ವಚನ ರಕ್ಷಣೆಯಲ್ಲಿ ರಾಣಿ ಚಾಮಲಾದೇವಿ ಪಾತ್ರ
ಕಲ್ಯಾಣ ಕ್ರಾಂತಿ ದಲಿತರ ಬಡವರ ಅಸ್ಪ್ರಶ್ಯರ ಮಹಿಳೆಯರ ದಮನಿತರ ಕ್ರಾಂತಿಯಾಗಿದೆ . ಜಗತ್ತಿನ ಇತಿಹಾಸದಲ್ಲಿಯೇ ಒಂದು ಅಪೂರ್ವ ಸಾಮಾಜಿಕ ಆರ್ಥಿಕ ಧಾರ್ಮಿಕ ನೈತಿಕ ವೈಚಾರಿಕ ಕ್ರಾಂತಿ ಕರ್ನಾಟಕದಲ್ಲಿ ಜರುಗಿ ಹೋಗಿದೆ .ಬಸವಣ್ಣನವರು ಮತ್ತು ಶರಣರು ಕೈಕೊಂಡ ಅನೇಕ ಸಾಮಾಜಿಕ ಧಾರ್ಮಿಕ ಸುಧಾರಣೆಗಳು ಪರಿವರ್ತನೆಗಳು ಅಂದಿನ ಸಂಪ್ರದಾಯವಾದಿಗಳಿಗೆ ನುಂಗಲಾರದ ತುತ್ತಾಗಿತ್ತು . ಅಕ್ಷರ ಜ್ಞಾನ ಧಾರ್ಮಿಕ ಹಕ್ಕು ಕೇವಲ ಕೆಲವೇ ವರ್ಗದ ಜನರಿಗೆ ಮೀಸಲಾಗಿತ್ತು . ಅದನ್ನು ಬಸವಣ್ಣ ಸಾರ್ವತ್ರಿಕಗೊಳಿಸಿ ಮನುಷ್ಯನಲ್ಲಿಯೇ ದೇವರನ್ನು ಕಾಣುವ ದೈವತ್ವವನ್ನು ಹೊಂದುವ ಕಾಯಕ ದಾಸೋಹದಲ್ಲಿ ಮುಕ್ತಿ ಕಾಣುವ ಅತ್ಯಂತ ಸುಂದರ ಸಮಾಜವಾದದ ಸಮತೆಯ ದೀಪವನ್ನು ಹಚ್ಚಿದರು . ಸಾಮಾಜಿಕ ಪರಿವರ್ತನೆಯ ಅತ್ಯಂತ ಉತ್ತುಂಗದ ಕಾರ್ಯವೇ
ಸಮಗಾರ ಹರಳಯ್ಯನವರ ಮಗ ಶೀಲವಂತ ಮತ್ತು ಬ್ರಾಹ್ಮಣ ಮಂತ್ರಿ ಮಧುವರಸರ ಕನ್ಯೆ ಲಾವಣ್ಯ ಜೊತೆ ಕಲ್ಯಾಣ ಮಹೋತ್ಸವವು ಬ್ರಾಹ್ಮಣರ ಸನಾತನವಾದಿಗಳ ಕೋಪದ ಕಿಚ್ಚಿಗೆ ತುಪ್ಪ ಸುರಿದಂತಾಯಿತು . ರಾಜ ಬಿಜ್ಜಳನಿಗೆ ಪುರೋಹಿತರು ವೈದಿಕರು ಚಾಡಿ ಹೇಳಿ ವರ್ಣ ಸಂಕರದ ವಿಷಯವನ್ನು ಅಪರಾಧವೆಂದು ಬಿಂಬಿಸಿ ಬಸವಣ್ಣನವರನ್ನು ಕರೆಯಿಸಿ ಇಂತಹ ಮದುವೆಯನ್ನು ಅಸಿಂಧು ಮಾಡಲು ಆದೇಶಿಸಲು ಅದನ್ನು ಒಪ್ಪದ ಬಸವಣ್ಣನವರು ತಮ್ಮ ಪ್ರಧಾನಿ ಪಟ್ಟವನ್ನು ತಿರಸ್ಕರಿಸಿ ಕೂಡಲ ಸಂಗಮಕ್ಕೆ ಸಾಗಿದರು . ಚೆನ್ನಬಸವಣ್ಣನವರು ಚಿಕ್ಕ ದಂಡನಾಯಕರಾಗಿದ್ದರು ಸಿದ್ಧರಾಮರು ಮಡಿವಾಳ ಮಾಚಿದೇವ ಮಾದಾರ ಚನ್ನಯ್ಯ ಮುಂತಾದ ಶರಣ ಶರಣೆಯರು ಆತಂಕಕ್ಕೆ ಒಳಗಾದರು . ಬಿಜ್ಜಳ ಗೃಹಬಂಧನಕ್ಕೆ ಒಳಗಾಗಿ ಮಗ ಸೋವಿದೇವ ಹರಳಯ್ಯ ಮತ್ತು ಮಧುವರಸರು ಎಳೆ ಹೂಟಿ ಶಿಕ್ಷೆ ನೀಡುತ್ತಾನೆ . ಶರಣರ ವಚನಗಳಿಗೆ ಬೆಂಕಿ ಹಚ್ಚುವ ಕುಚೋದ್ಯ ಕೆಲಸವೊಂದು ನಡೆಯಿತು . ಮುಗ್ಧ ಶರಣರ ಮರಣ ಹೋಮ ಆರಂಭವಾಯಿತು . ಶರಣರ ರುಂಡ ಚೆಂಡಾಡಿದರು ಕಲ್ಯಾಣದ ಮಣ್ಣು ರಕ್ತದೋಕುಳಿಯಿಂದ ಕೆಂಪಾಯಿತು . ಕಲ್ಯಾಣವೆಂಬುದು ಕಟುಕರ ಕೇರಿಯಾಯಿತು .
ಸಿಕ್ಕ ವಚನಗಳ ಮೂಟೆಗಳನ್ನು ಶರಣರು ಹೊತ್ತು ಬೇರೆ ಬೇರೆ ಪ್ರದೇಶಕ್ಕೆ ಹೊರತು ನಿಂತರು .
ಸಿದ್ಧರಾಮರು ಈ ವಚನಗಳ ಸಂರಕ್ಷಣೆಯಲ್ಲಿ ಬಹು ದೊಡ್ಡ ಪಾತ್ರವನ್ನು ವಹಿಸಿದರು .ತಾವು ಕಲ್ಯಾಣಕ್ಕೆ ಬರುವ ಮುನ್ನ ಅವರು ಸೋಲಾಪುರದ ಮಹಾರಾಣಿ ಚಾಮಲಾದೇವಿಯವರ ಆಸ್ಥಾನದಲ್ಲಿ ರಾಜಗುರುಗಳಾಗಿದ್ದರೆಂದು ತಿಳಿದು ಬರುತ್ತದೆ . ತಮ್ಮ ಯೌವನಾವಸ್ಥೆಯಲ್ಲಿ ಸಿದ್ಧರಾಮರು ರಾಣಿ ಚಾಮಲಾದೇವಿಯರಿಂದ ನೂರಾರು ಎಕರೆ ಜಮೀನು ಪಡೆದುಕೊಂಡು ಜನರಿಗೆ ಕೆರೆ ಕಟ್ಟೆ ನೀರಾವರಿ ಮಾಡಿ ಜನರಿಗೆ ಭೂಮಿಗೆ ನೀರಿನ ತಂಪನ್ನು ನೀಡಿದವು ಸಿದ್ಧರಾಮರು . ಸೋಲಾಪುರ ಮಹಾರಾಣಿ ಚಾಮಲಾದೇವಿ ಸೋಲಾಪುರದ ಇಂದಿನ ದೇಶಮುಖ ಮನೆತನದವರ ಹೆಣ್ಣುಮಗಳು .ಸೋಲಾಪುರ ಮಹಾರಾಣಿ ಚಾಮಲಾದೇವಿ . ತುಮಕೂರಿನ ಬಿಜ್ಜಾವರ ಮಧುಗಿರಿಯ ನೊಳಂಬ ಸಂಸ್ಥಾನದ ಪ್ರಭು ರಾಜ ಹಿರೇಗೌಡರು ಮರಣ ಹೊಂದಿದ ಮೇಲೆ ಮಧುಗಿರಿಯ ರಾಜ್ಯವು ಕೈ ಬಿಟ್ಟು ಹೋಗುತ್ತದೆ .ಅವರ ಮಕ್ಕಳು ತಮ್ಮ ಸೋದರತ್ತೆ ಚಾಮಲಾದೇವಿಯ ಮೂಲಕ ಸಿದ್ಧರಾಮರನ್ನು ಸಂಪರ್ಕಿಸಿ ಮರಳಿ ತಮ್ಮ ರಾಜ್ಯವನ್ನು ರಾಜ ಹಿರೇಗೌಡರ ಮಕ್ಕಳು ಪಡೆಯುತ್ತಾರೆ .ನಂತರ ಅವರೆಲ್ಲರೂ ಸಿದ್ಧರಾಮರ ಅನುಯಾಯಿಗಳಾಗಿ ಲಿಂಗಾಯತ ಧರ್ಮವನ್ನು ಸ್ವೀಕರಿಸುತ್ತಾರೆ . ಹೀಗಾಗಿ ಸೋದರಳಿಯರಿಗೆ ಮಡಿದ ಉಪಕಾರ ಸ್ಮರಣೆಯನ್ನು ರಾಣಿ ಚಾಮಲಾದೇವಿಯವರು ಶರಣರಿಗೆ ಆಶ್ರಯ ನೀಡಲು ಮುಂದಾಗುತ್ತಾರೆ.
ಕಲ್ಯಾಣದಲ್ಲಿರುವ ಬಡಿಗ ಕುಂಬಾರ ನೇಕಾರ ಕಂಬಾರ ಕುರುಬ ಹೂಗಾರ ಸಿಂಪಿಗ ಬಣಜಿಗ ಒಕ್ಕಲಿಗ ಮುಂತಾದ ಅನೇಕ ಕಾಯಕಗಳನ್ನು ಮಾಡುವ ಶರಣರಿಗೆ ಯುದ್ಧ ಕಲೆಯೇ ಗೊತ್ತಿರಲಿಲ್ಲ .ಹಾಗಿದ್ದರೆ ಶರಣರು ಬಿಜ್ಜಳನ ಮಗ ಸೋವಿದೇವನನ್ನು ಎದುರಿಸಿದ್ದು ಹೇಗೆ ? ಮಡಿವಾಳ ಮಾಚಿದೇವ ಅಂಬಿಗರ ಚೌಡಯ್ಯ ಶಾಂತರಸರು ಮಾದಾರ ಚನ್ನಯ್ಯನವರಿಗೆ ಯುದ್ಧದ ಕಲೆ ಕರಗತವಾಗಿತ್ತು ಆದರೆ ಬಹುತೇಕ ಜನರಿಗೆ ತಮ್ಮ ಪ್ರಾಣ ರಕ್ಷಣೆಗಿಂತ ವಚನಗಳನ್ನು ರಕ್ಷಿಸಿ ಮುಂದಿನ ಜನಾಂಗಕ್ಕೆ ನೀಡಬೇಕೆಂಬ ಹಂಬಲ ಹೊಂದಿದ್ದರು .ಯಾವ ರಾಜಾಶ್ರಯವಿರದ ಶರಣರು ದಿಕ್ಕುದೊಚದಂತಾದರೂ ಆಗ ಸಿದ್ಧರಾಮರು ಸೊನ್ನಲಾಪುರದ ಅಥವಾ ಸೊಲ್ಲಾಪುರದ ರಾಣಿ ಚಾಮಲಾದೇವಿಗೆ ಕಲ್ಯಾಣದ ಸಂದಿಗ್ಧ ಪರಿಸ್ಥಿತಿ ವಿವರ ನೀಡಿ ಶರಣರಿಗೆ ಸೂಕ್ತ ಆಶ್ರಯ ನೀಡುವಂತೆ ಕೋರುತ್ತಾರೆ . ಸಿದ್ಧರಾಮರ ಮತ್ತು ಶರಣರ ಬಗ್ಗೆ ಅಪಾರ ಗೌರವ ಪ್ರೀತಿ ಇತ್ತು . ಮೇಲಾಗಿ ಸೊನ್ನಲಾಪುರದ ರಾಜಮನೆತನದ ರಾಜಗುರು ಸಿದ್ಧರಾಮರ ಆದೇಶವು ರಾಣಿ ಚಾಮಲಾದೇವಿ ಮೇಲಿತ್ತು.
ಸಿದ್ಧರಾಮರು ಅಲ್ಲಮರೊಂದಿಗೆ ವಾದಕ್ಕಿಳಿದು ಸೋತು ಮುಂದೆ ಕಲ್ಯಾಣಕ್ಕೆ ಬಂದು ಬಸವಾದಿ ಶರಣರ ಸಮ್ಮುಖದಲ್ಲಿ ಚನ್ನಬಸವಣ್ಣನವರಿಂದ ಇಷ್ಟಲಿಂಗ ದೀಕ್ಷೆಯನ್ನು ಪಡೆದ ನಂತರ , ಸೋಲಾಪುರದಲ್ಲಿ ಮಹಾರಾಣಿ ಚಾಮಲಾದೇವಿ ಹಾಗೂ ಸಿದ್ಧರಾಮ ಶರಣರು ಬಸವಣ್ಣ ಚೆನ್ನಬಸವಣ್ಣ ಮಾತು ಅನೇಕ ಶರಣರನ್ನು ಸೋಲಾಪುರಕ್ಕೆ ಕರೆ ತಂದು ಬಸವಣ್ಣ ಮತ್ತು ಚೆನ್ನ ಬಸವಣ್ಣನವರನ್ನು ಕುದುರೆ ಮೇಲೆ ಕುಳ್ಳಿರಿಸಿ ಮೆರವಣಿಗೆ ಮಾಡುತ್ತಾರೆ . ಇದಕ್ಕೆ ಸಾಕ್ಷಿಯಾಗಿ ಈಗಲೂ ಸೋಲಾಪುರದಲ್ಲಿ ಜೋಡು ಬಸವಣ್ಣನವರ ಗುಡಿ ಇದೆ . ಜೋಡು ಬಸವಣ್ಣ ಅಂದರೆ ಬಸವಣ್ಣ ಮತ್ತು ಚೆನ್ನ ಬಸವಣ್ಣನವರು ಕುದುರೆ ಮೇಲೆ ಹತ್ತಿ ಮೆರವಣಿಗೆ ಹೊರಟ ಸ್ಥಳದ ಸ್ಮಾರಕವು ಇದು ಜನರ ಮೌಖಿಕ ಮತ್ತು ನನ್ನ ನಿರಂತರವಾದ ಅಧ್ಯಯನದ ಸಂಶೋಧನೆಯ ಫಲವಾಗಿದೆ . ಶ್ರೀ ಚನ್ನವೀರ ಭದ್ರೇಶ್ವರಮಠ ಪತ್ರಕರ್ತರು ಇವರ ಸಹಾಯದೊಂದಿಗೆ ನಾನು ಸೋಲಾಪುರದಲ್ಲಿ ಶರಣರ ಸ್ಮಾರಕಗಳು ಮತ್ತು ಅವಶೇಷಗಳ ಬಗ್ಗೆ ಅಧ್ಯಯನ ಮಾಡಲು ಸೋಲಾಪುರಕ್ಕೆ ಹೋದಾಗ . ಸೋಲಾಪುರದ ಸಿದ್ಧರಾಮರ ಸಮಾಧಿ ಹಾವಿನಾಳ ಕಲ್ಲಯ್ಯನವರ ಗದ್ದುಗೆ ಕೋಟೆಯೊಳಗಿನ ಅವಶೇಷಗಳ ಬಗ್ಗೆ ಎರಡು ದಿನ ಸಮೀಕ್ಷೆ ನಡೆಸಿದ್ದೇವೆ .
ಕಲ್ಯಾಣದಿಂದ ಶರಣರು ಹುಮನಾಬಾದ ಮಾರ್ಗವಾಗಿ ಸೊಲ್ಲಾಪುರಕ್ಕೆ ತೆರಳುತ್ತಾರೆ . ರಾಣಿ ಚಾಮಲಾದೇವಿ ತನ್ನ ಅಪಾರವಾದ ಸೈನ್ಯವನ್ನು ಶರಣರೊಂದಿಗೆ ವಿಜಯಪುರದವರೆಗೆ ಕಳುಹಿಸಿ ಕೊಟ್ಟು ತನ್ನ ರಾಜ್ಯವನ್ನೇ ವಚನ ಸಂರಕ್ಷಣೆಗೆ ಮುಡುಪಿಟ್ಟಳು . ರಾಜಗುರವಾಗಿದ್ದ ಸಿದ್ಧರಾಮರು ಮುಂದೆ ಕಲ್ಯಾಣ ಚಾಲುಕ್ಯರ ಸಹೋದರ ಸಂಬಂಧಿಗಳು ಮತ್ತು ಕಳಚೂರ್ಯರ ಶತ್ರುಗಳಾದ ಬನವಾಸಿ ಕದಂಬರ ಜೊತೆ ಸಂಪರ್ಕ ಮಾಡಿ ಕಲ್ಯಾಣದ ಶರಣರ ವಚನಗಳನ್ನು ಸಂರಕ್ಷಿಸಲು ಮುಂದಾಗುತ್ತಾರೆ .ಜೈನ ಮಾಂಡಲೀಕರು ಅರಸರು ಇಂತಹ ಸಂದಿಗ್ಧ ಪರಿಸ್ಥಿಯಲ್ಲಿ ಸಹಾಯಕ್ಕೆ ಬಂದರು . ಚೋಳರ ಆಸ್ಥಾನದ ಯೋಧ ಮಾದಾರ ಚನ್ನಯ್ಯ ಇಂದಿನ ಚಾಮರಾಜನಗರದ ಕುರುಬಗಟ್ಟಿಯಲ್ಲಿ ಪತ್ನಿ ಸಮೇತ ಐಕ್ಯವಾಗಿದ್ದರೆ . ಶರಣರು ವಿಜಯಪುರ ಜಮಖಂಡಿ ಬನಹಟ್ಟಿ ಅಂಕಲಗಿ ಕಾದ್ರೊಳ್ಳಿ ಮುರುಗೋಡ ಅಲ್ಲಿಂದ ಬೇರೆ ಬೇರೆ ತಂಡವಾಗಿ ಉಳವಿಗೆ ಕೆಲವು ಶರಣರು ಮತ್ತು ಕೆಲವರು ಬನವಾಸಿ ಕಡೆಗೆ ಸಾಗಿ ಹೋದರು. ಕಲ್ಯಾಣದ ಶರಣರಿಗೆ ಮೊತ್ತ ಮೊಳದಳು ಆಶ್ರಯ ನೀಡಿ ವಚನಗಳನ್ನು ಸಂರಕ್ಷಿಸಿದ ಸೋಲಾಪುರದ ರಾಣಿ ಚಾಮಲಾದೇವಿಯವರ ಉಪಸ್ಮರಣೆಯನ್ನು ನಾವು ಮರೆಯಬಾರದು . ಇಂದಿಗೂ ಸೋಲಾಪುರದ ದೇಶಮುಖ ಮನೆತನದವರಲ್ಲಿ ಸಿದ್ಧರಾಮರ ಬೆತ್ತವಿದೆ. ( ಇದನ್ನು ಡಾ ವೀರಣ್ಣ ದಂಡೆಯವರು ದಾಖಲಿಸಿದ್ದಾರೆ ). ಶರಣಶ್ರೀ ಸೋಮಶಂಕರ ದೇಶಮುಖರ ಅವಿರತ ಪ್ರಯತ್ನದಿಂದಾಗಿ ದೇಶಮುಖರ ಮನೆಯಲ್ಲಿದ್ದ ಸಿದ್ಧರಾಮರ ಕಟ್ಟಿಗೆಯ ಬೆತ್ತವನ್ನು ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷಿಸಿ ಅದು ಹನ್ನೆರಡನೆಯ ಶತಮಾನದ ಕಟ್ಟಿಗೆಯ ಬೆತ್ತವೆಂದು ಗೊತ್ತಾಗಿದೆ ಎಂದು ಶ್ರೀ ಸೋಮಶಂಕರ ದೇಶಮುಖ ನನಗೆ ತಿಳಿಸಿದ್ದಾರೆ . ನೊಳಂಬ ಮನೆತನದ ರಾಜರು ಲಿಂಗಾಯತ ಧರ್ಮ ಸ್ವೀಕರಿಸಿ ಧರ್ಮ ರಕ್ಷಣೆಗೆ ನಿಂತಿದ್ದು ಶರಣರ ವಚನ ಸಂರಕ್ಷಣೆಯಲ್ಲಿ ಒಂದು ಇತಿಹಾಸದ ಮೈಲಿ ಗಲ್ಲು .
-ಡಾ.ಶಶಿಕಾಂತ ಪಟ್ಟಣ ಪುಣೆ – ರಾಮದುರ್ಗ
ಖ್ಯಾತ ಸಂಶೋಧಕರು,
ಬಸವಾದಿ ಶರಣರ ವಚನ ಅಧ್ಯಯನಕಾರರು