ಅಪ್ಪ
ಅಪ್ಪಾ ಎಂಬೆರೆಡಕ್ಷರ
ಹೆಮ್ಮೆಯ ಮಗಳ ಬೀಜಾಕ್ಷರ
ಅಪ್ಪನೆಂದರೆ ಸಗ್ಗ
ಅಪ್ಪನೆಂದರೆ ಆಪ್ತ
ಅಪ್ಪನೆಂದರೆ ಅವಿನಾಭಾವತೆ
ಜೀವ ಜೀವದ ಮೇರು ಪರ್ವತ
ಎರಡು ತುಟಿಯ
ನಾಭಿಯಿಂದ ಹೊಮ್ಮಿದ
ಕಕ್ಕುಲಾತಿ ಕಾಣ್ಕೆ ನಮ್ಮಪ್ಪ
ಧೀರ್ಘ ಮೌನವೇ ಮಂತ್ರ
ಚಿಂತಕ ಅರ್ಥಶಾಸ್ತ್ರಜ್ಞ
ಕಲೆಗಾರ ರಾಜಕಾರಣಿ
ಗಾಂಧಿಯ ಅನುಯಾಯಿ
ತ್ಯಾಗದಲ್ಲೂ ತ್ಯಾಗಿ
ಕೊಡುಗೈ ದಾನಿ ಧನಿಕರ ಧನಿಕ
ಶಬ್ದಗಳಲ್ಹೇಗೆ ನುಸುರಲಿ ಕಡ ಪ್ರೀತಿ
ಬಿಚ್ಚಿ ತೋರಿಸಲು ಹೊಸ ಬಟ್ಟೆಯಲ್ಲ
ಅವಿತಿಡಲು ಹಳೇಕೌದಿಯ ಚಿತ್ತಾರವಲ್ಲ
ಅಪ್ಪನ ಪ್ರೀತಿ ಮೊಗ್ಗರಳಿ ಹೂವಾದಂತೆ
ಸೂರ್ಯ ಹುಟ್ಟಿದಂತೆ ಚಂದಿರ ಬೆಳಗಿದಂತೆ
ಶಬ್ದದೊಳಗಣ ನಿಶಬ್ದದಂತೆ
ಧನೇರ ಮಗಳೆಂಬ ಅಗ್ಗಳಿಕೆನಗೆ
ಎಲ್ಲರಂತಲ್ಲ ನನ್ನಪ್ಪ
ಬದುಕ ಬಂಡಿ ಎಳೆದ ಒಂಟಿ ಎತ್ತು
ಪ್ರಾಯೋಗಿಕ ಮೌಲ್ಯಗಾರ
ಹಲವರಿಗೆ ಸಹಾಯಗಾರ
ಸರಳಜೀವಿ
ಉನ್ನತ ಚಿಂತಕ
ಕಾಸೂ ಕಾಸೂ ಕೂಡಿಟ್ಟು
ಬ್ಯಾಂಕಿಗೆ ಬಂಡವಾಳಗಾರ
ಅಭಿವೃದ್ಧಿ ಹರಿಕಾರ
ಶಿಕ್ಷಣಕ್ಕೆ ಸಾಹುಕಾರ
ಛೇರ್ಮನ್ ಮಂಡಲ ಪ್ರಧಾನ
ಜನತಾ ಪಕ್ಷದ ಧುರೀಣ ನಾಯಕ
ನಿಷ್ಣಾವಂತ ಪ್ರಾಮಾಣಿಕ ರಾಜಕಾರಣಿ
ಹತ್ತು ಹತ್ತು ಹಡೆದಕ್ಕಿಂತ ಮುತ್ತಿನಂಥ
ಮಗನ ಹಡೆದೆನೆಂಬ ಕೀರ್ತಿನ
ಮ್ಮಮ್ಮನ ಅಭಿಮಾನದ ಅಗ್ಗಳಿಕೆ
ಕುರುಕ್ಷೇತ್ರದ ಕೃಷ್ಣನ ಪಾತ್ರಧಾರಿ
ಅಭಿನಯ ಚತುರ
ಬೇಡುವನಿಲ್ಲದೆ
ಬಡವನಾದೆನೆಂಬ ಬಸವಭಕ್ತ
ಬಾಲ್ಯದಲ್ಲಿ ಮಲಗಿರುವಾಗ ತಾಯಿ
ಹಿಂಗಮಕ್ಕಂಡ್ರ ಉಣ್ಣಾಕ ಹೆಂಗ ಬರತೈತಿ
ಮೈದಡವಿದೆಚ್ಚರದಲ್ಲೇ
ಇಂದೂ ಅದೇ ಎಚ್ಚರದ ಎಚ್ಚರಗಾರ
ಆಳ್ಮಗನಿಗೆ ಹೊಲವ
ನೊಂದಾಯಿಸಿಕೊಟ್ಟ ಅಪ್ಪ
ತಾಯ ಮಾತು ಮೀರದ ಮಗ
ಎಂಭತ್ತಾರರ ಉತ್ಸಾಹಿ ದುಡಿಮೆಗಾರ
ನನ್ನೊಲುಮೆಯ ಧೀರ
ನನ್ನೀ ಜೀವದ ಭಾವ
ಅಮ್ಮನ ಹೆಮ್ಮೆಯ ಮಗ
ಮೊಮ್ಮಕ್ಕಳ ಮಮತಾಮಯಿ
–ಡಾ.ಸುಜಾತ ಅಕ್ಕಿ