ಕಣವಿ ಸಂಕಲ್ಪ: ಗಡಿ ದಡಿ ಗಟ್ಟಿಗೊಳಿಸೋಣ-
ಪ್ರೇಮಕ್ಕ ಅಂಗಡಿ ಬೈಲಹೊಂಗಲ
e-ಸುದ್ದಿ ಬೈಲಹೊಂಗಲ
ದಡಿ ಗಟ್ಟಿಯಿದ್ದರೆ ಉಡುವ ವಸ್ತ್ರ ತಾಳುತ್ತದೆ. ಹಾಗೆ ಗಡಿನಾಡಿನ ಜಿಲ್ಲೆಗಳು ಕನ್ನಡಕ್ಕೆ ಗಟ್ಟಿಯಾಗಿ ನಿಲ್ಲಬೇಕೆಂಬುದು ಕಣವಿಯವರ ಕನವರಿಕೆಯಾಗಿತ್ತು. ಎಂದು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ತಾಲೂಕ ಘಟಕ ಬೈಲಹೊಂಗಲದ ಅಧ್ಯಕ್ಷ ಪ್ರೇಮಕ್ಕ ಅಂಗಡಿ ಹೇಳಿದರು. ಸ್ಥಳೀಯ ಪತ್ರಿ ಬಸವ ನಗರದ ಅನುಭವ ಮಂಟಪದಲ್ಲಿ ಪತ್ರಿ ಬಸವನಗರ ಅಭಿವೃದ್ಧಿ ಸಂಘ ಹಾಗೂ ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆ ಹಮ್ಮಿಕೊಂಡಿದ್ದ ಕಣವಿ ಕವನ ನಮನ ಶ್ರದ್ಧಾಂಜಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರಳ ಸಜ್ಜನಿಕೆಗೆ ಹೆಸರಾದ ಕಣವಿಯವರು ಸೃಷ್ಟಿಯ ಸೌಂದರ್ಯದಲ್ಲಿ ಮಾನವೀಯ ಮೌಲ್ಯಗಳನ್ನು ಕಟ್ಟಿಕೊಡುವ ಕವನ ಕಥೆ ಪ್ರಬಂಧ ರಚಿಸಿ ಕನ್ನಡ ನಾಡನ್ನು ಶ್ರೀಮಂತಗೊಳಿಸಿದರು ವಚನ ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿ ವಹಿಸಿದ ಅವರು ಬರೆದ ಸದುವಿನಯದ ತುಂಬಿದ ಕೊಡ ತಂದಳು ನೀಲಾಂಬಿಕೆ….. ಎಂಬ ಕವನ ಹಲವಾರು ವೇದಿಕೆಗಳಲ್ಲಿ ಸಂಗೀತಗಾರರು ಹಾಡಿ ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಗೌರಾದೇವಿ ತಾಳಿಕೋಟಿ ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ಶರಣರ ವಾಣಿಯಂತೆ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಅವರ ಬದುಕು ಬರಹ ಒಂದೆ ಆಗಿತ್ತು ಅವರ ಹಲವಾರು ಕವನ ಸಂಕಲನ ಪ್ರಬಂಧಗಳು ಸಂಪಾದನಾ ಕೃತಿಗಳು ಸಾಹಿತ್ಯಕ್ಷೇತ್ರವನ್ನು ಶ್ರೀಮಂತಗೊಳಿಸಿವೆ ಅವರು ಬರೆದ ವಿಶ್ವ ವಿನೂತನ ವಿದ್ಯಾಚತನ ಹಾಡು ಕನ್ನಡಿಗರಲ್ಲಿ ಕನ್ನಡದ ಭಕ್ತಿಯ ಸಂಚಲನವನ್ನುಂಟು ಮಾಡುತ್ತದೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದರು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾ ಘಟಕದ ಕಾರ್ಯಕಾರಿ ಮಂಡಳಿಯ ಸದಸ್ಯ ಮಲ್ಲಿಕಾರ್ಜುನ ಕೋಳಿ ಮಾತನಾಡಿ ಕಣವಿಯವರಿಗೆ ಕವನಗಳ ಮೂಲಕ ನಮನ ಸಲ್ಲಿಸುತ್ತಿರುವುದು ಅವರ ಆತ್ಮಕ್ಕೆ ನಿಜವಾದ ಶಾಂತಿ ಸಲ್ಲಿದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕಾ ಘಟಕದ ಅಧ್ಯಕ್ಷ ಎಸ್ ಆರ್ ಠಕ್ಕಾಯಿಯವರು ಅವರ ಪ್ರತಿಯೊಂದು ಕವನ ಸಂಕಲನದ ಶಿರೋನಾಮೆಯ ಪ್ರಥಮ ಅಕ್ಷರ ಬಳಸಿ ಕವನ ರಚಿಸಿ ಸಭೆಯಲ್ಲಿ ಓದಿ ಅವರ ಸಾಹಿತ್ಯವನ್ನು ಪರಿಚಯಿಸಿದರು. ನಿವೃತ್ತ ಶಿಕ್ಷಕರಾದ ಜಿ ಬಿ ತುರಮರಿ ಕಣವಿ ಅವರ ಒಡನಾಟದ ಕ್ಷಣಗಳನ್ನು ಹಂಚಿಕೊಂಡರು
ಅಮಜವ್ವ ಭೋವಿ’ ಮಂಜುಳಾ ಶೆಟ್ಟರ್’ ರೂಪಾ ಕುಲಕರ್ಣಿ, ಲಕ್ಷ್ಮಿ ಮುಗಡಲಿಮಠ, ಅನ್ನಪೂರ್ಣ ಕನೋಜ್, ಕಲಾವತಿ ಕಡಕೋಳ, ಮಹಾಂತೇಶ ರಾಜಗೋಳಿ, ಗೌರಾದೇವಿ ತಾಳಿಕೋಟಿಮಠ, ಎಂ ಎಂ ಸಂಗಣ್ಣವರ ಗುರುಗಳು ಕವನ ವಾಚಿಸಿದರು.
ಸೋನಕ್ಕ ವಾಲಿ, ಶಿವಲೀಲಾ ಹುಲಿಕಟ್ಟಿ, ಗೀತಾ ಅರಳಿಕಟ್ಟಿ, ಪಾರ್ವತಿ ಕುಲಕರ್ಣಿ ಗಿರಿಜಾ ದೇವಲತ್ತಿ ಉಪಸ್ಥಿತರಿದ್ದರು. ಆಶುಕವಿ ಶಿವಪ್ರಸಾದ ಹುಲೆಪ್ಪನವರಮಠ ಕವಿಗೋಷ್ಠಿ ನಡೆಸಿಕೊಟ್ಟರು ರಾಜೇಶ್ವರಿ ದ್ಯಾಮನಗೌಡರ ಸ್ವಾಗತಿಸಿದರು. ಸುವರ್ಣ ಬಿಜಗುಪ್ಪಿ ವಂದಿಸಿದರು ಶಿಕ್ಷಕಿ ವಿದ್ಯಾ ನೀಲಪ್ಪ ನವರು ನಿರೂಪಿಸಿದರು.