ನಾವು-ನಮ್ಮವರು
ಸ್ವತಂತ್ರ ಭಾರತದ ರಾಜಕೀಯ ಇತಿಹಾಸದಲ್ಲಿ ಶ್ರೀ ಬಸಪ್ಪ ದಾನಪ್ಪ ಜತ್ತಿಯವರ ಹೆಸರು ಅಜರಾಮರ. ಬ್ರಿಟೀಷ್ ಕಾಲದ ಜಮಖಂಡಿ ರಾಜ್ಯದ ಮತ್ತು ಈಗಿನ ಬಾಗಲಕೋಟೆ ಜಿಲ್ಲೆಯ ಸಾವಳಗಿಯವರು ಶ್ರೀ ಬಸಪ್ಪ ದಾನಪ್ಪ ಜತ್ತಿಯವರು. ಭಾರತದ 5 ನೇ ಉಪರಾಷ್ಟ್ರಪತಿಯಾಗಿ, ಪ್ರಭಾರಿ ರಾಷ್ಟ್ರಪತಿಯಾಗಿ ಬೆಳೆದು ನಿಂತದ್ದು ಅಭೂತಪೂರ್ವ ಸಾಧನೆ. ಸರಳಾತಿ ಸರಳ ಮತ್ತು ಶಿಸ್ತಿನ ಸಾರ್ವಜನಿಕ ಜೀವನ ನಡೆಸಿದ ಶ್ರೀ ಜತ್ತಿಯವರು ಸಾಮಾಜಿಕ ಸಮಾನತೆ, ಮಹಿಳೆಯರ ಸಬಲೀಕರಣಕ್ಕೆ ಶ್ರಮವಹಿಸಿದ ಪ್ರಭುದ್ದ ಮತ್ತು ಮುತ್ಸದ್ದಿ ರಾಜಕಾರಣಿಗಳು. 12 ನೇ ಶತಮಾನದ ಬಸವಾದಿ ಶರಣರ ವಿಚಾರ ಧಾರೆಗಳಿಂದ ಪ್ರಭಾವಿತರಾಗಿದ್ದ ಶ್ರೀ ಜತ್ತಿಯವರು ಶರಣರ ಉನ್ನತ ವಿಚಾರಗಳನ್ನು ವಿಶ್ವದಾದ್ಯಂತ ಪಸರಿಸುವದಕ್ಕಾಗಿ “ಬಸವ ಸಮಿತಿ” ಎನ್ನುವ ಸಂಸ್ಥೆಯನ್ನು ಹುಟ್ಟು ಹಾಕಿದರು. ಮನೆ ಹಾಗೂ ಮನದ ತುಂಬ ಶರಣ ಸಂಸ್ಕೃತಿ ಮತ್ತು ವಿಚಾರಗಳನ್ನು ತುಂಬಿಕೊಂಡಂಥ ಶ್ರೀ ಜತ್ತಿಯವರ ಧರ್ಮಪತ್ನಿ ಬಾಬಾನಗರದವರಾದ ಶ್ರೀಮತಿ ಸಂಗಮ್ಮನವರು. ಇಂಥ ಶರಣ ಸಂಸ್ಕೃತಿಯ ವಾತವರಣದಲ್ಲಿ ಹುಟ್ಟಿ ಬೆಳೆದಂಥಾ ಸುಸಂಸ್ಕೃತ ದಂಪತಿಗಳ ಹಿರಿಯ ಸುಪುತ್ರಿ ಡಾ. ವಿಲಾಸವತಿ ಖೂಬಾ ಅವರು.
20.09.1942 ರಲ್ಲಿ ಅವರ ತಾಯಿಯವರ ಊರಾದ ಬಾಬಾನಗರದಲ್ಲಿ ಜನಿಸಿದ ಡಾ. ವಿಲಾಸವತಿ ಖೂಬಾ ಅವರು ಪ್ರಾಥಮಿಕ ಶಿಕ್ಷಣವನ್ನು ಸಾವಳಗಿಯಲ್ಲಿ ಪೂರೈಸಿದರು. ಬೆಂಗಳೂರು ವಿಶ್ವ ವಿದ್ಯಾಲಯದಿಂದ ಪದವಿಯನ್ನು ಪಡೆದರು. 2015 ರಲ್ಲಿ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ “ಕರ್ನಾಟಕ ರಾಜ್ಯ ಮಹಿಳಾ ವಿಶ್ವ ವಿದ್ಯಾಲಯ – ವಿಜಯಪುರ” ಅವರು “ಗೌರವ ಡಾಕ್ಟರೇಟ್” ಪದವಿಯನ್ನು ನೀಡಿ ಗೌರವಿಸಲಾಗಿದೆ. ಮುಂದೆ ವೃತ್ತಿಯಲ್ಲಿ ಅತ್ಯಂತ ಯಶಸ್ವೀ ಕೈಗಾರಿಕೋದ್ಯಮಿ ಆಗಿರುವ ಶ್ರೀ ಸೋಮನಾಥಪ್ಪ ಖೂಬಾ ಅವರನ್ನು ಕೈ ಹಿಡಿದು ಬಂದದ್ದು ಕಲ್ಯಾಣ ಕರ್ನಾಟಕದ ಶರಣ ಸಂಸ್ಕೃತಿಯನ್ನೆ ಹೊತ್ತಿರುವಂಥ ನಗರ ಕಲಬುರ್ಗಿಗೆ. ಬಸವಾದಿ ಶರಣ ಸಂಸ್ಕೃತಿಯ ಪರಿಸರದ ಕುಟುಂಬದಲ್ಲಿ ಬೆಳೆದಂಥ ಡಾ. ವಿಲಾಸವತಿ ಖೂಬಾ ಅವರಿಗೆ ಕಲಬುರ್ಗಿಯೆಂಬ ನಗರ ಸಮಾಜ ಸೇವೆ ಮಾಡುವುದಕ್ಕೆ ಅತ್ಯಂತ ಸಹಕಾರಿಯಾಯಿತು ಎನ್ನುವುದು ಅವರ ಸಾಧನೆಗೆ ಪುಷ್ಠಿ ನೀಡುತ್ತದೆ. ಇವರಿಗೆ ಇಬ್ಬರು ಗಂಡು ಮಕ್ಕಳು, ಶ್ರೀ ಅಲ್ಲಮ ಪ್ರಭು ಮತ್ತು ಶ್ರೀ ರಾಜೇಂದ್ರ ಖೂಬಾ. ಓರ್ವ ಮಗಳು ಶ್ರೀಮತಿ ಮಹಾದೇವಿ ಪ್ರಸಾದ.
ಇಲ್ಲಿ ಡಾ. ಜಿ. ಎಸ್ ಶಿವರುದ್ರಪ್ಪ ಅವರು ಸಿದ್ಧಗಂಗಾ ಮಠದ ಲಿಂಗೈಕ್ಯ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಕುರಿತು ಬರೆದ ಪದ್ಯದ ಸಾಲುಗಳು ಇಲ್ಲಿ ನೆನಪಿಗೆ ಬರುತ್ತವೆ.
ಸದ್ದುಗದ್ದಲವಿಲ್ಲದೆ ಸಾಧನೆ | ಇಲ್ಲಿ ಗದ್ದುಗೆ ಏರಿದೆ ||
ಕಾಯಕವೇ ಕೈಲಾಸವೆನ್ನುವ | ಮಾತು ಕೃತಿಯೊಳು ಮೂಡಿದೆ ||
ಕಾವಿಯುಡುಗೆಯನುಟ್ಟು | ನಭವೇ ಕಿರಣ ಹಸ್ತವ ಚಾಚಿದೆ ||
ಎಲ್ಲ ನನ್ನವರೆನುವ ಭಾವದ | ಕರುಣೆಯೇ ಕಣ್ತೆರೆದಿದೆ ||
ಸುದ್ದಿ ಮಾಡುವದಕ್ಕಾಗಿಯೇ ಸಾಧನೆ ಮಾಡುವ ಜನರಿರುವ ಈ ಸಂಕ್ರಮಣ ಕಾಲದಲ್ಲಿ, ಸದ್ದುಗದ್ದಲವಿಲ್ಲದೇ ಸಾಧನೆ ಮಾಡಿದ ತಾಯಿ ಡಾ. ವಿಲಾಸವತಿ ಖೂಬಾ ಅವರು ಎಲ್ಲರಿಗೂ ಮಾದರಿ ಆಗಿದ್ದಾರೆ.
ಅವರ ಸಾಧನೆಗಳನ್ನು ಪಟ್ಟಿ ಮಾಡತಾ ಹೋದರೆ ಇಲ್ಲಿ ಜಾಗ ಸಾಲದು ಅನಿಸುತ್ತೆ. ಏಲ್ಲರಿಗೂ “ಅವ್ವ” ಎಂಬ ಭಾವನೆಯಿರುವ, ಎಲ್ಲ ನನ್ನವರೆನ್ನುವ ಭಾವನೆ ಮತ್ತು ಕರುಣಾಮೂರ್ತಿಯೆ ಅಗಿದ್ದಾರೆ ಎನ್ನುವುದು ಹತ್ತಿರದಿಂದ ಬಲ್ಲವರ ಅನುಭವ.
ಕಲಬುರ್ಗಿಯಲ್ಲಿ 2002 ರಲ್ಲಿ ಆರಂಭವಾದ ಬಸವ ಸಮಿತಿ ಶಾಖೆಯ ಪ್ರಥಮ ಅಧ್ಯಕ್ಷೆಯಾಗಿ ನಿಯುಕ್ತಿಗೊಳ್ಳುವುದರ ಮೂಲಕ ಸಾರ್ವಜನಿಕ ಕ್ಷೇತ್ರಕ್ಕೆ ಕಾಲಿಟ್ಟರು. ತಂದೆ ಶ್ರೀ. ಬಿ.ಡಿ.ಜತ್ತಿ ಅವರಿಂದ ಬಳುವಳಿಯಾಗಿ ಬಂದಿರುವ ನಾಯಕತ್ವಗಳ ಗುಣ ಮತ್ತು ತಾಯಿಯ ಸಂಸ್ಕಾರ ಡಾ. ವಿಲಾಸವತಿ ಖೂಬಾ ಅವರು ಬಸವಾದಿ ಶರಣರ ಸಂಸ್ಕೃತಿ ಬೆಳೆಸಲು ಮತ್ತು ಸಮಾಜಮುಖಿ ಚಿಂತಕಿಯಾಗಲು ಪ್ರೇರಣೆ ನೀಡಿದವು. ಡಾ. ವಿಲಾಸವತಿ ಖೂಬಾ ಅವರು ಬಸವಾದಿ ಶಿವಶರಣರ ತತ್ವಗಳ ಪ್ರಸಾರ ಮತ್ತು ಪ್ರಚಾರವನ್ನು ಕಳೆದ ಹತ್ತಾರು ವರ್ಷಗಳಿಂದ ನಿರಂತರವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶಿವಶರಣರ ತತ್ವಗಳ ಪ್ರಸಾರಕ್ಕೆ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟಿರುವ ಅಪರೂಪದ ಶಿವಶರಣೆ ಡಾ. ವಿಲಾಸವತಿ ಖೂಬಾ ಅವರು.
ಐದು ಕೋಟಿ ರುಪಾಯಿ ವೆಚ್ಚದಲ್ಲಿ ಕಲಬುರ್ಗಿಯಲ್ಲಿ “ಅನುಭವ ಮಂಟಪ” ಮತ್ತು “ಡಾ. ಬಿ. ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರ” ವನ್ನು ಸ್ಥಾಪಿಸಿ ನಿರಂತರ ವಚನ ಅಧ್ಯಯನ ಮತ್ತು ಸಂಶೋಧನೆಗೆ ಅದ್ಭುತ ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದಾರೆ.
ಮಹಿಳಾ ಸಮಾನತೆಯನ್ನು ಪ್ರಮುಖವಾಗಿ ಪರಿಗಣಿಸಿದ್ದ 12 ನೇ ಶತಮಾನದ ಶರಣರ ಆಶಯವನ್ನು ಮತ್ತೇ ಪುನರುಜ್ಜೀವನಗೊಳಿಸುವತ್ತ ಹೆಜ್ಜೆಯಿಟ್ಟವರು ಡಾ. ವಿಲಾಸವತಿ ಖೂಬಾ ಅವರು. ಮಹಿಳಾ ಲೇಖಕಿಯರನ್ನುರನ್ನು ಪ್ರೋತ್ಸಾಹಿಸುವ ಸಂಸ್ಥೆಯಾದ All India Poetess Conference ನ ಸದಸ್ಯರಾಗಿರುವ ಅವ್ವ ಡಾ. ವಿಲಾಸವತಿ ಖೂಬಾ ಅವರು ಮಹಿಳೆಯರಲ್ಲಿರುವ ಸೃಜನಾತ್ಮಕ ಬರವಣಿಗೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಶರಣ ಸಾಹಿತ್ಯ ಸಮ್ಮೇಳನಗಳನ್ನು ನಡೆಸುವ ಮೂಲಕ ವಚನ ಸಾಹಿತ್ಯವನ್ನು ಜನರಿಗೆ ಹಂಚುವ ಅವರ ಪ್ರಯತ್ನ ನಿರಂತರ ಸಾಗಿದೆ. ಮಹಿಳಾ ಸಬಲೀಕರಣಕ್ಕಾಗಿ ಅವರು ಮಾಡಿದ ಸೇವೆ ಅನುಪಮ.
ಉಪನ್ಯಾಸ ಕಾರ್ಯಕ್ರಮ, ಪುಸ್ತಕ ಪ್ರಕಟಣೆಯ ಜೊತೆಗೆ ಪ್ರತೀ ವರ್ಷ ಮಾಹಾದೇವಿ ಅಕ್ಕನ ಹೆಸರಿನಲ್ಲಿ ಸಮ್ಮೇಳನವನ್ನು ಏರ್ಪಾಡು ಮಾಡಿ ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಅಪಾರ ಶ್ರಮವಹಿಸಿದ್ದಾರೆ. ಹೆಣ್ಣುಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸೇವೆ ಸಲ್ಲಿಸಿ ಸ್ತುತ್ಯಾರ್ಹವಾದ ಕಾರ್ಯ ಮಾಡಿ ಹಿಂದುಳಿದ ಭಾಗದ ಮಹಿಳೆಯರಿಗೆ ನ್ಯಾಯ ಒದಗಿಸಿದ್ದಾರೆ.
ಡಾ. ವಿಲಾಸವತಿ ಖೂಬಾ ಅವರಿಗೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕು ಬಸವ ಬಳಗ ಟ್ರಸ್ಟ್ ನೀಡುವ 2015 ನೇ ಸಾಲಿನ ರಾಜ್ಯ ಮಟ್ಟದ “ಬಸವ ಭೂಷಣ ಪ್ರಶಸ್ತಿ” ನೀಡಿ ಗೌರವಿಸಲಾಗಿದೆ.
ದೇಶ ವಿದೇಶಗಳಲ್ಲಿ ಬಸವ ಚಿಂತನೆಗಳನ್ನು ಪ್ರಸಾರ ಮಾಡುವಲ್ಲಿ ಅವರ ಶ್ರಮ ಅಪಾರ ಮತ್ತು ಸಾಧನೆ ಮಾಡಿರುವವರನ್ನು ಗುರುತಿಸಿ ಸನ್ಮಾನ ಮಾಡುವುದರ ಮೂಲಕ ಅವರನ್ನು ಬೆಳಕಿಗೆ ತರುವಲ್ಲಿ ಶ್ರಮವಹಿಸುತ್ತಿದ್ದಾರೆ. ಬಸವಣ್ಣನವರ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲು ಅಮೇರಿಕಾಕ್ಕೆ ಸುಮಾರು 22 ಬಸವಣ್ಣನವರ ಮೂರ್ತಿಗಳನ್ನು ಕಳುಹಿಸಿ ಕೊಟ್ಟಿದ್ದಾರೆ.
ಇಂಥ ಸಾಧನೆಯ ಗೌರೀಶಂಕರವಾಗಿರುವ ಅವ್ವ ಡಾ. ವಿಲಾಸವತಿ ಖೂಬಾ.
ಲೇಖಕರು -ವಿಜಯಕುಮಾರ ಕಮ್ಮಾರ ತುಮಕೂರು