ಬಸವ ಧರ್ಮ ಹೇಗೆ ಹೊಸ ಧರ್ಮ?
ಶರಣರ ದೃಷ್ಟಿಯಲ್ಲಿ ಲಿಂಗ ಉಪಾದಿತವೇ ? ಬಸವಣ್ಣನವರು ಅವಿಷ್ಕಾರಗೊಳಿಸಿದ ಇಷ್ಟ ಲಿಂಗವು ಪೂಜೆಗೆ ಪಾತ್ರವೋ ಅಥವಾ ಯೋಗದ ಸಾಧನೆಯೋ ಎಂಬ ಸ್ಪಷ್ಟತೆ ನಮ್ಮಲ್ಲಿ ಇನ್ನೂ ಬಂದಿಲ್ಲ
ಎರೆದರೆ ನೆನೆಯದು ಮರೆದರೆ ಬಾಡದು
ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ
ಕೂಡಲ ಸಂಗಮ ದೇವಾ.
ಜಂಗಮಕ್ಕೆ ಎರೆದರೆ ಸ್ಥಾವರವು ನೆನೆದಿತ್ತು.
ಇಲ್ಲಿ ಬಸವಣ್ಣ ಲಿಂಗವನ್ನು ಪೂಜಿಸಿ ಅದರ ಹಿಂದಿನ ಕರ್ತವ್ಯ ಮತ್ತು ಸಮಾಜ ನಿರ್ವಹಣೆಯ ಆದ್ಯತೆಯ ಬಗ್ಗೆ ಬಸವಣ್ಣ ಎಚ್ಚರಿಸುತ್ತಾನೆ . ಸಮಾಜಕ್ಕೆ ನೀಡಿದರೆ ಲಿಂಗವು ಸಂತೋಷದಿಂದ ಉಬ್ಬಿ ಉಬ್ಬಿ ನೆನೆಯುವುದು ಅಂತಾ ಅರ್ಥ .ಬಸವಣ್ಣನವರಿಗೆ ಇಂತಹ ಭಕ್ತಿಯ ಮಾಡುವವರನ್ನು ಕಂಡರೆ ಎಲ್ಲಿಲ್ಲದ ಸಂತೋಷ .
ಕಲ್ಲು ದೈವ ಮರ ದೈವ ಮಡಕೆ ದೈವ ಎಂದು ಭೌತಿಕ ವಸ್ತುಗಳಲ್ಲಿ ದೈವತ್ವವನ್ನು ಕಾಣುವ ಮನುಷ್ಯರಿಗೆ ಅವುಗಲ್ಲಿನ ನಿರ್ಜ್ಜೆವ ಭಾವವನ್ನು ತಿಳಿಸಿಕೊಟ್ಟು ಮನುಷ್ಯನ ಜಂಗಮ ಚೈತನ್ಯದಲ್ಲಿಯೇ ಲಿಂಗವಿರುವ ಹೊಸ ಮಾರ್ಗವನ್ನು ಬಸವಣ್ಣ ಅರುಹು ಮಾಡಿ ಕೊಟ್ಟನು .
ಕಲ್ಲ ನಾಗರ ಕಂಡರೆ ಹಾಲ ನೆರೆವರಯ್ಯ
ದಿಟದ ನಾಗರ ಕಂಡರೆ ಕೊಲ್ಲು ಕೊಲ್ಲೆಂಬರಯ್ಯ
ಉಂಬುವ ಜಂಗಮನಿಗೆ ಎಡೆಯಿಲ್ಲ ನಡೆಯೇ೦ಬರು
ಉ೦ಬದಾ ಲಿಂಗಕ್ಕೆ ಬೋನವ ಹಿಡಿವರು
ಕೂಡಲ ಸಂಗನ ಶರಣರ ಉದಾಸೀನವ ಮಾಡಿದರೆ
ಕಲ್ಲು ತಾಗಿದ ಮಿಟ್ಟೆ ಎಂತಿರ್ಪರಯ್ಯ.
ಇಂತಹ ಸುಂದರ ವಿಡಂಬನೆಯನ್ನು ನಾವಿಲ್ಲಿ ಕಾಣಬಹುದು .
ನೀರ ಕಂಡಲ್ಲಿ ಮುಳ ಗುವರಯ್ಯ
ಮರವ ಕಂಡಲ್ಲಿ ಸುತ್ತುವರಯ್ಯ
ಬತ್ತುವ ಜಲವ ಒಣಗುವ ಮರವ ನೆಚ್ಚಿದವರ
ನಿಮ್ಮನೆತ್ತ ಬಲ್ಲ ನಮ್ಮ ಕೂಡಲ ಸಂಗಮದೇವ
ನೀರು ನದಿ ಭಾವಿ ಕೆರೆಯಲ್ಲಿ ಬತ್ತಿಹೊಗುವದು ,ಮರವು ನೀರಿಲ್ಲದೆ ಒಣಗುವದು ಇಂತಹ ಭೌತಿಕ ವಸ್ತುಗಳನ್ನು ದೇವರು ಅಂತ ನಂಬಿದ ನಿಮ್ಮನ್ನು ಯಾರು ನಂಬುವರು . ಇದು ಅಪ್ಪ ಬಸವನ ವಚನ .
ಲಿಂಗ ಉಪಾದಿತವಲ್ಲ ಅಂತಾ ಅನೇಕ ಶರಣು ಸ್ಪಷ್ಟವಾಗಿ ಹೇಳಿರುವರು. ಹಾಗಂತ ಲಿಂಗವನ್ನು ತಿರಸ್ಕರಿಸಬೇಕೆಂಬ ವಿಚಾರ ನಮ್ಮದಲ್ಲ ಲಿಂಗದ ಪರಿಕಲ್ಪನೆ ಸಮಷ್ಟಿಯ ಭಾವ .ಜಗತ್ತಿನ ಸಕಲ ಜೀವ ರಾಶಿಯ ಏಳಿಗೆ ಬಯಸುವ ಯೋಗ ಸಾಧನ ಮಾತ್ರ . ಲಿಂಗ ಅಂತರಂಗವನ್ನು ಶುದ್ಧೀಕರಿಸುವ ಸಾಧನ ಉಪಕರಣ .
ಗುರುವಾದರೂ ಲಿಂಗವ ಪೂಜಿಸಬೇಕು,
ಲಿಂಗವಾದರೂ ದೇವತ್ವವಿರಬೇಕು,
ಜಂಗಮವಾದರೂ ಲಿಂಗವ ಪೂಜಿಸಬೇಕು,
ಜಂಗಮಕ್ಕೆ ಲಿಂಗವಿಲ್ಲದೆ ಪ್ರಮಾಣವಿಲ್ಲ,
ಅದಿಯಾಧಾರವಿಲ್ಲದೆ ಜಗವೇನೂ ಇಲ್ಲ,
ಆರಿದಹನೆಂದರೆ ಅಂಗದಲ್ಲಿ ಲಿಂಗವಿರಬೇಕು,
ಕಲಿದೇವಯ್ಯನರಿಯುವುದಕ್ಕೆ,
ಇದೇ ಮಾರ್ಗ ಚಂದಯ್ಯ .
ಇಲ್ಲಿ ಪೂಜೆ ಅಂದರೆ ಮತ್ತೆ ಗೊಂದಲಕ್ಕೆ ಒಳಗಾಗದೆ ಪೂಜೆ ಅಂದರೆ ಆದರ ಕಾಳಜಿ ಮತ್ತು ಸೇವೆ ಎಂಬರ್ಥದಲ್ಲಿ ತಿಳಿಯಬೇಕು .ಹೇಗೆ ಗುರು ಲಿಂಗ ಜಂಗಮ ಒಂದಕ್ಕೊಂದು ಪೂರಕವಾಗಿರಬೇಕು ಎಂಬುದನ್ನು ನುಲಿಯ ಚಂದಯ್ಯ ಸುಂದರವಾಗಿ ವಿವರಿಸಿದ್ದಾರೆ.
ಉಳ್ಳವರು ಶಿವಾಲಯವ ಮಾಡುವರು ನಾನೇನು ಮಾಡಲಿ ಬಡವನಯ್ಯ
ಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರವೇ ಹೊನ್ನ ಕಳಸವಯ್ಯ
ಕೂಡಲ ಸಂಗಮ ದೇವ ನೀ ಕೇಳಯ್ಯ ,ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ
ಗುಡಿ ಗುಂಡಾರ ಮಠಗಳ ಸಂಸ್ಕೃತಿ ಗಟ್ಟಿಯಾಗಿ ವಿರೋಧಿಸಿದ ಬಸವಣ್ಣ ಮನುಷ್ಯನ ಚೈತನ್ಯವೇ ದೇವರು ಆ ಪರಮಾತ್ಮನ ಕುರುಹು ಇಷ್ಟಲಿಂಗ .
ತನ್ನ ತಾ ಅರಿವ ಅನನ್ಯ ಪ್ರಯೋಗವೇ ಇಷ್ಟಲಿಂಗ ಸಾಧನೆ .ಆದರೆ ಇದನ್ನೇ ಆದರಿಸಿ ಕುಳಿತು ಕೊಳ್ಳುವ ಸಾಧಕರಿಗೆ ಬಸವಣ್ಣ ಕಿವಿ ಮಾತು ಹೇಳುತ್ತಾನೆ .
ಕಾಯಕದಲ್ಲಿ ನಿರತನಾದರೆ ಗುರುಲಿಂಗ ಜಂಗಮದ ಹಂಗು ತೊರೆಯಬೇಕು . ಕಾಯಕವೇ ಕೈಲಾಸ ,
ಮಾಡುವಂತಿರಬೇಕು ಮಾಡದಂತಿರಬೇಕು
ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು
ಕೂಡಲ ಸಂಗಮ ದೇವನ ನೆನೆಯುತ್ತ ನೆನೆಯುತ್ತ ನೆನೆಯದಂತಿರಬೇಕು.
ಆಧ್ಯಾತ್ಮವೇ ಸರ್ವಸ್ವವಲ್ಲ ಕಾಯಕ ದಾಸೋಹದಿಂದ ಮಾಡುವ ಅನುಭಾವವೇ ಆಧ್ಯಾತ್ಮದ ಮೂಲ ಮಂತ್ರವಾಗಿತ್ತು .ರಾಜನಾಗಲಿ ರಂಕನಾಗಲಿ,ಮಂತ್ರಿಯಗಲಿ ಸೇವಕನಾಗಲಿ ಎಲ್ಲರಿಗೂ ಕಾಯಕ ಮತ್ತು ದಾಸೋಹ ಕಡ್ಡಾಯ ಮತ್ತು ಅನಿವಾರ್ಯ.
ಭಕ್ತನ ಶರೀರವೇ ಲಿಂಗಮಯವಾಗಬೇಕು .,ಆತನ ಚಿಂತನವು ಸಮಾಜ ಮುಖಿಯಾಗಿರಬೇಕು . ಮರದ ಬಾಯಿ ಬೇರು ಮತ್ತು ಲಿಂಗದ ಬಾಯಿ ಜಂಗಮವಾಗಿರಬೇಕು ಇದು ಬಸವ ವಚನದ ಆಶಯವಾಗಿದೆ . ಇಲ್ಲಿ ಜಂಗಮ ಜಾತಿ ಅಲ್ಲ ಅದು ಸಮಾಜ ವ್ಯವಸ್ಥೆ ,ಸಮುದಾಯಮಾತ್ರ .
ಲಿಂಗವು ನಮ್ಮ ಅರಿವಿನ ಕುರುಹು ಇತ್ತೀಚಿಗೆ ನಮ್ಮ ಶರೀರದ ಪ್ರಮುಖ ಕೇಂದ್ರ ಮೆದುಳು ಅಲ್ಲಿ ಆಜ್ಞಾ ಚಕ್ರವನ್ನು ವಿಜ್ಞಾನಿಗಳು ಉಪಕರಣಗಳ ಮುಖಾಂತರ ಅರಿವಿನ ಆಜ್ಞಾ ಚಕ್ರ ಕೇಂದ್ರವನ್ನು Pineal Gland ನೋಡಿದಾಗ ಅದು ಲಿಂಗದ ಆಕಾರದ್ದಾಗಿದೆ . ಶರಣರು ವಿಜ್ಞಾನವನ್ನು ಬಲ್ಲವರು .
ಇದನ್ನು ಅಲ್ಲಮರು
ಅರಿವನರಿಯಲೆಂದು ಗುರು ಕೊಟ್ಟ ಕುರುಹ
ಕುರುಹ ಹಿಡಿದು ಅರಿವ ಮರೆತ ಕುರುಬನ ನೋಡ ಗುಹೇಶ್ವರ
ಇಂದು ಲಿಂಗಾಯತರಾದ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಕೇವಲ ಲಿಂಗವ ಕಟ್ಟಿದರೆ ಲಿಂಗಾಯತರೇ ಅಥವಾ ಲಿಂಗಾಯತರ ಮನೆಯಲ್ಲಿ ಹುಟ್ಟಿದರೆ ಲಿಂಗಾಯತರೇ ,ಇವು ಎರಡೂ ಅಲ್ಲ ,ಲಿಂಗ ಜಂಗಮದ ಸಮಷ್ಟಿಯ ಪ್ರಜ್ಞೆ ಹೊಂದಿ ಕಾಗೆ ಕೋಳಿ ಪಶು ಪಕ್ಷಿಗಳನೋಳಗೊಂಡ ಸಕಲ ಜೀವಾತ್ಮರ ಲೇಸ ಬಯಸುವವನೆ ಲಿಂಗಾಯತ .
ಲಿಂಗಾಯತವೆನ್ನುವುದು ಧರ್ಮವೆನ್ನುವದಕ್ಕಿ೦ತಲೂ ಶೋಷಣೆ ಮುಕ್ತ ಸಮಾಜ ನಿರ್ಮಾಣದ ಗುರಿಯ ಚಳುವಳಿ ಎನ್ನಬಹುದು. ಅತ್ಯಂತ ಸಾಮಾನ್ಯರಿಂದ ರೂಪಗೊಂಡ ಈ ಚಳುವಳಿಯ ನೇತಾರ ಬಸವಣ್ಣ .
ಬಸವಣ್ಣ ಬರುವಾಗ ಬಿಸಿಲು ಬೆಳದಿಂಗಳು ಅಂತ ಜನಪದಿಗರು ಬಸವನ ಆಗಮನವನ್ನು ಹೊಗಳಿದ್ದಾರೆ ಅದೇ ರೀತಿ ಕಾಯಕವ ಕಲಿಸುದಕೆ ನಾಯಕನು ಬಸವಯ್ಯ ತಂದು ಚೆಲ್ಲಿದನು ಹೊಸಬೆಳಕ ,ಹೊಸಮತದ ಸೂರ್ಯ ಉದಯಿಸಿದ .
ಬಸವಣ್ಣ ಲಿಂಗಾಯತ ಧರ್ಮದ ಚಳುವಳಿಯ ನೇತಾರ ಎಂದು ನಮ್ಮ ಮೂಲನಿವಾಸಿಗಳು ಹಾಡಿ ಹೊಗಳಿದ್ದಾರೆ . Istalinga is not an object , it is subject to realize consciousness . ಇಷ್ಟಲಿಂಗವೂ ಒಂದು ಸ್ಥಾವರವೇ? ಎಂದು ವಾದಿಸುವರೂ ಉಂಟು ಅಹುದು ಸಮುದಾಯದ ಪ್ರಜ್ಞೆ ಮರೆತು ,ಕೇವಲ ಆಸ್ತಿ ಹಣ ಸುಖಕ್ಕಾಗಿ ಹಪಹಪಿಸುವ ಜನರಿಗೆ ಬಸವಣ್ಣ ಚಾಟಿ ಏಟು ಕೊಡುತ್ತಾರೆ .
ಆದಿ ಲಿಂಗ ಅನಾದಿ ಜಂಗಮವು
ಆ ಜಂಗಮಕ್ಕೆ ಮಾಡಿದಡೆ ಪರಮಾನಂದ ಸುಖವಯ್ಯ
ಗುರುವಿಂಗೆ ಪರಮಗುರು ಜ೦ಗಮವೆಂದುದು
ಕೂಡಲ ಸಂಗಯ್ಯನ ವಚನ ,
ಇಲ್ಲಿ ಜಂಗಮವು ಪುರಾತನವು ಮತ್ತು ಇತ್ತೀಚಿಗೆ ಹುಟ್ಟಿದೆ ನಮ್ಮ ಅರಿವಿನ ಗುರುವಿಗೆ ಪರಮ ಗುರು ಜಂಗಮವಾದಾಗ ಆ ಜಂಗಮಕ್ಕೆ ಮಾಡಿದ ಸುಖ ಸೇವೆಗಳು ಪರಮಾನ೦ದವ ನೀಡುವ ಕ್ರಿಯೆ .
ದಯವಿಲ್ಲದ ಧರ್ಮವದೆವುದಯ್ಯ
ದಯವಿರಬೇಕು ಸರ್ವ ಪ್ರಾಣಿಗಳೆಲ್ಲರಲ್ಲಿ
ದಯವೇ ಧರ್ಮದ ಮೂಲವಯ್ಯ
ಕೂಡಲಸಂಗಯ್ಯ೦ತಲ್ಲದೊಲ್ಲನಯ್ಯ
ದಯೆಯೇ ಧರ್ಮವು ನಮಗೆ ಪ್ರಾಣಿ ಪಕ್ಷಿ ಹತ್ಯೆ ಮಾಡುವ ಅಧಿಕಾರವಿಲ್ಲ ಮಾಂಸ ಭಕ್ಷಣೆಗೆ ಅವಕಾಶವಿಲ್ಲ .ಹಬ್ಬಕ್ಕೆ ತಂದ ಹರಕೆಯ ಕುರಿಯು ತೋರಣಕ್ಕೆ ತಂದ ತಳಿರವ ಮೇದಿತ್ತು ಮುಂದೆ ಕೊಂದಿಹೇನೆಂಬುದನರಿಯದೆ ಬೆಂದೊಡಲ ಹೊರೆಯ ಮೇಯಿತ್ತು .ಅದೊಂದೇ ಹುಟ್ಟಿತ್ತು ಅದೊಂದೇ ಸತ್ತಿತ್ತು ಕೊಂದವರುಳಿದರೆ ಕೂಡಲ ಸಂಗಮದೇವ ಎನ್ನುವ ಕಳಕಳಿ ಭಾವ ಬಸವಣ್ಣನವರದು.ಲಿಂಗ ನಿಷ್ಠೆ ಜಂಗಮ ಪ್ರಜ್ಞೆ ಬಸವ ಧರ್ಮದ ಧ್ಯೇಯಗಳು . ಬಸವಣ್ಣ ವಿಶ್ವ ಮಾನವನ ಸಾಲಿನಲ್ಲಿ ನಿಲ್ಲಲು ಅವನ ಚಿಂತನೆ ಸಾಮಾಜಿಕ ಕಳಕಳಿ ಮುಖ್ಯವಾದದ್ದು.
ಇಂತಹ ದಿಟ್ಟ ವೈಚಾರಿಕ ಪುರುಷನನ್ನು ಪಡೆದ ಕನ್ನಡ ಮಾತೆ ಧನ್ಯ .ಇಂದು ಬಸವ ತತ್ವ ಇಡೀ ಜಗತ್ತಿನಅವಶ್ಯಕತೆ .ಆದರೆ ನಾವು ಮರೆತು ಮನದಲ್ಲಿ ಬಸವನ ಕಲ್ಯಾಣ ಸುತ್ತಿದರೇನು?
–ಡಾ ಶಶಿಕಾಂತ ಪಟ್ಟಣ ಪುಣೆ