ಉರಲಿಂಗಪೆದ್ದಿ ಪುಣ್ಯಸ್ತ್ರೀ ಕಾಳವ್ವೆ

ಉರಲಿಂಗಪೆದ್ದಿ ಪುಣ್ಯಸ್ತ್ರೀ ಕಾಳವ್ವೆ

ವಚನ ಸಾಹಿತ್ಯವು ತನ್ನ ಅನನ್ಯ ಸಾಮಾಜಿಕ ಕಳಕಳಿಯಿಂದಾಗಿ ವಿಶ್ವ ಸಾಹಿತ್ಯದಲ್ಲಿಯೇ ಪ್ರಮುಖ ವೆನಿಸಿರುವಂತಹದ್ದು.ಮನುಷ್ಯ ಕೇಂದ್ರಿತವಾದ ನೆಲೆಯಲ್ಲಿ ರಚಿತವಾಗಿರುವ ವಚನಗಳು ನಿಜವಾದ ಅರ್ಥದಲ್ಲಿ ಸರ್ವತೋಮುಖ ವಿಕಾಸನ ದತ್ತ ಗಮನವನ್ನು ಕೇಂದ್ರೀಕರಿಸಿವೆ. ಸಮಾಜದಲ್ಲಿ ಬದುಕುವ ಜೀವಿ ನಡೆ-ನುಡಿಯಲ್ಲಿ ಹೊಂದಬೇಕಾಗಿರುವ ಸತ್ಯವನ್ನು ಅಂತರಂಗದ ಪರಿಶುದ್ಧತೆಯನ್ನು ವಚನಕಾರರು ಮತ್ತೆ ಮತ್ತೆ ಬಲವಾಗಿ ಪ್ರತಿಪಾದಿಸಿದ್ದಾರೆ. ಸತ್ಯ ಮುಖಿಯಾಗಿರುವ ಮತ್ತು ಡಾಂಭಿಕತೆ ಸರಳ ಅಧ್ಯಾತ್ಮದ ಪ್ರತಿಪಾದನೆ ಮನುಷ್ಯನಲ್ಲಿ ಮನುಷ್ಯತ್ವವನ್ನು ಬೆಳೆಸುವ ಕಳಕಳಿ ವಚನಕಾರರಲ್ಲಿ ಗಾಢವಾಗಿ ಇರುವುದನ್ನು ಗಮನಿಸಿದರೆ ವಚನಗಳು ಸಾರ್ವಕಾಲಿಕವಾದ ಮಾನವೀಯ ಮೌಲ್ಯಗಳನ್ನು ಮನಗಾಣಬಹುದಾಗಿದೆ.ವಚನ ಸಾಹಿತ್ಯ ಮೂಡಿಬಂದ ಕಾಲ ಬದಲಾವಣೆಯ ಕಾಲ ಎನ್ನುವುದಕ್ಕಿಂತ ಪರಿವರ್ತನೆಯ ಕಾಲ ಎನ್ನಬಹುದು.
ಅಂದಿನ ಸಾಮಾಜಿಕ ನ್ಯಾಯಕ್ಕಾಗಿ ಪ್ರತಿಭಟನೆಯು ಸ್ತ್ರೀಯರ ವಚನಗಳಲ್ಲಿ ಕಂಡುಬರುತ್ತದೆ. ಹೆಣ್ಣಿನ ವ್ಯಕ್ತಿತ್ವಕ್ಕೆ ಘನತೆ ತಂದು ವೈದಿಕ ಆಶಯಗಳನ್ನು ನಿರಾಕರಿಸಿದ್ದು ಮಾಯೆ ಕುರಿತು ವ್ಯಾಖ್ಯಾನ ಮಾಡಿದ್ದು ಅಕ್ಕನ ವಿಶೇಷ .ತನ್ನ ಚಿಂತನೆಗಳ ಮೂಲಕ ಧರ್ಮ ಲಿಂಗ ಆಚಾರ ವ್ಯವಸ್ಥೆ ಮೀರಿನಿಂತ ಅಮುಗೇರಾಯಮ್ಮ ವ್ರತಾಚರಣೆಯಲ್ಲಿನ ದೋಷ ಖಂಡಿಸುವ ಅಕ್ಕಮ್ಮ ಪ್ರೀತಿಸಿ ಆತ್ಮವಿಶ್ವಾಸ ಪ್ರಾಮಾಣಿಕತೆ ಮೆರೆಸಿದ ಸತ್ಯಕ್ಕ ವೈದಿಕರ ಆಚರಣೆಗಳನ್ನು ಖಂಡಿಸಿದ ಕಾಲವ್ವೆ. ಅರಿಷಡ್ವರ್ಗಗಳನ್ನುಗೆದ್ದು ಶರಣತ್ವಪಡೆವ ಬಗೆಯನ್ನು ಹೇಳಿದ ಲಿಂಗಮ್ಮ. ಮಡಿಯುಟ್ಟು ಮೈಲಿಗೆ ಮುಂತಾದ ವಿಷಯಗಳನ್ನು ದೂರವಿಟ್ಟು ತಾತ್ವಿಕ ನೆಲೆಯ ಮೂಲಕ ಹೆಣ್ಣಿನ ಅಸ್ತಿತ್ವವನ್ನು ಪ್ರಕಟಿಸಿದ ಬಸವಣ್ಣನ ಪತ್ನಿ ನೀಲಾಂಬಿಕೆ. ವೈಚಾರಿಕ ಬೌದ್ಧಿಕ ಸಂವಾದದ ಅನುಭಾವ ಜ್ಞಾನ ತಾತ್ವಿಕ ವಚನಗಳ ಮುಕ್ತಾಯಕ್ಕ ಇವರೆಲ್ಲ ವೈಚಾರಿಕ ಪ್ರಜ್ಞೆ ಹೊಂದಿದ ವಚನಕಾರ್ತಿಯರು. ಸಮಾನತೆ ಸೋದರತೆ ಆವರಣದಲ್ಲಿ ಪ್ರಶ್ನಿಸುವ ಮನೋಭಾವ ಚಿಂತನೆಗಳಿಂದ ಕೂಡಿದ ವಚನಗಳು ವಚನಕಾರ್ತಿಯರ ಅಂದಿನ
ಮೌ ಲ್ಯಗಳನ್ನು ಪ್ರತಿಪಾದಿಸುತ್ತದೆ.ಸ್ತ್ರೀ ವಚನಕಾರರು ತಮ್ಮನ್ನು ತಾವು ಮೊದಲು ಗುರುತಿಸಿಕೊಂಡರು ಇದು ಅವರು ಮಾಡಿದ ಮೊದಲ ಕ್ರಾಂತಿ.
ಸದ್ಯ ನಮಗೆ ದೊರೆಯುವ ವಚನಕಾರ್ತಿಯರ ಸಂಖ್ಯೆ 51 ಅವರೆಂದರೆ
1ಅಕ್ಕಮಹಾದೇವಿ 2ಅಕ್ಕನಾಗಲಾಂಬಿಕೆ ಶರಣೆ 3ಲಾವಣ್ಯವತಿ
4 ಆಯ್ದಕ್ಕಿ ಲಕ್ಕಮ್ಮ
5ಶರಣೆ ಸತ್ಯಕ್ಕ
6 ನೀಲಾಂಬಿಕೆ
7 ಧೀರ ಶರಣೆ ಕಲ್ಯಾಣಮ್ಮ 8ಕೇತಲದೇವಿ
9ಮುಕ್ತಾಯಕ್ಕ
10 ಶರಣೆ ಕಾಳವ್ವೆ
11ದಾಸಿಮಯ್ಯ ಗಳ ಸತಿ ದುಗ್ಗಳೆ 12ಶರಣ ಪ್ರೇಮಿ ಸುಗ್ಗ ಲವ್ವ
13ಕದಿರ ಕಾಯಕದ ಶರಣೆ ಕಾಳವ್ವೆ 14ಕನ್ನಡಿಕಾಯಕದ ಶರಣೆ ರೇಮಮ್ಮ
15 ಕಾಲಕಣ್ಣಿಯ ಕಾಯಕದ ತಾಯಮ್ಮ
16ಕೊಟ್ಟಣ ಕಾಯಕದ ಸೋಮಮ್ಮ
17ಪುಣ್ಯಸ್ತ್ರೀ ವೀರಮ್ಮ
18 ಬಾಚಿಕಾಯಕದ ಬಸವಯ್ಯಗಳ ಪುಣ್ಯಸ್ತ್ರೀ ಕಾಳವ್ವೆ
19 ಗುಡ್ಡಾಪುರದ ದಾನಮ್ಮ
20 ನಿಜ ಶಾಂತಿ ಅಮ್ಮ
21 ಅಮುಗಿ ದೇವ ರಾಯನಮ್ಮ 22 ಸಿದ್ದಬುದ್ದಯ್ಯಗಳ ಪುಣ್ಯಸ್ತ್ರೀ ಕಾಳವ್ವೆ
23 ಮಾರಯ್ಯಗಳ ಪುಣ್ಯಸ್ತ್ರೀ ಗಂಗಮ್ಮ
24 ನಿಜಶರಣ ಕಾಮ ಲಾಯಿ
25 ಕಾಶ್ಮೀರದ ರಾಜಪುತ್ರಿ
ಬೊಂತಾದೇವಿ
26ಸೂಳೆಸಂಕವ್ವೆ
27ಮಾಯಿ ದೇವಿ
28ಸಪ್ಪೆ ಎಲ್ಲಮ್ಮ ದೇವಿ
29 ಗಜೇಶ ಮಸಣಯ್ಯನ ಪುಣ್ಯಸ್ತ್ರೀ ಶರಣಮ್ಮ
30 ಶರಣೆ ಬೀಷ್ಮಾ ದೇವಿ 31ಗಂಗಾಂಬಿಕೆ
32ರಾಯಸದ ಮಂಚಣ್ಣ ಪುಣ್ಯಸ್ತ್ರೀ ರಾಯಮ್ಮ
33 ರೇವಣ್ಣ ಸಿದ್ದಯ್ಯ ಗಳ ಪುಣ್ಯಸ್ತ್ರೀ ರೇಕಮ್ಮ
34 ದಾಸಿಮಯ್ಯಗಳ ಸತಿ ದುಗ್ಗಳೆ
35 ಜ್ಞಾನನಿಧಿ ವೀರ ಸಂಗ ವ್ವೆ
36 ಲಿಂಗ ಪ್ರಾಣಿ ಕಮಳವ್ವೆ
37 ಸದಾಚಾರ ಸಂಪನ್ನೆ ಚೋಳಿಯಕ್ಕ
38 ಶರಣ ಪ್ರೇಮಿ ಸುಗ್ಗ ಲವ್ವ
39ಕನ್ನಡಿ ಕಾಯಕದ ಶರಣೆ ರೇಮಮ್ಮ
40 ಕಾಲಕಣ್ಣಿಯ ಕಾಯಕದ ತಾಯಮ್ಮ
41 ಕೊಟ್ಟಣ ಕಾಯಕದ ಸೋಮಮ್ಮ
42 ಉದಾರ ಹೃದಯಿ ಚಂಗಳೆ 43ವಚನಕಾರ್ತಿ ಅಕ್ಕಮ್ಮ
44ಭಕ್ತನಿಧಿ ಸೋಮವ್ವೆ
45 ಜಂಗಮ ದಾಸೋಹ
ನಿಂಬಿಯಕ್ಕ
46 ನಾಗಿನ ಪುಣ್ಯಸ್ತ್ರೀ ಮಸಣಮ್ಮ 47 ಕದಿರೆ ರೆಮ್ಮವ್ವೆ
48 ಕಾಟಕೂಟಯ್ಯಗಳಪುಣ್ಯಸ್ತ್ರೀ ರೇಚವ್ವೆ
49 ಕೊಂಡೆ ಮಂಚಣ್ಣಗಳ ಪುಣ್ಯಸ್ತ್ರೀ ಲಕ್ಕಮ್ಮ
50 ಶರಣೆ ಗೊಗ್ಗವ್ವೆ ಬತ್ತಲೇಶ್ವರ ಪುಣ್ಯಸ್ತ್ರೀ ಗುಡ್ಡವ್ವೆ ಹಾಗೂ
51 ಬತ್ತಲೇಶ್ವರಯ್ಯಗಳ ಪುಣ್ಯ ಸ್ತ್ರೀ ಗುಡ್ಡವ್ವೆ

ಪುಣ್ಯ ಸ್ತ್ರೀಯರು
ಪುಣ್ಯಸ್ತ್ರೀ ಎಂದರೆ ಸಾಧ್ವಿ, ಗರತಿ. ಪತಿವೃತೆ .ಒಳ್ಳೆಯ ಹೆಣ್ಣುಮಗಳು. 19 ಪುಣ್ಯ ಸ್ತ್ರೀಯರಲ್ಲಿ ನಮಗೆ 13ಮಂದಿ ಪುಣ್ಯ ಸ್ತ್ರೀಯರ ಹೆಸರುಗಳು ಸಿಗುತ್ತವೆ.
ಅವರೆಂದರೆ
1 )ದಸರಯ್ರಗಳ ಪುಣ್ಯ ಸ್ತ್ರೀ
ವೀರಮ್ಮ
2)ಬಾಚಿ ಕಾಯಕದ ಬಸವಯ್ಯಗಳ ಪುಣ್ಯಸ್ತ್ರೀ ಕಾಳವ್ವೆ
3 )ಎಡೆಮಠದ ನಾಗಿಮಯ್ಯಗಳ ಪುಣ್ಯಸ್ತ್ರೀ ಮಸಣಮ್ಮ 4)ಕಾಟಕೂಟಯ್ಯಗಳ ಪುಣ್ಯಸ್ತ್ರೀ ರೇಚವ್ವೆ
5)ಕೊಂಡೆಮಂಚಣ್ಣಗಳ ಪುಣ್ಯಸ್ತ್ರೀ ಲಕ್ಷ್ಮಮ್ಮ
6) ಬತ್ತಲೇಶ್ವರ ಯ್ಯಗಳ ಪುಣ್ಯ ಸ್ತ್ರೀ ಗುಡ್ಡವ್ವೆ
7) ರಾಯಸದ ಮಂಚಣ್ಣ ಗಳ ಪುಣ್ಯಸ್ತ್ರೀ ರಾಯಮ್ಮ
8)ರೇವಣ್ಣ -ಸಿದ್ದಯ್ಯಗಳ ಪುಣ್ಯಸ್ತ್ರೀ ರೇಕಮ್ಮ
9) ಸಿದ್ದಬುದ್ದಯ್ಯಗಳ ಪುಣ್ಯಸ್ತ್ರೀ ಕಾಳವ್ವೆ
10)ಮಾರಯ್ಯಗಳ ಪುಣ್ಯಸ್ತ್ರೀ ಗಂಗಮ್ಮ
11) ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ ಮಸಣಮ್ಮ 12)ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ
ಪುಣ್ಯಸ್ತ್ರೀ ಕಾಳವ್ವೆ ಯ ಹೆಸರಿನ ನಾಲ್ಕು ಜನ ಶರಣೆಯರು ನಮಗೆ* ಸಿಗುತ್ತಾರೆ ಅವರಲ್ಲಿ
1)ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ ಈಕೆಯ 12 ವಚನಗಳು ಲಭ್ಯವಿದ್ದು ಅಂಕಿತನಾಮ ಉರಿಲಿಂಗ ಪೆದ್ದಿಗಳ ರಸ
2)ಕದಿರೆಯ ಕಾಯಕದ ಶರಣೆ ಈಕೆಯ ಐದು ವಚನಗಳು ಸಿಗುತ್ತವೆ ಅಂಕಿತನಾಮ ಭೂಮೇಶ್ವರ
3) ಬಾಚಿಕಾಯಕದ ಪುಣ್ಯಸ್ತ್ರೀ ಕಾಳವ್ವೆ ಈಕೆಯ ಎರಡು ವಚನಗಳು ಸಿಗುತ್ತವೆ ಅಂಕಿತನಾಮ ಮಹೇಶ್ವರ ಹಾಗೂ 4)ಸಿದ್ದಬುದ್ದಯ್ಯಗಳ ಪುಣ್ಯಸ್ತ್ರೀ ಕಾಳವ್ವೆ ಈಕೆಯ ಒಂದು ವಚನ ಸಿಗುತ್ತದೆ ಅಂಕಿತನಾಮ ಭೀಮೇಶ್ವರ

ಸುಮಾರು 51 ವಚನಕಾರ್ತಿಯರು ಸುಮಾರು 13 40 ಕ್ಕಿಂತ ಹೆಚ್ಚು ವಚನಗಳನ್ನು ರಚಿಸಿದ್ದಾರೆ .ಇದರಲ್ಲಿ ದಲಿತ ವಚನಕಾರ್ತಿಯರಾದ ಕಾಳವ್ವೆ. ಕೇತಲದೇವಿ ,ಕಾಮಮ್ಮ ರೆಮ್ಮವ್ವೆ ಲಿಂಗಮ್ಮ. ಗೊಗ್ಗವ್ವೆ ಪ್ರಮುಖರು
ಇಡೀ ಭಾರತದ ಮೊತ್ತಮೊದಲ ದಲಿತವರ್ಗದ ವಚನಕಾರ ಉರಿಲಿಂಗಪೆದ್ದಿಯ ಪತ್ನಿ ಕಾಳವ್ವೆ. ಸ್ತ್ರೀವಾದದ ಮೊದಲ ಕಾಳು. ಜಾತಿ ಭೇದವ ಕಿತ್ತು ಶೂದ್ರ ಸ್ತ್ರೀ ಶಿವಶರಣೆ ಯಾದದ್ದು ಒಂದು ಸಾಧನೆ ತನ್ನನ್ನು ಸುತ್ತಿಕೊಂಡಿದ್ದ ಸಂಕೋಲೆಗಳಿಂದ ಮುಕ್ತವಾಗಿ ಹೊರಬಂದಳು. ತನ್ನ ವೈಚಾರಿಕ ಶಕ್ತಿಯಿಂದ ಬೆಳೆಯಲು ಪ್ರಯತ್ನಿಸಿದಳು. ಕಾಳವ್ವೆ ಯು ಸಂಸ್ಕೃತ ಪಂಡಿತೆಯು ಸಹ ಆಗಿದ್ದಳು. ಕಾಳವ್ವೆ ಯ ಸಂಸ್ಕೃತದ

ಒಂದು ವಚನವನ್ನು ನೋಡಿದಾಗ

ನಿಂದಯಾ ಶಿವಭಕ್ತಾನಾಂ ಕೋಟಿ ಜನ್ಮನಿ ಸೂಖರಃ
ಸಪ್ತ ಜನ್ಮನೀ ಭವೇತ್ ಕುಷ್ಟೀ ದಾಸೀ
ಗರ್ಭೇಷು ಜಾಯತೇ
ಅಂದರೆ ಜಾತಿಯ ಹೆಸರಿನಿಂದ ಶಿವಭಕ್ತ ನಿಂದಿಸಿದರೆ ಕೋಟಿ ಜನ್ಮದಲ್ಲಿ ಆಗುವರು ಹಂದಿ ಆಗುವರು. ಕುಷ್ಠರೋಗಿ ದಾಸಿ ಗರ್ಭದಿಂದ ಜನಿಸುವರು ಎಂದು ಹೇಳಿದ ಶರಣೆ.
ಕಾಳವ್ವೆ ಯು ಶರಣ ಸಂಘದಿಂದ ತನ್ನ ಮೂಲ ಪ್ರವೃತ್ತಿಯನ್ನು ಬದಲಿಸಿಕೊಂಡು ಸಾತ್ವಿಕವಾದ ಆಚರಣೆ ಚಿಂತನೆಗಳಿಂದಾಗಿ ಶರಣರ ಸೂತ್ರಗಳನ್ನು ತಮ್ಮದಾಗಿಸಿಕೊಂಡವರು ಕಾಳವ್ವೆ ಯವರ ಸೃಜನಶೀಲವಾದ ಮನಸ್ಸು ತಮ್ಮ ಹುಟ್ಟಿನ ಜಾತಿಯನ್ನು ಅಂದಿನ ವರ್ಣಾವಸ್ಥೆಯ ಕ್ರೂರತೆಯನ್ನು ಹೊರಗೆಡಹುತ್ತಾಳೆ

ಉರಿಲಿಂಗ ಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ ಯ ವೈಯಕ್ತಿಕ ಬದುಕಿನ ಬಗ್ಗೆ ಯಾವ ವಿವರಗಳೂ ದೊರಕುವುದಿಲ್ಲ.ಮಿಕ್ಕ ಪುರಾಣಗಳಲ್ಲಾಗಲೀ ಭೈರವೇಶ್ವರ ಕಾವ್ಯ ದ ಕಥಾಮಣಿಸೂತ್ರರತ್ನಾಕರದಲ್ಲಾಗಲೀ ಅವಳ ತಂದೆ -ತಾಯಿ ಬಂಧು ಬಳಗ ಹಾಗೂ ಊರಿನ ಬಗ್ಗೆ ನಿಖರವಾದ ಮಾಹಿತಿಯು ದೊರೆಯುವುದಿಲ್ಲ. ಆದರೆ ಇವಳ ಕಾಲ 1160 ಎಂದು ತಿಳಿದು ಬರುತ್ತದೆ. ಈಕೆಯ ಪತಿ ಉರಿಲಿಂಗ ಪೆದ್ದಿ ಮಹಾರಾಷ್ಟ್ರ ದ ಕಂದಾಪುರದ ಲಿಂಗದೇವರು ಅವರು ದಲಿತರಾಗಿದ್ದಂತಹ ಉರಿಲಿಂಗಪೆದ್ದಿ ಹಾಗೂ ಅವರ ಪತ್ನಿ ಕಾಳವ್ವೆಗೆ ತಮ್ಮ ಮಠದಲ್ಲಿಯೇ ಇಷ್ಟಲಿಂಗವನ್ನು ಪ್ರಾಪ್ತಿಸಿ ಅಸ್ಪೃಶ್ಯರನ್ನು ಸ್ಪೃಶ್ಯ ರನ್ನಾಗಿ ಮಾಡಿ ಇಡೀ ಜಗತ್ತಿನಲ್ಲಿಯೇ ಪ್ರಪ್ರಥಮವಾಗಿ ದಲಿತ ದಂಪತಿಗಳಿಗೆ ಇಷ್ಟಲಿಂಗ ಪ್ರಾಪ್ತಿಸಿ ಜೊತೆಗೆ ಕೊರಳಿ ಮಠದ ಮಠಾಧಿಪತಿಯಾಗಿ ಮಾಡಿದ್ದು ಮೊದಲಾಗುತ್ತದೆ .ಉರಿಲಿಂಗಪೆದ್ದಿ ಹೆಸರಿನ ಮಠಗಳು ಬೀದರ್ ಜಿಲ್ಲೆಯಲ್ಲಿ ಈಗಲೂ ಇರುವುದು ಭಾರತದ ಸುವರ್ಣಾಕ್ಷರಗಳಲ್ಲಿ ದಾಖಲಾಗಿರುವ ಸಂಗತಿ. ಉರಿಲಿಂಗಪೆದ್ದಿ ತಂದೆ-ತಾಯಿಗಳು ಗೋದಾವರಿ ತೀರದ ಹಳ್ಳಿಯೊಂದರಲ್ಲಿ ವಾಸವಾಗಿದ್ದರು.

ಉರಿಲಿಂಗಪೆದ್ದಿ ಪುಣ್ಯಸ್ತ್ರೀ ಕಾಳವ್ವೆ ಯ 12 ವಚನಗಳು ಸಿಕ್ಕಿದ್ದು ವಚನಗಳಲ್ಲಿ ಈಕೆಯ ವಚನಗಳಲ್ಲಿ ವಯಕ್ತಿಕ ವಿಚಾರಗಳನ್ನಾಗಲೀ ದಾಂಪತ್ಯದ ವಿಚಾರಗಳನ್ನಾಗಲೀ ಹೇಳಿಕೊಳ್ಳುವುದಿಲ್ಲ. ಆದರೆ ಡಾ ಎಂ ಎಂ ಕಲಬುರ್ಗಿ ಅವರು ಪುಣ್ಯಸ್ತ್ರೀ ಎಂಬ ತಮ್ಮೊಂದು ಲೇಖನದಲ್ಲಿ ಈ ಶಬ್ದಕ್ಕೆ ಮೊದಲು ಮೂರು ಪರ್ಯಾಯ ಅರ್ಥ ಗಳನ್ನು ಆಲೋಚಿಸಿದ್ದರು.
1)ಕೆಳ ಜಾತಿಯಲ್ಲಿ ಹುಟ್ಟಿ ಮೇಲ್ಜಾತಿಯವರನ್ನು ಮದುವೆಯಾದ ಸ್ತ್ರೀಯರು
2 )ಬೇರೆಬೇರೆ ಸಾಮಾಜಿಕ ಸ್ಥರಗಳಿಂದ ಬಂದ ಶರಣರ ಪೂರ್ವಾಶ್ರಮದ ಉಪಪತ್ನಿಯರು ಹಾಗೂ
3)ವೇಶ್ಯೆಯರಾಗಿದ್ದು ಶರಣರ ಪ್ರಭಾವದಿಂದ ಅವರೊಡನೆ ನಿಷ್ಠೆಯಿಂದ ಬಾಳಿದವರು.ಡಾ ಎಂ ಎಂ ಕಲ್ಬುರ್ಗಿಯವರು ಕೆಲಕಾಲದ ಬಳಿಕ ಅವರು ಪುಣ್ಯಸ್ತ್ರೀ ಮರು ಆಲೋಚನೆ ಎಂಬ ಮತ್ತೊಂದು ಪ್ರಬಂಧವನ್ನು ಬರೆದು ಅದರಲ್ಲಿ ಪುಣ್ಯಸ್ತ್ರೀ ಧರ್ಮಪತ್ನಿ ಎಂಬಲ್ಲಿ ನನಗೆ ಅನುಮಾನವೇ ಇಲ್ಲ ಎಂದು ಹೇಳಿರುವರು .ಅದೇ ಪ್ರಬಂಧ ದ ಕೊನೆಯಲ್ಲಿ ಇನ್ನೂ ಅಧ್ಯಯನ ನಡೆಯಬೇಕಾಗಿದೆ ಎಂದು ಮುಕ್ತತೆಯನ್ನು ತೋರಿದ್ದಾರೆ. ಪುಣ್ಯಾಂಗನೆ ಎಂದರೆ ಸಾಧ್ವಿ ಗರತಿ ಪ್ರತಿವ್ರತೆ ಒಳ್ಳೆಯ ಹೆಣ್ಣುಮಗಳು ಎಂದರ್ಥ..
ಪುಣ್ಯಸ್ತ್ರೀ ಕಾಳವ್ವೆ ಯು ತನ್ನ 12 ವಚನಗಳಲ್ಲಿ ಎಲ್ಲಿಯೂ ತನ್ನ ವೈಯಕ್ತಿಕ ವಿಚಾರಗಳನ್ನು ಆಗಲಿ ದಾಂಪತ್ಯದ ವಿಚಾರಗಳನ್ನಾಗಲೀ ಹೇಳಿಕೊಳ್ಳುವುದಿಲ್ಲ .ಅಂದಿನ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಯ ಬಗ್ಗೆ ಆಕೆಗೆ ಕ್ರೋಧವಂತೂ ಕಾಣುತ್ತದೆ. ಜಾತಿ-ಧರ್ಮಗಳ ಹೆಸರಲ್ಲಿ ನಡೆಯುವ ಅನಾಚಾರಗಳ ಬಗ್ಗೆ ಆಕೆ ತೀವ್ರ ಆಕ್ರೋಶವೂ ಕಾಣುತ್ತದೆ. ಈಕೆಯ ವಚನಗಳಲ್ಲಿ ಭಕ್ತಿಯ ಪರಾಕಾಷ್ಠತೆ ಉತ್ತುಂಗದಲ್ಲಿದ್ದರೆ ವ್ರತಗಳ ಆಚರಣೆಗಳನ್ನು ಸಾರಾಸಗಾಟವಾಗಿ ನಿರಾಕರಿಸುತ್ತಾಳೆ. ಭಕ್ತನ ಲಕ್ಷಣ ವೃತಾಚರಣೆಯ ಮಹತ್ವ, ಪ್ರಸಾದದ ಮಹಿಮೆ, ಕಾಯಕ ನಿಷ್ಠೆ ಹಾಗೂ ಜಾತಿ ಈಕೆಯ ವಚನಗಳಲ್ಲಿ ಕಂಡುಬರುವ ಮುಖ್ಯ ವಿಷಯಗಳು

ವ್ರತಗಳ ಆಚರಣೆ ಕುರಿತು ಈಕೆ ಒಂದು ವಚನ ನೋಡಿದಾಗ
ವ್ರತವೆಂಬುದು ನಾಯಕ ರತ್ನ *ವ್ರತವೆಂಬುದು ಸುಪ್ಪಾಣಿಯ ಮುತ್ತು
ವ್ರತ ವೆಂಬುದು ಜೀವನ ಕಳೆದ
ವ್ರತವೆಂಬುದು ಸುಯಿದಾನ 
ವ್ರತ ತಪ್ಪಲು ಉರಿಲಿಂಗ ಪೆದ್ದಿ ಗಳರಸನೊಲ್ಲನವ್ವಾ.

ಪುಣ್ಯಸ್ತ್ರೀ ಕಾಳವ್ವೆ ವೃತವು ಕೇವಲ ಇಷ್ಟಲಿಂಗಕ್ಕೆ ಮಾತ್ರವೇ ಸಂಬಂಧಿಸುದಾದಗಿದೆಯೇ ಹೊರತು ಅನ್ಯ ವಸ್ತುಗಳಿಗಲ್ಲ. ಎಂದು ಹೇಳುತ್ತಾಳೆ ಇಷ್ಟಲಿಂಗವನ್ನು

ಎಂದರೆ ನಾಯಕ ರತ್ನ .ರತ್ನಗಳಲ್ಲಿಯೇ ನಾಯಕನಂತೆ ಹೇಗೆ ನಾವು ರತ್ನದಲ್ಲಿ ಕಲಬೆರಕೆ ಮಾಡುವುದಿಲ್ಲವೋ ರತ್ನ ಹೊಳಪುಳ್ಳದ್ದು ಅದು ಯಾವಾಗಲೂ ಹೊಳೆಯುತ್ತದೆ .ಹಾಗೇ ನಮ್ಮ ವ್ರತ ಇರಬೇಕು ನಾಯಕ ವಿದ್ದಂತೆ ನಾಯಕ ಎಂದರೆ ಒಂದು ಆಟದ ತಂಡದ ನಾಯಕನಿಗೆ ಜವಾಬ್ದಾರಿ ಇರುತ್ತದೆ .ಇಡೀ ತಂಡಕ್ಕೆ ಮಾರ್ಗ ದರ್ಶನ ಮಾಡುತ್ತಿರುತ್ತಾನೆ ಹಾಗೆ ಸಮಾಜವು ನಮ್ಮನ್ನು ಅನುಕರಿಸುತ್ತದೆ .ವ್ರತವೆಂಬುವುದು ಸುಪ್ಪಾನಿ ಮುತ್ತು .ಸುಪ್ಪಾನಿ ಎಂದರೆ ಹೊಳಪುಳ್ಳದ್ದು ಹೊಳಪುಳ್ಳ
ಮುತ್ತಿನ ಹಾಗೆ ತಾವು ಕೂಡ ಮುತ್ತಿನಂತೆ ಹೊಳೆಯಬೇಕು.ವ್ರತ ಎಂಬುವುದು ಜೀವನ ಕಳೆದ. ನಮ್ಮ ಜೀವನಕ್ಕೆ ಒಂದು ಕಳೆ. ಒಂದು ಶ್ರೇಷ್ಠತೆ ಸಮಾಧಾನ ಶಾಂತಿ ಲಭಿಸುತ್ತದೆ .ವ್ರತ ಎಂಬುವುದು ಸುಯಿದಾನ.ಸುಯಿದಾನ ಎಂದರೆ ಎಂದರೆ ಲಕ್ಷ,ಗಮನ,ಕಾವಲು ಎಂದರ್ಥ. ನಾವು ಆಚರಿಸುವ ವ್ರತದಲ್ಲಿ ಸಮಾಧಾನ ಶಾಂತಿ ಸಿಗುವುದು ಈ ಕಾರಣಕ್ಕಾಗಿ ನಾವು ವ್ರತ ತಪ್ಪದಂತೆ ನೋಡಿಕೊಳ್ಳಬೇಕು. ವ್ರತ ತಪ್ಪಿದರೆ ಆ ಉರಿಲಿಂಗ ಶಿವ ಮೆಚ್ಚಲಾರ ಎನ್ನುವಳು.

*ವ್ರತ ಹೋದಾಗಳೆ ಇಷ್ಟಲಿಂಗದ ಕಳೆ ನಷ್ಟ ವವ್ವಾ ಅವರು ಲಿಂಗವಿದ್ದೂ ಭವಿಗಳು.*
ಅದು ಹೇಗೆಂದರೆ ಪ್ರಾಣವಿಲ್ಲದ ದೇಹದಂತೆ ಎಂದು ಮತ್ತೊಂದೆಡೆ ಹೇಳುತ್ತಾಳೆ

ಅಯ್ಯಾ ಸೂಳೆಗೆ ಹುಟ್ಟಿದ ಮಕ್ಕಳಿಗೆ ಕೊಟ್ಟವರೊಳು ಸಮ್ಮೇಳ ಕೊಡದವರೊಳು ಕ್ರೋಧ ವ್ರತ ಹೀನರೊಳು ಮೇಳ ವ್ರತನಾಯಕರೊಳು ಅಮೇಳ 
ಸುಡು ಸುಡು ಅವರ ಕೂಡಿದಡೆ ಉರಿಲಿಂಗ ಪೆದ್ದಿ ಗಳರಸನೊಲ್ಲನವ್ವಾ
ತಮ್ಮನ್ನು ಸದ್ಭಕ್ತಿಯಿಂದ ಕೂಡಿದ ಸದಾಚಾರ ಸಂಪನ್ನ ಶರಣರ ಸಂಘದಲ್ಲಿರುಸು ಎಂದು ಹೇಳುತ್ತಾಳೆ ಸಂಸ್ಕಾರ ರಹಿತ ಮಕ್ಕಳೊಂದಿಗೆ ಸೇರುವುದು ಉಚಿತವಲ್ಲ ಎಂದು ಹೇಳುತ್ತಾಳೆ. ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸೀ ಎಂದು ಹೇಳುವ ಹಾಗೆ ಸಜ್ಜನರ ಸಂಘದಲ್ಲಿರುವುದು ಎಂದರೆ ಸ್ವರ್ಗದಲ್ಲಿ ಇದ್ದ ಹಾಗೆ ನಕಾರಾತ್ಮಕ ವಿಚಾರಧಾರೆ ಯ ಮನುಷ್ಯನಾದರೂ ಸರಿ ಸಕಾರಾತ್ಮಕವಾಗಿ ಯೋಚಿಸುವುದಕ್ಕೆ ಶುರು ಮಾಡುತ್ತಾನೆ ಎನ್ನುವುದು..

ಪುಣ್ಯಸ್ತ್ರೀ ಕಾಳವ್ವೆ ವ್ರತವು ಕೇವಲ ಇಷ್ಟಲಿಂಗಕ್ಕೆ ಮಾತ್ರವೇ ಸಂಬಂಧಿಸುದಾದಗಿದೆ ಹೊರತು ಅನ್ಯ ವಸ್ತುಗಳಿಗಲ್ಲ ಎಂದು ಹೇಳುತ್ತಾಳೆ ಇಷ್ಟಲಿಂಗವನ್ನು ಪೂಜಿಸಿದವರ ಬದುಕು ಒಂದು ರೀತಿಯಲ್ಲಿ ಪ್ರಾಣವಿಲ್ಲದ ದೇಹದಂತೆ ಎನ್ನುತ್ತಾಳೆ.
ವ್ರತ ಎಂದರೆ ಅತಿಯಾಸೆ ಇಲ್ಲದ ಕೆಟ್ಟ ಮಾತಾಡದ ಇಂದ್ರಿಯ ನಿಗ್ರಹದ ಬದುಕು; ಇವು ಮೂಲವಾದ ಶಿವಲಿಂಗ ಪೂಜೆ, ಶಿವ ಧ್ಯಾನ, ಶಿವ ಕಥಾಪ್ರಸಂಗ, ಶಿವ ಶರಣರ ಸಂಗ ಇವು ಮಿಳಿತವಾದ ಬದುಕು ಎಂದರೆ ಒಟ್ಟಾರೆ ಶುಭ್ರ ಬದುಕು .ಬರೀ ಶಾಸ್ತ್ರಾ ಚರಣೆ ಅಲ್ಲ. ವ್ರತ ಎಂಬುದು ಪರಬ್ರಹ್ಮವನ್ನು ಕಾಣಲು ಒಂದು ಏಣಿ. ಇಂದ್ರಿಯಗಳ ವಿಷಯ ಸುಖಾಪೇಕ್ಷೆಯನ್ನು ಕಡಿದು ಹಾಕುವ ಕೊಡಲಿ. ಎಲ್ಲೆಂದರಲ್ಲಿ ಹೋಗುವ ಮನಸ್ಸಿಗೆ ಕಾಳ್ಗೀಚ್ಚು.
ಹೆಚ್ಬೇನು ಶುಭ್ರಮನದಿಂದ ಪರವಸ್ತುವನ್ನು ಕಾಣಲು ಮಾಡಿಕೊಂಡ ಕರಾರು.

ಕಾಳವ್ವೆ ಜಾತಿಪದ್ಧತಿಯ ಬಗ್ಗೆ ಅಸಂಹಿಷ್ಣತೆ .ಜಾತಿ ಶ್ರೇಣಿಯ ಅವೈಚಾರಿಕತೆಯನ್ನು ಈ ರೀತಿ ವಿಡಂಬಿಸುತ್ತಾಳೆ

ಕುರಿ ಕೋಳಿ ಕಿರಿ ಮೀನು ತಿಂಬವರಿಗೆಲ್ಲ ಕುಲಜ ಕುಲಜರೆಂಬರು
ಶಿವ ಗೆ ಪಂಚಾಮೃತವ ಕರೆವ ಪಶುವ ತಿಂಬ ಮಾದಿಗ ಕೀಳುಜಾತಿಯೆಂಬರು ಅವರೆಂತೂ ಕೀಳು ಜಾತಿಯಾದರು? ಜಾತಿಗಳು ನೀವೇಕೆ ಕೇಳಾದಿರೋ? ಬ್ರಾಹ್ಮಣ ಉಂಡುದು ಪುಲ್ಲಿಗೆ ಶೋಭಿತ ವಾಗಿ ನಾಯಿ ನೆಕ್ಕಿ ಹೋಯಿತು ಮಾದಿಗರು ಉಂಡುದು ಪುಲ್ಲಿಗೆ ಬ್ರಾಹ್ಮಣಗೆ ಶೋಭಿತ ವಾಯಿತು ಅದೆಂತೆಂದಡೆ ಸಿದ್ದಲಿಕೆ ಆಯಿತು ಸಗ್ಗಳೆ ಯಾಯಿತು ಸಿದ್ದಲಿಕೆ ಯ ತುಪ್ಪವನು ಸಗ್ಗಳೆಯ ನೀರನು ಶುದ್ಧವೆಂದು ಕುಡಿದ ಬುದ್ಧಿಗೇಡಿ ವಿಕ್ರಂಗೆ ನಾಯಕ ನರಕ ತಪ್ಪದಯ್ಯಾ ಅಪ್ಪಯ್ಯ ಉರಿಲಿಂಗಪೆದ್ದಿಗಳರಸ ಒಲ್ಲನವ್ವಾ

ಇಲ್ಲಿ ಕಾಳವ್ವೆಯು ಅಂತ್ಯಜನು ಬ್ರಾಹ್ಮಣನಿಗಿಂತಲೂ ಮಿಗಿಲು ಎಂಬ ದಿಟ್ಟ ತನ ತೋರಿದ್ದಾಳೆ.ಬ್ರಾಹ್ಮಣರು ಉಂಡ ಮೇಲೆ ಅವರು ಊಟ ಮಾಡಿದ ಎಲೆಯನ್ನು ಎಲೆಯನ್ನು ಬಿಸಾಕುತ್ತಾರೆ ತಟ್ಟೆಯನ್ನು ನಾಯಿ ನೆಕ್ಕುತ್ತದೆ . ಆದರೆ ಮಾದಿಗ ಹಸುವಿನ ಮಾಂಸ ತಿಂದ ಬಳಿಕ ಅದು ಇದ್ದ ಚರ್ಮವನ್ನು ಸಿದ್ದಲಿಕೆ ಅಂದರೆ ಚರ್ಮದ ಪಾತ್ರೆ ಸಗ್ಗಳೆ ಯನ್ನಾಗಿ ಮಾಡುತ್ತಾರೆ ಅವುಗಳಲ್ಲಿ ಎಣ್ಣೆ ನೀರನ್ನು ತುಂಬಿ ಬೇರೆಡೆಗೆ ಕೊಂಡೊಯ್ಯಲು ಬಳಸುತ್ತಾರೆ ಇದನ್ನು ಬ್ರಾಹ್ಮಣನೂ ಬಳಸುತ್ತಾನೆ ಹೀಗಾಗಿ ಮಾದಿಗ ಜಾತಿಯೇ ಬ್ರಾಹ್ಮಣನಿಗಿಂತ ಉತ್ತಮ ಶ್ರೇಷ್ಠ ಎಂಬ ವಾದವನ್ನು ಮತ್ತು ಚಾತುರ್ಯವನ್ನು ನಮಗೆ ಅಚ್ಚರಿ ಮೂಡಿಸುತ್ತದೆ
ಅಂಬಿಗರ ಚೌಡಯ್ಯನ ಒಂದು ವಚನ ಇದೇ ಹೋಲಿಕೆಯನ್ನು ನೀಡುವುದು ಇವರಿಬ್ಬರೂ ಮಾತನಾಡಿಕೊಂಡು ಬರೆದಂತೆ ಇದೆ ಈ ವಚನ ಹೀಗಿದೆ
ಕುರಿ ಕೋಳಿ ಕಿರಿಮೀನು ತಿಂಬವರ ಊರೊಳಗೆ ಇರು ಎಂಬರು 
ಅಮೃತಾನ್ನವ ಕರೆವ ಗೋವ ತಿಂಬುವರ ಊರಿಂದ ಹೊರಗೆ ಇರು ಎಂಬರು ಆ ತನು ಹರಿಗೋಲ ಆಯಿತು ಬೊಕ್ಕಣ, ಸಿದಿಕೆ, ಬಾರುಕೋಲು, ಪಾದರಕ್ಷೆ ದೇವರ ಮುಂದೆ ಬಾರಿಸುವುದಕ್ಕೆ ಮಳೆಯಾಯಿತು ಈ ಬುದ್ಧ ಲಿಕೆ* ಯೊಳಗನಣ ತುಪ್ಪವ ಶುದ್ಧ ಮಾಡಿ ತುಂಬ ಗುಜ್ಜ ಹೊಲೆಯರ ಕಂಡಡೆ ಉದ್ದನೆಯ ಚಮ್ಮಾಳಿಗೆ ಯ ತಕ್ಕೊಂಡು ಬಾಯಿಚಠ ಕೊಯ್ಯುವೆನು ಎಂದಾತ ನಮ್ಅಂಬಿಗರ ಚೌಡಯ್ಯ…

ಜಾತಿಭೇದ ಮಾಡುವ ಕುಲಗೇಡಿ ಗಳನ್ನು ನಿಜ ಶರಣನು ಗೊಜ್ಜು ಹೊಲೆಯರೆಂದು ಬೈದಿರುವನು..

ತೂಬರದ ಕೊಳ್ಳಿಯಂತೆ ಉರಿವಾತ ಭಕ್ತನೇ ? 
ಹುಸಿದು ತಂದು ಮಾಡುವಾತ ಭಕ್ತನೇ ? 
ಭಕ್ತರ ಕುಲವನೆತ್ತಿ ನಿಂದಿಸುವಾ ತಭಕ್ತನೇ ? 
ಪ್ರಾಣದ ಮೇಲೆ ಬರಲಿ
ಇವರ ಬಿಡಬೇಕು ಬಿಡದಿರಲು ಉರಿಲಿಂಗ ಪೆದ್ದಿ ಗಳರಸನೊಲ್ಲನವ್ವಾ.
ಅಂದರೆ ತೂಬರದ ಕೊಳ್ಳಿಯಂತೆ ಉರಿಯುವವರು ತು ಬರದ ಕೊಳ್ಳಿ ಪ್ರಖರವಾಗಿ ಉರಿಯದೆ ಬರೀ ಹೊಗೆ ತುಂಬಿಕೊಂಡು ಚಟಚಟ ಎಂಬ ಸದ್ದು ಮಾಡುವ ಗುಣ ಉಳ್ಳದ್ದು. ಬದುಕನ್ನು ನಡೆಸಲು ಬರೀ ಸುಳ್ಳನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ದೇವರ ಹೆಸರಲ್ಲಿ ಭಯವನ್ನುಂಟು ಮಾಡಿದವರು ಮತ್ತೊಬ್ಬ ಭಕ್ತನ ಏಳಿಗೆಯನ್ನು ಕಂಡು ಹೊಟ್ಟೆಕಿಚ್ಚು ಪಡುವವರು ಕುಲದ ಹೆಸರನ್ನು ಎತ್ತಿ ನಿಂದಿಸುವವರು ಎಂದೂ ನಿಜವಾದ ಭಕ್ತರೆನಿಸರು ಇಂಥವರಿಂದ ಆದಷ್ಟು ದೂರವಿರುವುದೇ ಶ್ರೇಯಸ್ಸು.ಭಕ್ತರ ಮನಸ್ಸು ಎಂದಿಗೂ ಭಕ್ತಿ ಯಿಂದ ಕೂಡಿರಬೇಕು. ಕಾಯಕದಲ್ಲಿ ಸತ್ಯ ಶುದ್ಧ ವಿರಬೇಕು .ಇಲ್ಲದಿದ್ದರೆ ಅವರು ಭಕ್ತರೆನಿಸಿಕೊಳ್ಳಲು ಸಾಧ್ಯ ವಿಲ್ಲ .ಎಂದು ಉರಲಿಂಗಪೆದ್ದಿ ಪುಣ್ಯಸ್ತ್ರೀ ಹೇಳುತ್ತಾಳೆ

ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲದ ಸತ್ಯಶುದ್ಧವಿಲ್ಲದುದು ಕಾಯಕ ವಲ್ಲದ ಆಸೆಯೆಂಬುದು ಭವದ ಬೀಜ ನಿ ರಾಸೆಯೆಂಬುದು ನಿತ್ಯಮುಕ್ತಿ ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ ಕಾಣವ್ವಾ

ಈ ಭೂಮಿಯ ಮೇಲೆ ಹುಟ್ಟಿದ ಯಾವುದೇ ಮನುಷ್ಯನಿಗೆ ಆಸೆಯೆಂಬುದು ಭವದ ಬೀಜ ವಾಗುತ್ತದೆ .ಇಲ್ಲಿ ಆಸೆ ಗಳೆಂದರೆ ಮನುಷ್ಯನಲ್ಲಿರುವ ಕಾಮ, ಕ್ರೋಧ, ಲೋಭ ,ಮೋಹ, ಮದ ,ಮತ್ಸರ ಆಗಿರುತ್ತವೆ .ಕಾಮ- ಎಂದರೆ ಕಂಡದ್ದನ್ನು ಬಯಸುವುದೇ ಕಾಮಆಗಿದೆ .
ಕ್ರೋಧ- ಬಯಸಿದ್ದು ಸಿಗದಾಗ ಉಂಟಾಗುವುದೇ ಕ್ರೋಧ.

ಲೋಭ – ದೊರೆತರು ಇನ್ನಷ್ಟು ಬೇಕೆಂಬುದೇ ಲೋಭ .
ಮೋಹ-ಇನ್ನಷ್ಟು ದೊರೆತಾಗ ಕೈಬಿಟ್ಟು ಹೋಗಬಾರದೆಂಬುದೇ ಮೋಹ
ಮದ -ಕೈ ಬಿಟ್ಟು ಹೋಗದೆ ತನ್ನಲ್ಲಿಯೇ ಉಳಿದಾಗ ತನ್ನ ಬಳಿ ಮಾತ್ರ ಇದೆ ಎಂಬ ಜಂಬವೇ ಮದ ಮತ್ಸರ-ತನ್ನಲ್ಲಿರುವುದು ಬೇರೊಬ್ಬನಲ್ಲಿ ಇದೆ ಎಂದು ತಿಳಿದು ಬಂದಾಗ ಉಂಟಾಗುವುದೇ ಮತ್ಸರ.ಈ
ಆಸೆಗಳೇ ಈ ಜಗದಲ್ಲಿ ಬೀಜಗಳಾದರೆ ನಿರಾಸೆಯೆಂಬುದು ನಿತ್ಯಮುಕ್ತಿ ಆಗುತ್ತದೆ. ಸತ್ಯ ಶುದ್ಧವಾಗಿರದ ಕಾಯಕ ಎಂದಿಗೂ ಕಾಯಕ ವಾಗುವುದಿಲ್ಲ. ಭಕ್ತರ ಮನಸ್ಸು ಹಾಗೂ ಕಾಯಕ ಎಂದೂ ಪರಿಶುದ್ಧತೆಯಲ್ಲೂ . ಪರಿಪೂರ್ಣತೆಯಿಂದ ಕೂಡಿರಬೇಕು. ಎಲ್ಲರನ್ನೂ ಸಲಹುವ ಬೆಳೆಸುವ ಹೊಣೆಗಾರಿಕೆ ಯನ್ನು ಅರಿತಿರಬೇಕು ಎಂದು ಈ ವಚನದಲ್ಲಿ ಹೇಳುತ್ತಾಳೆ

ಪ್ರಸಾದದ ಕುರಿತು ತನ್ನ ಒಂದು ವಚನದಲ್ಲಿ ಪುಣ್ಯಸ್ತ್ರೀ ಕಾಳವ್ವೆ ಯು ಈ ರೀತಿ ಹೇಳುತ್ತಾಳೆ

ನಿಂದಿಸಿ ಕೊಂಬ ಪ್ರಸಾದ ಕುನ್ನಿಯ ಪ್ರಸಾದ ಅವರು ತ್ರಿವಿಧಕ್ಕೆ ಇಚ್ಚಿಸರು .ಅಲ್ಲಿ ನಿಂದಿಸಿ ಅವರ ಬಿಟ್ಟಲ್ಲಿ ಅವರ ಹಿಂದೆ ಕೊಂಡುದು ಅವರ ಮಲಮೂತ್ರ ಮುಂದೆ ಹುಳು ಗೊಂಡ ವಯ್ಯಾ ಉರಿಲಿಂಗಪೆದ್ದಿಗಳರಸನೊಲ್ಲ ನವ್ವಾ ಎಂದು ಕಾಳವ್ವೆ ಹೇಳುತ್ತಾಳೆ.

ಅಂದರೆ ಆ ಕಾಲಘಟ್ಟದಲ್ಲಿ ದಲಿತರಾದ ಇವರಿಗೆ ಹೊರಗಡೆ ನಿಲ್ಲಿಸಿ ದೇವರ ಹೆಸರಲ್ಲಿ ಭಯಹುಟ್ಟಿಸಿ ಇದು ದೇವರ ಪ್ರಸಾದ ಎಂದು ದೀನ-ದಲಿತರಿಗೆ ಎಸೆ ಯುತ್ತಿದ್ದು ದ್ದನ್ನು ಕಂಡು ತನ್ನ ಸಿಟ್ಟನ್ನು ಹೊರಹಾಕುತ್ತಾ ನಿಂದಿಸಿ ಕೊಂಡು ಪ್ರಕಟಿತ ವಾದ ಪ್ರಸಾದ ಅದೊಂದು ರೀತಿಯ ನಾಯಿಯ ಮಲವಿದ್ದ ಹಾಗೆ ಅವರುಗಳು ಲಿಂಗ,ಜಂಗಮ ದಾಸೋಹಗಳಿಗೆ ಒಪ್ಪಿಲಾರರು.ಒಂದು ಪಕ್ಷ ನಿಂದಿಸಿ ಕೊಂಡು ನಾವು ಪ್ರಸಾದವನ್ನು ಸ್ವೀಕರಿಸಿದರೆ ಅದು ಪ್ರಸಾದವಾಗಿರದೇ ಅದೊಂದು ಅವರ ಮಲಮೂತ್ರಗಳಿದ್ದಂತೆ ಎಂದು ನಿಂದಿಸಿ ತನ್ನ ಸಿಟ್ಟನ್ನು ಹೊರಹಾಕುತ್ತಾಳೆ..

ಉಂಡೊಡೆಯರಲ್ಲಿ ಕೊಂಬ ಪ್ರಸಾದ ಕಾರಿದ ಕೂಳು 
ಸಣ್ಣವರಲ್ಲಿ ಕೊಂಬ ಪ್ರಸಾದ ಸಂತೆಯ ಸೂಳೆಯ ಎಂಜಲು 
ಅಳಿಯನಲ್ಲಿ ಕೊಂಬ ಪ್ರಸಾದ ಅಮೇಧ್ಯ 
ಮಕ್ಕಳಲ್ಲಿ ಕೊಂಬ ಪ್ರಸಾದ ಗೋಮಾಂಸ
ತಮ್ಮನಲ್ಲಿ ಕೊಂಬ ಪ್ರಸಾದ ಸಿಂಗಿ
ನಂಟರಲ್ಲಿ ಕೊಂಬ ಪ್ರಸಾದ ನರಮಾಂಸ ವಂದಿಸಿ ನಿಂದಿಸಿ ಕೋಂಬ ಪ್ರಸಾದ ವ ಉರಿಲಿಂಗ ಪೆದ್ದಿ ಗಳರಸ ನೊಲ್ಲನವ್ವಾ

ನಮ್ಮ ಒಡೆಯ ಅಂದರೆ ನಾಯಕ ಯಜಮಾನನಲ್ಲಿ ಮಾಡಿದ ಊಟ ಆ ನಾಯಕ ಕಕ್ಕಿದ ಅಂದರೆ ಆತನು ಮಾಡಿದ ವಾಂತಿ ಉಂಡಂತೆ .ನಮಗಿಂತ ಸಣ್ಣವರಲ್ಲಿ ಉಂಡ ಪ್ರಸಾದ ಸಂತೆಯಲ್ಲಿ ಕುಳಿತು ವ್ಯಾಪಾರ ಮಾಡುವ ಒಬ್ಬ ವೇಶ್ಯೆ ಎಂಜಲು ಮಾಡಿದಂತೆ
ಅಳಿಯನಲ್ಲಿಯ ಊಟ ಅದು ಮಲ ಅಂದರೆ ಹೊಲಸು ತಿಂದಂತೆ
ಮಕ್ಕಳಲ್ಲಿಯ ಊಟ ದನದ ಮಾಂಸವನ್ನು ತಿಂದಂತೆ ತಮ್ಮನ್ನಲ್ಲಿ ತಿಂದ ಪ್ರಸಾದ ಅದು ಕೊಂಬುಳ್ಳ ಕುರಿಯ ಮಾಂಸವನ್ನು ತಿಂದಂತೆ ನೆಂಟರು ಅಂದರೆ ಸಂಬಂಧಿಕರಲ್ಲಿಯ ಪ್ರಸಾದ ಮನುಷ್ಯ ರ ಮಾಂಸ ತಿಂದಂತೆ
ಎಂದು ಹೇಳಿ ಯಾರು ಹಂಗಿಸಿ ಅವಮಾನಿಸಿ ನಮಗೆ ಊಟ ಬಡಿಸುವರೋ ಅಂತಹ ಪ್ರಸಾದವನ್ನು ನಮ್ಮ ಶಿವ ಸ್ವೀಕರಿಸಲಾರ ಮತ್ತು ಮೆಚ್ಚಲಾರ ಎಂದು ಕಾಳವ್ವೆ ಹೇಳುತ್ತಾಳೆ..

ಕಾಳವ್ವೆ ಜಂಗಮದ ಹಿರಿಮೆಯನ್ನು ತನ್ನ ವಚನದಲ್ಲಿ ಈ ರೀತಿ ಹೇಳುತ್ತಾಳೆ.

ಒಡೆಯರೆಂಬ ತುಡುಗುಣಿಗಳು ತಾವು ಪೂಜೆಗೊಂಬಲ್ಲಿ ಅವರ ಮನೆಗೆ ಹೂ ಹಣ್ಣು ಕಾಯಿ ಪತ್ರೆಗಳ ತಾಹ ಹೋಗುವ ಬರುವ ಉಳಿಗವ ಕೊಂಬಾತ ಭಕ್ತನಲ್ಲ ; ಅಲ್ಲಿ ಪೂಜೆಗೊಂಬಾತ ಜಂಗಮನಲ್ಲ ಇವರಿಬ್ಬರೂ ನಾಯಕನರಕಕ್ಕೆ ಯೋಗ್ಯರಯ್ಯಾ ಅವರ ಉರಿಲಿಂಗ ಪೆದ್ದಿಗಳರಸ ಒಲ್ಲನೊಲ್ಲನವ್ವಾ

ಮೋಸದಿಂದ ಆಹಾರ ಸಂಪಾದಿಸುವವರು ಮತ್ತು ಅಹಂಕಾರದಿಂದ ಬೀಗುವ ನಾಯಕರ ಮನೆಗೆ ಹೂ ,ಹಣ್ಣು ಕಾಯಿ ಪತ್ರೆಗಳನ್ನು ತೆಗೆದುಕೊಂಡು ಹೋಗುವಾತ ಭಕ್ತನಲ್ಲ.ಅಂತಹ ವರ ಮನೆಗೆ ಕೆಲಸ ಕ್ಕೂ ಕೂಡಾ ಹೋಗಬಾರದೆಂದು ಹಾಗೂ ಮೋಸದಿಂದ ಆಹಾರ ಸಂಪಾದಿಸುವವರ ಮನೆಗೆ ಹೋಗಿ ಪಾದಪೂಜೆ ಮಾಡಿಸಿಕೊಳ್ಳುವವ ಜಂಗಮನಲ್ಲ. ಇವರಿಬ್ಬರೂ ನರಕಕ್ಕೂ ಕೂಡಾ ಹೋಗಲು ಯೋಗ್ಯರಲ್ಲ.ಇಂತಹವರನ್ನು ಆ ಉರಿಲಿಂಗ ಪೆದ್ದಿ ಅಂದರೆ ಆ ಶಿವ ಮೆಚ್ಚಲಾರ ಎಂದು ಕಾಳವ್ವೆ ಯು ತನ್ನ ವಚನದಲ್ಲಿ ಈ ರೀತಿ ಹೇಳುತ್ತಾಳೆ.

ಭಾಗ್ಯ ವುಳ್ಳ ಪುರುಷಂಗೆ ಕಾಮಧೇನು 
ಕಾಮಿಸಿದುದನೀವುದಯ್ಯಾ
ನಿರ್ಭಾಗ್ಯ ಪುರುಷಂಗೆ ಕಾಮಧೇನು
ತುಡುಗುಣಿಯಾಗಿ ತೋರುವುದಯ್ಯಾ
ಸತ್ಯ ಪುರುಷಂಗೆ ಕಲ್ಪವೃಕ್ಷ
ಕಲ್ಪಸಿದುದನೀವುದಯ್ಯಾ
ಅಸತ್ಯಪುರುಷಂಗೆ ಚಿಂತಾಮಣಿ 
ಚಿಂತಿಸುದುದನೀವುದಯ್ಯಾ
ಅಧರ್ಮಪುರುಷಂಗೆ ಚಿಂತಾಮಣಿ 
ಗಾಜಿನ ಮಣಿಯಾಗಿ ತೋರುವುದಯ್ಯಾ
ಶ್ರೀ ಗುರು ಕಾರುಣ್ಯವುಳ್ಳ ಸಧ್ಬಕ್ತಂಗೆ
ಜಂಗಮ ಲಿಂಗ ವಾಗಿ ತೋರುವುದಯ್ಯಾ
ಭಕ್ತನಲ್ಲ ದ ಪಾಪಿಷ್ಟಂಗೆ ಜಂಗಮ ಲಿಂಗ ಮಾನವನಾಗಿ ತೋರುವುದಯ್ಯಾ
ಉರಿಲಿಂಗ ಪೆದ್ದಿ ಗಳರಸು ಒಲ್ಲನವ್ವಾ
ಇಲ್ಲಿ ಜಂಗಮದ ಹಿರಿಮೆ ಯನ್ನು ಕಾಳವ್ವೆಯು ಅತ್ಯಂತ ಹೃದ್ಯವಾ ಹೇಳುತ್ತಿದ್ದಾಳೆ .ನೋಡುವ ನೋಟ
ಸರಿಯಾಗಿಲ್ಲದಿದ್ದಾಗಿ ವಸ್ತುಗಳು ಅಪಮೌಲ್ಲಗೊಳ್ಳುವ ಪರಿಯನ್ನು ಕಾಮಧೇನು ಕಲ್ಪವೃಕ್ಷ ಚಿಂತಾಮಣಿ ಗಳ ದೃಷ್ಟಾಂತದ ಮೂಲಕ ಸಮತೂಕದ ವಾಕ್ಯಗಳಲ್ಲಿ ಈ ವಚನ ಸೆರೆಹಿಡಿಯುತ್ತದೆ.
ಭಾಗ್ಯ ವುಳ್ಳ ವ್ಯಕ್ತಿ ಅಂದರೆ ದೇವರು ವಲಿದ ವ್ಯಕ್ತಿಗೆ ಬಯಸಿದುದನ್ನು ಕರೆವ ಸ್ವರ್ಗದ ಆಕಳು ಆತನು ಏನನ್ನು ಕರೆಯಬೇಕು ಎಂದು ಬಯಸುತ್ತಾನೆಯೇ ಅದನ್ನೇ ನೀಡುತ್ತದೆ. ಭಾಗ್ಯವಿಲ್ಲದ ವ್ಯಕ್ತಿಗೆ ಕಾಮಧೇನು ಮೋಸದಿಂದ ಆಹಾರ ಸಂಪಾದಿಸುವವರಂತೆ ಕಾಣುವುದು.
ಸತ್ಯ ಮಾತನಾಡುವ ವ್ಯಕ್ತಿಗೆ ಸ್ವರ್ಗದಲ್ಲಿ ಬೇಡಿದ್ದನ್ನು ಕೊಡುವ ಮರ ಅಂದರೆ ಕಲ್ಪವೃಕ್ಷ ಆತ ಏನನ್ನು ಕಲ್ಪಿಸಿಕೊಳ್ಳುವನೋ ಅದನ್ನೇ ನೀಡುತ್ತದೆ. ಅಸತ್ಯ ನುಡಿವ ವ್ಯಕ್ತಿಗೆ ನೀರಿನ ಗುಳ್ಳೆ ಯಾಗಿ ತೋರುವುದು.ಧರ್ಮದಿಂದ ನಡೆಯುವ ವ್ಯಕ್ತಿಗೆ ಬಯಸಿದ್ದನ್ನು ಕೊಡುವ ರತ್ನ ಸ್ವರ್ಗ ದ ಮಣಿ ಮನದಲ್ಲಿ ಏನನ್ನು ಚಿಂತಿಸುವನೋ ಅದನ್ನೇ ನೀಡುತ್ತದೆ. ಅಧರ್ಮದಿಂದ ನಡೆಯುವವನಿಗೆ ಒಂದು ಗಾಜಿನ ಮಣಿಯಾಗಿ ಕಾಣುತ್ತದೆ ಶ್ರೀ ಗುರುವಿನ ಮೇಲೆ ಕಾರುಣ್ಯವುಳ್ಳ ಸದ್ಬಕ್ತನಿಗೆ ಜಂಗಮ ಲಿಂಗ ವಾಗಿ ಗೋಚರಿಸುವುದು ಭಕ್ತನಲ್ಲದ ಪಾಪಕರ್ಮ ಮಾಡುವವನಿಗೆ ಜಂಗಮಲಿಂಗವು ಮಾನವನಾಗಿ ತೋರುತ್ತದೆ ಎಂದು ವಚನಕಾರ್ತಿ ಹೇಳಿದ್ದಾಳೆ.

ಕೃತಯುಗ ಮೂವತ್ತೆರಡು ಲಕ್ಷ ವರುಷದಲ್ಲಿ ಹೋಮವನಿಕ್ಕುವಾಗ ಕುಂಜರನೆಂಬ ಆನೆಯ ಕೊಂದು ಹೋ ಮವನಿಕ್ಕಿದರು ಬ್ರಾಹ್ಮಣರು ತ್ರೇತಾಯುಗ ಹದಿನಾರು ಲಕ್ಷ ವರುಷದಲ್ಲಿ ಬ್ರಾಹ್ಮಣರು ಹೋಮವನಿಕ್ಕುವಾಗ ಮಹೀಷನೆಂಬ ಕರಿಎಮ್ಮೆಯ ಮಗನ ಕೊಂದು ಹೋಮವನಿಕ್ಕಿದರು
ದ್ವಾಪರಯುಗ ಎಂಟುಲಕ್ಷ ವರುಷದಲ್ಲಿ ಹೋಮವನಿಕ್ಕುವಾಗ ಅಶ್ವನೆಂಬ ಕುದುರೆಯ ಕೊಂದು ಹೋಮವನ್ನಿ ಕ್ಕಿದರು ಬ್ರಾಹ್ಮಣರು ಕಲಿಯುಗ ನಾಲ್ಕು ಲಕ್ಷ ವರುಷದಲ್ಲಿ ಹೋಮವನಿಕ್ಕುವಾಗ ಜಾತಿ ಯಾಡಿನ ಮಗ ಹೋತನ ಕೊಂದು ಹೋಮವನಿಕ್ಕಿದರು ಬ್ರಾಹ್ಮಣರು ಅಣೋರಣೀಯಾನ್ ಮಹತೋ ಮಹೀಯಾನ್ ಎಂದುದಾಗಿ ಶಿವಭಕ್ತ ಹೊತ್ತಾರೆಯೆದ್ದು ಗುರುಲಿಂಗ ಜಂಗಮಕ್ಕೆ ಶರಣನೆನ್ನದೆ ಮುನ್ನ ಒಂಟಿ ಬ್ರಾಹ್ಮಣನ ಕಂಡು ಶರಣಾರ್ಥಿ ಎಂದಡೆ ಎಂಬತ್ತುನಾಲ್ಕುಲಕ್ಷ ಯೋನಿಯಲ್ಲಿ ಹಂದಿಯ ಬಸುರಲ್ಲಿ ಬಪ್ಪುದು ತಪ್ಪದು ಕಾಣದ ಲಿಂಗ ಪೆದ್ದಿಗಳ ರಸ ಒಲ್ಲನವ್ವಾ

ಧರ್ಮ ಹಾಗೂ ಪುಣ್ಯದ ಹೆಸರಲ್ಲಿ ನಡೆಯುವ ಹೋಮ ಹವನದ ಬಗ್ಗೆ ಕಾಳವ್ವೆಯ ಮನಸ್ಸು ಕುದಿಯುತ್ತದೆ. ಕೃತಯುಗದಲ್ಲಿ ಕುಂಜರನೆಂಬ ಆನೆಯನ್ನು
ತ್ರೇತಾಯುಗದಲ್ಲಿ ಮಹೇಶನೆಂಬ ಕರಿಎಮ್ಮೆಯನ್ನು ಮಗನೆಂದು ಕೋಣವನ್ನು
ದ್ವಾಪರಯುಗದಲ್ಲಿ ಅಶ್ವ ನೆಂಬ ಕುದುರೆಯನ್ನು
ಕಲಿಯುಗದಲ್ಲಿ ಜಾತಿಯ ಆಡಿನಮಗ ಹೋತನನ್ನು ಹೋಮ, ಹವನ,ವ್ರತದ ಹೆಸರಲ್ಲಿ ಕೊಡುವವರಿಗೆ ನಾವೇಕೆ ಶರಣೆನ್ನಬೇಕು ?ಅಂದರೆ ಹೋಮ ಹವನದ ಮೂಲಕ ಬಲಿ ಕೊಡುವವರನ್ನು ಕುಲಜರು ಎಂದು ಒಪ್ಪಿಕೊಳ್ಳುವ ಈ ಸಮಾಜದ ವ್ಯವಸ್ಥೆಯು ಮಾಂಸ ತಿಂದು ಶಿವನಿಗೆ ಪಂಚಾಮೃತವನ್ನು ನೀಡುವ ನಮ್ಮಂತಹ ನಮ್ಮನ್ನು ಏಕೆ ಅಸ್ಪೃಶ್ಯರೆಂದು ಕರೆದರು? ಎಂಬಂತಹ ಗಹನವಾದ ಪ್ರಶ್ನೆಯನ್ನು ಮುಂದಿಡುತ್ತಾಳೆ.ತನ್ನ ಹೊಟ್ಟೆಗಾಗಿ ಪ್ರಾಣಿಗಳನ್ನು ತಿಂದರೆ ಅಂತವರು ಅಸ್ಪೃಶ್ಯ ಎಂದಾದರೆ ಹೋಮ-ಹವನಗಳಿಗೆ ಪ್ರಾಣಿಗಳನ್ನು ಕೊಲ್ಲುವವರನ್ನು ನಾವು ಏನೆಂದು ಕರೆಯಬೇಕು? ಹಿಂಸೆಯಲ್ಲಿ ಏನಾದರೂ ರಿಯಾಯಿತಿ ಇದೆಯೇ? ಎಂದು ಕಳವೆ ಪ್ರಶ್ನಿಸುತ್ತಾಳೆ. ಧರ್ಮದ ಹೆಸರಿನಲ್ಲಿ ಪ್ರಾಣಿಗಳ ಕೊಂದವರನ್ನುಈ ವ್ಯವಸ್ಥೆ ಒಪ್ಪುವುದಾದರೆ ಹಸಿವಿಗಾಗಿ ಪ್ರಾಣಿಗಳನ್ನು ಕೊಂದು ತಿನ್ನುವವರನ್ನು ಏಕಾಗಿ ನೀವು ದೂರ ಇಡುತ್ತೀರಿ ಎಂದು ಜಾತಿಗಳು ನೀವೇಕೆ ಕೇಳಾದಿರೋ? ಎಂದು ಆಗ್ರಹಿಸುತ್ತಾಳೆ.
ಹೀಗಾಗಿ ಶಿವಭಕ್ತ ಹೊತ್ತಾರೆಯೆದ್ದು ಗುರು-ಲಿಂಗ-ಜಂಗಮಕ್ಕೆ ಶರಣೆನ್ನದೆ ಮುನ್ನ ಒಂಟಿ ಬ್ರಾಹ್ಮಣನ ಕಂಡು ಶರಣು ಎಂದರೆ ಎಂಬತ್ತುನಾಲ್ಕುಲಕ್ಷ ಹಂದಿಯ ಬಸುರಲ್ಲಿ ಬಪ್ಪುದು ತಪ್ಪದು ಕಾಣಾ ಕಾಣುತ್ತಾಳೆ.

ಕೃತಯುಗಾದಿ ಕಲಿಯುಗ ಅಂತ್ಯದವರೆಗೆ ಬೇರೆಬೇರೆ ಯುಗದಲ್ಲಿ ಬೇರೆಬೇರೆ ಪ್ರಾಣಿಗಳನ್ನು ಯಜ್ಞಕ್ಕೆ ಬಲಿ ಕೊಡುತ್ತ ಬಂದವರು ವಿಪ್ರರು ಶಿವಭಕ್ತರು ಹೊತ್ತಾರೆಯೆದ್ದು ಗುರು-ಲಿಂಗ-ಜಂಗಮಕ್ಕೆ ಶರಣೆನ್ನದೆ ಮುನ್ನ ಬ್ರಾಹ್ಮಣನ ಕಂಡು ಶರಣಾರ್ಥಿ ಎಂದರೆ 84ಲಕ್ಷ ಯೋನಿಯಲ್ಲಿ ಹಂದಿಯ ಬಸುರಲ್ಲಿ ಬಪ್ಪುದು ತಪ್ಪು ದು ಎಂದು ಹೇಳುವ ಕಾಳವ್ವೆ ಯ ಮಾತಿನಲ್ಲಿ ಶತ-ಶತಮಾನಗಳಿಂದ ಉಳಿಸಿಕೊಳ್ಳುತ್ತಬಂದ ನೊಂದವರ ನೋವಿನ ಧ್ವನಿ ಅಡಗಿದೆ ನೊಂದು ಬೆಂದು ಬಂದ ನುಡಿಗಳಲ್ಲಿ ಯಾರು ಅಳಿಸಲಾಗದ ಸತ್ಯ ಅಡಗಿದೆ ಒಬ್ಬ ಸಾಮಾನ್ಯ ಹೆಣ್ಣುಮಗಳು ಸ್ಥಾಪಿತ ವ್ಯವಸ್ಥೆಯ ಎದುರು ಹೀಗೆ ದಿಟ್ಟತನದಿಂದ ಧ್ವನಿ ಎತ್ತಿ ನಿಂತಿದು ಶರಣರ ಚಳುವಳಿಯ ಸಾರ್ಥಕತೆಗೆ ಒಂದು ಜೀವಂತ ಸಾಕ್ಷಿಯಾಗಿದೆ….

ಸಾವಿತ್ರಿ ಎಂ.ಕಮಲಾಪುರ

One thought on “ಉರಲಿಂಗಪೆದ್ದಿ ಪುಣ್ಯಸ್ತ್ರೀ ಕಾಳವ್ವೆ

Comments are closed.

Don`t copy text!