ನಿರ್ಲಿಪ್ತ ಭಾವನೆ
ಯಾವುದೇ ವ್ಯಕ್ತಿ ಅಥವಾ ವಸ್ತುವನೊಂದಿಗೆ ಭಾವನಾತ್ಮಕವಾಗಿ ಸಂಬಂಧವನ್ನು ಬೆಳೆಸಿಕೊಂಡಾಗ ದೂರವಾಗುವಾಗ ಮನಸ್ಸಿಗೆ ನೋವಾಗುವುದು ಸಹಜ. ಜೀವನದಲ್ಲಿ ಆಸೆ, ಪ್ರೀತಿ ಮೋಹಗಳೊಂದಿಗೆ ಜೀವನ ನಡೆಯುತ್ತಿರುತ್ತದೆ. ಆದರೆ ಯಾವುದೂ ಶಾಶ್ವತವಲ್ಲ. ಇದನ್ನು ನಾವು ಅರಿತುಕೊಳ್ಳಬೇಕು.
ಸಣ್ಣ ವಯಸ್ಸಿನಲ್ಲಿ ನಮ್ಮ ಜೊತೆಗೆ ಇರುವ ಸ್ನೇಹಿತರು ಸಂಬಂಧಿಕರು ಬಿಟ್ಟು ಹೋದರೆ ನಮ್ಮ ಪ್ರೀತಿ ಪಾತ್ರ ಆಟಿಕೆ ಕಳೆದರೆ ನಮಗೆ ಕೆಲವೇ ದಿನಗಳ ದುಃಖ ಇರುತ್ತಿತ್ತು, ಆದರೆ ನಾವು ದೊಡ್ಡವರಾಗುತ್ತಿದ್ದಂತೆ ನಮಗೆ ಭಾವನಾತ್ಮಕ ಸಂಬಂಧಗಳು ಬೆರಳೆಣಿಕೆಯಲ್ಲಿ ಉಳಿಯುತ್ತಾ ಬಂದಿತು, ಆದರೆ ಆ ಬೆರಳಿಣಿಕೆಯ ಸಂಬಂಧಗಳನ್ನು ನಾವು ಮನಸ್ಸಿನಲ್ಲಿ ಬಹಳವಾಗಿ ಅವಲಂಬಿತರಾಗುತ್ತಾ ಹೋದೆವು.
ವ್ಯಕ್ತಿ ಹೆಣ್ಣೇ ಇರಲಿ ಗಂಡೇ ಇರಲಿ ಎಲ್ಲರೂ ಭಾವನಾ ಜೀವಿಯಾಗಿರ ಬೇಕೆಂಬ ಯಾವುದೇ ನಿಯಮವಿಲ್ಲ. ಭಾವನಾ ಜೀವಿಗಳಿಗೆ ಜೀವನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೋವಾಗ ಬಹುದು. ನಮ್ಮ ಹೆತ್ತ ತಂದೆ ತಾಯಿಗಳೇ ನಮ್ಮ ಜೀವನ ಪರ್ಯಂತ ಜೊತೆ ಇರಲು ಸಾಧ್ಯವಿಲ್ಲದಾಗ ಮಧ್ಯದಲ್ಲಿ ಬರುವ ವ್ಯಕ್ತಿಗಳಿಂದ ದೇವರು ಕಲಿಸಬೇಕೆಂದ ಪಾಠಗಳನ್ನು ಕಲಿಸಿರುತ್ತಾನೆ. ಅದನ್ನು ಕಲಿತು ಜೀವನದಲ್ಲಿ ಮುನ್ನಡೆಯುವುದು ಬಹಳ ಉತ್ತಮ.
ನಿರ್ಲಿಪ್ತತೆಯ ಭಾವ ಮನುಷ್ಯನಿಗೆ ಇದೇ ವಯಸ್ಸಿನಲ್ಲಿಯೇ ಬರಬೇಕೆಂದು ಇರುವುದಿಲ್ಲ. ಕೆಲವರಿಗೆ ಹುಟ್ಟಿನಿಂದಲೇ ಭಾವನೆಗಳಿಗೆ ಸ್ಪಂದಿಸುವ ಅಭ್ಯಾಸವೇ ಇರುವುದಿಲ್ಲ. ಹಾಗೆಂದು ಅವರು ಭಾವನಾ ರಹಿತರು ಎಂದು ಅರ್ಥವಲ್ಲ. ಕೆಲವರಿಗೆ ದೊಡ್ಡ ಮನಸ್ಸಿರುತ್ತದೆ. ಯಾವುದನ್ನೂ ಮನಸ್ಸಿಗೆ ಆಳವಾದ ಚಿಂತನೆಗೆ ಒಳಪಡಿಸದೇ ಸಂತಸದಿಂದ ಇರುತ್ತಾರೆ. ಅವರೂ ಭಾವನಾ ರಹಿತರೆಂದು ಅರ್ಥವಲ್ಲ.
ಬಹಳ ಅನುಭವದಿಂದ ನಿರ್ಲಿಪ್ತ ಭಾವನೆ ಬರುತ್ತದೆ. ನಿರ್ಲಿಪ್ತ ಭಾವನೆ ಬರಲು ಆಧ್ಯಾತ್ಮಿಕ ಚಿಂತನೆಯ ಅವಶ್ಯಕತೆ ಬಹಳವಾಗಿರುತ್ತದೆ. ಪ್ರಪಂಚದಲ್ಲಿ ಸಂಬಂಧಗಳನ್ನು ದೇವರು ಯಾವುದೋ ಒಂದು ಕಾರಣಕ್ಕೆ ನಿರ್ಮಿಸಿರುತ್ತಾನೆ. ಅವರವರ ಋಣ ಮುಟ್ಟಿದ ತಕ್ಷಣ ಸಂಬಂಧಗಳೂ ಮುಗಿದು ಬಿಡುತ್ತವೆ. ಹಿಂದೆ ನಮ್ಮೊಂದಿಗೆ ಸಂಬಂಧ ಇದ್ದವರೆಲ್ಲಾ ನಮ್ಮ ಮುಂದಿನ ಪಯಣದಲ್ಲಿ ಬರುವರು ಎಂಬುದು ಸಣ್ಣ ಮಕ್ಕಳ ಭಾವನೆ. ಇದ್ದವರ ಋಣ ತೀರಿದೆ ಮುಂದಿನ ಪಯಣ ಮಾಡಬೇಕೆಂಬುದು ವಯಸ್ಕರ ಭಾವನೆ. ಈ ಭಾವನೆಯೊಂದಿಗೆ ಬದುಕಿದಾಗ ನಮ್ಮನ್ನು ಯಾರು ಎಷ್ಟು ಅವಮಾನಿಸಿದರೂ, ಪ್ರೀತಿಸಿದರೂ ವ್ಯತ್ಯಾಸ ಕಾಣುವುದಿಲ್ಲ. ಸಂಪೂರ್ಣ ಸತ್ಯ ಎಂದರೆ ಭಗವಂತನನ್ನು ಬಿಟ್ಟು ಬೇರೆ ಎಲ್ಲಾ ಸಂಬಂಧಗಳು ಕ್ಷಣಿಕವೇ ಶಾಶ್ವತವಾದುದು ಆತ್ಮ ಮತ್ತು ಪರಮಾತ್ಮನ ಸಂಬಂಧ.
ಜೀವನದಲ್ಲಿ ಬರುವ ಮಾನ- ಅಪಮಾನ, ಜಯ-ಅಪಜಯ, ಸೋಲು-ಗೆಲುವು, ಪ್ರೀತಿ-ದ್ವೇಷ ಎಲ್ಲವೂ ಭಗವಂತನ ಇಚ್ಛೆಯಿಂದಲೇ ನಡೆದಿದೆ ಎಂಬ ಭಾವನೆ ಬಂದು ಬಿಟ್ಟು ಬಿಡುವ ಮಾನಸಿಕ ಸ್ಥಿತಿಗೆ ನಿರ್ಲಿಪ್ತ ಭಾವ ಎನ್ನುತ್ತಾರೆ.
ಇಂದಿನ ಪ್ರಸ್ತುತ ಪರಿಸ್ಥಿತಿಯಲ್ಲಿ ಇಂತಹ ನಿರ್ಲಿಪ್ತ ಭಾವನೆಯ ಅವಶ್ಯಕತೆ ಬಹಳಷ್ಟೇ ಇದೆ. ಒಬ್ಬರಿಗೆ ನೋವು ಕೊಡದೇ ಬದುಕುವ, ಮತ್ತೊಬ್ಬರ ಆತ್ಮ ಸಮ್ಮಾನಕ್ಕೆ ಧಕ್ಕೆಯಗದಂತೆ ನಾವು ಆದರ್ಶ ಜೀವನ ನಡೆಸಿದರೆ ಸಾಕು. ಮಾರ್ಯಾದೆ ಇಲ್ಲದ ಜಾಗದಲ್ಲಿ ಹೋಗದೇ ಇರುವುದೂ ಒಂದು ರೀತಿಯ ನಿರ್ಲಿಪ್ತ ಭಾವವೇ. ಏಕೆಂದರೆ ಮನುಷ್ಯನ ಜೀವನಕ್ಕೆ ಅನ್ನ, ನೀರು, ಗಾಳಿ ಬಿಟ್ಟು ಬೇರಾವುದೂ ಅವಶ್ಯಕ ಪಟ್ಟಿಯಲ್ಲಿ ಬರುವುದಿಲ್ಲ.
–ಮಾಧುರಿ ಬೆಂಗಳೂರು