ಜನಪದವು ಕಂಡ ದಿಟ್ಟ ಶರಣ ಮೇದಾರ ಕೇತಯ್ಯಾ.
ಹನ್ನೆರಡನೆಯ ಶತಮಾನದ ಬಸವಾದಿ ಪ್ರಮಥರು ಜಗತ್ತಿಗೆ ಅಮೂಲ್ಯವಾದ ಸೈದ್ಧಾಂತಿಕ ವೈಚಾರಿಕ ತಾತ್ವಿಕ ಚಿಂತನೆಗಳನ್ನು ನೀಡಿದರು .ಶರಣ ಸಂಕುಲದಲ್ಲಿಯೆ ಕಾಯಕ ದಾಸೋಹ ಲಿಂಗ ನಿಷ್ಠೆಯಿ೦ದ ಕಲ್ಯಾಣ ರಾಜ್ಯದಲ್ಲಿ ಮನುಕುಲಕ್ಕೆ ದುಡಿದ ಹಿರಿಯ ಚೇತನ ಕಾರ್ಮಿಕ ದಲಿತ ನಾಯಕ ದಿಟ್ಟ ಶರಣ ಮೇದಾರ ಕೇತಯ್ಯಾ.
ಶರಣ ಮೇದಾರ ಕೇತಯ್ಯಾನವರ ಜೀವನ ಅವರ ವಿಚಾರವನ್ನು ಜನಪದ ಸಾಹಿತಿಗಳು ಚೆನ್ನಾಗಿ ವಿವರಿಸಿದ್ದಾರೆ.
ಜನಪದ ಸಾಹಿತ್ಯವು ಶರಣರ ಕ್ರಾಂತಿಯನ್ನು ತನ್ನ ಗರ್ಭದಲ್ಲಿ ಇಟ್ಟುಕೊಂಡು ಮುಂದಿನ ಜನಾಂಗಕ್ಕೆ ನೀಡಿದ ಅತ್ಯಂತ ಮೌಲ್ಯಯುತವಾದ ಸಾಹಿತ್ಯ . ಜನಪದ ಸಾಹಿತ್ಯವು ಸಂಕೇತ ಸ೦ಜ್ಞೆ ಒಡಪು ಬೆಡಗುಗಳಿಂದ ಪ್ರತೀತಿ ಪಡೆದು ಮುಂದೆ ದೊಡ್ಡ ಪ್ರವಾಹ ಸಾಹಿತ್ಯವನ್ನೇ ನಿರ್ಮಿಸಿತು.
ಕಲ್ಯಾಣದ ಶಿವ ಶರಣರ ಚರಿತೆಯನ್ನು ರಚಿಸಿ ಬಸವಾದಿ ಶರಣರ ಸಿದ್ಧಾಂತವನ್ನು ಕಾಪಾಡಿಕೊಂಡು ಬಂದ ಸಾಹಿತ್ಯವೆ ವಚನ ಸಾಹಿತ್ಯ ಮತ್ತು ಜನಪದ ಸಾಹಿತ್ಯ .ಜನಪದ ಸಾಹಿತ್ಯವು ಬಸವಣ್ಣ ಅಲ್ಲಮ ಪ್ರಭು ಮಡಿವಾಳ ಮಾಚಯ್ಯ ,ಅಕ್ಕ ಮಹಾದೇವಿ ನಾಗಮ್ಮ ಹಾಗು ಮೇದಾರ ಕೇತಯ್ಯನವರ ಬಗ್ಗೆ ಅತ್ಯಂತ ನೈಜ ಸತ್ವಯುತ ಚಿತ್ರಣ ಚಿತ್ರಿಸಿ ಶರಣ ಸಂಕುಲಕೆ ತನ್ನ ಕೃತಾರ್ಥ ಸಲ್ಲಿಸಿದೆ.
ಮಹಾ ಶರಣ ಮೇದಾರ ಕೇತಯ್ಯಾ ೧೨ ನೆಯ ಶತಮಾನದ ಅಪ್ಪ ಬಸವಣ್ಣನವರ ಸಮಕಾಲೀನ ಸಾಧಕ .ಆತನ ಊರು ಕಸಬು ಮತ್ತು ಸಿದ್ಧಾಂತದ ಬಗ್ಗೆ ಜನಪದ ಕವಿಗಳು ಅತ್ಯಂತ ಸ್ಪಷ್ಟವಾಗಿ ವಿವರಿಸಿದ್ದಾರೆ.
ಮಲೆನಾಡಗುಡಿಯೊಳಗೆ I ಈ ಉಳಿಮೆI
ಬೆಟ್ಟದ ಕೆಳಗೆ I ಬೇಲೂರ ಕೇತ ಮೇದಾರ .
ಕಾಡೊಳಗೆ ಬೆಳೆದಾಡಿ ಕಲೆತ ಶಿವ ಮತವII.
ಈ ಜನಪದ ನುಡಿಯಿಂದಾ ಕೇತಯ್ಯನು ಮಲೆನಾಡಿನ ಬೇಲೂರನವನಾಗಿದ್ದನು ಎಂದು ತಿಳಿದು ಬರುತ್ತದೆ .ಅಲ್ಲದೆ ಆತನು ಕಲ್ಯಾಣಕ್ಕೆ ಬರುವ ಪೂರ್ವದಲ್ಲಿ ಶಿವ ಭಕ್ತನಾಗಿದ್ದನು .ದಟ್ಟ ಕಾಡಿನೊಳಗೆ ಅಲೆಯುತ್ತ ಸ್ವಾಭಿಮಾನಿ ಜೀವನ ನಡೆಸಿದನು ಕೇತಯ್ಯ .
ಕೇತಯ್ಯ ನಿನ್ನ ಮಡದಿ I ಸಾತವ್ವಳೆ೦ಬವಳು .I
ಜಾತಿ ಮೇದರದು ಕಸುಬಿನಲಿ I ನಾಡೊಳಗೆ
ನೀತಿ ಶಿವಮತದ ಒರೆಗಲ್ಲುII .
ಕೇತಯ್ಯನ ಮಡದಿ ಸಾತವ್ವ ಮತ್ತು ಅವರ ಮೂಲ ಕಸುಬು ಮೇದರದು ಅಂದರೆ ಕಾಡಿನೊಳಗೆ ಬಿದಿರಿನ ಮರ ಕಡಿದು ಒಣಗಿಸಿ ಬಿದಿರಿನ ಬುಟ್ಟಿ ನಿಚ್ಚಣಿಕೆ ಮುಂತಾದ ಅಡುಗೆ ಮನೆಗೆ ಉಪಯುಕ್ತವಸ್ತುಗಳನ್ನು ಮತ್ತು ಕೃಷಿ ಕಾಯಕಕ್ಕೆ ಬೇಕಾದ ಗಳೆ, ಕೂರಗಿ , ಮತ್ತಿತರ ವಸ್ತುಗಳ ಸಿದ್ದ ಪಡಿಸುವದು.
ಶರಣ ಮೇದಾರ ಕೇತಯ್ಯಾ ತುಂಬಾ ಕುಶಲ ಕರ್ಮಿ ನಿಪುಣನಾಗಿದ್ದನು .ಗಟ್ಟಿಯಾದ ಬಿದಿರು ಎಳೆಯ ಹೂವಿನ ಬಂಗಾರದ ತೇರನ್ನು ಅವನು ಮಾಡುತ್ತಿದ್ದನು ಎಂದು ಈ ಕೆಳಗಿನ ಜನಪದ ಪದ್ಯದಿಂದ ತಿಳಿದು ಬರುತ್ತದೆ .
ಬತ್ತಿಸರಾಗದೊಳು I ಸುತ್ತು ಹಾಡಿದ
ಬಿದಿರುI.ಹೊತ್ತೊಯ್ವ ಕಂಬಿ ಪರುವತಕೆ
ಮಾಗಡದ ಸತ್ಯುಳ್ಳ ತೇರು ಬೆಳವಲಕ !
ಶರಣ ಮೇದಾರ ಕೇತಯ್ಯ ಕಾಡಿನಲ್ಲಿ ಶರಣರ ವಚನಗಳ ಹಾಡುತ್ತಾ ಬತ್ತಿಸರಾಗವನ್ನು ನುಡಿಸುತ್ತಾ ಬಿದಿರನ್ನು ಕಡಿದು ಪರ್ವತ ಪ್ರದೇಶಕ್ಕೆ ಒಯ್ದು ಬೆಳುವಲದ ಊರಾದ ಮಾಗಡ ಎಂಬ ಗ್ರಾಮದಲ್ಲಿ ಸತ್ಯುಳ್ಳ ತೇರನ್ನು ( ರಥ ) ಮಾಡಿದರು
ಚೆನ್ನಂಗಿ ಬಿದಿರೆಳೆಯ I ನುಣ್ಣ ಮಾಟದ ತೇರ
ಹೊನ್ನ ಮಾಗಡದ ಹೂದೇರ I ಮೇದಾರ ಅಣ್ಣಂದಿ
ರಂದು ಕಟ್ಟಿದರು.I
ಚೆನ್ನಂಗಿ ಬಿದಿರಿನ ಮರದಿಂದ ಅಂದವಾದ ಸುಂದರವಾದ ಉತ್ತಮ ಮಾಟದ ಹೂದೇರನ್ನು ಅಣ್ಣ ಕೇತಯ್ಯ ಮಾಗಡ ಗ್ರಾಮಕ್ಕೆ ಕಟ್ಟಿ ಕೊಟ್ಟನು ಎಂದು ಜನಪದಿಗರು ಹೇಳಿದ್ದಾರೆ. ಕಾಯಕ ಕೇತಯ್ಯನವರ ಉಸಿರಾಗಿತ್ತು .
ಹೀಗೆ ಕೇತಯ್ಯ ಮತ್ತು ಸಾತವ್ವ ತಮ್ಮ ಸಾತ್ವಿಕ ಜೀವನ ಕಳೆಯುವ ಸಂದರ್ಭದಲ್ಲಿ ಕಲ್ಯಾಣ ಪಟ್ಟಣದಲ್ಲಿ ಅಣ್ಣ ಬಸವಣ್ಣನವರ ಸಾಮಾಜಿಕ ಕ್ರಾಂತಿಯ ಸುವಾರ್ತೆಯು ಕೇತಯ್ಯನಿಗೆ ಕೇಳಿ ಆನ೦ದವಾಗುತ್ತದೆ .ಅನುಭವ ಮಂಟಪದ ಚರ್ಚೆ ,ವಚನ ರಚನೆ ಸಾಮೂಹಿಕ ಪ್ರಸಾದ ,ಕಾಯಕ ,ನಿಷ್ಠೆ ಲಿಂಗ ,ಪೂಜೆ ಹೀಗೆ ಇಂತಹ ಸಮಾನ ಸಮತಾವಾದ ಮಹಾನ್ ಕ್ರಾಂತಿಯಲ್ಲಿ ಪಾಲ್ಗೊಳ್ಳಲು ಕೇತಯ್ಯ ಮತ್ತು ಸಾತವ್ವ ನಿರ್ಧರಿಸಿದರು .
ಮುತ್ತು ನೀರಲಾಯಿತ್ತು, ವಾರಿಕಲ್ಲು ನೀರಲಾಯಿತ್ತು,
ಉಪ್ಪು ನೀರಲಾಯಿತ್ತು.
ಉಪ್ಪು ಕರಗಿತ್ತು, ವಾರಿಕಲ್ಲು ಕರಗಿತ್ತು,
ಮುತ್ತು ಕರಗಿದುದನಾರೂ ಕಂಡವರಿಲ್ಲ.
ಈ ಸಂಸಾರಿಮಾನವರು ಲಿಂಗವಮುಟ್ಟಿ ಭವಭಾರಿಗಳಾದರು.
ನಾ ನಿಮ್ಮ ಮುಟ್ಟಿ ಕರಿಗೊಂಡೆನಯ್ಯಾ ಚೆನ್ನಮಲ್ಲಿಕಾರ್ಜುನಯ್ಯಾ
ಎಂಬ ಅಕ್ಕ ಮಹಾದೇವಿಯ ವಚನದಂತೆ ಮುತ್ತು ನೀರಿನಿಂದಾ ಹುಟ್ಟುತ್ತದೆ ,ವಾರಿಕಲ್ಲು ಮತ್ತು ಉಪ್ಪು ನೀರಿನಿಂದಾ ಹುಟ್ಟುತ್ತದೆ . ಆದ್ರೆ ವಾರಿಕಲು ಉಪ್ಪು ನೀರಿನಲ್ಲಿ ಕರಗಿ ಹೋಗುತ್ತವೆ ಆದರೆ ಮುತ್ತು ಕರಗೊದಿಲ್ಲಾ. ಕಾರಣ ಅದಕ್ಕೆ ಸಂಸ್ಕಾರದ ಶಕ್ತಿಯನ್ನು ಹೊಂದಿದೆ .ಅಣ್ಣ ಬಸವನ ಸ್ಪರ್ಶಿಸಿ ಎಲ್ಲ ಶರಣರು ಬಸವನಾದರು . ಈ ಸಂಸಾರಿ ಮಾನವರು ಲಿಂಗವಮುಟ್ಟಿ ಭವಭಾರಿಗಳಾದರು. ನಾ ನಿಮ್ಮ ಮುಟ್ಟಿ ಕರಿಗೊಂಡೆನಯ್ಯಾ ಎಂದು ಪಾರಮಾರ್ಥಿಕ ಚಿಂತನೆಗೆ ಪ್ರಾಪಂಚಿಕ ಮಾರ್ಗ ಹುಡುಕಿ ಸಾರ್ಥಕತೆ ಸಾಧಿಸುವ ಶರಣ ಚಳುವಳಿಯಲ್ಲಿ ಕೇತಯ್ಯ ಮತ್ತು ಸಾತವ್ವ ಪಾಲ್ಗೊಂಡರು.
ಬಸವ ಸಾರಿದನಂದು I . ಕುಶಲದಲಿ ವಚನಗಳ II
ಮುಸುಕಿರುಳು ಹರಿದು ನಸುಕಾತುI . ಜಗದೊಳಗೆ ಹೊಸ ಮತದ ಸೂರ್ಯ ಉದಯಿಸಿದ
ಬಸವಣ್ಣ ಕತ್ತಲೆಯ ನಾಡಿಗೆ ಹೊಸ ಮತದ ಸೂರ್ಯನಾಗಿ ಉದಯಿಸಿದ .ಜನರ ಮದ್ದೆ ಇರುವ ಕಳವಳ ಕತ್ತಲೆ ಹೋಗಲಾಡಿಸಿ ಆಶಾ ಭಾವದ ಭರವಸೆಯ ನಾಯಕನಾದ ಬಸವಣ್ಣನವರ ಕ್ರಾಂತಿಗೆ ಕೇತಯ್ಯ ಮತ್ತು ಸಾತವ್ವ ಅಣಿಯಾದರು. ಇಲ್ಲಿ ಹೊಸ ಧರ್ಮದ ಸ್ಥಾಪಕ ಬಸವಣ್ಣ ಅಂತಾ ವಚನ ಸಾಹಿತ್ಯದ ಜೊತೆಗೆ ಜನಪದ ಸಾಹಿತ್ಯದಲ್ಲಿಯೂ ಉಲ್ಲೇಖವಿದೆ .
ಕಾಯಕ ಕಡ್ಡಾಯ ದಾಸೋಹ ಸೇವೆ ಲಿಂಗಪೂಜೆ ಜಂಗಮ ಪ್ರಜ್ಞೆ ಮೂಡಿಸಲು ಪ್ರತಿಯೊಬ್ಬರೂ ಕಾಯಕ ಮಾಡಲೇ ಬೇಕಾಗಿತ್ತು .ಕೇತಯ್ಯನಿಗೆ ಕುಲ ಕಸಬು ಕದಿರು ಮಾಡುವದು ಮೇದಾರ ವೃತ್ತಿ . ಬಸವಣ್ಣನವರು ಕಾಯಕಕ್ಕೆ ಸಮಾನ ಗೌರವ ನೀಡಿದರು . .
ಉದಿತ ಜೀವನ ರಾಟಿ I. ಕದಿರ ಕಾಯಕ ಮಾಡಿ II
ನೆದರೆಂಬ ನೂಲ ಒಳನೂತು .ಬಸವಣ್ಣ I
ಸದರೆಂದು ನೇದ ಹೊಸ ಮತವ. II
ಹುಟ್ಟಿನಿಂದಲೇ ಈ ಮೇದಾರ ಕುಲದಲ್ಲಿ ಹುಟ್ಟಿ ಕದಿರಿನ ಕಾಯಕವ ಮಾಡುತ್ತಾ ಬಸವಣ್ಣನ ತತ್ವಗಳಿಂದ ಪ್ರಭಾವಿತನಾಗಿ ಸಮಾಜದ ಕಾಳಜಿ ನೆದರೆಂಬ ನೂಲವನ್ನು ನೂತು ಬಸವಣ್ಣನ ಹೊಸಮತಕೆ ಸದರನ್ನು ನೆದನು ಕೇತಯ್ಯ ಅನ್ನುವ ಅಭಿಪ್ರಾಯಕ್ಕೆ ಜನಪದಿಗರು ಬರುತ್ತಾರೆ. ತನ್ನ ವಿಕಾಸಕ್ಕೆ ಬಸವಣ್ಣನೆ ಸ್ಪೂರ್ತಿ ಎಂದೆನ್ನುತ್ತಾನೆ. ರಾಟಿಯಿಂದಾ ಹೇಗೆ ಒಳ್ಳೆಯ ನೂಲನ್ನು ನೇಯಬಹುದೋ ಹಾಗೆ ಬಸವಣ್ಣನವರು ಎಲ್ಲರೂ ಸ್ವೀಕರಿಸುವ ಹೊಸ ಧರ್ಮವನ್ನು ನೇಯ್ದರು.
ಕೇತಯ್ಯ ಮತ್ತು ಸಾತವ್ವ ತಮ್ಮ ಲಿಂಗ ಪೂಜೆ ಜಂಗಮ ಸೇವೆ ಕಾಯಕ ದಾಸೋಹದಿಂದಾ ಅರಿವು ಆಚಾರ ಹುರಿಗೊಳಿಸಿ ಕಲ್ಯಾಣಕ್ಕೆ ಹೋಗಲು ಪುಣ್ಯ ದಂಪತಿಗಳು ಸಿದ್ದಗೊಳ್ಳುತ್ತಾರೆ.ಕಲ್ಯಾಣದ ಶರಣರನ್ನು ಕೂಡಿಕೊಳ್ಳಲು ತಮ್ಮ ಬದುಕನ್ನು ಕೃತಾರ್ಥ ಮಾಡಿಕೊಳ್ಳಲು ಹ೦ಬಲ ಹೆಚ್ಚಾಯಿತು.
ಒಂದು ದಿನ ಕೇತಯ್ಯ ತನ್ನ ಮಡದಿಯನ್ನು ಉದ್ದೇಶಿಸಿ
ಕೇತ ಕೇಳಿದನಂದು I ಸಾತವಾ ಹೇಳಿದಳು I
ಜೀತ ಶಿವ ಮತಕೆ ನಾವಿಂದು I ಪತಿದೇವ
ಮಾತಾಡಿ ಬಹಳ ಫಲವೇನು ? II
ಬಸವಾದಿ ಪ್ರಮಥರ ಶರಣ ಪಥಕ್ಕೆ ಹೆಜ್ಜೆ ಹಾಕಲು ನಿರ್ಧರಿಸಿದರು .ಮಡದಿ ಸಾತವ್ವಳು ಸಹಿತ ಬೆಲೂರಿನಲ್ಲಿ ವ್ಯರ್ಥ ಸಮಯ ಹರಣ ಮಾಡುವಲ್ಲಿ ಅರ್ಥವಿಲ್ಲ ಎನ್ನುವ ಸಲಹೆ ನೀಡುತ್ತಾಳೆ. ಬಸವಣ್ಣನವರ ಕರುಳಿನ ಕರೆ ಈ ಪುಣ್ಯ ದ೦ಪತಿಗಳನ್ನು ಕಲ್ಯಾಣಕ್ಕೆ ಕರೆದೊಯ್ಯಿತು .
ಬಸವಣ್ಣನವರ ಬಗ್ಗೆ ಕೇಳಿ ತಿಳಿದಿದ್ದ ಕೇತಯ್ಯ ಸಾತವ್ವ ದ೦ಪತಿಗಳು .ಬಸವಣ್ಣನವರನ್ನು ಪ್ರತ್ಯಕ್ಷವಾಗಿ ಕಂಡಾಗ ಆದ ಸಂತೋಷ ಆನ೦ದ ಅಷ್ಟಿಷ್ಟಲ್ಲ .
ಕೇತಯ್ಯ ತನ್ನ ತನು ಮನ ಭಾವ ಬುದ್ಧಿ ಸೂಕ್ಷ್ಮ ಸ್ಥೂಲ ಮನಜ್ಞಾನಕ್ಕೆ ಲಿಂಗಸ್ವಾರೂಪಿಯಾದ ಬಸವಣ್ಣನವರನ್ನು ಕಂಡು ಸುಖಿಯದೆನು ಎಂದು ಹೇಳಿದನು ಕೇತಯ್ಯ .
ಎನ್ನ ಚಿತ್ತಕ್ಕೆ ಆಚಾರಲಿಂಗವಾದಾತ
ಎನ್ನ ಬುದ್ಧಿಗೆ ಗುರು ಲಿಂಗವಾದಾತ
ಎನ್ನ ಅಹಂಕಾರಕ್ಕೆ ಶಿವಲಿಂಗವಾದಾತ
ಎನ್ನ ಮನಕ್ಕೆ ಜಂಗಮ ಲಿಂಗವಾದಾತ
ಎನ್ನ ಜ್ಞಾನಕ್ಕೆ ಪ್ರಸಾದ ಲಿಂಗವಾದಾತ
ಎನ್ನ ಭಾವಕ್ಕೆ ಮಹಾಲಿಂಗವಾದಾತ
ಎನ್ನ ಸ್ಥೂಲ ತನುವಿಂಗೆ ಇಷ್ಟಲಿಂಗವಾದಾತ
ಎನ್ನ ಸೂಕ್ಷ್ಮ ತನುವಿಂಗೆ ಭಾವಲಿಂಗವಾದಾತ .
ಇಂತು ಅನಂತ ಕಾಯ ಗುಣಗಳಿಗೆ .
ಅನಂತ ಲಿಂಗವಾದಾತ ಬಸವಣ್ಣ .
ಇಂತು ಇವನರಿದವನಾಗಿ ಗೌರೆಶ್ವರ ಲಿಂಗದಲ್ಲಿ ಸುಖಿಯಾದೆನು (ಕೇತಯ್ಯನ ವಚನ)
ಬಸವಣ್ಣನವರು ಕೇತಯ್ಯ ಮತ್ತು ಸಾತವ್ವ ಕಲ್ಯಾಣಕ್ಕೆ ಬಂದ ಉದ್ದೇಶ ಅವರ ಕಾಯಕದ ವ್ಯವಸ್ಥೆ ಕೇಳಿ ತಿಳಿದುಕೊಂಡು ಅನುಭವ ಮಂಟಪಕ್ಕೆ ಅನುವು ಮಾಡಿ ಕೊಟ್ಟರು .ಕೇತಯ್ಯ ಸಾತವ್ವ ಶರಣರ ಅಧ್ಯಾತ್ಮಿಕ ಚಿಂತನ ಗೊಷ್ಠಿಯಲ್ಲಿ ಪಾಲ್ಗೊಂಡು ತಮ್ಮ ನಿಲುವನ್ನು ಭದ್ರಗೊಳಿಸಿದರು. ಕಾಯಕದಲ್ಲಿ ನಿರತರಾದ ದ೦ಪತಿಗಳು ತಮ್ಮ ಇಷ್ಟಲಿಂಗ ಪೂಜೆ ಜಂಗಮ ದಾಸೋಹದಲ್ಲಿ ಸಕ್ರೀಯರಾದರು . ಬಿದಿರು ಕದಿರು ಕೆಲಸದಲ್ಲಿ ತೃಪ್ತಿ ಹೊಂದಿದರು ಕೇತಯ್ಯ ಸಾತವ್ವ ಕಾಯಕದ ಜೊತೆಗೆ ದಾಸೋಹ ಪ್ರಚುರ ಪಡಿಸಿದರು.
ಶರಣರು ದಾನ ಪದ್ಧತಿ ವಿರೋದಿಸಿದರು ಆದರೆ ದಾಸೋಹ ಪ್ರೋತ್ಸಾಹಿಸಿದರು. ವ್ಯಕ್ತಿ ಸಮಾಜದಿಂದ ಗಳಿಸಿದ ಭಾಗದಲ್ಲಿ ಸ್ವಲ್ಪ ಭಾಗ ತನಗಿಟ್ಟುಕೊಂಡು ಉಳಿದ ಬಹುತೇಕ ಭಾಗವನ್ನು ಸಮಾಜದ ಒಳಿತಿಗೆ ಬಳಸಬೇಕೆನ್ನುವದು ದಾಸೋಹದ ಮೂಲ ಆಶಯ . ಈ ದಾಸೋಹದ ಸೂತ್ರವೇ ಸಮಾಜವಾದದ ಮೊದಲ ಮೆಟ್ಟಿಲು. ಸಮುದಾಯದ ಸರ್ವತೋಮುಖ ಏಳ್ಗೆಗೆ ಹಂಚ ಬೇಕೆನ್ನುವದು ಶರಣರ ಪರಿಕಲ್ಪನೆ. ಕಾಯಕವು ಸ೦ಪತ್ತಿನ ಗಳಿಕೆಯಾದರೆ ,ದಾಸೋಹವು ಸ೦ಪತ್ತಿನ ಹಂಚಿಕೆ .
ಆದರೆ ಕಾಯಕ ಸತ್ಯ ಶುದ್ಧವಾಗಿರಬೇಕು .ದಾಸೋಹದ ಸತ್ಕಾರ್ಯ ಸತ್ಪಾತ್ರಕ್ಕೆ ಪಾತ್ರವಾಗಬೇಕು .ಇಂತಹ ಆರ್ಥಿಕ ಕ್ರಾಂತಿಯಲ್ಲಿ ಆಯ್ದಕ್ಕಿ ಮಾರಯ್ಯ ಲಕ್ಕಮ್ಮ ,ಮೋಳಿಗೆ ಮಾರಯ್ಯ ಮಹಾದೇವಿ ,ದಾಸ ದುಗ್ಗಳೇ , ಹೀಗೆ ಅನೇಕ ಶರಣರು ಸತ್ಯ ಶುದ್ಧ ಕಾಯಕ ಮಾಡಿ ದಾಸೋಹಕ್ಕೆ ಪಾತ್ರರಾದರು .
ನಿತ್ಯ ಕಾಡಿನಲ್ಲಿ ಅಲೆದು ಬಿದಿರು ಸೀಳಿ ಬುಟ್ಟಿ ಹೆಣೆದು ಮಾರುಕಟ್ಟೆಯಲ್ಲಿ ಮಾರಿ ಬಂದ ಹಣದಲ್ಲಿ ದಾಸೋಹ ಮಾಡುವ ಕೇತಯ್ಯ ಬಲು ಬೇಗನೆ ಕಲ್ಯಾಣ ರಾಜ್ಯದಲ್ಲಿ ಜನಪ್ರಿಯವಾಗ ತೊಡಗಿದನು . ಅದನ್ನು ಜನಪದ ಕವಿಗಳು ಹೀಗೆ ವರ್ಣಿಸಿದ್ದಾರೆ.
ದಿನ ದಿನಕೆ ಕೇತಯ್ಯ ಕನಕಾದ
ಶರಣರಿಗೆ I ಜನಕಾದ ಕೇತ ನಿಚ್ಚಣಿಕೆ I
ನಿಜಪದಕೆ ಹೊನಲಾದ I .ಹೊಲಸು ತೊಳೆಯುದಕ .II
ಸಾಮಾನ್ಯರ ಹೊಲಸು ತೊಳೆಯುವ ಹೊನಲಾದ ಮತ್ತು ಅವರಿಗೆ ಅನುಭವ ನೀಡಿ ಶರಣ ತತ್ವ ಹೇಳಿ ಸದ್ಭಕ್ತಿಯ ಮಹಾಮನೆಗೆ ಸಾಧಕರ ನಿಚ್ಛನಿಕೆಯಾದನು.
ಕೇತಯ್ಯ ತನ್ನ ಸತ್ಯ ಶುದ್ಧ ಕಾಯಕದಿಂದ ಮತ್ತು ಲಿಂಗ ನಿಷ್ಠೆಯಿ೦ದ ಜಂಗಮ ಪ್ರಜ್ಞೆಯಿಂದ ನಿರಂತರ ದಾಸೋಹ ಸೇವೆಯಿಂದಾ ಕಲ್ಯಾಣದ ಶರಣ ಚಳುವಳಿಯಲ್ಲಿ ಹೊಸ ಸ್ಫೂರ್ತಿಯಾದನು.ಹೋರಾಟದ ಗಟ್ಟಿಮುಟ್ಟಾದ ಆಯಾಮವಾದನು . ಬಸವಣ್ಣನವರು ಹುಟ್ಟು ಹಾಕಿದ ಲಿಂಗವಂತ ಚಳುವಳಿಗೆ ಕೇತಯ್ಯ ಹೊಸ ದಿಕ್ಕಾದನು .
ಜನಪದವು ಮೇದಾರ ಕೇತಯ್ಯನ ಕಾರ್ಯ ಕಾಯಕ ಪ್ರಸಾದವನ್ನು ಮುಕ್ತ ಮನದಿಂದಾ ಹೊಗಳಿದ್ದಾರೆ.
ಹೊಸ ಮತವೆ ಲಿಂಗಾಗಿ I ಕಸವೆಂಬ ಕರಡಿ
ಗೆಯ I.ಹಸನ ಮನವದಕೆ ಶಿವದಾರ I
ದಾಸೋಹ ಉಸಿರು ಶಿವಶರಣ ಕೇತಯ್ಯನಿಗೆ II
ಲಿಂಗಾಯತ ಧರ್ಮದ ಪ್ರಮುಖ ತತ್ವಗಳಲ್ಲಿ ಒಂದಾದ ದಾಸೋಹದ ಉಸಿರು ಮೇದಾರ ಕೇತಯ್ಯನಾದನು . ನಿತ್ಯ ಸತ್ಯ ಬದುಕಿನ ಕೇತಯ್ಯನ ಪ್ರಾಮಾಣಿಕ ಪಾರದರ್ಶಕ ಬದುಕಿನಲ್ಲೊಮ್ಮೆ ಅಗ್ನಿ ಪರೀಕ್ಷೆ ಬಂದೊದಗಿತು . ತಮ್ಮ ನಿತ್ಯ ಸೇವೆ ಮಾಡಿ ಜಂಗಮ ಪ್ರಸಾದ ಮುಗಿಸಿ ಕೇತಯ್ಯ ಮತ್ತು ಸಾತವ್ವ ಕುಳಿತಿರಲು ಜಂಗಮನೊಬ್ಬ ಇವರ ಮನೆಗೆ ಪ್ರಸಾದಕ್ಕೆ ಬರಲು ಮನೆಯಲ್ಲಿ ಏನು ಇರದ ಹಿನ್ನೆಲೆಯಲ್ಲಿ ,ಗಂಡ ಕೇತಯ್ಯ ಮಡದಿ ಸಾತವ್ವಳಿಗೆ ಕೇಳಿದಾಗ .ಸಾತವ್ವ ಕೇತಯ್ಯನಿಗೆ ಬಿದಿರು ಕಡಿದು ಬುಟ್ಟಿ ಹೆಣೆದು ಮಾರಿ ಬಂದ ಹಣದಿಂದ ದಾಸೋಹ ಕೈಗೊಳ್ಳಲು ಸಲಹೆ ನೀಡುತ್ತಾಳೆ. ತನ್ನ ಕಾರ್ಯದಲ್ಲಿ ನಿರತಳಾಗಿ ಸೌದೆ ತಂದು ಪ್ರಸಾದಕ್ಕೆ ಪಾತ್ರೆ ಸಜ್ಜು ಮಾಡುತ್ತಾಳೆ.
ಇತ್ತ ಬಿದಿರಿನ ಮೇಳೆ (ಕಾಡು) ಹುಡುಕಿಕೊಂಡು ದಟ್ಟವಾದ ಅರಣ್ಯದಲ್ಲಿ ಅಲೆಯುತ್ತಾನೆ.ಉತ್ತಮ ಬಿದಿರು ಕಾಣದಾಗುತ್ತದೆ. ಇದನ್ನು ಜನಪದವು ಕೇತಯ್ಯನ ಜಂಗಮ ನಿಷ್ಠೆಯನ್ನು ಪರೀಕ್ಷಿಸಲು ಮತ್ತು ಆತನ ದಾಸೋಹ ಪ್ರಜ್ಞೆ ಕಾಯಕ ನಿಷ್ಠೆಯನ್ನು ಪರೀಕ್ಷಿಸಲು ಪರ ಶಿವನೆ ಒಂದು ಪರೀಕ್ಷೆಯನ್ನು ಒಡ್ಡಿದನು ಎಂದು ಹೇಳುತ್ತಾರೆ.ಬಿದಿರಿನ ಮರದಲ್ಲಿ ಬಂಗಾರವನ್ನು ಶಿವನು ಮುಚ್ಚಿಟ್ಟಿದ್ದನು ಎಂದು ತಿಳಿದು ಬರುತ್ತದೆ.
ಬಂಗಾರದ ಹುಳು ಹತ್ತಿ I .ಬಂಗವಾಗಿದೆ ಬಿದಿರು.I
ಕಂಗಳಿಗೆ ಬೇಡ ಹೊಲೆಯಂದIದಾಸೋಹ
ಸಂಗ ಜೋಡೆನೆಗೆ ಕುಂದೆಂದ II
ಎಲ್ಲ ಬಿದಿರುಗಳಲ್ಲಿ ಮುತ್ತು ರತ್ನ ಬಂಗಾರ ಕಂಡ ಕೇತಯ್ಯನಿಗೆ ಅದು ದಾಸೋಹಕ್ಕೆ ಸಲ್ಲದ ಹೊಲಸು ಅಂತ ತಿರ್ಮಾನಿಸುತ್ತಾನೆ.ಇಂತಹ ಮುತ್ತು ರತ್ನ ದಿಂದ ಮಾಡಿದ ದಾಸೋಹ ಸಂಗನಿಗೆ ಕುಂದು ಅಂತ ಕೇತಯ್ಯ ಚಿಂತಿಸುತ್ತಾನೆ. ಬೇಡವಾದ ಆಸ್ತಿಗೆ ವಸ್ತುವಿಗೆ ಕಿಂಚಿತ್ತು ಆಸೆ ಪಡದೆ ಬಿದಿರಿನ ಹುಡುಕಾಟದಲ್ಲಿ ನಿರತನಾದನು.
ಮೇಳೆ ಮೇಳೆ ತಿರುಗಿದರೂ I ಗಳವೊಂದು
ಬಿದಿರಿಲ್ಲಾ I ಮೇಳೆ ತುಂಬಾ ನೋಡಿ ಮುತ್ತು ಮಣಿ I.
ಮಾಣಿಕವ ಮಳ ಮಳಸಿ ತಿಳಿದ ಹೊಲೆಯೆಂದ.II
ಮರಗಳಲ್ಲಿ ಮುತ್ತು ರತ್ನಗಳೇ ಕಾಣುವುದು ಕಾಡೆಲ್ಲಾ ತಿರುಗಿದರೂ ಒಳ್ಳೆಯ ಬಿದಿರು ದೊರೆಯದೆ ಮರ ಮರ ಮರುಗಿ ಚಿಂತಿಸಿದನು .ಎಲ್ಲಿ ತನ್ನ ದಾಸೋಹ ತಪ್ಪಿ ಹೋಗುವುದೋ ಅಂತಾ ಕಳವಳಗೊಂಡನು. ಆಗ ಮುಗಿಲು ಮುಟ್ಟುವ ಸುಂದರ ಗಟ್ಟಿಯಾದ ಬಿದಿರು ಒಂದು ಕಾಡಿನಲ್ಲಿ ಕಂಡಿತು .ಪುಳುಕಿತಗೊಂಡ ಕೇತಯ್ಯ ಲಗು ಬಗೆಯಿಂದ ಬಿದಿರಿನ ಮರ ಹತ್ತ ತೊಡಗಿದ .
ಗಗನವೇ ಮುದ್ದಿಡುತ I. ಸೊಗಸಿಯಿತು ಬಿದಿರೊಂದುಈ
ಮಿಗೆ ಬೆಳೆದು ನಿಂತು ಕಾಡೊಳಗೆ I
ಕೇತಯ್ಯ ಬಗೆದವನೇ ಕೊಯ್ದು ಚೆಲ್ಲುದರೆ II
ಆನಂದ ಸಂತೋಷ ತ್ರಪ್ತ ಭಾವದಿಂದ ಕೇತಯ್ಯ ಅತಿ ಎತ್ತರದ ಬಿದಿರಿನ ಮರದ ರೆಂಬೆ ಕೊಂಬೆಗಳನ್ನು ಏರಿ ಬಿದಿರು ಕಡೆಯಲು ಕೇತಯ್ಯ ಮುಂದಾದನು.
ಕೇತಯ್ಯ ಬಿದಿರಿನ ಕೊಂಬೆ ಕಡೆಯುವಾಗ ಕಾಲು ಜಾರಿ ಮರದ ಚೂಪಾದ ಸಿಬಿರು ಆಯ ತಪ್ಪಿದ ಶರಣ ಕೇತಯ್ಯನ ಎದೆಗೆ ನೆಟ್ಟಿತು. ರಕ್ತ ಚಿಮ್ಮಿತು ಅಗಾದ ನೋವ ಸಹಿಸಿಕೊಂಡು ಕೊಂಬೆಗಳನ್ನು ಕತ್ತರಿಸಿ ಮೆಲ್ಲನೆ ಕೆಳಗಿಳಿದನು. ಎದೆಯಿಂದ ರಕ್ತದ ಮಡುವು ಲೆಕ್ಕಿಸದೆ ಎಲ್ಲಿ ತನ್ನ ದಾಸೋಹ ತಪ್ಪಿ ಹೋಗುವದೆಂದು ಬಿದಿರುಗಳನ್ನು ಹೊತ್ತುಕೊಂಡು ತನ್ನ ಗುಡಿಸಲಿಗೆ ಕೇತಯ್ಯ ನಡೆದನು.ದಾಸೋಹ ಮುಗಿಸದೆ ದೇಹವ ಬಿಡಬಾರದೆಂದು ನಿರ್ಧರಿಸಿದನು. ದಾರಿಯಲ್ಲಿ ನಡೆದು ಬರುವಾಗ ಮುಳುಗುವ ಸೂರ್ಯನ ಕಂಡು ವಿನಂತಿಸುತ್ತಾನೆ. ಕೈಗೊಂಡ ದಾಸೋಹ ಮುಗಿಯುವವರೆಗೆ ,ಮುಳುಗದಿರು ಸೂರ್ಯನನ್ನೇ ಗೋಗೊರೆಯುತ್ತಾನೆ.
ಹಾರದಿರು ಪಡುಗಡಲI ಏರಿ ಇಳಿಯುವ ರವಿಯೆ I,
ಮಾರ ಹರನಾಣೆ ಯೆನ್ನಾಣೆ I
ಶಿವಶರಣ ಧೀರ ಕಾಯಕದ ಆಣೆ ಮನದಾಣೆ II
ಸೂರ್ಯನೇ ನೀನು ಬೇಗ ಪಡುಗಡಲ ಹಾರಿ ಮುಳುಗದಿರು .ನಿನಗೆ ಶಿವನಾಣೆ ಶಿವ ಶರಣರು ಮಾಡುವ ಧೀರ ಕಾಯಕದಾಣೆ ತನ್ನ ಮನದಾಣೆ .ನೋಡಿ ಕೇತಯ್ಯನ ಬಿನ್ನಹದಲ್ಲಿ ಎಂತಹ ಗಾಂಭೀರ್ಯ ಚಿಂತನೆ ಕಾಳಜಿ ದಾಸೋಹ ಪ್ರಜ್ಞೆ ಇದೆ ಎನ್ನುವದು ಅರ್ಥವಾಗುತ್ತದೆ.ಹೀಗೆ ಸೂರ್ಯನಿಗೆ ಆಣೆಯಿಟ್ಟು,ರಕ್ತ ಸೋರಿಸುತ್ತಲೇ ನಡೆದು ಮನೆಗೆ ಬಂದ ಕೇತಯ್ಯ. ಬಿದಿರು ಕೆತ್ತಿ ಬುಟ್ಟಿ ಹೆಣೆದು ಹೆಂಡತಿ ಸಾತವ್ವಳನ್ನು ಕರೆಯಲು ,ಸಾತವ್ವ ಕೇತಯ್ಯನ ಸ್ಥಿತಿ ಕಂಡು ಭಯಗೊಂಡು ಗಲಿಬಿಲಿಗೊಂಡಳು. ಕೇತಯ್ಯ ಬೇಗನೆ ಹೋಗಿ ಬುಟ್ಟಿ ಮಾರಿ ಬಂದ ಹಣದಿಂದ ಜಂಗಮರಿಗೆ ದಾಸೋಹ ಮಾಡಲು ಸೂಚಿಸಿ ತಾನು ಸ್ವಲ್ಪ ವಿರಮಿಸುವದಾಗಿ ಹೇಳಿ ಅಲ್ಲಿಯೇ ಮಲಗುವನು.
ಮಡದಿ ಸಾತವ್ವಳು ಧೈರ್ಯದಿಂದ ಮರ ಬುಟ್ಟಿ ಒಯ್ದು ಮಾರುಕಟ್ಟೆಯಲ್ಲಿ ಮಾರಿ ಬಂದ ಹಣದಲ್ಲಿ ಜಂಗಮ ಪ್ರಸಾದ ಸೇವೆ ಮಾಡಿ ಬಂದ ಜಂಗಮರಿಗೆ ಸಂತೈಸಿ ಕಳಿಸುತ್ತಾಳೆ .ನಂತರ ನೋವಿನಿಂದಾ ಬಳಲುತ್ತಿರುವ ಕೇತಯ್ಯನ ಬಳಿ ಬರಲು ,ಕೇತಯ್ಯ ತನ್ನ ಎದೆಯ ಗೂಡಿನಲ್ಲಿ ಸಿಲುಕಿರುವ ಸಿಬಿಕೆಯನ್ನು ಕೀಳಲು ಹೇಳುತ್ತಾನೆ. ಒಲ್ಲದ ಮನದಿಂದ ಅಧೈರ್ಯಗೊಂಡ ಸಾತವ್ವಳಿಗೆ ಕೇತಯ್ಯ ಧೈರ್ಯ ತುಂಬಿ ಬಿದಿರಿನ ಸಿಬಿರು ಕೀಳಲು ಹೇಳುತ್ತಾನೆ .
ಶಿವನೆಂದು ಎದೆ ನೋಡಿ I. ತವಕದಲಿ ಕಿತ್ತೊಗೆಯ ಈ
ಶಿವ ಶಿವನೆ ಮುಗಿಯಿತು ಕಾಯಕವು.I
ಎಂದೆನುತ ಶಿವಯೋಗ ರವಿಯು ಮುಳುಗಿದನು.II
ಜನಪದಿಗರು ಕೇತಯ್ಯನ ದಾಸೋಹ ಸೇವೆ ಕೃತಾರ್ಥ ಭಾವವನ್ನು ವ್ಯಕ್ತ ಪಡಿಸುತ್ತಾ ಇತ್ತ ಕೇತಯ್ಯನ ಪ್ರಾಣ ಪಕ್ಷಿ ಹಾರಿ ಹೋದರೆ ಅತ್ತ ಸೂರ್ಯ ಪಡುವಲ ದಿಕ್ಕಿನಲ್ಲಿ ಮುಳುಗುತ್ತಾನೆ. ಮಹಾ ಶಿವ ಶರಣ ಮೇದಾರ ಕೇತಯ್ಯನ ಸಂಕಟ ವೇದನೆಯನ್ನು ಸೂರ್ಯ ನೋಡಲಾರದೆ ಶಿವಯೋಗದ ರವಿತೇಜನ ಸಾವಿನಿಂದಾ ಮಮ್ಮಲು ಮರಗಿ ಕಣ್ಣಿರಿತ್ತು ಸೂರ್ಯ ಮುಳುಗಿದನು ಎಂದು ಜನಪದ ಕವಿಗಳು ವರ್ಣಿಸಿದ್ದಾರೆ .
ನೋಡಲಾರದೆ ರವಿಯು I ಪಾಡ ಶಿವ ಶರಣರಿಗೆ I
ಹೂಡುವದು ಆಟ ಕತ್ತಲೆಯು ತಂದೆಂದು
ಬಾಡಿತಾಕಾರ ಕಣ್ಮುಚ್ಚಿ II
ಶರಣರ ಕಷ್ಟವನ್ನು ನೋಡಲಾರದೆ ಅವರ ಪಾಡನ್ನು ಸಹಿಸಲಾರದೆ ಸೂರ್ಯನು ಬೆಳಕು ಅಳಿಸಿ ಕತ್ತಲೆಯ ಆಟದಲ್ಲಿ ಶೋಕ ಸೂಚಿಸಿದನು. ಗಂಡನನ್ನು ಕಳೆದು ಕೊಂಡ ಸಾದ್ವಿ ಸಾತವ್ವಳಿಗೆ ಎಲ್ಲಿ ತನ್ನ ದಾಸೋಹ ಜಂಗಮ ಸೇವೆ ನಿಂತು ಹೋಗುವುದು ಅಂತಾ ಭಯಗೊಂಡು ರೋಧಿಸಿದಳು ಆಕ್ರಂದಿಸಿದಳು.
ಪತಿಯೆ ಲಿಂಗಾಗಿದ್ದ ಈ ಸತಿ ಶರಣೆ
ನಾನಿದ್ದೆI .ರತುನ ಕಾಯಕದ ಶಿವಪೂಜೆ I
ಇಂದ್ಹೋತು,ಜತುನೇಕೆ ಇನ್ನು ಬಾಳುದಕೆ ? II
ಸಾತವ್ವಳಿಗೆ ತನ್ನ ಪತಿಯೆ ಲಿಂಗ ಸ್ವರೂಪಿಯಾಗಿದ್ದ ,ರತ್ನದಂತ ಕಾಯಕವ ಮಾಡಿ ಲಿಂಗಪೂಜೆಯಲ್ಲಿದ್ದ ದ೦ಪತಿಗಳಿಗೆ ವಿಧಿ ಎಂತಹ ಕಷ್ಟವನ್ನು ನೀಡಿತು ಅಂತಾ ಜನಪದ ಕವಿಗಳು ನೋಯಿಸಿಕೊಂಡಿದ್ದಾರೆ. ಸಾತವ್ವಳಿಗೆ ಕೇತಯ್ಯನಿಲ್ಲದ ಬದುಕು ಬೇಡವಾಯಿತು .ಜೋಡಿ ಹಕ್ಕಿಗಳಂತಿದ್ದ ಜೀವಗಳು ಸಾತವ್ವ ಕೇತಯ್ಯ .
ಬೆಳಗಾಗುತ್ತಲೇ ಹೂಗಾರ ಮಾದಣ್ಣ ಸೂರ್ಯೋದಯ ಪೂರ್ವದಲ್ಲಿ ಕಲ್ಯಾಣದ ಸರ್ವ ಶರಣರಿಗೆ ಲಿಂಗ ಪೂಜೆಗೆ ಬೇಕಾದ ಪುಷ್ಪ ಪತ್ರಿಯನ್ನು ತಂದು ಕೊಡುವ ಕಾಯಕದವನು ಕೇತಯ್ಯನ ಮನೆಗೆ ಬಂದಾಗ ಅಲ್ಲಿಯ ಕೇತಯ್ಯನ ಸಾವಿನ ಸುದ್ಧಿ ಕೇಳಿ ಅದನ್ನು ಕಲ್ಯಾಣದ ಸರ್ವ ಶರಣರಿಗೆ ಹೇಳಿದನು.ಸುದ್ಧಿ ಮುಟ್ಟಿಸುವದು ಹೂಗಾರ ಮಾದಣ್ಣನ ಕಾಯಕವೂ ಆಗಿತ್ತು.
ಕಲ್ಯಾಣ ಮಂಟಪವು I.ನಿಲ್ಲದಲೇ ಕೂಡೆದ್ದುI
ತಲ್ಲಣಿಸಿ ಬಂತು ಆ ಮನಿಗೆ ಈ ಕೇತನಿಗೆ
ಸಲ್ಲಿಸಲು ನಮನ ಭಕ್ತಿಯಲಿ ಈ
ಎಲ್ಲಾ ಶರಣರು ಈ ಸುದ್ಧಿಯನ್ನು ಕೇಳುತ್ತಲೇ ಧಾವಿಸಿ ಕೇತಯ್ಯನ ಮನೆಗೆ ಬಂದು ಭಕ್ತಿ ಭಾವದಿಂದ ಅಂತಿಮ ನಮನ ಸಲ್ಲಿಸಲು ಮುಂದಾದದರು.ಮರಣವೇ ಮಹಾನವಮಿ ಎಂದು ನಂಬಿದ್ದ ಶರಣರು ಕೇತಯ್ಯನ ಅಗಲುವಿಕೆಯಿಂದಾ ದಾಸೋಹ ಕ್ರಿಯೆಯ ಉತ್ತಮ ನಿದರ್ಶನ ಅಂತ್ಯ ಗೊಂಡಿತು ಎಂದು ಶರಣರು ಖಿನ್ನರಾದರು.
ಸಕಲ ಶರಣರೊಂದಿಗೆ ಬಂದಿದ್ದ ಭಕ್ತಿ ಭಂಡಾರಿ ಬಸವಣ್ಣ ತಾನು ಶರಣು ಅರ್ಪಿಸುವಾಗ ಜಂಗಮ ಪ್ರೇಮಿಯಾದ ಬಸವಣ್ಣ ತನ್ನ ಪ್ರಾಣವನ್ನು ತೊರೆದು ಬಿಡುತ್ತಾನೆ.
ಶರಣ ಸಂಕುಲ ಗಾಬರಿಯಾಗುತ್ತದೆ.ಕೇತಯ್ಯ ಬಸವಣ್ಣ ಇಬ್ಬರು ತಮ್ಮ ಜಂಗಮ ಪ್ರಾಣವನ್ನು ಕಳೆದುಕೊಂಡರು ಅಂತಾ ನೊಂದು ಮರಗುತ್ತಾರೆ.ಇಂತಹ ಅಪೂರ್ವ ಸನ್ನಿವೇಶವನ್ನು ಮಡಿವಾಳ ಮಾಚಿದೆವನು ಹಾಡಿ ಹೊಗಳುತ್ತಾನೆ.ಕಾಯಕ ದಾಸೋಹ ಸಮಾತೆ ಸಮಪಾಲು ಸಮ ಬಾಳು ಕಲ್ಪಿಸಿ ಕೊಟ್ಟ ಅಪ್ಪ ಬಸವಣ್ಣನನ್ನು ಹೊಗಳುತ್ತಾ ಮಡಿವಾಳಯ್ಯನು ಈ ಕೆಳಗಿನಂತೆ ಹೇಳಿದನು ಎಂದು ಜನಪದಿಗರು ಹೇಳಿದ್ದಾರೆ.
ಭಾಪುರೆ ಬಸವಣ್ಣI ಭಾಪು ಶಿವ ಮತ
ಮಣಿಯೆI .ಭಾಪು ನಿನ್ನೆಸರು ಅಮರಾತು I
ಭಾಪು ನಿನಗಾರು ಸರಿಯುಂಟು II.
ಹೀಗೆ ಮಡಿವಾಳಯ್ಯನು ತನ್ನ ಕಂತೆಯಲ್ಲಿ ಕಟ್ಟಿಟ್ಟ ಹಿರಿದಾದದ ಎಚ್ಚರಿಕೆಯ ಘಂಟೆಯನ್ನು ಹೊರದೆಗೆದು ಜೋರಾಗಿ ವೀರಾವೇಶದಲ್ಲಿ ಬಾರಿಸತೊಡಗಿದನು .ಕೇತಯ್ಯ ಬಸವಣ್ಣರ ಸಾವಿನ ಸುದ್ಧಿಯನ್ನು ತಣಿಸಲು ಗಣಾಚಾರಿ ಜಂಗಮ ಮಡಿವಾಳ ಮಾಚಿದೇವ ವೀರಾವೇಶ ದಿಟ್ಟತನದ ಘಂಟೆ ಬಾರಿಸಲು ಈ ಶಬ್ಧಕ್ಕೆ ಶಿವ ಸಮಾಧಿಗೆ ಭಗ್ನವಾಗಿ ಶಿವನು ಕೇತಯ್ಯನಿಗೆ ಬಸವಣ್ಣನಿಗೆ ಪ್ರಾಣ ಮತ್ತೆ ಕರುಣಿಸಿದನು ಎಂದು ಜನಪದ ಕವಿಗಳು ಸೊಗಸಾಗಿ ಹೇಳಿದ್ದಾರೆ.
ಹೊಗಳುತಲಿ ಮಾಚಯ್ಯ I ತೆಗೆದಿಟ್ಟ
ಕಂತೆಯನು ನೆಗೆನೆಗೆದು ಗಂಟೆ ಬಾರಿಸಲು I
ಮೂಜಗವು ಧಗ ಧಗಿಸಿ ಹೋತು ಹೌಹಾರಿ II.
ಮಹಾ ಗಣಾಚಾರಿ ಮಡಿವಾಳಯ್ಯನ ಗಂಟೆಯ ಶಬ್ಧದ ತೀವ್ರತೆಗೆ ಹೆದರಿ ಪರ ಶಿವನು ತನ್ನ ತಪ್ಪನ್ನು ಒಪ್ಪಿಕೊಂಡು ಮತ್ತು ಕೇತಯ್ಯನಿಗೆ ಒಡ್ಡಿದ್ದ ಪರೀಕ್ಷೆಯಲ್ಲಿ ತನ್ನ ಸೋಲನ್ನು ಒಪ್ಪಿಕೊಂಡು ಕೇತಯ್ಯನಿಗೆ ಶರಣಾಗುತ್ತಾನೆ .ಶಿವನ ಸಂಕಲ್ಪ ಕರುಣೆಯಿಂದಾ ಮಲಗಿದ್ದ ಕೇತಯ್ಯ ಬಸವಣ್ಣ ನಿದ್ದೆಯಿಂದ ಎದ್ದಂತೆ ಎದ್ದರು .ಈ ದಿವ್ಯ ಸನ್ನಿವೇಶವನ್ನು ಕಂಡು ಕಲ್ಯಾಣ ಶರಣರು ಪುಲುಕಿತಗೊಂಡರು.
ಇಂತಹ ಸಮಾಧಿ ಯೋಗದಿಂದ ಹೊರ ಬಂದ ಕೇತಯ್ಯ ತನಗೆ ಮತ್ತೆ ದಾಸೋಹ ಯೋಗ ಪ್ರಾಪ್ತಿಯಾಯಿತು ಎಂದು ಸಂತಸಪಟ್ಟನು.ಕೇತಯ್ಯನ ದಾಸೋಹ ಲಿಂಗ ನಿಷ್ಠೆ , ಶರಣರ ಪಾಲಿನ ದಾಸೋಹ ಮೂರ್ತಿ ಕಾಯಕಯೋಗಿ ದಿಟ್ಟ ಶರಣನನ್ನು ಜನಪದಿಗರು ಕೊಂಡಾಡಿದ್ದಾರೆ.
ಶರಣ ಶಿವ ಕಾಯಕವ Iಒರೆಗೆ ಹಚ್ಚುವರಾರು I
ಹರ ಸಹಿತ ಸೋತು ಬದುಕಿಸಿದ I
ಮೇದಾರ ವರಕೇತ ನಿನಗೆ ಸರಿಯಾರುII
ಬಸವಣ್ಣನವರ ಕಾಯಕ ದಾಸೋಹ ಸಮಾನತೆ ಜಂಗಮ ಸೇವೆಗೆ ನಿಷ್ಠನಾಗಿ ಮಹಾಮನೆಗೆ ಕುಂದಣವಾದನು ಕೇತಯ್ಯ .
ಕಾಯಕ ದಾಸೋಹದಲ್ಲಿ ನಿರತನಾದ ಕೇತಯ್ಯನು ತನ್ನ ಜೀವ ಹಂಗು ತೊರೆದು ಎದೆಗೆ ರೆಂಬೆಯ ಬಿದಿರು ಚುಚ್ಚಿ ರಕ್ತಸ್ರಾವವಾದರೂ ನಿಲ್ಲದೆ ತನ್ನ ಸೇವೆ ಮುಂದುವರೆಸಿ ತಮ್ಮ ಕಾಯಕ ದಾಸೋಹ ನಿಷ್ಠೆ ತೋರಿದ ದಿಟ್ಟ ಶರಣ . ಸಾವು ಬಂದರೂ ಎದುರಿಸಿ ಮರಣ ಗೆದ್ದ ಮಹಾನುಭಾವ ಮೇದಾರ ಕೇತಯ್ಯ .ದಾಸೋಹ ಮುಗಿಸಿ ಹರುಷದಲಿ ಪ್ರಾಣವನ್ನು ತೆತ್ತ ಕೇತಯ್ಯ ಜನಪದ ಸಾಹಿತ್ಯವು ಕಂಡ ಶ್ರೇಷ್ಟ ಶರಣ.
ಮರಣ ಬಂದರೂ ಕೂಡಾ I.ಶರಣ ಕಾಯಕವ
ಮುಗಿಸಿ Iಹರುಷದಲಿ ಹರಣ ನೀಗಿದನು .I
ಕೇತಯ್ಯ ಹರನಿತ್ತ ಪದವಿ ಕರುಣೆಯಲಿ
ಜಾತಿ ಪಾಶವ ಕಿತ್ತೊಗೆದು ವರ್ಗ ವರ್ಣ ರಹಿತ ಸಮಾಜ ನಿರ್ಮಾಣದ ಹೆಗ್ಗುರಿ ಹೊಂದಿದ ಶ್ರೇಷ್ಠ ಶರಣ ಮೇದಾರ ಕೇತಯ್ಯ.ಸಾತ್ವಿಕ ಬದುಕ ಸಾಧಿಸಿ ಲಿಂಗವಂತ ಧರ್ಮದ ಅಗ್ರ ಪಂಕ್ತಿಯ ನಾಯಕ. ಮೇದಾರ ಕೇತಯ್ಯನ ನಿಷ್ಠೆ ಸ್ವಾಭಿಮಾನ ಕಳಕಳಿ ಪ್ರಜ್ಞೆ ಸಾಮಾಜಿಕ ಚಿಂತನೆ ಅವಿಸ್ಮರಣೀಯ .ಕೇತಯ್ಯನ ಈ ದಿಟ್ಟ ಗುಣಗಳಿಂದ ಅವನು ಭೂಮಿಯ ಕಳಸದ ಮೇಲೆ ಶಿವನ ಬುಟ್ಟಿಯ ಮಾಡಿ ಶಿವ ದೀಪವನ್ನು ಹಚ್ಚಿ ಕಲ್ಯಾಣಪುರದಲ್ಲಿ ಕೇತಯ್ಯನು ಶಿವ ಬೆಳಕನ್ನು ಅರಿವನ್ನು ಸಾಕ್ಷಾತ್ಕಾರಗೊಳಿಸಿದನು. ಇದನ್ನು ಜನಪದ ಕವಿಗಳು ಈಗಲೂ ಕೆಳಗಿನಂತೆ ಹೇಳಿದ್ದಾರೆ
ಶಿವನ ಬುಟ್ಟಿಯ ಮಾಡಿ I ಭುವನ ಕಳಸಕೆ ಕಟ್ಟಿ I ಶಿವ ದೀಪ ಹಚ್ಚಿ ಕಲ್ಯಾಣ ದೊಳಗೆ ಶಿವಬೆಳಕ ಕಂಡ ಕೇತಯ್ಯII .
ಶರಣರ ಜೀವನ ಚರಿತ್ರೆ ವ್ಯಕ್ತಿತ್ವವನ್ನು ಜನಪದ ಕವಿಗಳು ಸ್ವಲ್ಪ ಮಟ್ಟಿಗೆ ವೈಭವಿಸಿರಬಹುದು .ಹಲವು ಕಡೆ ಉತ್ಪ್ರೇಕ್ಷೆಯಾಗಿ ಕಾಣಬಹುದು.ಆದರೆ ಜನಪದ ಕವಿಗಳು ಶರಣರ ಸಮಗ್ರ ಕ್ರಾಂತಿ ಕಾಯಕ ದಾಸೋಹ ಸಮಾನತೆಯ ಚಳುವಳಿಯಲ್ಲಿ ಅವರು ಕಂಡ ಅಪಾರವಾದ ನೋವು ಬಳಲಿಕೆಯನ್ನು ಹಿ೦ಸೆ,ಸಾವುಗಳನ್ನು ತದೇಕವಾಗಿ ವಿವರಿಸಿದ್ದಾರೆ. ಶರಣರ ಸಂಘರ್ಷವನ್ನು ಆಶಯವನ್ನು ಜನಪದ ಕವಿಗಳು ಕಣ್ಣಿಗೆ ಕಟ್ಟುವಂತೆ ಹೇಳಿದ್ದಾರೆ.ಅನೇಕ ಸನ್ನಿವೇಶ ಮತ್ತು ದ್ರಷ್ಟಾ೦ತಗಳು ಉತ್ಪ್ರೇಕ್ಷೆಯಿಂದ ಕೂಡಿದ್ದರೂ ಸಹಿತ ಶರಣರ ಜೀವನ ಚರಿತ್ರೆಯನ್ನು ಸಮಗ್ರವಾಗಿ ತುಂಬಿಟ್ಟುಕೊಂಡು ಮುಂದಿನ ಪೀಳಿಗೆಗೆ ಕೊಟ್ಟ ಅಮೂಲ್ಯ ರತ್ನ ಭಂಡಾರವೇ ಜನಪದ ಸಾಹಿತ್ಯ .
ಜನಪದ ಕವಿಗಳು ಆಚಾರ್ಯತ್ರಯರನ್ನು ,ಋಷಿ ಮುನಿಗಳನ್ನು ಮಹಾರಾಜರನ್ನು ತಮ್ಮ ಕಾವ್ಯದ ವಸ್ತುವನ್ನಾಗಿಸಲಿಲ್ಲ .ಜನಪದಕ್ಕೆ ಯಾರು ಹತ್ತಿರವಾಗಿದ್ದರೋ ಅವರನ್ನು ಜನಪದ ಕವಿಗಳು ಅಪ್ಪಿಕೊಂಡರು .ಬಸವಣ್ಣ ಮಡಿವಾಳ ಮಾಚಿದೇವ ,ಚೆನ್ನಬಸವಣ್ಣ ಅಕ್ಕ ಮಹಾದೇವಿ ಮತ್ತು ಮೇದಾರ ಕೇತಯ್ಯನ ಬಗ್ಗೆ ಜನಪದ ಕವಿಗಳು ಸ್ಪುಟವಾಗಿ ಬರೆದಿದ್ದಾರೆ.
ಇಂದ್ರಿಯ ಚಾಪಲ್ಯವನ್ನು ನಿಗ್ರಹಿಸಿ ,ಅಂಗ ಗುಣಗಳನ್ನು ಅಳಿದು ಕಾಯಕ ದಾಸೋಹಗಳ ತತ್ವದ ಮೇಲೆ ಅರಿವನ್ನು ತನ್ನ ನಿಷ್ಠೆಯ ನಿಚ್ಚಣಿಕೆ ಮೂಲಕ ಮಹಾಮನೆಗೆ ಶರಣರನ್ನು ಕಳುಹಿಸಿದ ಶ್ರೇಷ್ಟ ಶರಣ ಮೇದಾರ ಕೇತಯ್ಯ.ಮೇದಾರ ಕೇತಯ್ಯನವರ ವಚನಗಳು ಅಂಕಿಯಲ್ಲಿ ಕಡಿಮೆ ಇದ್ದರೂ ಮೌಲ್ಯಯುತ ಅನುಭಾವ ನುಡಿಗಳನ್ನು ಕೊಟ್ಟಿದ್ದಾರೆ.ಅವರ ವಚನ ಅಂಕಿತ -ಗೌರೆಶ್ವರಾ – ಮಾನವೀಯ ಮೌಲ್ಯಗಳಿಗಾಗಿ ದುಡಿವ ಮನಸ್ಸಿಗೆ ಶರಣರ ವಚನಗಳು ಜನಪದ ಕವಿಗಳ ಅನುಭವದ ನುಡಿಗಳು ಮುದವ ನೀಡುತ್ತವೆ.ಇಂತಹ ಧೀಮಂತ ಶರಣ ದಲಿತ ನಾಯಕ ಕರ್ನಾಟಕದಲ್ಲಿ ಹುಟ್ಟಿದ್ದು ನಮ್ಮ ಸೌಭಾಗ್ಯ.
-ಡಾ ಶಶಿಕಾಂತ .ಪಟ್ಟಣ -ಪೂನಾ