ಶರಣರು ಕಂಡ ಜಂಗಮ
ಕಾಯದೊಳು ಗುರು ಲಿಂಗ ಜಂಗಮ
ದಾಯತವನರಿಯಲ್ಕೆ ಸುಲಭೋ
ಪಾಯದಿಂದಿದಿರಿಟ್ಟು* *ಬಾಹ್ಯಸ್ಥಲಕೆ ಕುರುಹಾಗಿ |
ದಾಯದೋರಿ ಸಮಸ್ತ ಭಕ್ತ ನಿ
ಕಾಯವನು ಪಾವನವ* *ಮಾಡಿದ
ರಾಯ ಪೂರ್ವಾಚಾರ್ಯ ಸಂಗನಬಸವ ಶರಣಾರ್ಥಿ|| ಚಾಮರಸ ( ಪ್ರಭು ಲಿಂಗ ಲೀಲೆ )
ಶರೀರದಲ್ಲಿಯೇ ಇರುವ ಗುರು ಲಿಂಗ ಜಂಗಮ ತತ್ವವವನ್ನು ವಿಸ್ತಾರಗೊಳಿಸಿ ಆಚರಿಸುವ ಸಲುವಾಗಿ, ಸುಲಭ ಸಾಧನವೆಂಬ ಇಷ್ಟಲಿಂಗ (ಕುರುಹು) ವನ್ನು ಪರಿಕಲ್ಪಿಸಿಕೊಟ್ಟು, ಸಮಸ್ತ ಜನವರ್ಗವನ್ನು ಪಾವನ ಮಾಡಿದವನು ಬಸವಣ್ಣ.
ಸನಾತನದಲ್ಲಿ ಗುರು ಸರ್ವ ಶ್ರೇಷ್ಠ ಅವನಿಂದಲೇ ಮುಕ್ತಿ ದಾರಿ ತೋರುವ ನಿಜ ಗುರು ಹರನಿಗಿಂತಲೂ ಶ್ರೇಷ್ಠ ಇಂತಹ ಅನೇಕ ಕಲ್ಪನೆಗಳು ಬಸವಣ್ಣನವರು ಕಿತ್ತೊಗೆದು ,ದೀಪದಿಂದ ದೀಪ ಹಚ್ಚುವ ಪರಿಕಲ್ಪನೆ ಅಥವಾ ಗುರು ತನ್ನ ಕಾರ್ಯ ನಿರ್ವಹಿಸಿ ತಾನು ಶಿಷ್ಯನಲ್ಲಿ ಒಂದಾಗಿ ತಾನು ಗುರು ಆತ ಶಿಷ್ಯ ಎಂಬ ಬೇರೆ ಭಾವವನ್ನು ಸಂಪೂರ್ಣ ಕಳೆದು ಕೊಳ್ಳುತ್ತಾನೆ
ಶರಣರು ತಾನು ಮತ್ತು ಶಿವ ಒಂದು ಎಂದು ಸಾಧಿಸಿದ ಮೊದಲ ಪುರುಷರು.ಉಭಯ ಭಾವವನ್ನು ಎಲ್ಲಿಯೂ ಪ್ರತಿಪಾದಿಸದೆ ಅಂತಹ ಸಂದೇಹ ಗೊಂದಲಗಳನ್ನು ಕಿತ್ತು ಹಾಕಿದರು. ಮನುಷ್ಯ ತಾನು ತನ್ನ ಸುತ್ತಲಿನ ಜೀವ ಜಾಲದ ಚೈತನ್ಯವನ್ನು ಚಿತ್ಕಳೆಯನ್ನು ನಿರಾಕಾರದ ಶಿವನ ಪರಿಕಲ್ಪನೆಯನ್ನು ಸಾಕಾರ ಗೊಳಿಸಿ ,ಮತ್ತೆ ನಿರಾಕಾರದ ನಿರುಪಾಧಿಕ ತತ್ವದ ಆಧ್ಯಾತ್ಮಿಕ ಪಯಣಕ್ಕೆ ಕರೆದೊಯ್ಯುವುದೇ ಶರಣ ಮಾರ್ಗ.
ಜಂಗಮ ಪದ ಶರಣರು ಸಮಾಜವೆಂತಲೂ ತತ್ವ ನಿಷ್ಠ ಸಾಧಕರೆಂತಲೂ ಸಮಷ್ಟಿ ಎಂತಲೂ ಬಳಸಿ ಲಿಂಗವೇ ಜಂಗಮ ಎಂದೆನ್ನುತ್ತಾ ವ್ಯಕ್ತಿ ಸಮಷ್ಟಿಯ ಸಂಬಂಧಗಳನ್ನು ಗಟ್ಟಿಗೊಳಿಸಿದ್ದಾರೆ. ಬಸುರಿಗೆ ಮಾಡಿದ ಸುಖ ದುಃಖಗಳು ಶಿಶುವಿಗೆ ಮೂಲ ಎಂದು ಹೇಳಿ ಬಸುರಿ -ಇದು ಜಂಗಮ ಪರಿಕಲ್ಪನೆ ಶಿಶು ಭಕ್ತನಾಗುತ್ತಾನೆ .
ಇದೆ ರೀತಿ
“ಮರಕ್ಕೆ ಬಾಯಿ ಬೇರೆಂದು ತಳೆಯಿಂಕೆ ನೀರೆರೆದಡೆ
ಮೇಲೆ ಪಲ್ಲವಿಸಿತ್ತು ನೋಡಾ ,
ಲಿಂಗದ ಬಾಯಿ ಜಂಗಮವೆಂದು
ಪಡಿ ಪದಾರ್ಥವ ನೀಡಿದಡೆ
ಮುಂದೆ ಸಕಳಾರ್ಥವನಿವನು .
ಆ ಜಂಗಮ ಹರನೆಂದು ಕಂಡು ,
ನರನೆಂದು ಭಾವಿಸಿದೊಡೆ
ನರಕ ತಪ್ಪದು ಕಾಣಾ ,ಕೂಡಲ ಸಂಗಮದೇವ .
ಅತ್ಯಂತ ಸ್ಪಷ್ಟವಾಗಿ ನಿರೂಪಿಸಿದ ಲಿಂಗ ಜಂಗಮ ತತ್ವಗಳು ಇಲ್ಲಿ ಕಾಣುತ್ತೇವೆ. ಹೇಗೆ ಮರಕ್ಕೆ ಬಾಯಿ ಬೇರೋ ಹಾಗೆ ಲಿಂಗದ ಬಾಯಿ ಜಂಗಮ ಅಂದರೆ ಸಮಾಜ .ಸಮಾಜದ ವ್ಯಕ್ತಿಯನ್ನು ಹರನೆಂದು ನಂಬಿ ಪ್ರೀತಿಯಿಂದ ನೋಡಬೇಕಾದವರು ನರನೆಂದು ಕಡೆಗಣಿಸಿದರೆ ಸ್ವರ್ಗವೂ ಕೂಡಾ ನರಕವೇ ಎಂದು ಎಚ್ಚರಿಸಿದ್ದಾರೆ ಬಸವಣ್ಣನವರು. ಜಂಗಮ ಜಾತಿಯಲ್ಲ ಅದು ಸಮಾಜ .ಲಿಂಗ ತತ್ವವನ್ನು ಪ್ರಾಣದಲ್ಲಿ ಇತ್ತು ನಿರುಪಾದಿತವಾಗಿ ಗೌರವಿಸುವ ಸುಂದರ ಸಮತೆಯ ವ್ಯವಸ್ಥೆ- ಇಂತಹ ಸಮತೆಯ ಜಂಗಮ ವ್ಯವಸ್ಥೆಯನ್ನು ಬಸವಣ್ಣ ಮತ್ತು ಶರಣರು ಅರಿತು ಆಚರಿಸಿದಲ್ಲದೆ ಅವರು ತಾವು ಕಂಡ ಸತ್ಯವನ್ನು ಮುಕ್ತ ವಚನಗಳಲ್ಲಿ ವ್ಯಕ್ತಗೊಳಿಸಿದ್ದಾರೆ.
ಅನುಭಾವವೇ ಜಂಗಮ -ಜಂಗಮವೂ ಕೂಡಾ ಉಪಾದಿತ ವ್ಯವಸ್ಥೆಯಲ್ಲ.ಜಂಗಮವು ಜಾತಿಯೂ ಅಲ್ಲ ಜಂಗಮ ಒಂದು ಸಂಸ್ಥೆಯಲ್ಲ
ಹಾಗಿದ್ದರೆ ಜಂಗಮವೆಂದರೇನು?
ಜಂಗಮ ಒಂದು ಚೈತನ್ಯ ,ಅದು ಜ್ಞಾನ ಅದು ಸಮಾಜ ಹೀಗೆ ಅನೇಕ ಪಾರಿ ಭಾಷಿಕ ಪದಗಳ ಅರ್ಥವನ್ನು ಕಂಡುfಕೊಳ್ಳುವ ಶ್ರೇಷ್ಠ ಸುಂದರ ವ್ಯವಸ್ಥೆಯಾಗಿದೆ.
15 ನೇ ಶತಮಾನದ ನಂತರ ಕೆಲ ಶೈವ ಪ್ರಭೇಧಗಳು ಕಾಳಾಮುಖಿ ಪಾಶುಪತ ಕಾಪಾಲಿಕರು ಬಸವ ಧರ್ಮವನ್ನು ಅನಾಮತ್ತಾಗಿ ಎತ್ತಿ ಹಾಕಿಕೊಂಡು ,
ಜನರ ಭಾವನೆ ಮಾತು ಪ್ರೀತಿ ಉಳಿಸಿಕೊಳ್ಳಲು 16 ನೇ ಶತಮಾನದಲ್ಲಿ ಮಠಗಳ ಸ್ಥಾಪನೆಗೆ ಮುಂದಾಗಿ ಬಸವ ತತ್ವಗಳ ಆಚರಣೆಯನ್ನು ಮುಂದಿಟ್ಟು ಕೊಂಡು ಇನ್ನೊಂದು ಪರ್ಯಾಯ ಜಂಗಮ ಪದ್ದತಿಯನ್ನು ಹುಟ್ಟು ಹಾಕಿದರು. ಇಲ್ಲಿ ಜಾತಿ ಮಠ ಆಶ್ರಮಗಳ ಹುಟ್ಟಿಗೆ ಕಾರಣವಾಯಿತು.
ಇಲ್ಲಿಂದ ಜಂಗಮವು ವಿರೋಪವಾಗಿ ಒಂದು ಜಾತಿಯನ್ನಾಗಿ , ಸಂಸ್ಥೆಯಾಗಿ ಮಾರ್ಪಾಡಿಸಿ ಮತ್ತೆ ಪುರೋಹಿತ ಶಾಹಿಗೆ ಅವಕಾಶ ಮಾಡಿ ಕೊಡಲಾಯಿತು.
16 ನೇ ಶತಮಾನದಲ್ಲಿ ಬಂದ ಆಂಧ್ರ ಮೂಲದ ಆಗಮ ಆರಾಧ್ಯರ ಗುಂಪು ವೀರಶೈವ ವೃತವನ್ನು ಹೆಚ್ಚು ಪ್ರಚುರಗೊಳಿಸಲು ಲಿಂಗಾಯತ ತತ್ವಗಳ ಬಸವ ಧರ್ಮ ಆಚರಣೆಗಳನ್ನು ತಮ್ಮದಾಗಿಸಿಕೊಂಡು ಅದರಲ್ಲಿ ಕೆಲ ತಮ್ಮ ಅನೇಕ ವೃತಗಳನ್ನು ಲಿಂಗಾಯತ ಧರ್ಮದಲ್ಲಿ ಅನಗತ್ಯವಾಗಿ ತುರುಕಿದರು .
ಆಗಮಯುಕ್ತ ವೀರಶೈವರ ಕೆಲ ಆಚರಣೆಗಳ ತಪ್ಪಿನಿಂದಾಗಿ ಮತ್ತು ವೀರಶೈವ ಮಾಹೇಶ್ವರ ಗುಂಪಿನ ಕುತಂತ್ರದಿಂದಾಗಿ ಕಾಯ ಗುಣವಾಗಬೇಕಿದ್ದ ಸುಂದರ ಜಂಗಮ ವ್ಯವಸ್ಥೆಯು ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು ಸನಾತನ ಗುಣಧರ್ಮಗಳ ಹವನ ಯಜ್ಞ ಹೋಮ ಅಭಿಷೇಕ ಪೂಜೆ ಮುಂತಾದ ಶರಣ ವಿರೋಧಿ ನೀತಿಗಳನ್ನು ಆಚರಣೆಗಳನ್ನು ಅಳವಡಿಸಿ ಮುಗ್ಧ ಬಸವ ಭಕ್ತರನ್ನು ದಿಕ್ಕು ತಪ್ಪಿಸಿದರು .
ಇಂತಹ ತಪ್ಪುಗಳು ಪ್ರಮಾದಗಳು ಇನ್ನು ಬಹುತೇಕ ಮಠಗಳಲ್ಲಿ ಆಶ್ರಮಗಳಲ್ಲಿ ನಿರಂತರವಾಗಿ ನಡೆದಿವೆ.
ಲಿಂಗಾಯತ ಧರ್ಮವು ನಿಸರ್ಗ ದತ್ತವಾದ ಗುಣದಿಂದ ಕೂಡಿದ ತಾತ್ವಿಕ ನಿಲುವನ್ನು ಹೊಂದಿದ ಶ್ರೇಷ್ಠ ಧರ್ಮ.ಇಲ್ಲಿ ಶ್ರೇಣೀಕೃತ ವ್ಯವಸ್ಥೆಯಿಲ್ಲ ದೇವರು ಭಕ್ತನ ಮಧ್ಯೆ ಪೂಜಾರಿ ಪುರೋಹಿತರ ಪ್ರವೇಶ ಸಂಪೂರ್ಣ ಅನಗತ್ಯ ಅನಾವಶ್ಯಕ.
ಜಂಗಮ ವ್ಯವಸ್ಥೆಯನ್ನು ಆಧಾರವಾಗಿಟ್ಟುಕೊಂಡು ಉಪಭೋಗಕ್ಕೆ ಬದುಕಿನ ಮಾರ್ಗವನ್ನು ಮಾಡಿಕೊಂಡ ಇಂದಿನ ಜಾತಿ ಜಂಗಮರು ಪುರೋಹಿತರು ಶೋಷಣೆ
ವೈಭವೀಕರಣವನ್ನು ಶರಣರು ಉಗ್ರವಾಗಿ ಖಂಡಿಸಿದ್ದಾರೆ. ಜಂಗಮ ವ್ಯವಸ್ಥೆಯನ್ನು ಸೇವೆಯೆಂದು ಹೇಳಿ ಆ ನೆಪದಲ್ಲಿ ಹಿಟ್ಟು ಭಿಕ್ಷೆ ಬೇಡುತ್ತ ಮನೆ ಮನೆ ಅಲೆದಾಡಿ ಧನ ಕನಕ ಹಿಟ್ಟು ಕಾಳು ಸಂಗ್ರಹಿಸುವ ತಂತ್ರಗಾರಿಕೆಯನ್ನು ಹೊಂದಿದ್ದರು.
ಮುಳ್ಳಾವಿಗೆ ಕಾಯಕ ,ತೆಕ್ಕೆ ಕಾಯಕ ,ಕಂಬದ ಕಾಯಕ ,ಎಚ್ಚರಿಕೆ ಕಾಯಕ,ಹೀಗೆ ಪತ್ರಿ, ವಿಭೂತಿ ಹಂಚಿ ಹೊಟ್ಟೆ ಉಪಜೀವನ ನಡೆಸುವವರು ಜಂಗಮರೆಂದು
ಹೇಳಿಕೊಳ್ಳುವ ಸ್ಥಿತಿಯಿತ್ತು.
ಗುರು ವೈಭವಕ್ಕೆ ಸಿಕ್ಕಿದಾಗಲೇ ಶಿಷ್ಯಂಗೆ ನರಕ ಪ್ರಾಪ್ತಿ
ಲಿಂಗ ಭಜನೆಗೆ ಸಿಕ್ಕಿದಾಗಲೇ ಮರಣಕ್ಕೊಳಗು
ಜಂಗಮ ಜಂಗುಳಿಯಾಗಿ
ಕಂಡ ಕಂಡವರ ಅಂಗಳಕ್ಕೆ ಜಂಘೆಯನಿಕ್ಕಲಾಗಿ.
ನಿರಂಗಕ್ಕೆ ಹೊರಗು.
ಇಂತಿ ಇವರು ನಿಂದುದುದಕೆ ಬಂಧನವಿಲ್ಲದಿರಬೇಕು.
ಈಶಾನ್ಯ ಮೂರ್ತಿ ಲಿಂಗವನರಿದುವುದಕೆ
ಶಿವಲೆಂಕ ಮಂಚಣ್ಣ –ವಚನ ಸಂಖ್ಯೆ 71 ಸಂಪುಟ 9.
ಶರಣ ಶಿವ ಲೆಂಕ ಮಂಚಣ್ಣ ಪಂಡಿತ ವಂಶದವನು ಚರಿತ್ರೆಯ ಪ್ರಕಾರ ಕಾಶ್ಮೀರಿ ಪಂಡಿತನಾಗಿದ್ದು ಕಾಶಿಯಲ್ಲಿನ ರಾಜ್ಯ ಭಾರ ಮಾಡುತ್ತಿದ್ದು,ಕಾಶ್ಮೀರದ ಅರಸು ಮಹಾದೇವ ಭೂಪಾಲನೊಂದಿಗೆ ಕಲ್ಯಾಣಕ್ಕೆ ಆಗಮಿಸಿ ಶರಣ ಚಳುವಳಿಯಲ್ಲಿ ಪಾಲ್ಗೊಂಡಿದ್ದು ಗೊತ್ತಾಗುತ್ತದೆ. ಈತನು ಉರಿಲಿಂಗದೇವರ ಗುರುವಾಗಿದ್ದನು .ಶಿವಲೆಂಕ ಮಂಚಣ್ಣ ಶಿವಾಧಿಕ್ಯವನ್ನು ಸಾರುತ್ತಾ ,ಪರವಾದಿಗಳನ್ನು ಜಯಸುತ್ತಾ ಶರಣ ತತ್ವವನ್ನು ಸಾರುವ ಕಾಯಕದವನಾಗಿದ್ದು ,ಭಾರತದ ಅದರಲ್ಲೂ ವಿಶೇಷವಾಗಿ ಉತ್ತರ ಭಾರತಕ್ಕೆ ಲಿಂಗಾಯತ ಧಾರ್ಮ ಕಾಲಿಡಲು ಇವರ ಪಾತ್ರ ದೊಡ್ಡದು.
ಈ ಮೇಲಿನ ವಚನ ನೋಡಿದರೆ ಅಂದಿನ ಕಾಲಕ್ಕೂ ಗುರು ಲಿಂಗ ಜಂಗಮವು ಒಂದು ಬದುಕಿನ ಮಾರ್ಗವಾಗುವ ಲಕ್ಷಣಗಳು ಕಂಡು ಬಂದಾಗ ಇಂತಹ ದಿಟ್ಟ ಧೋರಣೆಯನ್ನು ಶಿವ ಲೆಂಕ ಮಂಚಣ್ಣ ವ್ಯಕ್ತ ಪಡಿಸುತ್ತಾನೆ.
ಗುರು ವೈಭವಕ್ಕೆ ಸಿಕ್ಕಿದಾಗಲೇ ಶಿಷ್ಯಂಗೆ ನರಕ ಪ್ರಾಪ್ತಿ -ಜ್ಞಾನ ದಾಸೋಹ ಮಾಡಿ ಶಿಷ್ಯನ ಮುಕ್ತಿ ಮಾರ್ಗಕ್ಕೆ ಕರೆದೊಯ್ಯುವ ಗುರು ತನ್ನ ವೈಭೋಗ ಜೀವನಕ್ಕೆ ವೈಭವಕ್ಕೆ ಆಡಂಬರಕ್ಕೆ ಒಳಗಾದಾಗ ಅದರಿಂದ ಶಿಷ್ಯನಿಗೆ ನರಕ ಪ್ರಾಪ್ತಿ ಆದ ಹಾಗೆ.ಅನುಭವವಾಗುತ್ತದೆ.
ಲಿಂಗ ಭಜನೆಗೆ ಸಿಕ್ಕಿದಾಗಲೇ ಮರಣಕ್ಕೊಳಗು – ಲಿಂಗವು ಬಾಹ್ಯವಾಗಿ ಪೂಜೆಗೊಳಪಟ್ಟಾಗ ಅಥವಾ ಭಜನೆ ಕೀರ್ತನೆಗೆ ಸಿಲುಕಿಕೊಂಡಾಗ
ಜಂಗಮ ಜಂಗುಳಿಯಾಗಿ ಕಂಡ ಕಂಡವರ ಅಂಗಳಕ್ಕೆ ಜಂಘೆಯನಿಕ್ಕಲಾಗಿ.ನಿರಂಗಕ್ಕೆ ಹೊರಗು.- ಸಮಾಜ ಸೇವೆ ಮಾಡಬೇಕಾದ ವ್ಯಕ್ತಿಗಳು ಜನ ಜಂಗುಳಿಯಾಗಿ ಭಕ್ತರ ಅಂಗಳಕ್ಕೆ ಕಾಲಿಗೆ ಜಂಘೆ ಅಂದರೆ ಗೆಜ್ಜೆ ತರ ಒಂದು ಕಾಲಿಗೆ ಕಟ್ಟಿಕೊಳ್ಳುವ ಸಾಧನ. ಅಂದರೆ ಜಂಘೆ ಕಟ್ಟಿ ಕೊಂಡು ಭಿಕ್ಷೆ ಬೇಡುತ್ತಾ ನಡೆದಾಡುವ ಅಂಗಳದಿಂದ ಅಂಗಳಕ್ಕೆ ಅಲೆಯುವ ಜನರಿಂದ ಲಿಂಗ ತತ್ವವನ್ನು ಅರಿಯಲು ಸಾಧ್ಯವಿಲ್ಲ, ಅಂತವರು ಯಾರ ಹಂಗು ಇಲ್ಲದೆ ಸಾಧನೆ ಮಾಡಲಾಗದು.
ಇಂತಿ ಇವರು ನಿಂದುದುದಕೆ ಬಂಧನವಿಲ್ಲದಿರಬೇಕು.ಈಶಾನ್ಯ ಮೂರ್ತಿ ಲಿಂಗವನರಿದುವುದಕೆ- ಹೀಗೆ ಗುರು ಲಿಂಗ ಜಂಗಮ ವ್ಯವಸ್ಥೆಗಳು ಮುಕ್ತವಾಗಿ ಕಾರ್ಯ ಮಾಡಬೇಕಾದರೆ ಯಾವುದೇ ಪೂರ್ವ ಷರತ್ತಿನಲ್ಲಿ ಬಂಧನಗೊಳ್ಳ ಬಾರದು.ಹಾಗೇನಾದರು ಬಂಧನಗೊಂಡಲ್ಲಿ ಲಿಂಗವನರಿದುವುದಕೆ ಸಮಷ್ಟಿಯನ್ನು ಅರಿಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಜನನ ಮರಣ ದೇಹ ಧರ್ಮವಲ್ಲದೆ ಜಂಗಮಕ್ಕೆಲ್ಲಿಯದೋ !
ಕ್ಷುದಾ ತೃಷೆ ಪ್ರಾಣ ಧರ್ಮವಲ್ಲದೆ ಜಂಗಮಕ್ಕೆಲ್ಲಿಯದೋ !
ಸುಖ ದುಃಖ ಮನೋಧರ್ಮವಲ್ಲದೆ ಜಂಗಮಕ್ಕೆಲ್ಲಿಯದೋ !
ಜ್ಞಾನ ಅಜ್ಞಾನಂಗಳು ಮುಮುಕ್ಷುವಿಗಲ್ಲದೆ ನಿಮ್ಮಲ್ಲಿ ಸಮರಸನಾದ
ಸಚ್ಚಿದಾನಂದ ಶಿವಯೋಗಿ ಜಂಗಮಕ್ಕೆಲ್ಲಿಯದೋ !
ಕಪಿಲಸಿದ್ದ ಮಲ್ಲಿಕಾರ್ಜುನ .
–ಶಿವಯೋಗಿ ಸಿದ್ಧರಾಮೇಶ್ವರ ಶರಣರು .
ಜನನ ಮರಣ ದೇಹ ಧರ್ಮಗಳು ; ಜಂಗಮನು ಇವಕ್ಕೆ ಅತೀತನಾಗಿ ಇರುವನು. ಹಸಿವು ನೀರಡಿಕೆ ಪ್ರಾಣನ ಧರ್ಮಗಳು ; ಜ್ಞಾನ ಅಜ್ಞಾನಗಳು ಇನ್ನೂ ಸಾಧಕಾವಸ್ಥೆ ಯಲ್ಲಿರುವವನ ಲಕ್ಷಣಗಳು ನಿಜಜ್ಞಾನಿಯೂ ಸಿದ್ಧಪುರುಷನೂ ಆದ ಜಂಗಮನಿಗೆ ದೇಹ, ಪ್ರಾಣ, ಮನೋಧರ್ಮಗಳು ಕಾಡವು. ಸುಖ ದುಃಖ ಇದು ಮನಸ್ಥಿತಿ ಮಾತ್ರ ಅದು ಜಂಗಮ ಸ್ಥಿತಿಗೆ ಸಂಬಂಧವಿರದ ಗುಣವು. ಅದೇ ರೀತಿ ಜ್ಞಾನ ಅಜ್ಞಾನ ಮುಮುಕ್ಷಗುಲ್ಲದೆ ಸಮರಸ ಭಾವ ಹೊಂದುವ ಚೈತನ್ಯ ಜಂಗಮ ಸ್ಥಿತಿಗೆ ಬಾರದ ಭಾವವು.
ಹಸಿವು ಬಯಕೆ ಆಶೆ ಆಮಿಷಕ್ಕೆ ಶರಣ ಒಳಗಾಗದೆ ಸೃಷ್ಟಿಯ ಜೈವಿಕ ಚಲನಶೀಲತೆ ಉಳಿಸಿಕೊಂಡು ಆಧ್ಯಾತ್ಮಿಕ ಪಥಕ್ಕೆ ಸದ್ಬುದ್ಧಿ ಸದ್ವಿಚಾರ ಸದ್ಗುಣಗಳನ್ನು ಸಚ್ಚಿದಾನಂದ ಶಿವಯೋಗಿಗೆ ಐಹಿಕ ಜಗದ ಜನನ ಮರಣ ಕ್ಷುದ್ರ ತೃಷೆ ಪ್ರಾಣ ಸುಖ ದುಃಖ ಜ್ಞಾನ ಅಜ್ಞಾನ ಮುಂತಾದ ಪ್ರಾಪಂಚಿಕ ಆಗು ಹೋಗುಗಳನ್ನು ಮೀರಿದ ಜಂಗಮ ತತ್ವ ಚೈತನ್ಯ.
ನಿರಾಕಾರವಾದ ಬಯಲನ್ನು ಸಾಕಾರಗೊಳಿಸುವುದೊಂದು ಸಾಧನೆ. ಸಾಕಾರವನ್ನು ಬಳಸಿ ನಿರಾಕಾರಕ್ಕೆ ಹೋಗುವುದು ಮತ್ತೊಂದು ಸಾಧನೆ. ಇದನ್ನರಿತವನೇ ನಿಜ ಶರಣ, ನಿಜ ಲಿಂಗಾನುಭಾವಿ. ಇಂತಹ ಲಿಂಗಾನುಭವೈ ಜಂಗಮನು ಸಮಾಜದ ಪ್ರತೀಕ . ಸರ್ವ ಸಂಗ ಪರಿತ್ಯಾಗಿಗಳಾಗಿ ಜ್ಞಾನ ವಿರಕ್ತ ಮಾರ್ಗದಲ್ಲಿ ಶರಣ ತತ್ವಗಳನ್ನು ಶಿವಾಧಿಕವಾಗಿ ನುಡಿವ ಜಂಗಮರು ಬಸವಣ್ಣನವರಿಗೆ ದೇಹದಲ್ಲಿನ ಶ್ವಾಸ ಉಸಿರು..
ತಿರುಕರೆನ್ನದಿರಿ ಭೋ ಎನ್ನ ತಂದೆಗಳನ್ನು
ತಿರುಕರೆನ್ನದಿರಿ ಭೋ ಎನ್ನ ಬಂಧುಗಳನ್ನು
ತಿರುಕರೆನ್ನದಿರಿ ಭೋ ಎನ್ನ ದೇವರನು
ತಿರುಕರೆನ್ನದಿರಿ ಭೋ ಎನ್ನ ಒಡೆಯರನು
ದೇಹಿ ಎಂದಡೆ ನಾಸ್ತಿ ಎಂಬುದರ ಬೇಹು
ನೋಡಬಂದ ಕಾಣಾ, ಕೂಡಲ ಸಂಗಮದೇವಾ.
ಹೀಗೆ ಜ್ಞಾನ ತತ್ವಗಳನ್ನು ಅರಿತು ಲಿಂಗತತ್ವಗಳನ್ನು ಜನರಿಗೆ ತಿಳಿಸುವ ಸಂಚಾರಿ ಜಂಗಮರಿಗೆ ಅಪಮಾನ ಮಾಡಬೇಡಿ ಎಂದು ಬಿನ್ನಯಿಸುತ್ತಾರೆ ಬಸವಣ್ಣನವರು.
ದೇಹಿ ಎಂದಡೆ ನಾಸ್ತಿ ಎಂಬುದರ ಬೇಹು ನೋಡಬಂದ ಕಾಣಾ, ಕೂಡಲ ಸಂಗಮದೇವಾ. ದೇಹವು ನಾಸ್ತಿ ಹೊಂದುವುದು ಆದರೆ ಅದರೊಳಗಿನ ಚೈತನ್ಯವನ್ನು ಬೇಹುಗಾರಿಕೆ ಮಾಡಲು ಬಂದ ಮನುಕುಲದ ಬೇಹುಗಾರರು .
ಶ್ರೀ ಗುರು ಶಿಷ್ಯನ ಭವಿಪೂರ್ವಾಶ್ರಯವ ಕಳೆದು
ಭಕ್ತನ ಮಾಡಿದ ಬಳಿಕ
ಆ ಭಕ್ತ ಹೋಗಿ ಕಂಗಮವಾಗಿ ಗುರುವಿನ ಮಠಕ್ಕೆ ಬಂದಡೆ
ಜಂಗಮವೆನ್ನ ಶಿಷ್ಯನೆಂದು
ಗುರುವಿನ ಮನದಲ್ಲಿ ಹೊಳೆದಡೆ ಪಂಚಮಹಾಪಾತಕ
ಕೂಡಲ ಚನ್ನ ಸಂಗಮದೇವ. ಚೆನ್ನ ಬಸವಣ್ಣ.
ಚೆನ್ನ ಬಸವಣ್ಣನವರು ಗುರು ಶಿಷ್ಯರ ನಿಜ ಸಂಬಂಧಗಳನ್ನು ಅರ್ಥೈಸಿದ್ದಾರೆ.ಶ್ರೀ ಗುರು ವಿವಿಧ ಜಾತಿಗಳಿಂದ ಬಂದ ಶಿಷ್ಯರ ಪೂರ್ವಾಶ್ರಯ ಕಳೆದು ಭಕ್ತನನ್ನಾಗಿ ಮಾಡುವನು. ಆ ಭಕ್ತನು ಆಚಾರ ಸಂಪನ್ನನಾಗಿ ಅರಿವು -ಅನುಭಾವಗಳಿಂದ ಜ್ಞಾನ ಜಂಗಮನಾಗುವನು.. ಶಿಷ್ಯನು ದೀಕ್ಷೆ ನೀಡಿದ ಗುರುವನ್ನು ಮೀರಿಸುವಂತಹನಾಗಬಹುದು; ಆಗ ಗುರು ‘ಇವನು ನನ್ನ ಶಿಷ್ಯ ತಾನೆ’ ಎಂಬ ಉದಾಸೀನತೆಯಿಂದಾಗಲಿ, ನನ್ನನ್ನು ಮೀರಿಸಿದನಲ್ಲಾ ಎಂಬ ಮತ್ಸರದಿದಾಗಲೀ ಕಾಣಬಾರದು. ಹಾಗೆ ಕಂಡರೆ ಅದು ಮಹಾಪಾಪ. ಅಲ್ಲಿ ಜ್ಞಾನವು ಜಂಗಮವಾಗಿ ಕಾಣುತ್ತದೆ.
ಜಂಗಮಕ್ಕೆ ಮಾತಾಪಿತರಿಲ್ಲ.
ಜಂಗಮಕ್ಕೆ ಜಾತಿ ಬಂಧುಗಳಿಲ್ಲ
ಜಂಗಮಕ್ಕೆ ನಾಮ ರೂಪುಗಳಿಲ್ಲ
ಜಂಗಮಕ್ಕೆ ಸೀಮೆ ಸಂಗಗಳಿಲ್ಲ
ಜಂಗಮಕ್ಕೆ ಕುಲಗೋತ್ರಗಳಿಲ್ಲ
ಜಂಗಮಕ್ಕೆ ಮಲಮಾಯೆಗಳಿಲ್ಲ
ನೋಡಾ ಅಖಂಡೇಶ್ವರಾ.
ಜಂಗಮ ತತ್ವವನ್ನು ಸುಂದರವಾಗಿ ಮುಂದುವರೆಸಿದ 17 ನೇ ಶತಮಾನದ ಜೇವರ್ಗಿಯ ಷಣ್ಮುಖ ಶಿವಯೋಗಿಗಳು. ಜಂಗಮ ಒಂದು ಚಲನ ಶೀಲ ನಿಲುವು ತತ್ವವು. ಇಂತಹ ನಿಲುವು ಯಾವುದೇ ಅದು ಜ್ಞಾನ ಅರಿವಿನ ಪ್ರತೀಕ ಯಾವುದೇ ಕುಲದಲ್ಲಿರಲಿ ಅಥವಾ ಜಾತಿಯಲ್ಲಿರಲಿ ಅದಕ್ಕೆ ಯಾವುದೇ ಬಂಧನವಿರುವದಿಲ್ಲ.ಮಾತಾ ಪಿತ,ಜಾತಿ ಬಂಧು ,ನಾಮ ರೂಪ,ಸೀಮೆ ಸಂಗಮ ,ಕುಲ ಗೋತ್ರ,ಮಲ ಮಾಯೆ ಮೀರಿದ ಉನ್ನತ ಭಾವವೆಂದಿದ್ದಾರೆ.
ಮುಂದುವರೆದ ಷಣ್ಮುಖ ಶಿವಯೋಗಿಗಳು ಸ್ಥಾವರ ಜಂಗಮ ಒಂದೇ ಎನ್ನುವ ಮೂಡ ಜನರಿಗೆ ಚಾಟಿ ಏಟು ಬೀಸಿದ್ದಾರೆ.
ಸ್ಥಾವರವು ಜಂಗಮವು ಒಂದೆ ಎಂಬಿರಿ
ಮಂದಮತಿ ಮಾನವರಿರಾ ನೀವು ಕೇಳಿರೋ,
ಸ್ಥಾವರವು ಅಚೇತನವು. ಜಂಗಮವು ಚೇತನ ಸ್ವರೂಪವು.
ಎಂದು ಮಾಡಿದ ಭಕ್ತಂಗೊಲಿದು ನೀಡಿದ ಪದಾರ್ಥವ ಕೈಕೊಂಡು
ಮುಕ್ತಿಯ ಕೊಡುವ ಮಹಾಘನ ಜಂಗಮವೆ ಅಧಿಕವೆಂದರಿಯದೆ
ಬರಿದೆ ಸ್ಥಾವರ ಘನವೆಂಬ ಬಿನುಗು ಜೀವನನೇನೆಂಬೆನಯ್ಯ ಅಖಂಡೇಶ್ವರಾ.
ಸ್ಥಾವರ ದೇವರ ಮುಂದೆ ಕೆಲ ಪದಾರ್ಥಗಳನ್ನು ನೀಡಿ ಸ್ಥಾವರ ಕಲ್ಲು ದೇವರು ಭಕ್ತಿ ಬಯಸಿ ಬಯಸಿದ ಸಾಧಕನಿಗೆ ಮುಕ್ತಿ ಸಿಗುವುದೆಂದು ಸುಳ್ಳು ಹೇಳುವ ಪುರೋಹಿತರಿಗೆ ಏನು ಹೇಳೋದು ಸ್ಥಾವರಬವನ್ನೇ ಘನವೆನ್ನುವ ಮೂಢರು ಜೀವನವು ಅಸಹ್ಯಕರವಾಗಿದೆ ಎಂದು ಷಣ್ಮುಖ ಶಿವಯೋಗಿಗಳು ವ್ಯಂಗ್ಯವಾಡಿದ್ದಾರೆ.
ಸ್ಥಾವರ ಜಂಗಮ ತತ್ವವನ್ನು ಅಪ್ಪ ಬಸವಣ್ಣ ಅತ್ಯಂತ ಕಟುವಾಗಿ ವಿಂಗಡಿಸಿದ್ದಾನೆ.
ಉಳ್ಳವರು ಶಿವಾಲಯವ ಮಾಡುವರು
ನಾನೇನು ಮಾಡಲಿ ಬಡವನಯ್ಯ.
ಎನ್ನ ಕಾಲೇ ಕಂಬ ದೇಹವೇ ದೇಗುಲ.
ಶಿರವೇ ಹೊನ್ನ ಕಳಶವಯ್ಯ.
ಕೂಡಲ ಸಂಗಮ ದೇವಾ ನೀ ಕೇಳಯ್ಯ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ.
ಇಲ್ಲಿ ಕಲ್ಲು ಮಣ್ಣಿನಿಂದ ಮಾಡಿದ ದೇಗುಲಗಳು ನಶಿಸಿ ಹೋಗ್ತ್ತವೆ ಆದರೆ ದೇಹದೊಳಗಿನ ಆತ್ಮ ಜಂಗಮ ನಿಲುವು ಅರಿವಿಗೆ ಅಳಿವಿಲ್ಲ ಎಂದು ಸ್ಪಷ್ಟವಾಗಿ ತಮ್ಮ ನಿಲುವನ್ನು ಹೇಳುತ್ತಾ ಒಂದು ಹಂತಕ್ಕೆ ಶರೀರವು ಬಿದ್ದು ಹೋಗುತ್ತದೆ ಆದರೆ ಬದುಕಿದ ಚೈತನ್ಯ ಸತ್ವಯುತ ನಿಲುವು ಅಜರಾಮರವಾಗಿದೆ.
ಜಂಗಮ ತತ್ವವು ಜಗತ್ತಿಗೆ ಶರಣರು ನೀಡಿದ ಸಮತಾ ತತ್ವವಾಗಿ ಎಲ್ಲ ಹಂತದಲ್ಲೂ ಜೈವಿಕ ಚಲನ ಶೀಲತೆ ಕಾಣುವ ಸುಂದರ ಹಂದರವಾಗಿದೆ.
–ಡಾ .ಶಶಿಕಾಂತ.ಪಟ್ಟಣ.ಪೂನಾ