ಕಿಟಕಿಯಂಚಿನ ಮೌನ’ಕ್ಕೆ ಕಿವಿಯಾದಾಗ…
‘ಕಿಟಕಿಯಂಚಿನ ಮೌನ’ ಇದು ರೇಣುಕಾ ಹೆಳವರ ಅವರ ಹನ್ನೊಂದು ಕತೆಗಳ ಸಂಕಲನ. ಕಲ್ಯಾಣ ನಾಡಿನ ಕಥಾ ಪ್ರಕಾರ ಹುಲುಸಾಗಿ ಬೆಳೆಯಲು ಇನ್ನೊಂದು ಪೈರು.
ಈ ಸಂಕಲನದ ಮೊದಲ ಕತೆ ‘ಗೆದ್ದವರ‌್ಯಾರು?’. ರಾಜಿ, ಶಶಿ, ಗಿರಿಜೆ ಮೂರು ಜನ ಗೆಳತಿಯರ ಸುತ್ತ ಹೆಣೆಯಲಾಗಿದೆ. ಹೆಣ್ಣಿನ ಬದುಕಿನ ಆರಂಭ ಮತ್ತು ಅಂತ್ಯಕ್ಕೆ ಯಾರು ಹೊಣೆ? ಎನ್ನುವ ಪ್ರಶ್ನೆಯನ್ನು ಇಲ್ಲಿ ಕತೆಗಾರ್ತಿ ಎತ್ತಿದ್ದಾರೆ. ಸಮಾಜದ ವ್ಯವಸ್ಥೆ ಹೇಗೆ ಪ್ರತಿ ಹೆಣ್ಣಿನಲ್ಲೂ ತನ್ನ ಅಂಕುಶ ತಿವಿದಿರುವ ಸತ್ಯವನ್ನು ಗಿರಿಜೆಯ ಪಾತ್ರದ ಮೂಲಕ ತಿಳಿಸುವ ಪ್ರಯತ್ನ ಮಾಡಿರುವುದು ಓದುಗನಿಗೆ ಗೊತ್ತಾಗುತ್ತದೆ.
(ಕತೆಗಾರ್ಥಿ-ರೇಣುಕಾ ಹೆಳವರ)
ಸಂಸಾರದಲ್ಲಿ ಹೆಣ್ಣು ವೈಯಕ್ತಿಕವಾಗಿ ಅಸಹಾಯಕಳು. ಹಾಗೆಯೇ ಸಮಾಜದಲ್ಲಿಯೂ ಅಸಹಾಯಕಳು. ಹೀಗಾಗುವುದು ಎಷ್ಟು ನ್ಯಾಯ? ಕತೆ ಓದಿದ ನಂತರ ಈ ಪ್ರಶ್ನೆ ಬಹಳವಾಗಿ ಕಾಡುತ್ತದೆ. ಹೆಣ್ಣು, ಗಂಡು, ಸಮಾಜ, ಸಾಮಾಜಿಕ ವ್ಯವಸ್ಥೆ ಎಲ್ಲವೂ ವಿಚಿತ್ರ. ಯಾವತ್ತೂ ಹೆಣ್ಣೇ ಸಮಸ್ಯೆ ಎದುರಿಸುವವಳು. ಎಲ್ಲೋ ಒಂದು ಕಡೆ ಗಿರಿಜೆ ಸ್ವತಂತ್ರವಾಗಿ ಬದುಕಿದ್ದರೆ… ಎಂದು ಚಿಂತಿಸುವಂತೆ ಮಾಡುವ ಸ್ತ್ರೀ ಸಂವೇದನೆಯ ಕತೆ ಇದಾಗಿದೆ.
‘ಸರಳುಗಳ ನಡುವೆ’ ಕತೆಯಲ್ಲಿ ಮೂರು ಲೋಕದ ಅನಾವರಣವಿದೆ. ಒಂದು ಸರಕಾರಿ ಆಸ್ಪತ್ರೆ, ಇನ್ನೊಂದು ರಿಮ್ಯಾಂಡ್ ಹೋಮ್, ಕೊನೆಯದು ದತ್ತು ಪಡೆಯುವ ಪದ್ಧತಿ. ನಮ್ಮ ದೇಶದಲ್ಲಿ ಅನಾಥ ಮಕ್ಕಳು ಹೇಗೆ ಹುಟ್ಟಿಕೊಳ್ಳುತ್ತಾರೆ ಎನ್ನುವುದಕ್ಕೆ ಈ ಕತೆಯ ಪ್ರಮುಖ ಪಾತ್ರ ಹಣಮಂತನೇ ಉದಾಹರಣೆ.
ಸರಕಾರಿ ಆಸ್ಪತ್ರೆಯ ನೈಜ ಚಿತ್ರಣ ಇಂದಿನ ವೈದ್ಯಕೀಯ ಕ್ಷೇತ್ರದ ವ್ಯವಸ್ಥೆಯನ್ನು ತೋರಿಸುತ್ತದೆ. ಬಡವರ ನೋವು, ಅಸಹಾಯಕತೆ ಹೊರ ಹಾಕಿದೆ.
ರಿಮ್ಯಾಂಡ್ ಹೋಮ್ ನಿಂದ ಕೇವಲ ಸುಂದರ ಮಕ್ಕಳನ್ನಷ್ಟೇ ದತ್ತು ಪಡೆಯುತ್ತಾರೆ ಎನ್ನುವ ಮಾತನ್ನು ಹುಸಿಗೊಳಿಸುವಂತೆ ಹಣಮಂತನನ್ನು ಪಾಲಕರೊಬ್ಬರು ಸಾಕಲು ಒಪ್ಪಿಕೊಳ್ಳುವುದೇ ನಿದರ್ಶನ. ಕತೆಗಾರ್ತಿಯ ಆಂತರಿಕ ತುಡಿತ, ಮನದ ಮಿಡಿತ, ಅಡಗಿರುವುದು ಲಿಕ್ಕವಿಲ್ಲದಷ್ಟು ಅನಾಥ ಮಕ್ಕಳಿಗಾಗಿ ಎಂದು ಈ ಕತೆಯಿಂದ ಸ್ಪಷ್ಟವಾಗುತ್ತದೆ.
‘ನದಿ ಹಾಡುತ್ತ?’ ಇದು ರೇಣುಕಾರವರ ಸೂಕ್ಷ್ಮ ಸಂವೇದನೆಯ ಕತೆ. ಅಂತರ ಜಾತಿಯ ವಿವಾಹವನ್ನು ಆಧಾರವಾಗಿಟ್ಟುಕೊಂಡು ಒಂದು ಹಳ್ಳಿಯ ಪರಿಸರವನ್ನು ಕಟ್ಟಿ ಕೊಡುವ ಪ್ರಯತ್ನ ಮಾಡಿದ್ದಾರೆ. ಹಿಂದು ಮುಸ್ಲಿಂ ಬಾಂಧವ್ಯ ಹಳೆಯದಾಗಿ, ಮದುವೆಯನ್ನು ಒಪ್ಪಿಕೊಳ್ಳುವ ಸ್ಥಿತಿ ಸಮಾಜದಲ್ಲಿ ನಿರ್ಮಾಣವಾಗಿದೆ. ರಾಜಕೀಯ, ದ್ವೇಷ, ಅಸೂಯೆ, ಇಂತಹ ಮನುಷ್ಯನ ವಿಕೃತ ಸ್ವಭಾವಗಳು ನೆಮ್ಮದಿಯಿಂದ ಬದುಕಲು ಬಿಡದಿದ್ದಾಗ ಏನಾಗುವುದೆಂದು ಕತೆಗಾರ್ತಿ ಅರ್ಥಪೂರ್ಣವಾಗಿ ನಿರೂಪಿಸಿದ್ದಾರೆ.
ಸಮಾಜವನ್ನು ನದಿಗೆ ಹೋಲಿಸಿ ಸಾಂಕೇತಿಕವಾಗಿ ಬಳಸಿದ ಶೀರ್ಷಿಕೆ ಸೂಕ್ತವಾಗಿದೆ. ಅಷ್ಟೇ ಧ್ವನಿಪೂರ್ಣವೂ ಆಗಿದೆ.
ಸಮಾಜದಲ್ಲಿ ಹೆಣ್ಣಿನ ಜೀವನ, ಅವಳ ಬದುಕಿನ ಮಹತ್ವದ ನಿರ್ಧಾರಗಳು, ಮದುವೆ ಎನ್ನುವ ವ್ಯವಸ್ಥೆ, ಅದರಲ್ಲೂ ಮುಸ್ಲಿಂ ಜನಾಂಗದ ನಿಖಾ, ಈ ಎಲ್ಲಾ ಅಂಶಗಳನ್ನು ಚರ್ಚಿಸುವ ಕತೆ ‘ಕಿಟಕಿಯಂಚಿನ ಮೌನ’. ಕತೆ ಓದಿಯಾದ ನಂತರವೂ ಮೌನವಾಗಿ ಚಿಂತಿಸಲು ಹಚ್ಚುವ ಸಂವೇದನಾ ಸ್ಥಿತಿಯನ್ನು ನಿರ್ಮಾಣ ಮಾಡುತ್ತದೆ. ಎಲ್ಲಾ ಪಾತ್ರಗಳು ಸಹಜವಾಗಿಯೇ ತಮ್ಮ ತಮ್ಮ ಜವಾವ್ದಾರಿ ನಿಭಾಯಿಸಿದಂತೆ ತೋರುತ್ತದೆ. ಅಬ್ಬಾ, ಅಮ್ಮಿ, ಅಕ್ಕ ರೇಷ್ಮಾ, ಅಸಹಾಯಕ ನಾಯಕಿ ಮುಮ್ತಾಜ್ ಮನಸಿನಲ್ಲಿ ಕೆಲ ಸಮಯ ಉಳಿಯುತ್ತಾರೆ. ಸ್ತ್ರಿಪರ ಚಿಂತನೆ ಮನ ಮುಟ್ಟುತ್ತದೆ.
‘ದಾರಿ ಹಿಡಿದ ಬದುಕು’ ಕತೆ ಒಬ್ಬ ಪ್ರಜ್ಞಾವಂತ ಮಹಿಳೆಯ ನಿರ್ಧಾರವನ್ನು ಕಟ್ಟಿ ಕೊಡುತ್ತದೆ. ಮಹಿಳಾ ದೌರ್ಜನ್ಯ, ಅನ್ಯಾಯ, ಶೋಷಣೆ ಸಹಿಸಿಕೊಂಡಷ್ಟೂ ಕಷ್ಟಗಳು ಹೆಚ್ಚಾಗುತ್ತವೆ. ಸಹನೆಯ ಹಂತ ಮೀರಿದ ಮೇಲೆ ಅದಕ್ಕೊಂದು ಸರಿಯಾದ ಪರಿಹಾರ ಕಂಡುಕೊಳ್ಳುವ ಕಥಾನಾಯಕಿ ಸುಮ ಆದರ್ಶವಾಗಿ ಕಾಣುತ್ತಾಳೆ.
ನಮ್ಮ ಮಧ್ಯೆ ಹೆಣ್ಣುಗಳು ದೇವದಾಸಿ ಪದ್ಧತಿಯಿಂದ ನರಳಿದ್ದಕ್ಕೆ ಲೆಕ್ಕವೇ ಇಲ್ಲ. ಸಮಾಜದಲ್ಲಿ ಅದು ನಿಂತು ಹೋಗಿದೆ, ಕಾನೂನಾತ್ಮಕವಾಗಿ ತಡೆಗಟ್ಟಿದ್ದಾರೆ ಎಂದರೂ, ಅಲ್ಲಲ್ಲಿ ಈ ಸಮಸ್ಯೆಯ ಬೇರು ಉಳಿದುಕೊಂಡು, ಜೀವಂತವಾಗಿ ಹರಿದಾಡುತ್ತಿದೆ. ಅದಕ್ಕೆ ಉದಾಹರಣೆ ‘ಗಿಳಿಯು ಪಂಜರದೊಳಿಲ್ಲ’. ಆಧುನಿಕ ಜಗತ್ತಿನಲ್ಲಿ ಇಷ್ಟೊಂದು ಮುಂದುವರಿದಾಗಲೂ, ಒಂದು ಹೆಣ್ಣಿನ ಬದುಕಿನಲ್ಲಿ ಈ ಸಾಮಾಜಿಕ ಪಿಡುಗು ನಿರ್ಮಿಸಿದ ತಲ್ಲಣ, ಇನ್ನೂ ಉಳಿದುಕೊಂಡಿರುವುದು ವಿಷಾದ. ಯಾವುದೇ ಕಾಲವಿರಲಿ ಹೋರಾಟ ನಡೆಸುವವಳು ಹೆಣ್ಣು ಏನ್ನುವುದಂತೂ ಸತ್ಯ. ಅದನ್ನು ತದೆತಟ್ಟಿ ನಿಂತು ಎದುರಿಸಿ ನಿಲ್ಲುವ ಶಕ್ತಿ, ನಾಯಕಿ ಗಂಗಾಳ ಧೈರ್ಯ ಮೆಚ್ಚುವಂಥದ್ದು.
‘ಹೆಜ್ಜೆ ಗುರುತು’ ಕತೆ ಓದಿ ಮುಗಿಸಿದಾಗ ಮೌನವಾಗಿ ಕೂರುವಂತಾಯಿತು. ಹೆಣ್ಣು, ಗಂಡು, ಪ್ರೀತಿ, ಪ್ರೇಮ, ಮದುವೆ, ಜಗಳ, ದೂರಾವುದು, ಸಂಘರ್ಷ ಎಲ್ಲವೂ ಬದುಕಿನಲ್ಲಿ ನಡೆಯುತ್ತದೆ. ಸಮಾಜದಲ್ಲಿ ಒಂದು ಕತೆ, ಒಂದು ಘಟನೆಯಾಗಿ ಕಂಡು ಬರುತ್ತದೆ ನಿಜ. ಆದರೆ ಅಂತಹ ಘಟನೆಗಳು ನಿರಂತರ ನಡೆಯುತ್ತಿರುತ್ತವೆ. ಅದಕ್ಕೆ ಹೊಣೆ ಯಾರು? ಎನ್ನುವ ಪ್ರಶ್ನೆ ಎತ್ತಿದ ಕತೆಗಾರ್ತಿಯ ಚಿಂತನೆ ಹೌದೆನಿಸುತ್ತದೆ. ಹರೆಯದ ಅಮಲಿನಲ್ಲಿರುವ ಯುವ ಜನತೆಗೆ ಉತ್ತಮ ಸಂದೇಶ ನೀಡುವ ಕತೆ.
ಒಂದು ಹೆಣ್ಣಿನ ನೆಲೆಯಲ್ಲಿ ನಿಂತು ಬದುಕನ್ನು ನೋಡಿದಾಗ, ಕಾಣುವ ಚಿತ್ರಣವೇ ‘ಇಂದಿರಾ’ ಕತೆ. ವ್ಯಕ್ತಿ ತನಗೆ ಯಾರೂ ಇಲ್ಲ ಎನ್ನುವ ಭಾವನೆ ಮೂಡಿದಾಗಲೂ, ಬದುಕಿನಲ್ಲಿ ಗಟ್ಟಿಯಾಗಿ ನೆಲೆಯೂರಬಹುದು. ಆ ಭರವಸೆ ಮೂಡಿಸುವ ಪಾತ್ರ ಇಂದಿರಾಳದು.
ಹೆಣ್ಣು, ಗಂಡಿನ ಸಂಬಂಧ ಎಷ್ಟು ಸೂಕ್ಷ್ಮ ಎನ್ನುವ ಭಾವನಾತ್ಮಕ ವಿಷಯದ ಮೇಲೆ ಅಷ್ಟೇ ಸೂಕ್ಷ್ಮವಾಗಿ ರಿಜಿಸ್ಟರ್ ಮಾಡಿಕೊಳ್ಳುವ ಕತೆ ‘ಬಾಯ್ ಬಾಯ್’. ವಿದಾಯದ ಇನ್ನೊಂದು ಅರ್ಥವೇ ಬಾಯ್ ಹೇಳುವುದು. ಈ ಕತೆಯಲ್ಲಿ ಹಳೆಯ ಜೀವನಕ್ಕೆ ಸಾಂಕೇತಿಕವಾಗಿ ಬಳಸಿದ ಪದಗಳೆಂದರೆ ಹೆಜ್ಜೆ ಗುರುತುಗಳು. ಅನಗತ್ಯ ಸಹನೆ, ಆಗದ ಹೊಂದಾಣಿಕೆ, ಎಲ್ಲವೂ ಸಮಯ ಹಾಳು ಮಾಡಿದಂತೆ. ಹೆಣ್ಣು ತನ್ನ ವಿಮುಕ್ತಿಯ ಪಥ ಕಂಡುಕೊಳ್ಳಲೇ ಬೇಕು ಎನ್ನುವ ಆಶಯ ಈ ಕತೆಯಲ್ಲಡಗಿದೆ.
ಈ ಸಂಕಲನದ ‘ಬಿಕರಿ’, ‘ಬಿಸಿಲ ಬೀದಿಯಲಿ…’ ಕತೆಗಳಲ್ಲಿ ಇನ್ನೊಂದಿಷ್ಟು ಬಿಗಿತ ಬಂದಿದ್ದರೆ, ಓದಿಸಿಕೊಂಡು ಹೋಗುತ್ತಿತ್ತು. ಆದರೂ ಆಶಯಗಳು ಪ್ರಸ್ತುತವಾಗಿವೆ.
ಸಮಾಜದಲ್ಲಿ ಕಂಡುಂಡ ಸತ್ಯಗಳೇ ಕತೆಯಾಗಿ, ಪಾತ್ರವಾಗಿ ರೇಣುಕಾ ಅವರು ಕಟ್ಟಿಕೊಟ್ಟ ಭಾವನೆ ಮೂಡಿಸಿತು. ಇಲ್ಲಿಯ ಕಥಾನಾಯಕಿಯರೆಲ್ಲ ತಮಗೆ ತಿಳಿದಂತೆ ವ್ಯವಸ್ಥೆ ಬದಲಿಸುವ ಪ್ರಯತ್ನದಲ್ಲಿದ್ದಾರೆ ಎನಿಸುತ್ತದೆ.
ಹೆಣ್ಣು ಸಶಕ್ತಳು, ಧೈರ್ಯವಂತೆ, ಸಮಯಪ್ರಜ್ಞೆ ಇರುವಂಥವಳು, ಅನಗತ್ಯ ಒದ್ದಾಟಕ್ಕೆ ತಿಲಾಂಜಲಿ ಹೇಳುವ ಮನಸ್ಥಿತಿ ಹೊಂದಿದವಳು ಎಂದು ಕತೆಗಾರ್ತಿ ಸಾಬೀತು ಪಡಿಸಿರುವುದು, ಮಹಿಳಾ ದನಿಯನ್ನು ಸ್ಪಷ್ಟವಾಗಿ ಗುರುತಿಸುವಂತೆ ಮಾಡುತ್ತದೆ.
ರೇಣುಕಾ ಹೆಳವರ ಅವರು ಪೋಲಿಸ್ ಡಿಪಾರ್ಟ್ಮೆಂಟ್ ನಲ್ಲಿ ತಮ್ಮ ಸೇವೆ ಸಲ್ಲಿಸುತ್ತ, ಸಾಹಿತ್ಯದ ಕಡೆ ಒಲವು ತೋರುತ್ತಿರುವುದನ್ನು, ಅನೇಕ ವರ್ಷಗಳಿಂದ ಗಮನಿಸುತ್ತಲೇ ಬಂದಿದ್ದೇನೆ. ಆರಂಭದಲ್ಲಿ ಕವಿತೆಗಳಲ್ಲಿ ತನ್ನ ಮನದ ಭಾವನೆಗಳ ಸೆರೆಹಿಡಿಯುವ ತುಡಿತ ಅವರಲ್ಲಿತ್ತು. ಈಗ ಕಥಾ ಪ್ರಕಾರದಲ್ಲಿ ಅಷ್ಟೇ ನಿಷ್ಠೆಯಿಂದ ಪ್ರಯತ್ನಿಸಿದ್ದಾರೆ. ಪದ್ಯದ ಜೊತೆ ಗದ್ಯವನ್ನೂ ನಿಭಾಯಿಸ ಬಲ್ಲರು ಎನ್ನುವ ಆತ್ಮವಿಶ್ವಾಸ ಮೂಡಿಸುವ ಕೃತಿ ‘ಕಿಟಕಿಯಂಚಿನ ಮೌನ’ ಕಥಾ ಸಂಕಲನ.
ರೇಣುಕಾ ಅವರ ಒಳಗಿರುವ ಬರಹಗಾರ್ತಿಗೆ ಸೂಕ್ಷ್ಮ ದೃಷ್ಟಿಕೋನವಿದೆ. ಸಮಾಜವನ್ನು ಯಥಾವತ್ತಾಗಿ ನೋಡಿ ಅರಗಿಸಿಕೊಳ್ಳುವ ಶಕ್ತಿಯಿದೆ. ಅದನ್ನು ಹಾಗೆಯೇ ಚಿತ್ರಿಸುವ ಕಲೆಗಾರಿಕೆಯೂ ಇದೆ. ಸಾಮಾಜಿಕ ವ್ಯವಸ್ಥೆಯ ಓರೆಕೋರೆಗಳು ಗ್ರಹಿಕೆಗೆ ಬಂದಂತೆಯೇ ಚಿತ್ರಿಸಿ ಬಿಡುತ್ತಾರೆ. ಸಮಸ್ಯೆ ಎಲ್ಲಿ ಆಗಿತ್ತು ಎನ್ನುವುದರ ಕಡೆ ಕತೆ ಸಂಪೂರ್ಣವಾಗಿ ಬೆರಳು ಮಾಡಿ ತೋರಿಸುತ್ತದೆ.
ಇಲ್ಲಿಯ ಕತೆಗಳಲ್ಲಿ ಬಳಸುವ ಭಾಷೆ ಪ್ರತಿನಿತ್ಯ ಆಡುವಂಥದ್ದೇ ಆಗಿದೆ. ಕಲ್ಯಾಣ ನಾಡಿನ ಕೆಲವಾರು ಜಿಲ್ಲೆಗಳ ಮಾತಿನ ಧಾಟಿ, ಧ್ವನಿ, ಶೈಲಿ ಅಲ್ಲಲ್ಲಿ ಕಂಡು ಬರುತ್ತದೆ. ಪ್ರಾದೇಶಿಕ ಚಿಂತನೆ, ಹಳ್ಳಿಗಳ ಚಿತ್ರಣ, ಅಲ್ಲಿಯ ಸಮಸ್ಯೆಗಳು ವಸ್ತುವಾಗಿರುವುದು ಸಾರ್ಥಕ ಭಾವ ಮೂಡಿಸುತ್ತದೆ.
ಕಥಾ ನಿರೂಪಣೆ, ಬಳಸುವ ತಂತ್ರ, ಕಥಾ ವಸ್ತುವಿನ ಆಯ್ಕೆ, ಸಮಾಧಾನಕರವಾಗಿ ಇರುವುದು ಬೆಳೆಯುವ ಕತೆಗಾರ್ತಿಯ ಲಕ್ಷಣ. ಬದುಕು ಮತ್ತು ಬರಹ ಒಂದಕ್ಕೊಂದು ಪೂರಕ. ಕಂಡುಂಡ ಸತ್ಯಗಳು, ಜೀವನಾನುಭವ ಕತೆಯಾದಾಗ ವಾಸ್ತವ ನೆಲೆಗಟ್ಟಿನಲ್ಲಿ ಗಟ್ಟಿಯಾಗಿ ನಿಲ್ಲುತ್ತವೆ.
ರೇಣುಕಾ ಹೆಳವರ ಅವರ ವೃತ್ತಿ ಬದುಕು, ಸಾಹಿತ್ಯದ ಹಾದಿ, ಎಲ್ಲವೂ ಸುಗಮವಾಗಿರಲೆಂದು ಹಾರೈಸುವೆ.
–ಸಿಕಾ ಕಲಬುರ್ಗಿ