ಶಿವದರುಶನ ಎಮಗಾಯಿತು ಕೇಳಾ…

ಶಿವದರುಶನ ಎಮಗಾಯಿತು ಕೇಳಾ…

ಶಿವರಾತ್ರಿಯಲ್ಲಿ ಮಾತ್ರ ಹೋಗಲು ಅವಕಾಶವಿರುವ ದಟ್ಟ ಅರಣ್ಯ ಮದ್ಯದ ಬೆಟ್ಟಗಳ ತುದಿಯಲ್ಲಿರುವ ಜ್ವಾಲಾಮುಖಿಗಳ ಚಟುವಟಿಕೆಯಿಂದ ನೈಸರ್ಗಿಕವಾಗಿ ನಿರ್ಮಾಣವಾಗಿರುವ ಕವಳೆ ಗುಹಾಲಯದಲ್ಲಿನ ಕವಳೇಶ್ವರನನ್ನ ಈ ಶಿವರಾತ್ರಿಯಲ್ಲಿ ದರ್ಶನ ಮಾಡಬೇಕೆಂದು ನಮ್ಮ ಪಯಣ ದಾಂಡೇಲಿಯತ್ತ ಸಾಗಿತ್ತು. ದಾಡೇಲಿಯಿಂದ ಸುಮಾರು ೨೦ ಕಿ ಮೀ ದೂರ ಸಾಗಿದರೆ ಬೆಟ್ಟಗಳ ಸಾಲಿನಲ್ಲಿ ರಮಣೀಯವಾದ ನಿಸರ್ಗದ ಮಡಿಲಿನಲ್ಲಿರುವ ಕವಳೇಶ್ವರ ಗುಹಾಲಹಕ್ಕೆ ಹೋಗಲು ಕಾಲು ದಾರಿ ಸಿಗುವುದು ದರುಶನಕ್ಕಾಗಿ ಹೋಗುವವರು ದರುಶನ ಮಾಡಿ ಬರುವವರ ದೊಡ್ಡದಾದ ಸಾಲುಗಳನ್ನು ನೋಡಿ ಆಶ್ಚರ್ಯವಾಯಿತು ಕೇವಲ ಶಿವರಾತ್ರಿಯಲ್ಲಿ ಮಾತ್ರವೇ ಈ ಗುಹಾಲಯಕ್ಕೆ ದರುಶನಕ್ಕೆ ಹೋಗಲು ಅರಣ್ಯ ಇಲಾಖೆ ಅನುವು ಮಾಡಿಕೊಟ್ಟಿರುವುದರಿಂದ ಮತ್ತು ಬೇರೆ ಸಮಯದಲ್ಲಿ ದುರ್ಗಮವಾದ ಈ ಕಾಡು ಹಾದಿಯಲ್ಲಿ ಸಾಗುವುದು ಅಪಾಯಕರವಾಗಿರುವುದರಿಂದ ಶಿವರಾತ್ರಿಯ ಹಗಲು ರಾತ್ರಿಯಲ್ಲಿಯೂ ಜನ ಸಾಗರವೇ ಕಾಡಿನ ಮದ್ಯೆ ಹರಿದು ಹೋಗುವುದನ್ನೇ ನೋಡುವುದು ಕಣ್ಣಿಗೆ ಹಬ್ಬ.

ಕಾಡಿನ ಮದ್ಯದ ಕಾಲು ದಾರಿಯಲ್ಲಿ ತುಸು ಹುಮ್ಮಸ್ಸಿನಿಂದ ನಡೆಯುವಾಗ ಇಲ್ಲೆ ಇರಬಹುದು ಎಂಬ ಊಹೆಯೊಂದಿಗೆ ಎದುರಿಗೆ ಬಂದವರನ್ನು ಕುತೂಹಲ ತಾಳಲಾರದೇ “ಇನ್ನೂ ದೂರ ಹೋಗಬೇಕಾ ಎಂದು ಕೇಳಿದರೆ ಇನ್ನೂ ಬಾಳ ದೂರ ಹೋಗಬೇಕು ಜಲ್ದಿ ಜಲ್ದಿ ಹೋಗ್ರಿ ಗದ್ಲ ಬಾಳ ಐತಿ” ಎಂದು ಹೇಳಿದಾಗ,”ಎಲ್ಲೋ ಜೋಗಪ್ಪಾ ನಿನ್ನ ಅರಮನೆ” ಎಂದರೆ “ಬೆಟ್ಟಾ ಹತ್ತಿ ಹೋಗಬೇಕು ಬೆಟ್ಟಾ ಇಳಿದು ಹೋಗಬೇಕು ಅಲ್ಲದೇ ಕಣೆ ನನ್ನರಮನೆ” ಎಂದು ಶಿವಪ್ಪ ಹೇಳಿದಂತಾಯಿತು.
ಸುಮಾರು ಮೂರು ನಾಲ್ಕು ಕಿ ಮೀ ಸಾಗಿ ಬಂದ ನಂತರ ಬೆಟ್ಟದ ಇಕ್ಕೆಲಗಳಲ್ಲಿ ಬಳುಕುತ್ತಾ ಹರಿಯುವ ಕಾಳಿ ನದಿಯಲ್ಲಿ ಕಾಲಿಡುತ್ತಿದ್ದಂತೆ ಮೈ ಮನದಲ್ಲಿ ಉಲ್ಲಾಸ ಮನೆ ಮಾಡಿತ್ತು ಕೈ ಕಾಲುಗಳನ್ನು ತೊಳೆದುಕೊಂಡು ಆಯಾಸ ಪರಿಹಾರವಾದ ಮೇಲೆ ಇನ್ನೂ ಸವೆಸುವ ದಾರಿ ಬಾಕಿ ಉಳಿದಿತ್ತು.
ಸುಮಾರು ನಲವತ್ತು ಫೀಟುಗಳಷ್ಟು ಎತ್ತರವಾದ ಬೆಟ್ಟದ ತುದಿಯನ್ನ ಏರಬೇಕು ಇಲ್ಲಿಂದ ಪ್ರಾರಂಭವಾಗುವ ಸುಮಾರು ಸಾವಿರ ಮೆಟ್ಟಲು ಏರಿದಾಗ ಮಾತ್ರ ಗುಹಾಲಯ ಸಿಗುತ್ತದೆ ಎನ್ನುವ ಮಾಹಿತಿಯನ್ನು ಕೇಳಿದಾಗ ಒಂದು ಕ್ಷಣ ಇದು ನನ್ನಿಂದ ಸಾದ್ಯನಾ ಎನಿಸಿತು.
ಸಾವಿರ ಮೆಟ್ಟಿಲುಗಳ ಆ ಬೆಟ್ಟ ಏರುವುದು ಅಷ್ಟು ಸುಲಭದ ಮಾತಾಗಿರಲಿಲ್ಲ, ಏಕೆಂದರೆ ಅಲ್ಲಿ ಯಾವುದೇ ಮೆಟ್ಟಲುಗಳಿರಲಿಲ್ಲ ಮುಂದೆ ಸಾಗಿದವರ ಹೆಜ್ಜೆ ಗುರುತಿನ ಮೇಲೆ ಹೆಜ್ಜೆ ಇಟ್ಟು ಸಣ್ಣ ಪುಟ್ಟ ಪೊದೆಗಳನ್ನ ಆಸರೆಗಾಗಿ ಹಿಡಿದುಕೊಳ್ಳುತ್ತಾ ಬೆಟ್ಟವನ್ನು ಏರುವುದು ಅತ್ಯಂತ ಸಾಹಸದ ಕೆಲಸವಾಗಿತ್ತು. ಸ್ವಲ್ಪವೇ ಆಯ ತಪ್ಪಿದರೆ ಕೆಳಗಿರುವ ಪ್ರಪಾತಕ್ಕೆ ಬೀಳುವ ಎಲ್ಲ ಅಪಾಯದ ಸಾದ್ಯತೆಗಳನ್ನು ಮೀರಿ ಮೆಟ್ಟಿಲೇರುವುದು ಅತ್ಯಂತ ಪ್ರಯಾಸವಾಯಿತು.


ಮೇಲೆ ಏರಿದಂತೆಲ್ಲಾ ಏಕೋ ಇನ್ನು ಏರಲಿಕ್ಕೆ ಸಾದ್ಯವೇ ಇಲ್ಲ ಮರಳಿ ಹೋಗಬೇಕು ಎಂದು ನಿರ್ಧರಿಸಿ ನಿಂತು ಬಿಟ್ಟೆ “ಅರ್ಧ ದಾರಿಗೆ ಬಂದು ಶಿವನ ದರ್ಶನ ಮಾಡದೇ ಹಂಗ ಹೋಗ್ತೇರಿ ಇನ್ನೊಂದು ನಾಲ್ಕ ಮೆಟ್ಟಿಲು ಹತ್ತರಿ ಹತ್ತರಿ” ಎಂದು ಬೆಟ್ಟ ಹತ್ತುವವರು ಹುರಿದುಂಬಿಸಿದರು ಏನಾದರೂ ಆಗಲಿ ಬೆಟ್ಟ ಏರೇ ಬಿಡುವ ಎಂದು ದೈರ್ಯಮಾಡಿ ಹರಹರ ಮಹಾದೇವ ಎಂದು ಬೆಟ್ಟ ಏರುವವರ ಜೊತೆ ಹೆಜ್ಜೆ ಹಾಕಿದಾಗ ಕೊನೆಗೂ ಕವಳೆ ಗುಹೆ ಸಿಕ್ಕಿತು. ಗುಹೆ ಮುಂದೆ ನಿಂತ ಸಾಲು ಸಾಲು ಭಕ್ತರು ಗುಹೆ ನಡುವೆ ನಿಂತು ಗುಹೆ ಪ್ರವೇಶಿಸುತ್ತಿದ್ದಂತೆ ಬಗ್ಗಿ ಸ್ವಲ್ಪ ದೂರ ಕತ್ತಲಲ್ಲಿ ಸಾಗುತ್ತಾ ಮುಂದಿನವರನ್ನು ಹಿಂಬಾಲಿಸುತ್ತಾ, ನಂತರ ಗುಹೆಯಲ್ಲಿ ಸ್ವಲ್ಪ ದೂರದವರೆಗೆ ಕುಳಿತೆ ಸಾಗುವಾಗ ಉಸಿರಾಡುವುದೇ ಕಷ್ಟವಾಗುತ್ತಿತ್ತು. ಇನ್ನೂ ಸ್ವಲ್ಪ ಮುಂದೆ ಸಾಗಿದಂತೆ ತೆವಳುತ್ತಾ ಮುಂದೆ ಹೋದಂತೆ ನೈಸರ್ಗಿಕವಾಗಿ ನಿರ್ಮಾಣವಾದ ಸುಮಾರು ನಾಲ್ಕೈದು ಫೀಟೂ ಎತ್ತರದ ಬೃಹದಾಕಾರ ಶಿವಲಿಂಗನ ದರ್ಶನವಾಯಿತು.

ಶಿವನ ದರ್ಶನಕ್ಕಾಗಿ ಇಷ್ಟೋತ್ತಿನವರೆಗೂ ಪಟ್ಟ ಪ್ರಯಾಸವೆಲ್ಲವೂ ಕ್ಷಣದೊಳಗೆ ಮರೆಯಾಗಿ ಮನವು ಶಿವನಾಮ ಸರಣೆಯಲ್ಲಿ ತಲ್ಲೀನವಾಯಿತು.
ನಿಜವಾಗಿಯೂ ಬೆಟ್ಟದ ತುದಿಯ ಈ ಗುಹೆಯಲ್ಲಿ ಪ್ರಕೃತಿಯ ಅದ್ಬುತ ಸೃಷ್ಟಿಯ ಶಿವಲಿಂಗವನ್ನು ಕಂಡು ಜನ್ಮ ಪಾವನವಾಯಿತು ಎನ್ನುವ ಭಾವ ಮನದಲ್ಲಿ ಮೂಡಿತು. ಶಿವದರುಶನ ಎಮಗಾಯಿತು ಕೇಳಾ…ಶಿವರಾತ್ರಿಯ ಜಾಗರಣೆ ಎನ್ನುವ ವಿಶಿಷ್ಟ ಅನುಭವದ ಜೊತೆಗೆ ಒಂದಿಷ್ಟು ಪೋಟೋ ಕ್ಲಿಕ್ಕಿಸಿಕೊಂಡು ಗುಹೆಯಿಂದ ಹೊರಬಂದಾಗ ಎಂತದ್ದೋ ಸಂತೋಷ ಮನಸನ್ನು ಆವರಿಸಿತ್ತು.

ಡಾ.ನಿರ್ಮಲಾ ಬಟ್ಟಲ
ಬೆಳಗಾವಿ.

Don`t copy text!