ಹೆಣ್ಣು ಮಕ್ಕಳು ಪುಣ್ಯದ ಫಲಗಳು
ಸ್ವಾತಂತ್ರ್ಯಭಾರತನಾರಿಯರೆಲ್ಲಾ
ಕೇಳಿರಿ ನೀವು ಇಲ್ಲೊಮ್ಮೆ
ಅಂತರಾಷ್ಟ್ರೀಯ ಮಹಿಳಾದಿನವಾ
ಆಚರಿಸ ಬನ್ನಿ ಎಲ್ಲೆಲ್ಲೂ!
ಹೆಣ್ಣುಮಕ್ಕಳು ಪುಣ್ಯದ ಫಲಗಳು
ಕೊಲ್ಲಬೇಡಿರಿ ಜೀವಗಳ
ಭ್ರಾಂತಿಯ ಬಿಟ್ಟು ಕುಟುಂಬದಲ್ಲಿ
ಶಾಂತಿ ಪಡೆಯಿರಿ ನೀವುಗಳು.
ವಿದ್ಯೆಯ ಕಲಿತು ಸಾಧನೆ ತೋರಿ
ಆರ್ಥಿಕ ಸಬಲತೆ ಹೊಂದುವೆವು
ಪ್ರಗತಿಯ ಹಾದಿ ಸುಸ್ಥಿರವಾಗಿ
ಬೆಳೆಯಲಿ ವಿಶ್ವದಿ ಭಾರತವು.
ಹೆಣ್ಣು ಗಂಡು ಸಮಾನವೆಂದು
ಸಾರಿರಿ ನೀವು ಅನುದಿನವೂ
ಸಮಾನತೆ ಪ್ರೀತಿ ಮೊಳೆಯಲಿ
ನಮ್ಮಯ ನೆಲೆಯ ಆಳದಲಿ.
ಬೆಳೆಯುವ ದಾರಿ ಕಂಡೆವು ನಾವು
ಜ್ಞಾನದ ಬೆಳಕಿನ ಬಿಂಬದಲಿ
ಸತ್ಯ ನ್ಯಾಯದಿ ನೆಮ್ಮದಿ ಹರಸಿ
ಹೋರಾಡಿ ಬಂದೆವು ಕಾಲುಕಿತ್ತು.
ಅನ್ಯಾಯವನು ಮೆಟ್ಟಿನಿಲ್ಲಿರಿ
ಗಟ್ಟಿತನದ ದನಿಯಲ್ಲಿ
ಸ್ವಾತಂತ್ರ್ಯ ಎಂಬುದು ಭಿಕ್ಷೆಯು ಅಲ್ಲ
ಧಕ್ಕಿಸಿಕೊಳ್ಳಿರಿ ಜಗದಲ್ಲಿ.
ನೀವು ಮೇಲು ನಾವು ಕೀಳು
ಎಂಬ ತರತಮ ಇನ್ನೇಕೆ?
ಮೌಢ್ಯವ ತೊರೆದು ಕೀಳಿರಿಮೆ ಕಳೆದು
ವಿಚಾರ ಮೊಳೆಯಲಿ ಲೋಕದಲಿ.
–ಡಾ.ಸುಜಾತ ಅಕ್ಕಿ