ಗುಬ್ಬಚ್ಚಿಗಳ ನೆನಪಿನಲ್ಲಿ….
ಪ್ರತಿ ಮರವೂ ಗುಬ್ಬಚ್ಚಿಗಳ
ಜೀವಿಸುವ ಗೂಡು
ಸಾವಿರಾರು ಜೀವಿಗಳಿಗೆ
ಆಶ್ರಯದ ಮಾಡು
ನಾವು ಬದುಕಬೇಕಾದರೆ
ಮರಗಳೂ ಬದುಕಬೇಕು
ಗುಬ್ಬಚ್ಚಿಗಳ ಮನೆಯೂ
ಸುರಕ್ಷಿತವಾಗಿ ಉಳಿಯಬೇಕು
ಕಾಂಕ್ರೀಟ್ಟಿನ ಕಾಡಿನಲ್ಲಿ
ವಿವೇಚನೆಯಿಲ್ಲದ ಬದುಕು
ಉಸಿರಿಲ್ಲದ ಹಸಿರಿಲ್ಲದ
ಬರೀ ಆಡಂಬರದ ಬದುಕು
ಬಿಸಿಲು ನೆತ್ತಿ ಸುಟ್ಟಾಗಲೊಮ್ಮೆ
ಸಿಮೆಂಟು ಕಾಯ್ದು ಕಾವಿಟ್ಟಾಗಲೊಮ್ಮೆ
ಬಯಸುತ್ತೇವೆ ಒಂದಿಷ್ಟು ನೆರಳನ್ನು
ಮತ್ತದೇ ಫ್ಯಾನು ಗಾಳಿಯನ್ನು
ಮನೆಯಂಗಳದಲ್ಲಿಯೂ ಒಂದಿಷ್ಟು
ಸಸಿ ನೆಡುವಷ್ಟು ಸ್ಥಳವಿಡದೇ
ಮತ್ತೇ ಅದೇ ಚಾಳಿಯಲ್ಲಿ
ಓಡುತ್ತಲಿದ್ದೇವೆ ಎಂದಿನಂತೆ
ಅಂದು ಕಾಣುತ್ತಿದ್ದ ಆ ಗುಬ್ಬಿಗಳು
ಇಂದು ಕಾಣುತ್ತಲೇ ಇಲ್ಲ!
ಅಂದಿನ ಒಲವಿನ ನೀರಿನ
ಸೆಲೆಗಳೂ ಬತ್ತಿ ಹೋಗಿವೆ!
ಕಟ್ಟಬೇಕಾಗಿದೆ ಮತ್ತೆ ಇಂದು
ಒಲವಿನ ಮನಸ್ಸುಗಳನ್ನು
ಒಂದಿಷ್ಟು ಚಿಗುರಿಸಬೇಕಾಗಿದೆ
ಮನದ ನಿಷ್ಕಲ್ಮಶ ಹಸಿರನ್ನು
ಬನ್ನಿ ಸ್ನೇಹಿತರೆ ನಾವು ಬದುಕಬೇಕು
ಅರಣ್ಯ , ನೀರು , ಹಸಿರೆಲ್ಲವನ್ನು
ಉಳಿಸಿ ಬೆಳೆಸಬೇಕು
ಹಕ್ಕಿ, ಪಿಕ್ಕಿ, ಪ್ರಾಣಿಗಳೆಲ್ಲವ
ಉಳಿಸಿ ಪ್ರೀತಿಯಿಂದ ಬದುಕಬೇಕು
– ಈಶ್ವರ ಮಮದಾಪೂರ,
ಗೋಕಾಕ
ಅರ್ಥಪೂರ್ಣವಾಗಿ ಬರೆದಿದ್ದೀರಿ.. ನಿಜ ಗುಬ್ಬಿ ಗಳು ಈಗ ಕಾಣಿಸುತ್ತ ಇಲ್ಲ