ಮಡಿವಾಳಾ ಮಾಚಿದೇವನ ವಚನಗಳಲ್ಲಿ ಲಿಂಗಾಚಾರ

ಮಡಿವಾಳ ಮಾಚಿದೇವರ ವಚನಗಳಲ್ಲಿ ಲಿಂಗಾಚಾರ

ವಚನ ಸಂಸ್ಕತಿಯನ್ನು ಗ್ರಹಿಸುವ ಹಿನ್ನೆಲೆಯಲ್ಲಿ ಧರ್ಮದ ಒಳ ಸೂಕ್ಷ್ಮಗಳು ಮತ್ತು ಭಕ್ತಿ ಸಿದ್ದಾಂತಗಳು ನಮಗೆ ಮುಖಾಮುಖಿಯಾಗುತ್ತವೆ. ನಿಜವಾದ ಅರ್ಥದಲ್ಲಿ ಧರ್ಮವೆಂಬುದು ಆದರ್ಶಗಳ ಮೊತ್ತ. ಮಾನವ ಜನಾಂಗದ ಆದರ್ಶಗಳು ಧರ್ಮ ತತ್ವಗಳ ನೆಲೆಯಲ್ಲಿ ಮಾತನಾಡುತ್ತವೆ. ಉದಾರತೆ, ಸಮತಾ ಭಾವ, ಮಾನವೀಯತೆ ಸಕಲರನ್ನು ಒಂದೇ ಎಂದು ಭಾವಿಸುವ ಗುಣ ಶರಣ ಧರ್ಮಕ್ಕೆ ಇರುವ ವಿಶೇಷತೆ.

ಧರ್ಮ ಸಾಧನೆಯ ಪ್ರಮುಖ ಉದ್ದೇಶ ಹೊಂದಿದ ಶರಣರು ಲಿಂಗಾಚಾರಕ್ಕೆ ಲಿಂಗಾಂಗ ಸಾಮರಸ್ಯವೆಂದು ಕರೆದರು. ಇಷ್ಟಲಿಂಗವೇ ಆಂತರಿಕ ಪರಮ ಸಾಧನೆ ಎಂದರು. ಧಾರ್ಮಿಕ ಸಾಧನೆಯ ಅರಂಭದಿಂದ ಕೊನೆಯ ಹಂತದವರೆಗೂ ಇಷ್ಟಲಿಂಗ ಅವಿಬಾಜ್ಯ ಅಂಗವಾಯಿತು. ಹೀಗಾಗಿ ಇಷ್ಟಲಿಂಗ ಸಮಾಜದಲ್ಲಿ ಕುಲ, ಜಾತಿ, ಮತ, ಪಂಥ, ಲಿಂಗ, ವಯಸ್ಸುಗಳ ತಾರತಮ್ಯವನ್ನೆಲ್ಲ ಕಿತ್ತೆಸೆದು ಮಾಂತ್ರಿಕ ಶಕ್ತಿಯಾಯಿತು. ವರ್ಣಬೇಧಗಳನ್ನು ಸಂಪೂರ್ಣವಾಗಿ ನಿರಾಕರಿಸಿ ಸರ್ವರಿಗೂ ಸಾಮಾಜಿಕ ಸ್ವಾತಂತ್ರ್ಯವನ್ನು ತಂದು ಕೊಟ್ಟಿತು. ಅಸ್ಪೃಷ್ಯರೆನಿಸಿದ ಮಾದಿಗರ ಹರಳಯ್ಯ, ಧೂಳಯ್ಯ, ಶಿವನಾಗಯ್ಯ ಲಿಂಗದೀಕ್ಷಾ ಮೂಲಕ ಶರಣರಾದರು, ಸಾಧಕರಾದರು. ಧಾರ್ಮಿಕ ಕ್ರಾಂತಿಯನ್ನು ಇಷ್ಟಲಿಂಗದ ಮೂಲಕ ತೋರಿಸಿ ಕೊಟ್ಟರು. ಹೀಗೆ ಒಂದು ಕಡೆ ಸಾಮಾಜಿಕ ಮತ್ತು ಧಾರ್ಮಿಕ ಸಮತೆಯ ಲಾಂಛನವಾಯಿತು. ಇನ್ನೊಂದೆಡೆ ಅಂತರಂಗದ ಅರಿವಿನ ಕುರುಹಾಯಿತು.

ಸದಾಚಾರ, ಶಿವಾಚಾರ, ಲಿಂಗಾಚಾರ, ಗಣಾಚಾರ, ಭೃತ್ಯಾಚಾರ ಈ ಐದು ಆಚಾರಗಳು ದಾರ್ಶನಿಕತೆಯ ನೈತಿಕಾರ್ಥಗಳು. ಪಾರಿಭಾಷಿಕ ವಿವರಗಳಲ್ಲಿ ಅವು ಪರಿಮಿತಿಯಾಗಿ ಕಂಡರೂ ಅವುಗಳ ಹಿಂದಿರುವ ಮನೋಧರ್ಮ ವಿಶ್ವವ್ಯಾಪಕ ವಾದದ್ದು. ಸಕಲ ಮಾನವ ಕುಲದ ಕಲ್ಯಾಣಕ್ಕೆ ಪ್ರತ್ಯುತ್ತರ ಕೊಡುವುದಾಗಿದೆ.

ಲಿಂಗಾಚಾರ ಇಷ್ಟಲಿಂಗದ ಪೂಜೆ, ಸಮಯಾಚಾರ ಕಾಯಕ ಸಂಪಾದನೆ ಯಿಂದ ಗುರುಲಿಂಗಕ್ಕರ್ಪಿಸಿ ಪ್ರಾಮಾಣಿಕತೆಯಿಂದ ಇರುವುದು, ಶಿವಾಚಾರ ಶಿವಶರಣರಲ್ಲಿ ಜಾತಿ ವರ್ಗ, ವರ್ಣಗಳನ್ನು ಎಣಿಸದೆ ಸಮಾನತೆ ಕಾಪಾಡುವುದು, ಗಣಾಚಾರ ಶಿವಾಚಾರ ನಿಂದನೆಯನ್ನು ಆಲಿಸದಿರುವುದು, ಭೃತ್ಯಾಚಾರ ಶಿವ ಭಕ್ತರೇ ಹಿರಿಯರು ತಾವು ಕಿರಿಯರೆಂದು ನಡೆದುಕೊಳ್ಳುವುದು. ಇದು ಶರಣ ಸಾಹಿತ್ಯದರ್ಶನದ ಐದು ಸ್ಥಂಬಗಳು.

ವಚನ ಸಾಹಿತ್ಯದಲ್ಲಿಯೆ ಅತ್ಯಂತ ವಿಶಿಷ್ಟ ಅನುಭಾವಿ ಮಡಿವಾಳ ಮಾಚಿದೇವರು. ಇವರ ವಚನಗಳ ಮೂಲಕ ಲಿಂಗಾಚಾರವನ್ನು ಆಂತರಿಕ ಪರಿಶೋಧನೆಯ ಮೂಲಕ ಶರಣ ಸಾಹಿತ್ಯದ ವಚನ ಮೀಮಾಂಸೆಯ ಮೂಲಕ ಚರ್ಚೆಗೆ ಎತ್ತಿಕೊಳ್ಳುತ್ತೇನೆ.

12 ನೇ ಶತಮಾನದಲ್ಲಿ ಜಾತಿಯ ತಾರತಮ್ಯ ಅಸ್ಪೃಷ್ಯತೆ ಮೂಢ ನಂಬಿಕೆಗಳು ಶಿಕ್ಷಣದಲ್ಲಿ ಅವಕಾಶ ವಂಚನೆ ಹೀಗೆ ಅನೇಕ ಸಾಮಾಜಿಕ ಅಸಮಾನತೆಯಿಂದ ಅಂದು ತುಳಿತಕ್ಕೆ ಒಳಗಾಗಿದ್ದರು. ಇವುಗಳೆಲ್ಲವುಗಳಿಂದ ಮಹಿಳೆಯರು ವೃತ್ತಿ ನಿರತ ಶ್ರಮಜೀವಿಗಳು ಬಡವರು ದಲಿತರು ‌ನಿರಾಶೆ ಹತಾಶೆಗೊಂಡು ಅಸಹನೀಯ ಬದುಕಿಗೆ ತುತ್ತಾಗಿದ್ದರು. ಸರ್ವರಿಗೂ ಸಮಪಾಲು ಬಾಳು ಒದಗಿಸಲು ಮುಂದಾದ ಮಡಿವಾಳ ಮಾಚಿದೇವ ಶಿಷ್ಟ ವಚನಕಾರರಿಗಿಂತ ಭಿನ್ನವಾಗಿ ಕಾಣುತ್ತಾನೆ.

ದೇಹಾರವ ಮಾಡುವ | ಅಣ್ಣಗಳಿರ ||
ಒಂದು ತುತ್ತು | ಆಹಾರವನಿಕ್ಕಿರೆ ||
ದೇಹಾರಕ್ಕೆ ಆಹಾರವೇ | ನಿಚ್ವಣಿಗೆ ||
ದೇಹಾರವ ಮಾಡುತ್ತ | ಆಹಾರವನಿಕ್ಕದಿರ್ದಡೆ ||
ಆ ಹರನಿಲ್ಲೆಂದ | ನಂಬಿಗ ಚೌಡಯ್ಯ ||

ಎನ್ನುವ ಅಂಬಿಗರ ಚೌಡಯ್ಯ, ದೇವಾಲಯಕ್ಕಿಂತ ಪೂರ್ವದ ಸ್ಥಿತಿಯಾದ ಹಸಿವಿಗೆ ಹೆಚ್ಚು ಬೆಲೆ ಕೊಡುತ್ತಾನೆ. “ಹಸಿವೆಂಬ ಹೆಬ್ಬಾವು ಬಸಿರ ಹಿಡಿದಿರುವಾಗ ಆ ಬಸಿರ ಬೇಗೆಯ ನೀಗಿಸದೆ ಮುಂದುವರಿಯು ವುದು ಎಂತು?” ಬಸವ ಅಲ್ಲಮರಲ್ಲಿ ಆರಾಧನೆ ಮತ್ತು ಕ್ರಿಯೆ ಮುಖ್ಯವಾದರೆ ಅಂಬಿಗರ ಚೌಡಯ್ಯ ಮಡಿವಾಳ ಮಾಚಯ್ಯನಲ್ಲಿ ಇವೆರಡಕ್ಕೂ ಬೇಕಾಗಿರುವ ಮೂಲ ಸೌಲಭ್ಯಗಳು ಬಹುಮುಖ್ಯವಾಗಿ ನಿಲ್ಲುತ್ತವೆ.

ಮಡಿವಾಳ ಮಾಚಯ್ಯ ಹೇಳುತ್ತಾನೆ ಶ್ರಮಿಕ ವರ್ಗಗಳಿಗೆ ಆಕೃತಿಗಿಂತ ಪರಿಕರಗಳು ಮುಖ್ಯ. ಶ್ರಮ ಮತ್ತು ಜ್ಞಾನವನ್ನು ಸಮನ್ವಯಗೊಳಿಸಿ ಅದನ್ನು ಸಾಮಾಜಿಕ ವ್ಯವಸ್ತೆಯ ಮೂಲಕ ಶರೀರವನ್ನು ದಂಡಿಸಿ ಕಾಯಕ ಮಾಡುವುದು ಎಂದು ವಚನ ಸಾಹಿತ್ಯ ಸಮರ್ಥಿಸುತ್ತದೆ. ಈ ಎಲ್ಲಾ ದೃಷ್ಟಿಯಿಂದ ಶರಣ ಸಿದ್ದಾಂತವನ್ನು ಲಿಂಗಾಚಾರದ ಮೂಲಕ ಗಂಭೀರವಾಗಿ ಗ್ರಹಿಸುವ ಅಗತ್ಯವಿದೆ.

ಮಡಿವಾಳ ಮಾಚಯ್ಯನ ಜನ್ಮಸ್ಥಳ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ದೇವರ ಹಿಪ್ಪರಗಿ. ಕಾರ್ಯಸ್ಥಳ ಕಲ್ಯಾಣ. ಮಡಿವಾಳಯ್ಯನವರ ದೀಕ್ಷಾ ಗುರುಗಳು ಮಲ್ಲಿಕಾರ್ಜುನ. ಆರಾದ್ಯ ದೈವ ಕಲ್ಲಿನಾಥ. ಮಡಿವಾಳ ಮಾಚಯ್ಯನದು ವೀರ ವ್ಯಕ್ತಿತ್ವ. ವೀರಭದ್ರನ ಅವತಾರವೆಂದು ಪವಾಡ ಸದೃಶ್ಯ ಕಥೆ ಇದೆ. ವಚನ ಸಾಹಿತ್ಯದ ಐತಿಹ್ಯಗಳಲ್ಲಿ ಹೇಳಲಾಗುತ್ತದೆ.

ಉಡಿಯ | ಲಿಂಗವ ಬಿಟ್ಟು ||
ಗುಡಿಯ | ಲಿಂಗಕ್ಕೆ ಶರಣೆಂಬ ||
ಮತಿಭೃಷ್ಠರನೇನೆಂಬೆನಯ್ಯ | ಕಲಿದೇವರದೇವ ||

ಶಿವ ಸಂಸ್ಕೃತಿಯ ಸಂಹನಕಾರನಾದ ಮಾಚಯ್ಯನ ಸಮರ್ಥನೆ ಹೀಗಿದೆ. ಕೈಲಾಸದಲ್ಲಿ ದಕ್ಷನ ಸಂಹಾರ ಮಾಡಿ ಶಿವನನ್ನು ಕಾಣಲು ಅತಿ ಉತ್ಸಾಹದಿಂದ ವೀರಭದ್ರ ಶಿವನ ಸಭೆಯೊಳಗೆ ಬರುತ್ತಾನೆ. ಸಭೆಯಲ್ಲಿರುವ ಶಿವಭಕ್ತನಿಗೆ ಈತನ ಉತ್ತರೀಯದ ಸೆರಗು ತಾಕುತ್ತದೆ. ವಿಜಯದ ಉದ್ವೇಗದಲ್ಲಾದ ಆ ತಪ್ಪಿಗೆ ಭೂಲೋಕದಲ್ಲಿ ಮಡಿವಾಳನಾಗಿ ಜನಿಸಿ ಶರಣರ ವಸ್ತ್ರಗಳನ್ನು ಮಡಿ ಮಾಡಿ ಕೊಡುವ ಕಾಯಕ ಪೂರೈಸಿ ದೋಷ ಮುಕ್ತನಾಗಿ ಬರುವಂತೆ ಶಿವನ ಆದೇಶವಾಗುತ್ತದೆ. ಹೀಗೆ ಮಡಿವಾಳ ಮಾಚಯ್ಯನ ಜೀವನದ ದರ್ಶನ ಕಂಡು ಬರುತ್ತದೆ.

ಸಾಮಾಜಿಕ ಸಮತೆ ಶಿವನಲ್ಲಿ ಕಂಡು ಬರುವ ಒಂದು ಪ್ರಮುಖ ಅಂಶವಾದರೆ ಅಂಗ ಲಿಂಗ ಸಂಗದಲ್ಲಿ ಒಂದು ಲಿಂಗದ ಸಿದ್ದಿಗಾಗಿ ಇರುವ ಆಚಾರ, ಎರಡನೇಯದ್ದು ಲಿಂಗವೇ ಆಚಾರ ಇವೆರಡು ಲಿಂಗಾಚಾರದ ಎರಡು ಮುಖಗಳು. ಲಿಂಗಪೂಜೆ ಎನ್ನುವುದು ದೃಷ್ಟಿಯೋಗ. ಹರಿದಾಡುವ ಮನಕ್ಕೆ ಕೇಂದ್ರೀಕೃತ ಶಕ್ತಿ ತರುವ ವ್ರತ ನಿಷ್ಠೆ. ಉಗ್ರನಿಷ್ಕನಾದ ಮಡಿವಾಳ ಮಾಚಯ್ಯನಂಥ ಶರಣರು ಸ್ಥಾವರ ಲಿಂಗಗಳಿಗೆ ಎರಗುವುದನ್ನು ಖಂಡಿಸಿದರು.

ಉಡಿಯ ಲಿಂಗವ ಬಿಟ್ಟು ಸಾಮಾಜಿಕ ಬದುಕಿನಲ್ಲಿ ಕಾಣುವ ಈ ಸಿದ್ದಾಂತ ಮತ್ತು ಆಚರಣೆಗೂ ನಡುವೆ ಇರುವ ಬಿರುಕನ್ನು ಬರೀ ವಿಮರ್ಶೆ ವಿಡಂಬನೆ ಮಾಡದೆ ತನ್ನ ಸನ್ನಡತೆಯಿಂದ ಬೆಸೆಯುವುದು ಹೇಗೆಂದು ಶ್ರಮಿಕ ವರ್ಗದ ವಚನಕಾರರು ಗಮನ ಹರಿಸಿದರು. ಮಾಚಯ್ಯನ ಪ್ರಕಾರ ಸಾಧಕನು “ಬಿಸಿ ನೀರಾಗದೆ ಬೆಂಕಿಯಂತೆ ಉಜ್ವಲವಾಗಿರಬೇಕೆಂಬ” ವೃತ್ತಿಯ ಆಶಯಗಳನ್ನು ಪ್ರಕಟಿಸಿದನು. ಈ ವಚನ

ನಾವು ಪ್ರಾಣಲಿಂಗಿಗಳೆಂದು | ಹೇಳುವ ಅಣ್ಣಗಳಿರಾ ||
ನೀವು ಪ್ರಾಣ ಲಿಂಗಿಗಳೆಂತಾದಿರಿ | ಹೇಳಿರಿಣ್ಣಾ ||
ಅರಿಯದಿರ್ದಡೆ | ಕೇಳಿರಣ್ಣಾ ||
ಪ್ರಾಣಲಿಂಗವಾದ ಬೇದಾಬೇದದ | ಕಾಯದ ಕಳವಳದಲಿ ಕೂಡದೆ ||
ಮನದ ಬ್ರಾಂತಿಗೊಳಗಾದೆ | ಕರಣಂಗಳ ಮೋಹಕ್ಕೀಡಗದೆ ||
ಪ್ರಾಣನ ಪ್ರಪಂಚಿನಲ್ಲಿ ಬೆರೆಯುವ | ಜೀವನ ಬುದ್ದಿಯಲ್ಲಿ ಮೋಹಿಸದೆ ||
ಹಂಸನ ಆಸೆಗೊಳಗಾಗದೆ | ನಿಷಪ್ರಪಂಚಿಯಾಗಿ ||
ಗುರು ಲಿಂಗ ಜಂಗಮದ | ಪಾದೋದಕ ಪ್ರಸಾದದ ||
ಅತಿ ಆಶೆ ಉಳ್ಳಾತನಾಗಿ | ತ್ರಿವಿಧ ಲಿಂಗದಲ್ಲಿ ||
ಸೂಜಿಗಲ್ಲಿನಂತೆ | ಏಕತ್ವವುಳ್ಳಾತನಾಗಿಪ್ಪಾತನೆ ||
ಲಿಂಗ ಪ್ರಾಣಿ | ನೋಡಾ ಕಲಿದೇವ ||

ಇಷ್ಟಲಿಂಗ ಪ್ರಾಣಲಿಂಗ ತತ್ವಗಳು ವಾಸ್ತವವಾಗಿ ಇದು ಸೂಚಿಸುತ್ತಿರಿವುದು ಸ್ಥಾವರ ದೇವರ ನಿರಾಕರಣೆಯನ್ನು ಉಳ್ಳವರು ಮಾಡುವ ನಿರಾಕರಣೆಯನ್ನು ಉಳ್ಳವರು ಮಾಡುವ ಶಿವಾಲಯಗಳ ವಿರುದ್ದ, ಆದ್ಯಾತ್ಮಿಕ ಸಾಹಸಶೀಲತೆ ಅದರ ಮೂಲ ಶಕ್ತಿ ಪರ್ಯಾವಾಗಿ ಅದು ಸೂಚಿಸುತ್ತಿರುವುದು ಇಷ್ಟಲಿಂಗವನ್ನು ದೇವಾಲಯವೆನ್ನುವ ಪ್ರಭುತ್ವದ ಅಡಿಪಾಯ, ದೇವಾಲಯ ವೆಂಬ ಬೃಹತ್ ಬಾಹ್ಯ ವಾಸ್ತವದ ಎದುರು, ಶರಣ ಚಳುವಳಿ ಇಷ್ಟ ಲಿಂಗವೆಂಬ ಕಿರಿದಾದ, ಆಸ್ಪೋಟಕ ಕುರುಹನ್ನು ಅದು ಆಯ್ಕೆ ಮಾಡಿಕೊಂಡಿತು. ಕುರುಹುವಿಡಿದು ಕುರುಹುಗೆಡಬೇಕು. ಇದು ವಚನ ಚಳುವಳಿಯ ಏಕತೆಯ ಮೌಲ್ಯ.

ಮಾಚಿದೇವನ ಮಾತಿನಂತೆ ಕಾಯದ ಕಳವಳದಲ್ಲಿ ಸ್ಥೂಲ ಸೂಕ್ಷ್ಮ ಕಾರಣಗಳೆಂಬ ಗುಣಗಳು ವಾಸವಾಗಿವೆ. ಕರಣಂಗಳಾದ ಮನ ಚಿತ್ತ ಬುದ್ಧಿ ಅಹಂಕಾರಗಳು ನಿನ್ನನ್ನು ಅಗ್ನಿಯಂತೆ ದಹಿಸುತ್ತಿವೆ. ಬದುಕಿನ ವ್ಯಾಮೋಹವನ್ನು ಬಿಡದವನು ಲಿಂಗ ವ್ಯಾಮೋಹದ ಪ್ರೀತಿಯ ನಿಷ್ಠೆ ಕಳಚಿದವನು ಪ್ರಾಣ ಲಿಂಗಸ್ಥಲ ವನ್ನು ತಲುಪಲು ಹೇಗೆ ಸಾದ್ಯ. ಪ್ರಾಣ ಲಿಂಗ ಸ್ಥಲದಲ್ಲಿ ಸಾಧಕನ ಮನಸ್ಸು ಶಾಂತವಾಗಿರ ಬೇಕು. ಲಿಂಗವೇ ಪ್ರಾಣ ಪ್ರಾಣವೆ ಲಿಂಗದಂತಿರಬೇಕು. ಸೂರ್ಯನಾಡಿ ಚಂದ್ರನಾಡಿಯ ವಿಘಟನೆಯಿಂದ ಉಂಟಾಗುವ ಶಿವ ಶಕ್ತಿಯ ಸಾಮರಸ್ಯದ ಕೇಂದ್ರ ಸ್ಥಾನ. ಪ್ರಾಣ ಲಿಂಗದ ಸ್ಥಾನ ಈ ಶಕ್ತಿ ಅರಿತವನು ಪ್ರಾಣಲಿಂಗಿ ಯಾಗುತ್ತಾನೆ. ಈ ನಿಷ್ಠೆಗೆ ಸೃಜನ ಆದ್ಯಾತ್ಮದ ವಿದ್ಯೆ ಬೇಕಾಗುತ್ತದೆ. ಪ್ರಾಣಲಿಂಗ ಸ್ಥಾನ ತಲುಪಲು ಸಂವೇದನಾ ಶೀಲತೆ ಬೇಕಾಗುತ್ತದೆ. ಲಿಂಗ ನಿರಾಕರಣೆಯುಡಾಂಬಿಕ ಭಕ್ತರಿಗೆ ಎಚ್ಚರಿಕೆಯನ್ನು ಮಾಚಿದೇವ ಕೊಡುತ್ತಾನೆ. ಸಮಷ್ಟಿ ಲಿಂಗಾಚಾರವೆನ್ನುವುದು ಧಾರ್ಮಿಕ ಚಳುವಳಿ. ಆಧ್ಯಾತ್ಮ ಸ್ವಗತದ ಎಚ್ಚರಿಕೆ. ವಚನಕಾರರಲಿಂಗ ದರ್ಶನದ ಕೊಡುಗೆ. ಅಂದರೆ ನಾನೀಗ ಚರ್ಚಿಸುತ್ತಿರುವ ಶ್ರಮಿಕ ಸಾಮಾನ್ಯ ಜೀವನದ ಅನುಸಂಧಾನದ ಜೊತೆಗೆ ಮಾಚಿದೇವನ ವೈಚಾರಿಕತಯ ನಿಷ್ಠುರ ಮಾರ್ಗ.

ಕಸುಬುದಾರರ ವರ್ಗಗಳಿಂದ ಭುಗಿಲೆದ್ದ ವಚನ ಚಳುವಳಿ ಮೇಲು ಕೀಳು ತಾರತಮ್ಯತೆಯನ್ನು ಮೀರಿ ನಿಂತರೂ ಪ್ರಭುತ್ವ ಇವರ ತೀವ್ರತೆಗೆ ಕಡಿವಾಣ ಹಾಕುತ್ತಾ ಬಂದಿತು. ಹೀಗಾಗಿ ಅಂದು ಕಸುಬುದಾರರ ಮೇಲೆ ಹಾಕಲಾಗುತ್ತಿದ್ದ ತೆರಿಗೆಗಳನ್ನು ಗಮನಿಸಿದರೆ ಶ್ರಮಿಕ ವರ್ಗಗಳೆ ಈ ಚಳುವಳಿಯಲ್ಲಿ ಹೆಚ್ವಿನ ಸಂಖೆಯಲ್ಲಿ ತೊಡಗಿಸಿ ಕೊಂಡಿದ್ದರು ಎಂದು ಸ್ಪಷ್ಟವಾಗುತ್ತದೆ. ಈ ಕಾಲದ ಶಾಸನಗಳನ್ನು ಗಮನಿಸಿದಾಗ ಬಡಿಗ, ಅಕ್ಕಸಾಲಿಗ, ನಾಯಿಂದ, ಅಂಬಿಗ, ಅಗಸ, ಕಮ್ಮಾರ ಎಲ್ಲರೂ ತೆರಿಗೆ ಕಟ್ಟ ಬೇಕಾಗುತ್ತಿತ್ತು. ಗಾಣದೆರೆ ನೂಲದೆರೆ, ಮಗ್ಗದೆರೆ, ಬಣ್ಣದೆರೆ, ಕುಲುಮೆದೆರೆಗಳಲ್ಲದೆ ಎತ್ತು ಎಮ್ಮೆ ಹಸು ಕತ್ತೆ ಆಡು ಗಾಡಿ ಕೊನೆಗೆ ತಿಪ್ಪೆಯ ಸುಂಕವನ್ನೂ ಸಹಿತ ಪಾವತಿಸ ಬೇಕಾಗುತ್ತಿತ್ತು. ಹೀಗಾಗಿ ಅಸಂಗ್ರಹವನ್ನು ಸಹಿಸದ ಶರಣರು ಕಾಯಕದಲ್ಲಿಯೆ ದಾಸೋಹ ಪ್ರಸಾದಗಳ ಮೌಲ್ಯಗಳು ಸಾಮಾಜಿಕ ಪರೀಕ್ಷೆಗಳಾದವು. ಸದಾಚಾರ ಶಿವಾಚಾರ ಲಿಂಗಾಚಾರಗಳು ಆತ್ಮ ಪರೀಕ್ಷೆಗಳಾದವು. ಮಾಚಿದೇವನಲ್ಲಿ ಪ್ರಾಣಲಿಂಗದ ಕಲ್ಪನೆ ಈ ಕಾಯದ ಬೆಳಗಿನಲ್ಲಿ ಜ್ಯೋತಿರ್ಲಿಂಗವಾಗಿದೆ ಎಂದು ಸಮರ್ಥಿಸಬಹುದು.

ಅಂಗೈಗಳ ಲಿಂಗ ಕಂಗಳ | ನೋಟದಲ್ಲಿ ಅರಿತ ಲಿಂಗೈಕ್ಯನ ||
ಮನದ ಅರಿವು | ನಿರ್ಭಾವದಲ್ಲಿ ಅರಿತ ಲಿಂಗೈಕ್ಯನ ||
ಸರ್ವಾಂಗನಿಷ್ಠೆ | ನಿರ್ಣಯವಾದ ಲಿಂಗೈಕ್ಯನ ||
ನಿಜವನುಂಡು | ತೃಪ್ತನಾದ ಲಿಂಗೈಕ್ಯನ ||
ಮಹವನವಗ್ರಹಿಸಿ | ಘನವೇದ್ಯನಾದ ಲಿಂಗೈಕ್ಯನ ||
ಕಲಿದೇವರದೇವ | ಪ್ರಭುವೆಂಬ ಲಿಂಗೈಕ್ಯನ ||
ಶ್ರೀಪಾದದಲ್ಲಿ | ಮಗ್ನನಾಗಿರ್ದೆನು ||

ಈ ವಚನ, ಲಿಂಗ ಎಂಬ ಶಬ್ದವು ಚಿಹ್ನೆ, ಅನುಮಾನ ಪ್ರಕೃತಿ, ಶಿವಮೂರ್ತಿ, ಸಾಮಾನ್ಯವಾಗಿ ಲಿಂಗ ಎಂಬ ಶಬ್ದವನ್ನು ಶಿವನ ಪ್ರತೀಕವೆಂದು ಅರ್ಥೈಸಲಾಗಿದೆ. ಪ್ರಳಯ ಕಾಲದಲ್ಲಿ ಪಂಚಮಹಾಭೂತಗಳ ಸಮೇತ ಇಡೀ ಜಗತ್ತು ಲಿಂಗದಲ್ಲಿ ಲಯವಾಗಿತ್ತದೆ. ಉತ್ಪತ್ತಿ ಸ್ಥಿತಿ ಲಯ. ಹಾಗೆಯೆ ತಮ (ವಿಸ್ಪುಟಿತ) ರಜ(ತಿರ್ಯಾಕ್) ಸತ್ವ (ಸಮ್ಯಕ) ಈ ಸಾಂಕೇತಿಕತೆ . ಇಡೀ ಸೃಷ್ಟಿಯ ಸಾಂಕೇತಿಕತೆಯನ್ನು ಲಿಂಗರೂಪವಾದ ಪಂಚ ಮಹಾಭೂತಗಳ ನೆಲೆಯಲ್ಲಿ ನೋಡಲಾಗುತ್ತದೆ. ಬ್ರಹ್ಮಾಂಡದ ಕುರುಹನ್ನು ಪ್ರಾತಿನಿದ್ಯತೆಯನ್ನು ಕರಸ್ಥಲದ ಲಿಂಗದಲ್ಲಿ ಕಾಣಲಾಗುತ್ತದೆ. ಲಿಂಗ ಪೃಥ್ವಿಯ ಸಂಕೇತ ಪೃಥ್ವಿಯ ಪೂಜೆ ಕರಸ್ಥಲದ ಲಿಂಗಪೂಜೆಯಾಗಿದೆ. ಇದು ಶರಣ ದರ್ಶನದ ಕೊಡುಗೆ. ಅಂಗೈಯಲ್ಲಿರುವ ಲಿಂಗ, ಸ್ಥೂಲ ಸೂಕ್ಷ್ಮ ಕಾರಣಗಳ ಅಮೂರ್ತ ತತ್ವಗಳು ಈ ಕಾಯಕ್ಕೆ ಆದ್ಯಾತ್ಮದ ಅನುಭವ ಸ್ಥಿತಿ ಕೊಡುತ್ತದೆ.

ಅಂಗದ ಮೇಲೆ ಲಿಂಗ ಧರಿಸಿದ | ಲಿಂಗ ವಂತರೆನಿಸಿಕೊಂಡ ||
ಮಹಾಲಿಂಗವಂತರು | ನೀವು ಕೇಳಿರೊ ||
ಮನೆಗೊಂದು ದೈವ | ನಿಮ್ಮಂಗನೆ ಅನ್ಯದೈವಕ್ಕೆಂದು ||
ನಿಯಾಮಿಸಿ ಮಾಡಿದ | ಪಾಕವ ||
ನಿಮ್ಮ ಇಷ್ಟಲಿಂಗಕ್ಕೆ ಕೊಟ್ಟು | ಬಂಜಿಸುತಿರ್ದ ||
ಮತ್ತೆ ಮರಳಿ ಲಿಂಗವಂತರೆನಿಸಿ | ಕೊಂಬ ಲಿಂಗದ್ರೋಹಿಗಳಿಗೆ ||
ಕುಂಬೀಪಾತಕ ನಾಯಕ | ನರಕ ತಪ್ಪದೆಂದ ಕಲಿದೇವ ||

ಧರ್ಮದ ನೆಲೆಯಲ್ಲಿ ಸಾಮಾನ್ಯ ವಚನಕಾರರನ್ನು ಲಿಂಗವಂತರನ್ನಾಗಿಸುವಾಗ ಅಂದಿನ ಸಮಾಜದಲ್ಲಿ ಅನನ್ಯತೆಯ ನೆಲೆಗಳಾದ ದೇವರು ಧರ್ಮ ಭಾಷೆ ವೇಷ ವಿಚಾರ ಆಹಾರಗಳನ್ನು ಬಿಟ್ಟು ಬರಬೇಕಾಯಿತು. ಆದರೆ ಸಾಮಾನ್ಯ ಶ್ರಮ ಸಂಸ್ಕ್ರತಿಯ ದೈವಗಳು ದೂರವಾದವು. ಭವಿ ಭಕ್ತನ ಪರಿಕಲ್ಪನೆ ಮುಖಾಮುಖಿ ಯಾಯಿತು. ಇದನ್ನೆ ಮಡಿವಾಳ ಮಾಚಯ್ಯ ಮನೆಗೊಂದು ದೈವ ನಿಮಗೊಂದು ದೈವವೆಂದು ಸಂದೇಹಿಸುತ್ತಾನೆ. ಲಿಂಗವಂತರೆನಿಸಿಕೊಂಬ ಲಿಂಗ ದ್ರೋಹಿಗಳೆ ಎಂಬ ಎಚ್ಚರಿಕೆಯ ಆಕ್ರೋಶ.

ಅನ್ಯ ದೈವಗಳ ಪೂಜೆ ನಿರಾಕರಣೆ ಬಸವ ತತ್ವದ ಸಿದ್ದಾಂತ. ಶ್ರಮ ಸಂಸ್ಕ್ರತಿಯಲ್ಲಿ ಬೇದ ಭಾವವಿಲ್ಲ ಇದನ್ನು ಬೌದ್ದಿಕ ದೈಹಿಕವೆಂದು ವಿಭಜಿಸಿ ನೋಡಿದರೆ ಜ್ಞಾನ ಮತ್ತು ಶ್ರಮಗಳಲ್ಲಿ ವಿಶಿಷ್ಟ ತಾದಾತ್ಮತೆ ಕಂಡುಬರುತ್ತದೆ. ಕಾಸಿ ಕಮ್ಮಾರನಾದ ಬೀಸಿ ಮಡಿವಾಳನಾದ ಹಾಸಿಗನಿಕ್ಕಿ ಸಾಲಿಗನಾದ ವೇದವನೋದಿ ಹಾರುವನಾದ ಎಂಬುದು ಬಸವಣ್ಣನ ವಾದ.

ಪಂಚಾಚಾರಗಳಲ್ಲಿ ಲಿಂಗಾಚಾರವೆಂದಾಗ ವೈಯಕ್ತಿಕ ಲಿಂಗ ನಿಷ್ಠೆ. ಸಾಮಾಜಿಕವಾಗಿ ಸರ್ವ ಸಮಾನತೆ ಎಂಬರ್ಥವಾಗುತ್ತದೆ. ಲಿಂಗಾಚಾರದ ವೈಯಕ್ತಿಕ ಸಾಧನೆ. ಹೀಗಾಗಿ ಲಿಂಗ ಸಂಗತವಾದಲ್ಲಿ ಕುಲ ಸೂತಕವಿಲ್ಲ. ಪರುಷ ಮುಟ್ಟಿದುದು ಹೊನ್ನಾಗುವಂತೆ ಲಿಂಗ ಮುಟ್ಟಿದ್ದೆಲ್ಲಾ ಸತ್ಕುಲ ಪವಿತ್ರರಾಗುತ್ತಾರೆ. ಆದ್ದರಿಂದ ಶರಣರು ಮನೋವಿಜ್ಞಾನವನ್ನು ಲಿಂಗರೂಪದಲ್ಲಿ ಕಂಡರು. ಅನುಭಾವದ ಲಿಂಗ ಸಂಗವೆಂದು ಹೃದಯಕಮಲದಲ್ಲಿ, ಪ್ರಾಣ ಲಿಂಗದ ರೂಪಕ ಕೊಟ್ಟರು. ಹೀಗಾಗಿ ಇದನ್ನು ಶರಣ ಧರ್ಮ ದರ್ಶನದ ಕೊಡುಗೆ ಎಂದು ಪ್ರಾಮಾಣೀಕರಿಸಿ ಹೇಳಬಹುದು.

-ಡಾ. ಸರ್ವಮಂಗಳಾ ಸಕ್ರಿ

ಕನ್ನಡ ಉಪನ್ಯಾಸಕರು
ರಾಯಚೂರು

Don`t copy text!