ಇಂದಿನ ಸ್ತ್ರೀ
ನನ್ನ ಅವನ ಪ್ರೇಮ ಕಥೆಯಲಿ, ಬೇರೆ ಹೆಣ್ಣಿನ
ಗಂಡನಿರಲಾರ ರುಕ್ಮಿಣಿಯ ಕಣ್ಣಿನಲಿ
ಮುಳ್ಳಿನಂತೆ ಚುಚ್ಚಲಾರೆ ನಾ ರಾಧೆಯಾಗಲಾರೆ
ನನ್ನ ಪವಿತ್ರತೆಯ ಪ್ರಮಾಣ ಪತ್ರ ಕೊಡಲಾರೆ
ಅಗ್ನಿ ಪರೀಕ್ಷೆಗೊಳಗಾಗಲಾರೆ
ಅವ ಏನು ನನ್ನ ತೊರೆವ?
ನಾನೇ ಅವನ ತೊರೆವೆ ನಾ ಸೀತೆಯಾಗಲಾರೆ
ಮೂರ್ತಿಯಲಿ ಮೋಹನ ಕಾಣುತ ಮನೆ ಸಂಸಾರ
ಬಿಟ್ಟು ಸಾಧು ಜತೆ ಸುತ್ತ ಲಾರೆ,ಒಲ್ಲದ ಗಂಡನ ಜತೆ
ಬಾಳಿ ವಿಷ ಕುಡಿವ ಮೀರಾ ನಾನಾಗಲಾರೆ.
ಕರ್ತವ್ಯ ಮರೆತು ಮನೆಬಿಟ್ಟು ಹೋದವನ
ಜ್ಞಾನಿಯಾಗಿದ್ದರೂ ನಾ ಕ್ಷಮಿಸಲಾರೆ
ಮದುವೆಗಿಂತ ಕಿಶೋರಿಯಾಗಿರುವೆ
ಆದರೆ ಯಶೋಧರೆಯಾಗಲಾರೆ.
ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಅಂಧಳಂತೆ
ಅಜ್ಞಾನಿಯಾಗಿ ಬಾಳಲಾರೆ
ಕುರುಡು ಗಂಡನ ಕಣ್ಣಾಗುವೆ ಹೊರತು
ನಾ ಗಾಂಧಾರಿಯಾಗಲಾರೆ.
ಅನ್ಯಾಯ ಮೋಸ ಸಹಿಸಲಾರೆ ಮನ ಗೆದ್ದ
ವನೊಂದಿಗೆ ಬಾಳುವೆ ಇಂದಿನ ಸ್ಫೂರ್ತಿಯ
ನಾರೀಶಕ್ತಿಯಾಗುವೆ
ನನ್ನ ಅಸ್ತಿತ್ವ ತಿಳಿಸುತ ಜಗದ ಕಣ್ಣಾಗುವೆ ನಾ.
–ಅನ್ನಪೂರ್ಣಾ ಸಕ್ರೋಜಿ. ✍️