ಜಲ ಮತ್ತು ಅರಣ್ಯ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ- ಚನ್ನಬಸವ ಕಟ್ಟಿಮನಿ

ವರದಿ : ವೀರೇಶ ಅಂಗಡಿ ಗೌಡುರು

ಅರಣ್ಯ ಇಲಾಖೆಯ ಪ್ರಾದೇಶಿಕ ಅರಣ್ಯ ವಿಭಾಗ ರಾಯಚೂರು, ಪ್ರಾದೇಶಿಕ ಅರಣ್ಯ ವಲಯ ಲಿಂಗಸುಗೂರು ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಗೌಡೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರದಂದು ವಿಶ್ವ ಅರಣ್ಯ ದಿನ ಮತ್ತು ವಿಶ್ವ ಜಲ ದಿನ ಆಚರಣೆ ಮಾಡಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವಲಯಾರಣ್ಯಾಧಿಕಾರಿ ಚನ್ನಬಸವರಾಜ ಕಟ್ಟಿಮನಿ ಸಕಲ ಜೀವರಾಶಿಗಳ ಅಸ್ತಿತ್ವಕ್ಕೆ ಕಾರಣವಾದಂತಹ ಅಮೂಲ್ಯವಾದ ನೈಸರ್ಗಿಕ ಸಂಪತ್ತು ನೀರು ಮತ್ತು ಪರಿಸರ. ಇಂದಿನ ದಿನಗಳಲ್ಲಿ ವಿವಿಧ ಕಾರಣಗಳಿಂದ ಜಲಸಂಪತ್ತಿನ ಕೊರತೆಯಿಂದಾಗಿ ಪರಿಸರ ದಲ್ಲಿ ಅಸಮತೋಲನೆ ಉಂಟಾಗುತ್ತಿದೆ . ಅರಣ್ಯ ಮತ್ತು ಜಲ ಸಂರಕ್ಷಣೆಯ ಕಾರ್ಯ ಕೇವಲ ನೀರಾವರಿ ಇಲಾಖೆ ಅಥವಾ ಅರಣ್ಯ ಇಲಾಖೆ ಕೆಲಸವಲ್ಲ ಅದು ಸಂಘ-ಸಂಸ್ಥೆಗಳ ಮತ್ತು ಪ್ರತಿಯೊಬ್ಬ ಪ್ರಜೆಗಳ ಆದ್ಯ ಕರ್ತವ್ಯವಾಗಿದೆ .

ಭೂಮಂಡಲದಲ್ಲಿ ಒಟ್ಟು ಬಳಕೆ ಲಭ್ಯತೆಯ ನೀರಿನ ಪ್ರಮಾಣ ತುಂಬಾ ಕಡಿಮೆ ಇದ್ದು ಅದರ ಸರಿಯಾದ ಬಳಕೆ ಮಾಡಬೇಕಾಗಿದೆ. ಅರಣ್ಯ ಮತ್ತು ನೀರು ಎರಡೂ ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿವೆ. ಅತಿಯಾದ ಅಂತರ್ಜಲ ಬಳಕೆ ,ಪರಿಸರ ಮಾಲಿನ್ಯ, ಅವೈಜ್ಞಾನಿಕ ನೀರಿನ ಬಳಕೆ ಹೀಗೆಯೇ ಮುಂದುವರೆದರೆ ಕೆಲವು ವರ್ಷಗಳಲ್ಲಿ ಪರಿಸರ ಮತ್ತು ನೀರಿಗಾಗಿ ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ಬಂದರೂ ಬರಬಹುದು.

ಆ ಕಾರಣಕ್ಕೆ ನಾವು-ನೀವೆಲ್ಲರೂ ಅರಣ್ಯ ಮತ್ತು ನೀರಿನ ಸಂರಕ್ಷಣೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಮಿತವಾಗಿ ಬಳಕೆ ಮಾಡಬೆಕಾಗಿದೆ ಎಂದರು. ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಗೆ ನೋಟ್ ಬುಕ್ ಮತ್ತು ಪೆನ್ನನ್ನು ವಿತರಣೆ ಮಾಡಲಾಯಿತು.ಅರಣ್ಯ ಇಲಾಖೆಯ ವತಿಯಿಂದ ಶಾಲಾ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿದ್ಯಾವತಿ ವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷರಾದ ಮಹಮ್ಮದ್ ಫರಿದ್ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಉಪ ವಲಯ ಅರಣ್ಯ ಅಧಿಕಾರಿಗಳಾದ ಯಾದವ್ ಕುಮಾರ್, ಸಂತೋಷ್ ಕರ್ನಲ್, ಸೇರಿದಂತೆ ಶಾಲಾ ಶಿಕ್ಷಕರು, ಮಕ್ಕಳು ಭಾಗವಹಿಸಿದ್ದರು.

Don`t copy text!