ಮಹಾಲಿಂಗದಲ್ಲಿ ಅನುರಾಗಿಯಾದ ಶರಣ ; ಗಜೇಶ ಮಸಣಯ್ಯ
೧೨ನೇ ಶತಮಾನದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಆಗಿಹೋದ ಶರಣರಲ್ಲಿ ಗಜೇಶ ಮಸಣಯ್ಯ ಪ್ರಮುಖನು. ವಿಜಯಪುರ ಜಿಲ್ಲೆಯ ಕರಜಗಿ ಎಂಬ ಗ್ರಾಮದವನಾದ ಗಜೇಶ ಮಸಣಯ್ಯ ಮಹಾಲಿಂಗ ಗಜೇಶ್ವರ ಎಂಬ ಅಂಕಿತದಲ್ಲಿ ರಚಿಸಿರುವ ೭೦ ವಚನಗಳು ಈಗ ಲಭ್ಯವಾಗಿವೆ.
“ಗಜೇಶ ಮಸಣಯ್ಯನ ವಚನಗಳು ಲಿಂಗಾಂಗ ಸಾಮರಸ್ಯ ಭೋದಕವಾಗಿರುತ್ತವೆ. ಅವನು ತನ್ನ ಸಾಮರಸ್ಯ ಸ್ಥಿತಿಯನ್ನು ಸತಿಪತಿಭಾವದ ವಚನಗಳ ಮೂಲಕ ಹೇಳಿರುತ್ತಾನೆ. ಇವು ಶಿವಶರಣರ ವಚನಗಳಲ್ಲಿ ಬಹು ಸುಂದರವಾದವುಗಳು. ಇವುಗಳು ಮಹಾಶಿವಶರಣೆ ಅಕ್ಕಮಹಾದೇವಿಯ ವಚನಗಳಿಗೆ ಸರಿಸಮವಾಗಿವೆ. ಇವು ಆಕೆಯ ವಚನಗಳಷ್ಟೇ ಸುಂದರವೂ, ಲಾಲಿತ್ಯವೂ , ಮಧುರವೂ ಆಗಿರುತ್ತವೆ. ಇವುಗಳಲ್ಲಿ ಕಾವ್ಯ ಚಮತ್ಕ್ರಾಂ ತಿಯೂ ಕಂಡುಬರುತ್ತದೆ. ಮತ್ತು ಸಾಮರಸ್ಯ ನಿಜಸ್ಥಿತಿಯನ್ನು ಅರುಹುತ್ತ ಬಹು ಅರ್ಥಬೋಧಕವಾಗಿವೆ. ಪ್ರತಿಯೊಂದು ವಚನದಲ್ಲಿ ಕನ್ನಡ ನುಡಿಯ ಸೊಬಗು ಹೊರಸುಸುತ್ತವೆ” ಎಂದು ಫ.ಗು. ಹಳಕಟ್ಟಿಯವರು ಅಭಿಪ್ರಾಯಪಡುತ್ತಾರೆ.
ಸಮರಸ ಸೈಕ್ಯದೊಳಗಣ ಸ್ನೇಹ, ಮತ್ತ್ಯಕೂರ್ಮವಿಹಂಗನಂತೆ
ಸ್ನೇಹದ ನೋಟದಲ್ಲಿ ತೃಪ್ತಿ, ಸ್ನೇಹದ ನೆನಹಿನಲ್ಲಿ ತೃಪ್ತಿ, ಸ್ನೇಹದ ಸ್ಪರ್ಶದಲ್ಲಿ ತೃಪ್ತಿ.
ಇಂತಿ ಪರಿಯಲ್ಲಿ ಎಮ್ಮ ಮಹಾಲಿಂಗ ಗಜೇಶ್ವರನಲ್ಲಿ ಐಕ್ಯ ವಾರಿಕಲ್ಲ ಪುತ್ಥಳಿ ಕರಗಿ ಅಪ್ಪುವ ಕೂಡಿದಂತೆ.
ಒಂದೇ ರೀತಿಯ ಮನೋಭಾವನೆಯನ್ನು ಹೊಂದಿರುವ ಆ ಭಾವದಿಂದಾಗಿ ಹೊಂದಿಕೊಂಡು ಹೋಗುವ ಜನರ ಗುಂಪಿನಲ್ಲಿಯ ಸ್ನೇಹವು, ನೀರಿನಲ್ಲಿ ಈಜುವ ಮೀನು ಮತ್ತು ಆಮೆಗಳು ಹೇಗೆ ಹೊಂದಿಕೊಂಡು ಈಜುವುದೊ ಅದು ಕಣ್ಣಿಗೆ ಸುಂದರವಾಗಿ ಕಾಣುತ್ತದೆ. ಹಾಗೆಯೇ ಸ್ನೇಹದ ನೋಟದಲ್ಲಿ ತೃಪ್ತಿಯ ಭಾವವಿರುತ್ತದೆ. ಸ್ನೇಹದ ನೆನಪಿನಲ್ಲಿ ತೃಪ್ತಿಯಿರುತ್ತದೆ. ಸ್ನೇಹದ ಸ್ಪರ್ಶವು ಆತ್ಮೀಯವಾಗಿಯು, ಮಾನಸಿಕ ಭದ್ರತೆಯ ಪ್ರತೀಕವಾಗಿಯೂ ಇರುತ್ತದೆ. ಈ ರೀತಿಯಾದ ಸ್ನೇಹವನ್ನು ಭಕ್ತನಾದವನು ಗಜೇಶ್ವರ ಲಿಂಗದಲ್ಲಿ ಹೊಂದಿದ್ದೆ ಆದರೆ ಅವನಿಗೆ ಬದುಕು ಸುಂದರವಾಗಿಯೂ, ತೃಪ್ತಿದಾಯಕವು ಆಗಿ ಕಾಣುವುದರ ಜೊತೆಗೆ ಮಾನಸಿಕ ಸ್ಥೈರ್ಯ ವನ್ನು ಹೆಚ್ಚಿಸುವ ಬದ್ದತೆಯಾಗಿಯೂ ಇರುತ್ತದೆ. ಹೇಗೆ ಎಂದರೆ ಹಿಮದ ಕಲ್ಲಿನ ಮೂರ್ತಿ ಕರಗಿ ಭೂಮಿಯನ್ನು ಸೇರಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವಂತೆ ಆ ಸ್ನೇಹವು ಕೂಡ ಭಕ್ತಿ ಮತ್ತು ದೇವರಲ್ಲಿ ಒಂದಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವಂತೆ ಎಂದು ಹೇಳುತ್ತಾನೆ.
ತಮ್ಮ ತಮ್ಮ ಗಂಡರು ಚೆಲುವರೆಂದು ಕೊಂಡಾಡುವ ಹೆಣ್ಣುಗಳು ಪುಣ್ಯಜೀವಿಗಳವ್ವಾ
ನಾನು ಎನ್ನ ನಲ್ಲನೆಂತಹನೆಂದರಿಯನವ್ವಾ
ಮಹಾಲಿಂಗ ಗಜೇಶ್ವರ ನಿರಿಯ ಸೆರಗ ಸಡಿಲಿಸಲೊಡನೆ
ಆನೇನೆಂದರಿಯನವ್ವಾ.
ಈ ಒಂದು ವಚನದಲ್ಲಿ ಗಜೇಶ ಮಸಣಯ್ಯನು ರೂಪ ಆಕಾರವಿರುವ ಗಂಡನನ್ನು ಮದುವೆಯಾದ ಸ್ತ್ರೀಯರು ತಮ್ಮ ಗಂಡರು ಚೆಲುವರೆಂದು ಅವರ ಗುಣಗಾನ ಮಾಡುತ್ತಾರೆ. ಆ ಹೆಣ್ಣು ಮಕ್ಕಳು ಪುಣ್ಯವಂತರು. ಗಂಡನ ರೂಪ, ಆಕರ ಗುರುತನ್ನು ಕಣ್ಣ ತುಂಬಾ ತುಂಬಿಕೊಳ್ಳುತ್ತಾರೆ, ವರ್ಣಿಸುತ್ತಾರೆ. ಆದರೆ ಶರಣನು ಸತಿಯಾಗಿ ಲಿಂಗವು ಪತಿಯಾದಾಗ ಶರಣನಿಗೆ ಲಿಂಗದಲ್ಲಿ ಅಡಕವಾದ ತನ್ನ ಗಂಡನ ರೂಪ ಆಕಾರಗಳು ಯಾವವು ತನಗೆ ತಿಳಿದಿಲ್ಲ. ನಿರಾಳ ಮತ್ತು ನಿರ‍್ಗುಣನು ಆ ಮಹಾಲಿಂಗ ಗಜೇಶ್ವರನೇ ತನ್ನ ಸೆರಗನ್ನು ಎಳೆದರೆ ನಾನು ಏನೆಂದು ಭಾವಿಸಬೇಕು ಎಂದು ತಿಳಿಯದು ಎನ್ನುವ ಅಳಲನ್ನು ಶರಣ ಸತಿಯಾಗಿ ತನ್ನ ಪತಿಯ ಇರುವನ್ನು ತಿಳಿಯಲು ಪ್ರಯತ್ನಿಸುತ್ತಾನೆ.
ಕಂಗಳ ಕಾಳಗ, ನೋಟದ ಮಸಕ, ಮಿಂಚಿನ ಗೊಂಚಲು ತಾಗಿದಂತಾದೆನವ್ವಾ..!
ತಾರಕಿ ತಾರಕಿ ತಳಿತಂತೆ, ಅರಗಿನಬಳ್ಳಿ ಹಬ್ಬಿದಂತವ್ವಾ…!
ಗಾಳಿ ಬೆಳಕು ಪಂಚಮಹಾಭೂತಗಳವದು ರೂಹನೊಂದು ಮಾಡಿ ಕಾದಿ ಗೆಲಿದು ಸೋತು ಹೊರವೊಂಟು ಹೋದನವ್ವಾ
ಮಹಾಲಿಂಗಗಜೇಶ್ವರ ಕಾಳಗದ ಮಾಸಾಳು.
ತನ್ನ ಪತಿಯಾದ ಮಹಾಲಂಗ ಗಜೇಶ್ವರನು ತನ್ನೊಂದಿಗೆ ಕಣ್ಣಿನಲ್ಲಿಯೇ ಯುದ್ಧವನ್ನು ಮಾಡುತ್ತಾನೆ. ಹಾಗೆ ಮಾಡಿದಾಗ ದೃಷ್ಠಿಗೆ ದೃಷ್ಠಿಯನ್ನು ಬೆರೆಸಿದಾಗ, ನಯನಗಳು ಒಂದಾದಾಗ ಗಂಡು ಹೆಣ್ಣಿನಲ್ಲಿ ಉಂಟಾಗುವ ತಳಮಳಿಕೆಯುಂಟಾಯಿತು.ಅದನ್ನು ಸುಧರಿಸಿಕೊಳ್ಳುವದರೊಳಗೆ ಹಲವಾರು ಮಿಂಚುಗಳು ಗೊಂಚಲ ರೂಪದಲ್ಲಿ ತಗುಲಿದಂತಾಯಿತು. ಆ ಹೊಡೆತಕ್ಕೆ ಬಳ್ಳಿಯಲ್ಲಿ ಹೊಸ ಚಿಗುರು ಮಡಿದಂತೆ ನವಿರಾದ,ಸುಕೊಮಲವಾದ ಭಾವಮನದಲ್ಲಿ ಮೂಡುತು. ರೋಮಾಂಚನ ಗೊಂಡ ದೇಹವು ಬೆಂಕಿಗೆ ತಾಗಿದ ಅರಗಿನಂತೆ ಕರಗಿ ದೃವರೂಪಪಡೆದು ಬಳ್ಳಿಯಾಕಾರದಿ ಸೂತ್ತೆಲ್ಲಾ ಹರಡಿ ತತಕ್ಷಣವೆ ಘನಿಭವಿಸುವಂತೆ ಆದೆನು. ಐದು ರೂಹನೊಂದು ಮಾಡಿ, ಅಂದರೆ ಮಾನವನ ದೇಹವು ಪಂಚಮಹಾಭೂತ, ಪಂಚಪ್ರಾಣವಾಯು, ಪಂಚಜ್ಞಾನೇಂದ್ರಿಯಗಳು ಮತ್ತು ಪಂಚಕರ್ಮೇಂದ್ರಿಯಗಳಿಂದಾದ ದೇಹದ ಎಲ್ಲ ಅಂಶಗಳನ್ನು ಒಂದು ಮಾಡಿ, ಇವುಗಳ ಜೊತೆಗೆ ಕಾದಾಡಿ ಗೆಲ್ಲುತ್ತಾನೆ ಮತ್ತು ಸೊಲುತ್ತಾನೆ. ಅಂದರೆ ಇವಗಳನ್ನು ಸೋಲುವ ಗೆಲ್ಲುವ ಪರಿಯನ್ನು ಅರಿತ ಚತುರ ಸೈನಿಕ ಇದಾವುದು ಬೇಡವೆಂದು ವೈರಾಗ್ಯತಾಳಿ ಹೊರಗೆ ಹೊರಟು ಹೊಗುತ್ತಾನೆ. ಎಂದು ನೊಂದು ವಿರಹದಿ ಬಳಲುವ ಸತಿಯಂತೆ ಹೇಳುತ್ತಾನೆ.
ಆತನ ನೋಡಿದಂದು ದೆಸೆಗಳ ಮರೆದೆನೆನಿನ್ನಂತವ್ವಾ,
ಅವ್ವಾ ಅವ್ವಾ ಆತನ ನುಡಿಸಿದಡೆ ಮೈಯಲ್ಲಾ ಬೆವರ್ದುದಿನ್ನೆಂತವ್ವಾ
ಅವ್ವಾ ಅವ್ವಾ ಕೈಹಿಡಿದೆಡೆ ಎನ್ನ ಸಿರಿಗಳು ಸಡಲಿದವಿನ್ನಂತವ್ವಾ
ಇಂದೆಮ್ಮ ಮಹಾಲಿಂಗ ಗಜೇಶ್ವರನನಪ್ಪಿದೆನೆಂದಡೆ, ನನ್ನ ನಾನಪ್ಪ ಮರೆದೆನಿನ್ನೊಂತವ್ವಾ.
ಆತನು ಎಂದರೆ ಮಹಾಲಿಂಗ, ಪತಿಯಾದ ಲಿಂಗ. ಅವನನ್ನು ನೋಡಿದಾಗ ದೆಸೆಗಳೆಲ್ಲವು ಅಂದರೆ ನನ್ನ ಸುತ್ತಲು ಆವರಿಸಿರುವ ಗಾಳಿ,ಬೆಳಕು,ನೀರು ಇರುವ ಪ್ರಪಂಚವನ್ನೆ ಮರೆತುಹೋಗಿ ನಾನು ಅವನಲ್ಲಿ ಪರವಶಳಾಗಿ ಬಿಡುತ್ತೇನೆ. ಮುಂದೇನು? ಆತನ ಜೊತೆಗೆ ಮಾತಾಡಿದರೆ ತನ್ನಲ್ಲಿ ಎಂಥಹ ಉದ್ವೇಗ ಉಂಟಾಗುತ್ತದೆಂದರೆ, ಸಂಕೋಚ, ಭಯಗಳಿಂದ ಮೈಯಲ್ಲ ಬೆವರಿ ಮಾತು ಹೊರಡದಂತಾಗಿ ಬಿಡುತ್ತದೆ. ಮುಂದೆ ಏನು ಮಾತನಾಡಬೇಕು ಅನ್ನುವುದು ಮರೆತುಹೋಗುವ ಸ್ಥಿತಿಗೆ ನಾನು ತಲುಪಿಬಿಡುತ್ತೆನೆ. ಆತನು ನನ್ನ ಕೈಹಿಡಿದರೆ ಅವನ ಹಿಡಿತಕ್ಕೆ ದೇಹದ ಚರ್ಮದ ಮೇಲೆ ನಿರಿಗೆಗಳು ಮೂಡುತ್ತವೆ. ಅವನ ಬಿಗಿಯಾದ ಹಿಡಿತಕ್ಕೆ ಸಿಲುಕಿ ಅವನ್ನು ಅಪ್ಪಿಕೊಂಡರೆ ನಾನು ನನ್ನ ಅಸ್ತಿತ್ವವನ್ನು ಮರೆತುಬಿಡುತ್ತೆನೆ.ಅಷ್ಟೋಂದು ಘಾಡವಾದ ಪ್ರೇಮ ದೇವ ಮತ್ತು ಭಕ್ತನ ನಡುವೆ ಇರಬೇಕು ಎನ್ನುವುದನ್ನು ಈ ವಚನದಲ್ಲಿ ಹೇಳಿದ್ದಾನೆ. ಹೀಗೆ ಬಾಹ್ಯದಲ್ಲಿ ಸೃಷ್ಠಿಯ ಅದಮ್ಯ ಚೇತನನಾಗಿ ಗಾಳಿ, ಬೆಳಕು, ನೀರಾಗಿ ಬಂದು ನನ್ನ ಬಹಿರಂಗವನ್ನು ಜಾಗೃತಗೊಳಿಸಿದರೆ, ಅಂತರಂಗ ಪ್ರವೇಶಿಸಿದ ಪರಮಾತ್ಮ ನನ್ನ ಅರಿವಾಗಿ ಮಾತನಾಡಿದೊಡೆ ಉದ್ವೇಗಕ್ಕೆ ಒಳಗಾಗಿ ಅವನಲ್ಲಿ ಒಂದಾಗುವ ಪರಿಯನ್ನು ಹೇಳುತ್ತಾನೆ. ಮನಸ್ಸು ಸಂತೋಷವನ್ನು ಪರಮಾನಂದವನ್ನು ಅನುಭವಿಸುತ್ತದೆ. ಮನಸ್ಸು ಪರಮಾನಂದದಲ್ಲಿ ತೇಲುವಾಗ ಅವನು ಕೈಹಿಡಿದು ತನ್ನಡೆಗೆ ಸೆಳೆದಾಗ ಅವನು ಗಜೇಶ್ವರಲಿಂಗವೆಂದು ಅಪ್ಪಿಕೊಂಡೆ. ಆಗ ನಾನು ಅಂದರೆ ಆತ್ಮ ಮತ್ತು ಪರಮಾತ್ಮ ಒಂದೇ ಆಗಿ ನಾನು ಅನ್ನುವ ಅಸ್ತಿತ್ವವನ್ನು ಕಳೆದುಕೊಂಡೆ.
ಮಾಘ ಮಾಸದ ನವಿಲಿನಂತಾದೆನವ್ವಾ
ಇರುಳು ತೊಳಲುವ ಚಕ್ರವಕ್ಕಿಯಂತೆ ಹಲುಬುತೀರ್ದ
ಮಾಗಿಯ ಕೋಗಿಲೆಯಂತೆ ಮಾಗಿಯಾಗಿರ್ದೆ ನೋಡವ್ವ
ಮಹಾಲಿಂಗ ಗಜೇಶ್ವರನ ಅನುಭಾವ ಸಂಬಂಧಿಗಳ ಬರವೆನ್ನ ಪ್ರಾಣದ ಬರವು ನೋಡವ್ವಾ.
ದೇವನನ್ನು ಕಾಣದ ಭಕ್ತನ ಮನಸ್ಥಿತಿ ಹೇಗೆ ಇರುತ್ತದೆ ಎನ್ನುವುದನ್ನು ಸುಂದರವಾದ ಉಪಮಾನಗಳನ್ನು ರೂಪಕಗಳನ್ನು ಬಳಸಿ ಹೇಳಿರುವನು.
ಮಾಘ ಮಾಸವೆಂದರೆ ಶುಭ್ರವಾದ ಆಕಾಶವಿರುತ್ತದೆ. ಆಗ ನವಿಲಿಗೆ ಕುಣಿಯುವ ಉತ್ಸಾಹವಿಲ್ಲದೆ ಮಂಕಾಗಿರುತ್ತದೆ. ರಾತ್ರಿಯ ಹೊತ್ತು ಚಕ್ರವಾಕ ಜೋರಾದ ಸ್ವರದಲ್ಲಿ ಕೂಗುತ್ತದೆ. ಮಾಗಿಯ ಚಳಿಯ ಕಾಲದಲ್ಲಿ ಕೋಗಿಲೆಯು ಮೂಕಾಗಿ ಕುಳಿತಿರುವಂತೆ ನನ್ನ ಮನಸ್ಥಿತಿಉ ಮೂಕಾಗಿ, ಮಂಕಾಗಿ, ವಿರಹದಲ್ಲಿ ಬಳಲುತ್ತಿದೆ. ಈ ಸ್ತಿತಿಯಿಂದ ಹೊರಬರಲು ಮನಸ್ಸಿಗೆ ಆನಂದವನ್ನುಂಟು ಮಾಡಲು ಗಜೇಶ್ವರನ ಜೊತೆಗೆ ಅನುಭಾವದ ಸಂಬಂಧ ಹೊಂದಿದ ಸಂಬಂಧಿಕರು ಬರಬೇಕು. ಅಂದರೆ ಶರಣರು ಬರಬೇಕು. ಅವರು ಅವನ ಕುರಿತಾದ ವಾರ್ತೆಗಳನ್ನು ಹೇಳಬೇಕು, ಅವನ ಗುಣಗಾನ ಮಾಡಬೇಕು,ಅವನ ಚೇಲುವನ್ನು ವರ್ಣಿಸಬೇಕು. ಬಂದರೆ ಮಾತ್ರ ಪ್ರಾಣ ಬಂದಂತಾಗುತ್ತದೆ. ಅಂದರೆ ದೇಹದೊಳಗೆ ಚೈತನ್ಯ ಪ್ರವಹಿಸುತ್ತದೆ. ಮನಸ್ಸು ಉಲ್ಲಾಸಿತವಾಗುತ್ತದೆ. ಅಂತಹ ಚೈತನ್ಯ ಶರಣರ ಅನುಭಾವದಿಂದ ದೊರೆಯುತ್ತದೆ ಎಂದು ಮಸಣಯ್ಯ ಹೇಳಿರುವನು. ಅನುಭಾವದ ಸಂಬಂದ ಶರಣನಿಗೆ ಚೇತನವಾಗಿರುವುದು.
ದೇವರ ನೆನೆದು ಮುಕ್ತರಾದೆವೆಂಬ
ಯುಕ್ತಿ ಶೂನ್ಯರ ಮಾತು ಕೇಳಲಾಗದು
ಅದೇನು ಕಾರಣವೆಂದಡೆ, ದೇವರ ನೆನೆವರಿಗೆ ದೇವರುಂಟೆ?
ದೂರ ದೂರದಲ್ಲಿದ್ದವರ ನೆನೆವರಲ್ಲದೆ
ಸಮೀಪದಲ್ಲಿದ್ದವರನಾರು ನೆನೆವರಿಲ್ಲ.
ಇದನರಿದು ನಿನ್ನೊಳಡಗಿ ನಾ ನಿನ್ನ ನೆನೆಯಲಿಲ್ಲ.
ನನ್ನೋಳಡಗಿ ನೀನನಗೆ ಮುಕ್ತಿಯನೀಯಲಿಲ್ಲ
ಇದು ಕಾರಣ ನಾ ನೀನೆನ್ನಲಿಲ್ಲ ಮಹಾಲಿಂಗ ಗಜೇಶ್ವರ.
ದೇವರನ್ನು ನೆನೆದರೆ ನಾಮಸ್ಮರಣೆ ಮಾಡಿದರೆ ಎಲ್ಲ ಪಾಪಗಳಿಂದ ಮುಕ್ತವಾಗುತ್ತೇವೆ ಎಂದು ಹೇಳುವ ವಿವೇಚನೆಯಿಲ್ಲದವರ ಮಾತುಗಳನ್ನು ಕೇಳಲಾಗದು ಎನ್ನುತ ದೇವರನ್ನು ನೆನಪಿಸಿಕೊಳ್ಳುವರಿಗೆ ದೇವರು ದೊರೆಯುತ್ತಾನೆಯೇ? ಎಂದು ಪ್ರಶ್ನಿಸುತ್ತಾನೆ. ಯಾರನ್ನು ನೆನಪಿಸಿಕೊಳ್ಳುಬೇಕು ಎಂದರೆ ಯಾರು ನಮ್ಮ ಮುಂದೆ ಇರದೆ, ಕಣ್ಣಿಗೆ ಕಾಣದಷ್ಟು ದೂರವಾಗಿರುತ್ತಾರೆ. ದೂರದ ಸ್ಥಳದಲ್ಲಿ ನೆಲೆಸಿರುತ್ತಾರೆ. ಅವರನ್ನು ನೋಡಲು ಸಮಯವನ್ನು ವ್ಯಯಮಾಡಬೇಕು. ಅಂಥವರನ್ನು ನಮ್ಮ ಮನಪಟಲದ ಮೇಲೆ ಸ್ಮರಿಸಿಕೊಳ್ಳುತ್ತೇವೆ. ಯಾರು ಸಮೀಪದಲ್ಲಿದ್ದು ನಮಗೆ ಸುಲಭವಾಗಿ ಸಿಗುತ್ತಾರೆ ಅಂಥವರನ್ನು ಯಾರಾದರು ನೆನೆಯುತ್ತಾರೆಯೋ ಎಂದು ಪ್ರಶ್ನಿಸುತ್ತಾ ಇದನ್ನು ತಿಳಿದುಕೊಂಡ ನಾನು ನಿನ್ನನ್ನು ನೆನೆಯಲಿಲ್ಲ. ಯಾಕೆಂದರೆ ನೀನು ನಿತ್ಯ, ನಿರಂತರ, ನಿರಾಕಾರ ರೂಪವಾಗಿ ಅಂದರೆ ಪರಮಾತ್ಮನಾಗಿ ನನ್ನೋಳಗೆ ಅಡಗಿರುವೆ. ಅದಕ್ಕೆ ನಿನ್ನನ್ನು ನೆನೆಯಲಿಲ್ಲ. ಅಂದರೆ ಪರಮಾತ್ಮನು ಪ್ರತಿಯೊಂದು ಜೀವಿಯಲ್ಲಿಯ ಚೈತನ್ಯ ಸ್ವರೂಪವಾಗಿ ಅಡಗಿದ್ದಾನೆ. ಪರಮಾತ್ಮನಲ್ಲಿ ಜೀವಾತ್ಮ ಅಡಕವಾಗಿದೆ. ಜೀವಾತ್ಮದಲ್ಲಿ ಪರಮಾತ್ಮ ಅಡಕವಾಗಿದ್ದಾನೆ. ದೇವರು ಮತ್ತು ಭಕ್ತ ಒಂದೇ ಆಗಿರುವಾಗ ಮುಕ್ತಿಯು ಬೇರಲ್ಲ ಎನ್ನುವ ಭಾವವನ್ನು ತುಂಬಾ ಮಾರ್ಮಿಕವಾಗಿ ಹೇಳುತ್ತಾನೆ.
ಎನ್ನ ಕರಸ್ಥಲವೇ ಬಸವಣ್ಣನಯ್ಯ
ಎನ್ನ ಮನಸ್ಥಲವೇ ಚೆನ್ನಬಸವಣ್ಣನಯ್ಯ
ಎನ್ನ ಭಾವ ಸ್ಥಲವೇ ಪ್ರಭುದೇವರಯ್ಯ
ಇತೆಂನ್ನ ಕರಮನ ಭಾವಂಗಳಲ್ಲಿ
ಇಷ್ಠ, ಪ್ರಾಣಲಿಂಗ, ಭಾವಂಗಳು ತಲ್ಲೀನವಾಗಿ
ಮಹಾಲಿಂಗ ಗಜೇಶ್ವರ ನಿಮ್ಮ ಶರಣರ ಘನವನು
ಎನ್ನ ಸರ್ವಾಂಗದಲ್ಲಿ ಕಂಡು ಪರಮಸುಖಿಯಾಗಿರ್ದೇನು.
ಮನುಷ್ಯನಲ್ಲಿ ಸ್ಥೂಲ, ಸೂಕ್ಷ್ಮ ಮತ್ತು ಕಾರಣವೆಂಬ ಶರೀರಗಳಿದ್ದು ಅವುಗಳಲ್ಲಿ ಅನುಕ್ರಮವಾಗಿ ಸ್ಥೂಲ ಶರೀರವು ಅಂದರೆ ಇಷ್ಟಲಿಂಗ ಬಾಹ್ಯಕ್ರಿಯೆಗಳು ಗಜೇಶ ಮಸಣಯ್ಯನು ಕರಸ್ಥಲವೇ ಬಸವಣ್ಣನಯ್ಯ ಎಂದು ಸ್ಥೂಲ ಶರೀರದ ಬಾಹ್ಯಕ್ರಿಯೆಗಳಾದ ಕಾಯಕ, ದಾಸೋಹ ಮತ್ತು ಜಂಗಮ ಸೇವೆ (ಸಮಾಜಸೇವೆ) ಇವೆಲ್ಲವು ಬಸವಣ್ಣನವರಿಂದ ಪ್ರಭಾವಿತವಾದವುಗಳು ಹಾಗಾಗಿ ನನ್ನ ಶಾರೀರಿಕ ಚಟುವಟಿಕೆಗಳು ಬಸವಣ್ಣನವರ ಕಾರ್ಯಗಳನ್ನು ಅನುಕರಿಸುತ್ತವೆ ಎಂದು ಹೇಳುತ್ತಾನೆ.
ಎನ್ನ ಮನಸ್ಥಲವೇ ಚೆನ್ನಬಸವಣ್ಣನಯ್ಯ ಮನಸ್ಸಿನ ವ್ಯಾಪಾರಗಳಾದ ದೃಡ ಚಿತ್ತ, ಏಕಾಗ್ರತೆ ಅರಿಷಡ್ವರ್ಗಗಳ ಪ್ರಭಾವಕ್ಕೆ ಒಳಗಾಗದಂತೆ ಮನಸ್ಸನ್ನು ನಿರ್ಮಲವಾಗಿಟ್ಟುಕೊಳ್ಳುವ ಜ್ಞಾನವಂತನು, ಕುಶಾಗ್ರಮತಿಯು ಆದ ಚೆನ್ನಬಸವಣ್ಣನ ವೈಚಾರಿಕ ಚಿಂತನೆ ಇವೆಲ್ಲವೂ ವಿರಳ ಜ್ಞಾನಿ ಚೆನ್ನಬಸವಣ್ಣನಿಂದ ಪ್ರಭಾವಿತವಾದವುಗಳು. ಮನಸ್ಸಿನಲ್ಲಿ ಸದ್ವೀಚಾರಗಳು ಉಂಟಾದರೆ ಅದು ಆಕಾಶ, ವಾಯು, ತೇಜಸ್ಸು, ಜಲ ಮತ್ತು ಭೂಮಿ ಇವುಗಳನ್ನು ಪಂಚ ಮಹಾಭೂತಗಳೆಂದು ಕರೆದಿರುವರು.
ಎನ್ನ ಭಾವಸ್ಥಲವೇ ಪ್ರಭುದೇವರಯ್ಯ- ಕಾರಣ ಶರೀರದ ಎಲ್ಲ ಕ್ರಿಯೆಗಳಲ್ಲಿ ಪ್ರಬುದೇವರು ಇರುವರು. ಇಷ್ಟಲಿಂಗ ಮತ್ತು ಭಾವಲಿಂಗಗಳಿಂದ ಉಂಟಾದ ಚೈತನ್ಯದ ಪರಿಣಾಮವೇ ಭಾವಸ್ಥಲದ ಚೈತನ್ಯ. ಪ್ರಬುದೇವರು ಚೈತನ್ಯ ಪೂರ್ಣವಾದವರು. ಹೀಗೆ ಈ ಎಲ್ಲವುಗಳು ನನ್ನ ಮನ, ಕರ, ಭಾವಗಳಲ್ಲಿ ಅಂದರೆ ಸಂಪೂರ್ಣ ವ್ಯಕ್ತಿತ್ವದಲ್ಲಿ ಕ್ರಿಯೆ, ಜ್ಞಾನ ಮತ್ತು ಭಾವ ಸಾಮರ್ಥ್ಯಗಳಲ್ಲಿ ಇಷ್ಟಲಿಂಗ, ಭಾವಲಿಂಗ, ಮತ್ತು ಪ್ರಾಣಲಿಂಗಗಳು, ಒಂದಾಗಿ ಸೇರಿರುವ ಶರಣರ ಪ್ರಭಾವವನ್ನು ಪರಿಣಾಮವನ್ನು ಅವರ ಮಹತ್ತರ ವ್ಯಕ್ತಿತ್ವವನ್ನು ಎನ್ನ ಸರ್ವಾಂಗಗಳಲ್ಲಿ ಕಂಡು ಪರಮ ಸುಖಿ ಅಂದರೆ ಎಲ್ಲರಿಗಿಂತಲೂ ಸುಖಿಯಾಗಿರುವೆನು ಎಂದು ಗಜೇಶ ಮಸಣಯ್ಯ ಬಸವಣ್ಣ, ಚನ್ನಬಸವಣ್ಣ ಮತ್ತು ಪ್ರಭುದೇವರ ವ್ಯಕ್ತಿತ್ವವನ್ನು ತನ್ನಲ್ಲಿ ಸಮೀಕರಿಸಿಕೊಂಡಿದ್ದಾನೆ.
ಗಜೇಶ ಮಸಣಯ್ಯನು ತಾನೆ ಸತಿಯಾಗಿ ಲಿಂಗದಲ್ಲಿ ಅನುರಕ್ತನಾಗಿ ಪ್ರೇಮಮಯವಾದ ಕಂಡುಬರುತ್ತದೆ.
–ಡಾ.ನಿರ್ಮಲ ಬಟ್ಟಲ ಬೆಳಗಾವಿ