ದೇವರಹಿಪ್ಪರಗಿಯ ನಾಯಕ ಮನೆತನ ಮತ್ತು ಪತ್ರಿಕಾ ರಂಗ.
ದೇವರಹಿಪ್ಪರಗಿ ಎಂದೊಡನೆ ಥಟ್ಟನೆ ನೆನಪಾಗುವದು ಅಲ್ಲಿಯ ಪ್ರಸಿದ್ಧ “ನಾಯಕ” ರ ಮನೆತನ.
ಒಂದು ದೊಡ್ಡದಾದ ಆಲದ ಮರಕ್ಕೆ ನಾಯಕ ಮನೆತನವನ್ನು ಸರಳವಾಗಿ ಹೋಲಿಸಬಹುದು. ಆಲದ ಬೇರುಗಳು , ಟೊಂಗೆಗಳು ಎಲ್ಲೆಡೆ ಹಬ್ಬಿದಂತೆ ಈ ಮನೆತನದ ಆಗುಹೋಗುಗಳು ಸಮಾಜದ ಜತೆ ಚೆನ್ನಾಗಿ ಬೆಸೆದುಕೊಂಡು ತನ್ನತನವನ್ನು ಕಾಯ್ದುಕೊಂಡು ಉನ್ನತ ಮಟ್ಟಕ್ಕೇರಿದ ಶ್ರೇಷ್ಠ ಮನೆತನವೆಂದರೆ ತಪ್ಪಾಗಲಾರದು.
“ಅನ್ನದಾನ”, “ವಿದ್ಯಾದಾನ” ಇವೆರಡರಲ್ಲಿಯೂ ಈ ಮನೆತನ ಎತ್ತಿದ ಕೈ. “ವಸುದೈವಕುಟುಂಬಕಂ” ಎಂಬುದು ಈ ಮನೆತನದ ಧ್ಯೇಯ. ಈ ಧ್ಯೇಯದಿಂದ ಎಷ್ಟೋ ಕುಟುಂಬಗಳನ್ನು ಎತ್ತಿ ಹಿಡಿದು ಉನ್ನತ ಮಟ್ಟಕ್ಕೇರಿಸಿದ ಹಿರಿಮೆ ಇದರದು. ಇದರೊಂದಿಗೆ ಪತ್ರಿಕಾರಂಗದಲ್ಲಿ 1935ರಿಂದ ಇಲ್ಲಿಯವರೆಗೆ ದುಡಿದು , ಪತ್ರಿಕಾರಂಗಕ್ಕೆ ಮೆರುಗು ಕೊಟ್ಟಂಥ ಮನೆತನವಿದು.
ನಾಯಕ ಮನೆತನದ ಮಹನೀಯರು.
(ಎಡ ಭಾಗದ ಮೂವರು
ಹಣಮಂತರಾಯ್ ಮೋಹರೆ
ವೆಂಕಟರಾವ್ ನಾಯ್ಕ್
ತಮ್ಮಣ ರಾವ್ ನಾಯ್ಕ್
ಬಲ ಭಾಗದ ಇಬ್ಬರು ಗೋಪಾಲ ನಾಯ್ಕ್. ಮತ್ತು ಸುಶಿಲೆಂದ್ರ ನಾಯ್ಕ್)
1. ದಿ. ಹಣಮಂತರಾವ ಮೊಹರೆ(ನಾಯಕ).
ಪತ್ರಿಕಾ ರಂಗದ “ಭೀಷ್ಮ “ ದಿ. ಹಣಮಂತರಾವ ಮೊಹರೆ(ನಾಯಕ) ಹಿಡಿದು ಈಗಿನ ಪತ್ರಿಕಾ ರಂಗದಲ್ಲಿ ಹೆಸರು ಪಡೆದ ಗೋಪಾಲ ನಾಯಕ ಮತ್ತು ಸುಶಿಲೇಂದ್ರ ನಾಯಕರವರೆಗೆ ಎಲ್ಲಿಯೂ ಅಡೆತಡೆ ಇಲ್ಲದೇ ಸಾಗಿದ ಮನೆತನ. ಈ ಪತ್ರಿಕಾ ರಂಗದಲ್ಲಿ ಆಗಿಹೋದ ಮಹನೀಯರನ್ನು ನಾವು ನೆನೆಯಲೇಬೇಕು. ಅನೇಕ ಪ್ರಶಸ್ತಿಗಳನ್ನು ಆವಾಗಾವಾಗ ಪಡೆಯುತ್ತ ಬಂದ ಮನೆತನ. ದಿ. ಮೊಹರೆ ಹಣಮಂತರಾವ (ನಾಯಕ) ಈ ಪತ್ರಿಕಾ ರಂಗದಲ್ಲಿ ಹಾಕಿ ಕೊಟ್ಟ ಮಾರ್ಗವನ್ನು ಸರಿಯಾಗಿ ಉಪಯೋಗಿಸಿಕೊಂಡು ಈ ಮನೆತನ :ಪತ್ರಿಕಾರಂಗದಲ್ಲಿ” ಪ್ರಸಿದ್ಧಿ ಪಡೆದಿದೆ.
ದಿ. ಮೊಹರೆ ಹಣಮಂತರಾವ ಇವರು “ಸಂಯುಕ್ತ ಕರ್ನಾಟಕ” ಪತ್ರಿಕೆ ಕಟ್ಟುವಲ್ಲಿ ಅತ್ಯಂತ ಶ್ರಮವಹಿಸಿ ದಿ. ಶ್ರೀ ರಂಗನಾಥ ದಿವಾಕರ ಇವರೊಂದಿಗೆ ಕಾರ್ಯ ನಿರ್ವಹಿಸಿದ ಮಹನೀಯರು. ಹತ್ತು ಹದಿನೈದು ವರ್ಷಗಳವರೆಗೆ ಸಂಪಾದಕರೆಂದು ಕಾರ್ಯನಿರ್ವಹಿಸಿ ತಮ್ಮ ಹರಿತವಾದ ಲೇಖನಿಯಿಂದ ಸಮಾಜಕ್ಕೆ ಜಾಗ್ರತಿ ಮತ್ತು ಬ್ರಿಟೀಶ ಸರಕಾರಕ್ಕೆ ಚುರುಕು ಮುಟ್ಟಿಸಿದವರು.
2. ದಿ. ವೆಂಕಟರಾವ ಭೀಮರಾವ ನಾಯಕ(ವ್ಹಿ. ಬಿ ನಾಯಕ).
ಇವರೂ ಸಹ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿ ಹತ್ತು ವರ್ಷಗಳವರೆಗೆ ಸೇವೆ ಸಲ್ಲಿಸಿ ಪತ್ರಿಕಾ ಪ್ರಪಂಚದಲ್ಲಿ ಈ ಪತ್ರಿಕೆಯ ಹೆಸರನ್ನು ಮುಂಚೂಣಿಯಲ್ಲಿ ತಂದವರು. ಎಂ. ಎ. ಎಲ್.ಎಲ್.ಬಿ ಪದವಿ ಪಡೆದು ಸಾಂಗಲಿ ಮತ್ತು ಸೋಲಾಪುರದಲ್ಲಿ ಕಾಲೇಜಿನಲ್ಲಿ ಪ್ರೊಫೆಸರ ಆಗಿ ಕಾರ್ಯನಿರ್ವಹಿಸಿದವರು. ಅವೆಲ್ಲವನ್ನು ಬಿಟ್ಟು ಪತ್ರಿಕಾ ರಂಗಕ್ಕೆ ಧುಮುಕಿ ತಮ್ಮ ಕಕ್ಕಂದಿರಾದ ಮೊಹರೆ ಹಣಮಂತರಾವ ಇವರ ಜತೆ ಕೈಗೂಡಿಸಿ ಈ ರಂಗಕ್ಕೆ ಮೆರುಗು ಕೊಟ್ಟವರು. ನಂತರ ಹಲವು ವರ್ಷಗಳ ಬಳಿಕ ತಮ್ಮದೇ ಆದ “ಸಂದರ್ಶನ” ವಾರಪತ್ರಿಕೆಯನ್ನು ಹುಟ್ಟುಹಾಕಿ ಸಂಪಾದಕರೆಂದು ಕಾರ್ಯ ನಿರ್ವಹಿಸಿದರು. ಆ ಪತ್ರಿಕೆ ಈಗ ದಿನಪತ್ರಿಕೆಯಾಗಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
3. ದಿ. ತಮ್ಮಣ್ಣರಾವ ನಾಯಕ(ಟಿ .ಕೆ.ನಾಯಕ)
ಇವರು ವೃತ್ತಿಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಿ ನಿವೃತ್ತಿಯ ನಂತರ ವಿಜಾಪುರದ “ ಕರ್ನಾಟಕ ವೈಭವ” ಪತ್ರಿಕೆಯ ಮತ್ತು “ಸಂದರ್ಶನ” ವಾರಪತ್ರಿಕೆ ಸಂಪಾದಕರಾಗಿ ಕಾರ್ಯನಿರ್ವಹಿಸಿದವರು. ತಮ್ಮ ಜಾಣ್ಮೆಯಿಂದ ಸಂದರ್ಶನ ಪತ್ರಿಕೆಯ ಘನತೆಯನ್ನು ಹೆಚ್ಚಿಸಿದ ಮಹನೀಯರಿವರು. “ಜೀವಮಾನದ” ಪ್ರಶಸ್ತಿಗೆ ಭಾಜನರಾದವರು. ಇವರಿಗಿಂತ ಹಿರಿಯರಾದ ದಿ. ಪ್ರಹ್ಲಾದರಾವ ನಾಯಕ ಅವರು ಒಕ್ಕಲುತನದ ಜವಾಬ್ದಾರಿ ವಹಿಸಿಕೊಂಡರು. ದೊಡ್ಡದಾದ ಒಕ್ಕಲುತನದ ಹೊಣೆಗಾರಿಕೆಯನ್ನು ಅತ್ಯಂತ ಜಾಗರೂಕತೆಯಿಂದ ನಿರ್ವಹಿಸಿದ ವ್ಯಕ್ತಿ ಇವರು. ಇವರು ಒಕ್ಕಲುತನದ ಹೊರ ಒಳ ಆಯಾಮಗಳನ್ನು ಬಲ್ಲ ಇವರು ತಮ್ಮೆಲ್ಲ ಹಿಡುವಳಿಗಳನ್ನು ಕಾಯ್ದುಕೊಂಡವರು, ಉಳಿಸಿಕೊಂಡವರು. ಇವರ ಪುತ್ರರೇ ಶ್ರೀ ಗೋಪಾಲ ನಾಯಕ, ಸಂದರ್ಶನದ ಈಗಿನ ಸಂಪಾದಕರು.
4. ಶ್ರೀ ಗೋಪಾಲ ನಾಯಕ.
ಇವರು ತಮ್ಮ ಕಕ್ಕ ಟಿ ಕೆ ನಾಯಕ ಮತ್ತು ವ್ಹಿ. ಬಿ.ನಾಯಕರು ವಹಿಸಿದ ಪತ್ರಿಕಾ ಜವಾಬ್ದಾರಿಯನ್ನು ಚೆನ್ನಾಗಿ ಮುನ್ನಡೆಸಿಕೊಂಡು ಬರುತ್ತಿರುವರು. ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿ 1994 ರವರೆಗೆ ಈ ವಾರಪತ್ರಿಕೆಯ ಸಂಪಾದಕರೆಂದು ಕೆಲಸ ನಿರ್ವಹಿಸಿ ಅದೇ ವರ್ಷ ಈ ವಾರಪತ್ರಿಕೆಯನ್ನು ದಿನಪತ್ರಿಕೆಯನ್ನಾಗಿ ಪರಿವರ್ತಿಸಿದರು. ತಮ್ಮ ಆಳವಾದ ಜ್ಷಾನದಿಂದ ಮತ್ತು ಹರಿತವಾದ ಲೇಖನಿಯಿಂದ ಈ ಪತ್ರಿಕೆಯ ಮೆರಗನ್ನು ಹೆಚ್ಚಿಸಿದರು. ಈಗ ದಿನಪತ್ರಿಕೆಯಾಗಿ ಗೋಪಾಲನಾಯಕರ ಸಂಪಾದಕತ್ವದಲ್ಲಿ ತನ್ನತನವನ್ನು ಕಾಯ್ದುಕೊಂಡು ಮುನ್ನಡೆಯುತ್ತಿದೆ. ಇವರು ಪಡೆದ ಪ್ರಶಸ್ತಿಗಳು ಅನೇಕ. ಕೆಲವನ್ನು ಇಲ್ಲಿ ನಮೂದಿಸಿದ್ದೇನೆ.
1.ಸುವರ್ಣಕರ್ನಾಟಕದ ಪ್ರಶಸ್ತಿ. 2. 2007 ರಲ್ಲಿ ಕರ್ನಾಟಕ ಪತ್ರಿಕಾ ಅಕೆಡಮಿ ಪ್ರಶಸ್ತಿ.
3.2012ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 4. 2013ರಲ್ಲಿ ಶ್ರೀ ಸಿದ್ಧೇಶ್ವರ ರತ್ನ ಪ್ರಶಸ್ತಿ.
ಇಂತಹ ಪ್ರಶಸ್ತಿಗಳನ್ನು ಇವರು ಪಡೆದದ್ದು ಹೆಮ್ಮೆಯ ವಿಷಯ.
ಶ್ರೀ ಸುಶಿಲೇಂದ್ರ ತಮ್ಮಣ್ಣರಾವ ನಾಯಕ.
ಶ್ರೀ ಸುಶಿಲೇಂದ್ರ ತಮ್ಮಣ್ಣರಾವ ನಾಯಕ ಇವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಇವರಿಂದ “ವಿಶೇಷ” ಪ್ರಶಸ್ತಿಯನ್ನು ದಿನಾಂಕ 04.01.2022ರಂದು ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಇವರಿಂದ ಕಲಬುರ್ಗಿಯಲ್ಲಿ ಪಡೆದಿದ್ದಾರೆ.ಸುದೀರ್ಘವಾಗಿ ಈ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸಿ ಈ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ. ಇವರು ಪತ್ರಿಕಾರಂಗದಲ್ಲಿ ಸಾಧಿಸಿದ ಮತ್ತು ಸಾಧಿಸುತ್ತಿರುವದನ್ನು ತಮ್ಮ ಗಣನೆಗೆ ತರಬಯಸುತ್ತೇನೆ.
ಇವರು ದಿ. ತಮ್ಮಣ್ಣರಾವ ನಾಯಕ ಇವರ ಚಿರಂಜೀವಿಗಳು. ಹುಟ್ಟಿದ್ದು 04.09.1961ರಂದು .ವಾಣಿಜ್ಯ ವಿಷಯದಲ್ಲಿ ಪದವೀಧರರಾದ ಇವರು “ಸಂದರ್ಶನ” ಪತ್ರಿಕೆಗೆ ತಮ್ಮ ಕೊಡುಗೆಯನ್ನು ಕೊಡುತ್ತಾ ಬಂದಿದ್ದಾರೆ. ಮತ್ತು ಕೊಡುತ್ತಲಿದ್ದಾರೆ. ಈ ದಿನಪತ್ರಿಕೆಯ “ಉಪಸಂಪಾದಕರಾಗಿ” ಸುದ್ದಿಗಳನ್ನು ಸಂಗ್ರಹಿಸಿ ವರದಿ ಮಾಡುವ ಕಾರ್ಯದಲ್ಲಿಯೂ ನಿರತರಾಗಿದ್ದಾರೆ. ಈ ಪತ್ರಿಕೆಯ ಸಂಪಾದಕರಾದ ಶ್ರೀ ಗೋಪಾಲ ನಾಯಕರು ಇವರ ಅಣ್ಣನೇ ಆಗಬೇಕು. ಅವರ ಮಾರ್ಗದರ್ಶನದಲ್ಲಿ ಈ ದಿನಪತ್ರಿಕೆಯ ಉನ್ನತಿಗಾಗಿ ಶ್ರಮಿಸುತ್ತಿದ್ದಾರೆ. ಸುಂದರವಾದ ಮತ್ತು ಹರಿತವಾದ ತಮ್ಮ ವಿಚಾರಗಳಿಂದ ಮನ್ನಣೆ ಹೊಂದಿದವರಾಗಿದ್ದಾರೆ. ಎಲ್ಲರೊಂದಿಗೆ ಹೊಂದಿಕೊಂಡುಹೋಗುವ ಸ್ವಭಾವದಿಂದ ಜನಾನುರಾಗಿಯೂ ಆಗಿದ್ದಾರೆ.
ಇವರು ಸಾಧಿಸಿ, ಸಾಧಿಸುತ್ತಿರುವ ಪತ್ರಿಕಾ ರಂಗದ ಮತ್ತು ಇತರ ಚಟುವಟಿಕೆಗಳ ಕಡೆಗೆ ಗಮನ ಹರಿಸೋಣ.
1. ಸಂಯುಕ್ತ ಕರ್ನಾಟಕದ ಪ್ರಾದೇಶಿಕ ಕಚೇರಿಯ ವರದಿಗಾರರು.
2. ಸಿಟಿ ರಿಪೋರ್ಟರ ಸಂಯುಕ್ತ ಕರ್ನಾಟಕ ಎಪ್ರಿಲ್ 1999ರ ವರೆಗೆ
3. ಯು. ಎನ್. ಆಯ್. ಜಿಲ್ಲಾ ವರದಿಗಾರರು 1994ರಿಂದ 2020ರ ವರೆಗೆ
4. ಯುವಕ ವಿಕಾಸ ಕೇಂದ್ರದ ಮ್ಯಾಗಝಿನ್ ದ ಸಂಪಾದಕ 1999ರಿಂದ ಎಪ್ರಿಲ್ 2020ರ ವರೆಗೆ
5. ಸ್ಥಾನಿಕ ಸಂಪಾದಕರು “ಸಂದರ್ಶನ” ದಿನಪತ್ರಿಕೆ.
6. ಲೇಖನಗಳ ಕಾಂಟ್ರಿಬ್ಯೂಟರ್ “ಈ ನಾಡು “ ತೆಲಗು ದಿನಪತ್ರಿಕೆ ಹೈದರಾಬಾದ 1997 – 2004
7. ಡೆಸ್ಕ್ ಇನ್ಚಾರ್ಜ್ ನಾಡೋಜ ಕನ್ನಡ ದಿನಪತ್ರಿಕೆ ವಿಜಯಪುರ 2001 ರಿಂದ 2005ರ ವರೆಗೆ
8. ಅರೆಕಾಲಿಕ ವರದಿಗಾರ ಟೈಮ್ಸ ಆಫ್ ಇಂಡಿಯಾ ಬೆಂಗಳೂರು 2007 ರಿಂದ 2020
ಮೇಲಿನವುಗಳ ಬಗೆಗೆ ಚತುರತೆಯಿಂದ ಕಾರ್ಯನಿರ್ವಹಿಸುತ್ತಿದ್ದು ಇವರ ವಿದ್ವತ್ತನ್ನು ಎತ್ತಿ ತೋರಿಸುತ್ತದೆ. ಇವೆಲ್ಲ ಕಾರ್ಯಗಳಿಂದ ಮನ್ನಣೆ ಪಡೆದು ತಮ್ಮ ಹೆಸರನ್ನು ಪತ್ರಿಕಾ ಪ್ರಪಂಚದಲ್ಲಿ ನಿಲ್ಲಿಸಿದ್ದಾರೆ. ಇವೆಲ್ಲ ಗುಣಗಳಿಂದ ಪತ್ರಿಕಾರಂಗದವರು “ವಿಶೇಷ” ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದು ಸ್ತುತ್ಯವಾಗಿದೆ. ಇವರಿಂದ ಇನ್ನೂ ಅನೇಕ ಅರ್ಥಪೂರ್ಣವಾದ ಮತ್ತು ಹರಿತವಾದ ಲೇಖನಗಳು ಬರಲಿ ಎಂದು ಆಶಿಸುತ್ತೇನೆ.
–ಕೃಷ್ಣ ನಾರಾಯಣ ಬೀಡಕರ
ನಿವೃತ್ತಬ್ಯಾಂಕ ವ್ಯವಸ್ಥಾಪಕರು
ಕೆಎಚ್ ಬಿ ಕಾಲನಿ
ವಿಜಯಪುರ. -3
ದೂರವಾಣಿ 9972087473