಹಾಂತ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಗೆ ಚಾಲನೆ ನೀಡಿ ನೇತೃತ್ಬ ವಹಿಸಿದ್ದ ಮಸ್ಕಿಯ ಗಚ್ಚಿನ ಹಿರೇಮಠದ ವರರುದ್ರಮುನಿ ಸ್ವಾಮೀಜಿ ಮಾತನಾಡಿ ಇಂದಿನ ಪ್ರತಿಭಟನೆ ಯಾವ ಸುಮುದಾಯದ ವಿರುದ್ಧವಲ್ಲ. ಕಿಡಿಗೇಡಿಗಳ ವಿರುದ್ಧವಾಗಿದೆ. ಹುಮಾನಬಾದ ತಹಸೀಲ್ದಾರ ಪ್ರದೀಪ ಹಿರೇಮಠ ಅವರ ಮೇಲೆ ಹಲ್ಲೆ ಮಾಡಿದ ಕಿಡಿಗೇಡಿಗಳಿಗೆ ಸೂಕ್ತ ಶಿಕ್ಷೆಯಾಗಬೇಕು. ಸರ್ಕಾರಿ ನೌಕರರು ನಿರ್ಭಿತಿಯಿಂದ ಸಾರ್ವಜನಿಕ ಕೆಲಸ ಮಾಡುವ ವಾತವರಣ ನಿರ್ಮಾಣ ವಾಗಬೇಕು ಎಂದು ಒತ್ತಾಯಿಸಿದರು.
ಮುಂಬರುವ ದಿನಗಳಲ್ಲಿ ಮಸ್ಕಿ ತಾಲೂಕಿನಲ್ಲಿ ವೀರಶೈವ ಲಿಂಗಾಯತ ಸಮುದಾಯದ ಒಳಪಂಗಡಗಳು ಒಗ್ಗೂಡಿಕೊಂಡು ತಾಲೂಕು ಮಟ್ಟದ ವೀರಶೈವ ಲಿಂಗಾಯತ ಸಮಾಜದ ಸಂಘಟನೆ, ಭವಷ್ಯತ್ತಿನ ದೂರದೃಷ್ಟಿ, ಶೈಕ್ಷಣಿಕ, ಸಾಮಾಜಿಕವಾಗಿ ಸಮಾಜವನ್ನು ಕಟ್ಟಲು ಚಿಂತನೆ ನಡೆದಿದೆ. ಇದೇ ಒಗ್ಗಟ್ಟು ಮುಂಬರುವ ದಿನಗಳಲ್ಲಿ ಉಳಿಸಿಕೊಂಡು ಸಮಾಜವನ್ನು ಸದೃಡಗೊಳಿಸೋಣ ಎಂದರು.
ನಂತರ ಮುಖ್ಯಮಂತ್ರಿ ಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ ಕವಿತಾ ಆರ್ ಅವರಿಗೆ ಸಲ್ಲಿಸಿದರು.
ಸಂತೆಕೆಲ್ಲೂರಿನ ಮಹಾಂತರಮಠದ ಮಹಾಂತಸ್ವಾಮೀಜಿ, ಶಿವಕುಮಾರ್ ಎನ್, ವೀರೇಶ ಪಾಟೀಲ ಮಾತನಾಡಿದರು.
ಅಪ್ಪಾಜಿಗೌಡ ಪಾಟೀಲ, ಅಂದಾನಪ್ಪ ಗುಂಡಳ್ಳಿ, ಡಾ.ಶಿವಶರಣಪ್ಪ ಇತ್ಲಿ, ಡಾ.ಬಿ.ಎಚ್.ದಿವಟರ್, ಬಸವಂತರಾಯ ಕುರಿ, ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ, ಸಿದ್ದಲಿಂಗಯ್ಯ ಸೊಪ್ಪಿ, ಜಗದೀಶ್ಚಂದ್ರ
ತಾತ ಹಾಲಪುರ, ಘನಮಠದಯ್ಯ ಸಾಲಿಮಠ, ಎಂ.ಅಮರೇಶ, ಸುರೇಶ ಹರಸೂರು, ಉಮಾಕಾಂತಪ್ಪ ಸಂಗನಾಳ, ಸಿದ್ದಲಿಂಗಯ್ಯ ಗಚ್ಚಿನಮಠ, ಅಜಯ ನಾಡಗೌಡ, ಚಂದ್ರಕಾಂತ ಗೂಗೆಬಾಳ, ಮಲ್ಲಿಕಾರ್ಜುನ ಬ್ಯಾಳಿ, ಬಸನಗೌಡ ಮುದಬಾಳ, ಶ್ರೀಶೈಲಪ್ಪ ಸಜ್ಜನ್ ಹಾಗೂ ತಾಲೂಕಿನ ವಿವಿಧ ಗ್ರಾಮಗಳ ಜನರು ಆಗಮಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಬೃಹತ್ ಪ್ರತಿಭಟನೆ
ಮಸ್ಕಿ ತಾಲೂಕಿನ ವೀರಶೈವ ಲಿಂಗಾಯತ ಸಮುದಾಯದ ಸುಮಾರು ೨ ಸಾವಿರಕ್ಕೂ ಅಧಿಕ ಜನ ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು. ಭ್ರಮರಾಂಬ ದೇವಸ್ಥಾನದಲ್ಲಿ ಮಸ್ಕಿ ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಾಚಾರ್ಯರು, ಮುದಗಲ್ ಮಹಾಂತಸ್ವಾಮೀಜಿ, ಸಂತೆಕೆಲ್ಲೂರಿನ ಮಹಂತರಮಠದ ಮಹಾಂತಸ್ವಾಮೀಜಿ ಪ್ರತಿಭಟನೆಗೆ ಚಾಲನೇ ನೀಡಿ, ಡಾ.ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿದರು.
ಅಲ್ಲಲ್ಲಿ ರಸ್ತೆ ತಡೆ , ಸಾಂಕೇತಿಕ ಆಕ್ರೋಶ
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಾವಿರಾರು ಜನ ಬಿಳಿವಸ್ತ್ರ ತೊಟ್ಟು ಹೆಗಲಿಗೆ ನೀರಪಂಚಿ ಹಾಕಿಕೊಂಡು ಶಿಸ್ತಿನ ಸಿಪಾತಿಗಳಂತೆ ಶಾಂತಿಯುತ ವಾಗಿ ಪ್ರತಿಭಟನೆ ನಡೆಸಿದರು. ಹಳೇ ಬಸ್ ನಿಲ್ದಾಣ, ಮುದಗಲ್ ಕ್ರಾಸ್ ಬಳಿ ಸ್ವಲ್ಪ ಹೊತ್ತು ಬಸ್ ಸಂಚಾರ ತಡೆದು ಸಾಂಕೇತಿಕವಾಗಿ ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಐ ಸಂಜಯ ಬಳಿಗಾರ, ಪಿಎಸ್ ಐ ಸಿದ್ಧರಾಮ ಬಿದರಾಣಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.