ಉಡುತಡಿಯ ಹೆಮ್ಮೆ ಕುಡಿ ಶಿವಶರಣೆ ಅಕ್ಕಮಹಾದೇವಿ.
ಹನ್ನೆರಡನೆಯ ಶತಮಾನದಲ್ಲಿ ಶಿವಶರಣೆಯರು ಬಸವಣ್ಣನವರ ಜತೆಗೂಡಿ ಶರಣಸಾಹಿತ್ಯಕ್ಕೆ ಸಮಾನತೆಗೆ ತಮ್ಮ ಯೋಗ್ಯತೆಗೆ ಅನುಸಾರವಾಗಿ ಕೊಡುಗೆ ನೀಡಿದ್ದಾರೆ. ಮತ್ತು ತಮ್ಮ ತಮ್ಮ ಹೆಸರುಗಳನ್ನು ಅಜರಾಮರವಾಗಿಸಿದ್ದಾರೆ. ಅಣ್ಣ ಬಸವಣ್ಣ , ಅಲ್ಲಮಪ್ರಭುದೇವರ ಮಾರ್ಗದರ್ಶನದಲ್ಲಿ ನಡೆದು ಅವರು ಬಿತ್ತಿದ ಸಮಾನತೆಯ ಹಕ್ಕನ್ನು ಪ್ರತಿಪಾದಿಸುತ್ತ ಜೀವಿಸಿದ ಶರಣೆಯರು ಸಾಕಷ್ಟು ಇದ್ದಾರೆ. ಅವರಲ್ಲಿ ಮುಂಚೂಣಿಯಲ್ಲಿ ಬರುವ ಹೆಸರು “ಅಕ್ಕ” ಮಹಾದೇವಿಯದೆ. ಈಕೆ ಬಸವಣ್ಣನವರ ಪಟ್ಟ ಶಿಷ್ಯೆ. ಅವರು ಕೈಕೊಂಡ ಸಮಾನತೆಯ ಮತ್ತು ಸಮಾಜ ಸುಧಾರಣೆಗೆ ಒತ್ತು ಕೊಟ್ಟು ತನ್ನ ಪಾಂಡಿತ್ಯ ಮತ್ತು ಪ್ರತಿಭೆಯನ್ನು ಪಣಕ್ಕಿಟ್ಟು ಹೋರಾಡಿದ ಶರಣೆ.
ಜನನ ಮತ್ತು ಬಾಲ್ಯ:
ಉಡುತಡಿ ಎಂಬ ಊರಿನಲ್ಲಿ ಈಕೆಯ ಜನನ. ಇವಳ ತಂದೆ ತಾಯಿಯವರು ಶಿವನ ಉಪಾಸಕರು ಮತ್ತು ಶಿವನ ಪರಮ ಭಕ್ತರಾಗಿದ್ದರು. ಈ ದೆಸೆಯಿಂದ ಇವಳಿಗೂ ಬಾಲ್ಯದಲ್ಲಿಯೇ ಭಕ್ತಿ ಭಾವ ತುಂಬಿ ಸಂಸ್ಕಾರವಂತರ ಮಕ್ಕಳು ಸಂಸ್ಕಾರವಂತರೇ ಎಂಬುದನ್ನು ಸಾಬೀತುಗೊಳಿಸಿದ ಪರಮ ಸಾಧ್ವಿ. ಇದರಿಂದ ಸದಾಚಾರ ಸದ್ಗುಣಗಳ ಖಣಿಯಾಗಿ ರೂಪುಗೊಂಡಳು. ಬಾಲ್ಯಾವಸ್ಥೆ ದಾಟಿ ಯೌವನಕ್ಕೆ ಬಂದ ಮೇಲೆ ಅತ್ಯಂತ ಚೆಲುವಿಕೆಯಿಂದ ಮುಖದಲ್ಲಿ ಒಳ್ಳೆಯ ಕಾಂತಿ ತುಂಬಿಕೊಂಡಿತು. ಬಲು ಸುಂದರಳಾಗಿ ಕಾಣಿಸಹತ್ತಿದಳು. ತಂದೆ ತಾಯಿಯು ಶಿವನ ಉಪಾಸಕರಿದ್ದಂತೆ ತಾನೂ ಅದೇ ಮಾರ್ಗ ತುಳಿಯಬೇಕೆಂದು ಸದ್ಗುಣದಿಂದ ಮತ್ತು ಸದಾಚಾರದಿಂದ ನಿರ್ವಿಕಾರಳಾಗಿ ಜೀವಿಸಹತ್ತಿದಳು.
ತಿರುವು 1.
ತನ್ನ ನಾಡಿನ ಜೈನ ಅರಸನಾದ ಕೇಶಿಕನ ದೃಷ್ಟಿಗೆ ಈ ಚೆಲುವಿ ಬೀಳಬೇಕೇ? ಚೆಲುವಿಕೆಯಿಂದ ತುಂಬಿದ್ದ ಇವಳನ್ನು ನೋಡಿ ಕಾಮವಿಕಾರನಾಗಿ ಮದುವೆಯಾದರೆ ಅವಳನ್ನೇ ಆಗಬೇಕು ಎಂದು ಹಂಬಲಿಸುತ್ತ ತನ್ನ ಅರಮನೆಗೆ ಬಂದ. ನಂತರ ಅವಳ ಕುರಿತು ಸಂಪೂರ್ಣ ಮಾಹಿತಿ ತರಿಸಿಕೊಂಡ. ಇದೇ ವಿಷಯವನ್ನು ಆಕೆಯ ತಂದೆ ತಾಯಿಯವರ ಜತೆ ಪ್ರಸ್ತಾಪಮಾಡಿದ. ದೂತರನ್ನು ಕಳಿಸಿ ಒತ್ತಾಯಿಸಹತ್ತಿದ. ಇದು ಅಕ್ಕನ ತಂದೆತಾಯಿಯವರಿಗೆ ಯೋಗ್ಯವೆನಿಸಲಿಲ್ಲ. ಸ್ವಭಾವದಿಂದ ಅರಸ ಮಹಾ ನಿಷ್ಠುರನು ಮತ್ತು ಮುಂಗೋಪಿಯಾಗಿದ್ದ. ಇದು ಅವರಿಗೆ ತಿಳಿದ ವಿಷಯವಾಗಿತ್ತು. ಇಂತಹ ರಾಜನೊಂದಿಗೆ ವ್ಯವಹರಿಸುವದು ಮತ್ತು ತಮ್ಮ ಮಗಳ ಮನಸ್ಸನ್ನು ಪರಿವರ್ತಿಸುವದು ದೊಡ್ಡ ಚಿಂತೆಯಾಗಿ ಗೊಂದಲದಲ್ಲಿದ್ದರು. ಈ ಧರ್ಮಸಂಕಟದಿಂದ ಪಾರಾಗುವದು ತುಂಬಾ ಕಠಿಣವಾದಕಾರ್ಯವಾಗಿತ್ತು. ಇವಳ ಮೇಲೆ ರಾಜನು ತುಂಬಾ ಮೋಹಗೊಂಡಿದ್ದ.
ತಂದೆತಾಯಿಯರ ಸಂದಿಗ್ಧ ಪರಿಸ್ಥಿತಿ ಅರಿವಾದೊಡನೇ ಮೂರು ಕರಾರುಗಳೊಂದಿಗೆ ಆತನನ್ನು ಲಗ್ನವಾಗಲು ಒಪ್ಪಿ ಲಗ್ನವಾದಳು. ಪರಮ ವೈರಾಗ್ಯಶಿಖಾಮಣಿಯಾದ ಇವಳಿಂದ ರಾಜನಿಗೆ ಏನೂ ಸುಖವಾಗಲಿಲ್ಲ. ಇಂದು ನಾಳೆ ಸರಿ ಹೋಗುವಳೆಂಬ ಆಸೆಯಿಂದ ಇದ್ದ ರಾಜನು ಅರಿತೋ ಅರಿಯದೆಯೋ ಅವಳ ಮೂರೂ ಕರಾರುಗಳನ್ನು ಒಂದೊಂದಾಗಿ ಕಾಮವಿಕಾರದಿಂದ ಪರಿಗಣಿಸಲಿಲ್ಲ. ಆಗ ತನ್ನ ಕರಾರಿನಂತೆ ನಡೆಯದ ರಾಜನನ್ನು ನೇರವಾಗಿ ಅಕ್ಕನು ತಿರಸ್ಕರಿಸಿ ವೈರಾಗ್ಯ ತಾಳಿದಳು. ಮೊದಲೇ ನಿರ್ಲಿಪ್ತಳು. ಈಗಂತೂ ಕೇಳುವದೇನು? ಅರಸನ ಬಂಧನಗಳನ್ನೆಲ್ಲ ಹರಿದೊಗೆದು ತನ್ನ ಉಡುಗೆಗಳನ್ನು ಸಹ ತೆಗೆದಂತಾಯಿತು. ಚನ್ನಮಲ್ಲಿಕಾರ್ಜುನನನ್ನು ಧ್ಯಾನಿಸುತ್ತ ಭಿಕ್ಷೆಬೇಡಿ ಉಪಜೀವನ ನಡೆಸಲು ಸಹ ಸಿದ್ಧಳಾದಳು. ಎಂತಹ ತ್ಯಾಗ ಅಕ್ಕನದು ! ಸಕಲ ರಾಜಭೋಗಗಳನ್ನು ವೈಭವವನ್ನು ತೊರೆದ ಮಹಾಸಾಧ್ವಿ ಇವಳು. ಅವಳ ಮನದಲ್ಲಿ ಚನ್ನ ಮಲ್ಲಿಕಾರ್ಜುನ ನೇ ತುಂಬಿಕೊಂಡ. ಎಲ್ಲದಕ್ಕೂ ಅವನನ್ನೇ ಜಪಿಸುತ್ತ ಇದ್ದಾಗ ಒಮ್ಮೆಲೇ ರೋಮಾಂಚನವಾಗಿ ಕಣ್ಣು ಕುಕ್ಕಿದಂತಾಗಿ ಮನದಲ್ಲಿ ಚನ್ನಮಲ್ಲಿಕಾರ್ಜುನನ ಮೂರ್ತಿಯನ್ನು ಕಂಡು ಸಂಪೂರ್ಣ ವಿರಕ್ತಳಾದಳು.
ತಿರುವು 2.
ಅಕ್ಕನು ಕಲ್ಯಾಣಕ್ಕೆ ತೆರಳಿ ಬಸವಣ್ಣ ಚೆನ್ನ ಬಸವಣ್ಣ, ಅಲ್ಲಮ, ಸಿದ್ಧರಾಮ ಮುಂತಾದ ಅನೇಕ ಶರಣರ ಸಹವಾಸದಲ್ಲಿ ಕಾಲ ಕಳೆಯುತ್ತ ತನ್ನ ಅನುಭಾವಗಳನ್ನು ವಚನಗಳ ಮೂಲಕ ಪ್ರಕಟಿಸತೊಡಗಿದಳು. ಬಸವಣ್ಣ ಅವನಂತೂ ಈಕೆಯ ಆರಾಧ್ಯದೈವನಾದ. ಆತನ ಗುಣಗಾನ ಮಾಡುತ್ತ ಅವರೆಲ್ಲರ ಆಶ್ರಯದಲ್ಲಿದ್ದು ಭಕ್ತಿ ಮಾರ್ಗವನ್ನು ಅರಿತುಕೊಂಡಳು. ಕಲ್ಯಾಣದಲ್ಲಿ ಸಂಪೂರ್ಣ ಜ್ಷಾನ ಪಡೆದು ಅನೇಕ ವಚನಗಳನ್ನು ರಚಿಸಿ ಜನರಲ್ಲಿ ಜಾಗ್ರತೆ ಮೂಡಿಸತೊಡಗಿದಳು. ಚನ್ನಮಲ್ಲಿಕಾರ್ಜುನ ಎಂಬ ಅಂಕಿತ ನಾಮದಲ್ಲಿ ವಚನಗಳನ್ನು ರಚಿಸಿದಳು. ನನ್ನ ಇಲ್ಲಿಯ ಕಾರ್ಯಗಳೆಲ್ಲ ಮುಗಿದವೆಂದರಿತ ಅಕ್ಕನು ಚನ್ನಮಲ್ಲಿಕಾರ್ಜುನನ ಸೆಳೆತಕ್ಕೆ ಒಳಗಾಗಿ ಶ್ರೀಶೈಲಕ್ಕೆ ಪ್ರಯಾಣ ಬೆಳೆಸಿದಳು. ಆಕೆಯ ಸರ್ವಸ್ವವು ಚನ್ನಮಲ್ಲಿಕಾರ್ಜುನನೇ ಆಗಿದ್ದ. ಅವನನ್ನೇ ಭಕ್ತಿಭಾವದಿಂದ ಪೂಜಿಸುತ್ತ ಧ್ಯಾನಿಸುತ್ತ ಅಲ್ಲಿಯೇ ಚಿರಂಜೀವಿಯಾದಳು.
ಕೆಲವು ಅಕ್ಕನ ವಚನಗಳ ವಿಶ್ಲೇಷಣೆ ನನಗೆ ತಿಳಿದಂತೆ.
1. ಅಕ್ಕ ಕೇಳವ್ವ ನಾನೊಂದು ಕನಸು ಕಂಡೆ
ಅಕ್ಕಿ ಅಡಕಿ ತೆಂಗಿನಕಾಯಿ
ಕಂಡೇನವ್ವ ಕಂಡೇನವ್ವ
ಚಿಕ್ಕ ಚಿಕ್ಕ ಜಡೆಗಳ
ಸುಲಿಪಲ್ಲಿ ಗೊರವನು
ಬಿಕ್ಷುಕೆ ಬಂದುದ ಕಂಡೇನವ್ವ
ಮಿಕ್ಕು ಮೀರಿ ಹೋಹನ
ಬೆಂಬತ್ತಿ ಕೈನೀಡಿದೆನು
ಚನ್ನಮಲ್ಲಿಕಾರ್ಜುನ ಕಂಡೇನವ್ವ
ಚನ್ನಮಲ್ಲಿಕಾರ್ಜುನ ಕಣ್ದೆರೆದನು
ಅರ್ಥ:
ಅಕ್ಕ ಕೇಳು ನಾನು ಒಂದು ಕನಸು ಕಂಡೆ . ಕನಸಿನಲ್ಲಿ ಅಕ್ಕಿ ಅಡಕಿ ತೆಂಗು ಕಂಡುಬಂದವು. ಸಣ್ಣ ಸಣ್ಣ ಜಡೆಗಳ ಸ್ವಚ್ಛವಾದ ಮತ್ತು ಚೆಂದವಾದ ಹಲ್ಲುಗಳು ಇದ್ದ ಬೇಡರವನು ಭಿಕ್ಷೆಗೆ ಬಂದಂತೆ ಕಂಡೆನಾನು. ದೇವನ ಪ್ರೀತಿಯಿಂದ ಆ ಮಹಿಮನ ಬೆನ್ನು ಹತ್ತಿ ಕಂಡು ಹಿಡಿದುಕೊಂಡೆ. ಇಲ್ಲಿ ಅವಳ ಭಕ್ತಿಯುತವಾದ ಭಾವಗಳನ್ನು ಕಾಣಬಹುದಾಗಿದೆ. (ದಿ. ಮಲ್ಲಿಕಾರ್ಜುನ ಮನ್ಸೂರ ಇವರು ಈ ಹಾಡನ್ನು ದೆಹಲಿಯಲ್ಲಿ ರಾಷ್ಟ್ರಪತಿ ಮತ್ತು ಇನ್ನಿತರ ಗಣ್ಯ ವ್ಯಕ್ತಿಗಳ ಮುಂದೆ ಹಾಡಿದ್ದು ಕಣ್ಣುಮುಂದೆ ಬರುತ್ತಿದೆ) ಇದು ಅಕ್ಕನ ಉತ್ತಮ ವಚನ.
2. ಅರಿದೆನೆಂದರೆ ಅರಿಯಬಾರದು ನೋಡಾ!
ಮನಕ್ಕೆ ಘನತಾನೆ ನೋಡಾ!
ಚನ್ನಮಲ್ಲಿಕಾರ್ಜುನನ ನಿರ್ಣಯವಿಲ್ಲದೇ ಪೋದೆನು.
ಇಲ್ಲಿ ಚನ್ನಮಲ್ಲಿಕಾರ್ಜುನನ ತಿಳಿಯುವದು ಅಷ್ಟು ಸುಲಭವಲ್ಲ ಎಂಬ ಅರ್ಥ ಅಡಗಿದೆ. ಎಲ್ಲರಿಗೂ ಮೀರಿದ ಪರಮ ವಸ್ತು ಅದು. ಅವನನ್ನು ನಾನು ತಿಳಿದೆ ನನಗೆ ಗೊತ್ತು ಎಂದು ತಿಳಿದರೆ ಅದು ಅಜ್ಷಾನ ಎಂಬ ಅರ್ಥ ಇಲ್ಲಿ ಬಿಂಬಿತವಾಗಿದೆ. ಇದು ಅಕ್ಕನ ಸುಂದರ ಎರಡನೆಯ ಸ್ಥಾನದಲ್ಲಿ ಬರುವ ವಚನವಿದು.
3. ನರಜನ್ಮ ತೊಡೆದು ಹರಿಜನ್ಮವ ಮಾಡಿದೆ ಗುರುವೇ
ಭವಬಂಧನವ ಬಿಡಿಸಿ ಪರಮ ಸುಖವ ತೋರಿದ ಗುರುವೇ
ಭವಿ ಎಂಬುದ ತೊಡೆದ ಭಕ್ತಿಯೆಂದೆನಿಸಿದ ಗುರುವೇ
ಚನ್ನಮಲ್ಲಿಕಾರ್ಜುನನ ತಂದೆನ್ನ ಕೈವಶಕ್ಕೆ ಕೊಟ್ಟಗುರುವೇ ಶರಣು
ಗುರುವೇ ನನ್ನ ನರಜನ್ಮವನ್ನು ಸರಿಸಿ ಶಿವನ ಜ್ಷಾನದಿಂದ ಶಿವರೂಪದ ಜನ್ಮವನ್ನು ನೀಡಿದೆ. ಬಂಧನಗಳ ಭವಪಾಶವನ್ನು ಹರಿದು ಮುಕ್ತಿಯಿಂದ ಬದುಕುವ ಮಾರ್ಗವನ್ನು ತೋರಿಸಿದೆ. ಲೌಕಿಕ ಮಾರ್ಗದಲ್ಲಿ ಸಾಗಿಸದೆ ನಿನ್ನ ಭಕ್ತೆಯೆಂಬ ಬಿರುದನ್ನು ಕರುಣಿಸಿದೆ. ಚನ್ನಮಲ್ಲಿಕಾರ್ಜುನನನ್ನು ನನ್ನ ವಶವಿರುವಂತೆ ಮಾಡಿದೆ. ಗುರುವೇ ನಿನಗೆ ಅನಂತ ಪ್ರಣಾಮಗಳು ಮತ್ತು ನಾನು ನಿನ್ನನ್ನೇ ಶರಣುಹೋಗಿದ್ದೇನೆ ಎನ್ನುವ ಭಾವಾರ್ಥಗಳು ಇದರಲ್ಲಿ ಮೂಡಿಬಂದಿವೆ. ಭಕ್ತಿರಸದ ಭಾವನೆಗಳು ಇಲ್ಲಿ ರೂಪಿತವಾಗಿವೆ.
4. ಪುರುಷನ ಮುಂದೆ ಮಾಯೆ ಸ್ತ್ರೀ ಎಂಬ ಅಭಿಮಾನವಾಗಿ ಕಾಡಿಹುದು
ಸ್ತ್ರೀಯಮುಂದೆ ಮಾಯೆ ಪುರುಷನೆಂಬ ಅಭಿಮಾನವಾಗಿ ಕಾಡಿಹುದು
ಲೋಕವೆಂಬ ಮಾಯೆ ಶಿವಶರಣರ ಚರಿತ್ರ ಮರುಳಾ ತೋರಿಹುದು
ಚೆನ್ನಮಲ್ಲಿಕಾರ್ಜುನನೊಲಿದ ಶರಣಂಗೆ ಮಾಯೆಯೂ ಇಲ್ಲ ಅಭಿಮಾನವೂ ಇಲ್ಲ
ಯಾವಾಗಲೂ ಮಾಯೆಯೆಂಬ ಮಾಯೆ ಸ್ತ್ರೀರೂಪದಿಂದ ಪುರುಷನನ್ನು ಮೋಹಿಸುತ್ತಲಿರುತ್ತದೆ. ಇದರ ವಿರುದ್ಧವಾಗಿ ಪುರುಷರೂಪದಿಂದ ಸ್ತ್ರೀಯನ್ನು ಮೋಹಿಸುತ್ತಾ ಇರುತ್ತದೆ. ಈ ಮಾಯೆಗೆ ಸಿಲುಕಿದ ಲೋಕಕ್ಕೆ ಶರಣರ ನಡೆ ಬಗ್ಗುವದಿಲ್ಲ. ಆದರೆ ಚನ್ನಮಲ್ಲಿಕಾರ್ಜುನನು ಮೆಚ್ಚಿ ಆಶೀರ್ವದಿಸಿದ ಶರಣರಿಗೆ ಯಾವ ಮೋಹ ಪಾಶ ಮಾಯಾಪಾಶಗಳು ಇರುವದಿಲ್ಲ. ಸದಾ ಈಶ್ವರನನ್ನು ನೆನೆಯುತ್ತ ಭಕ್ತಿಯಿಂದ ಭಜಿಸುತ್ತ ಇರುವ ಶರಣರಿಗೆ ಲೌಕಿಕದ ಅಭಿಮಾನ ಇರುವದೇ ಇಲ್ಲ. ಆದ್ದರಿಂದ ಯಾವುದೇ ಲೌಕಿಕ ಮಾಯೆಗೆ ಸಿಲುಕದೇ ಅಲೌಕಿಕಮಾರ್ಗ ಅನುಸರಿಸು ಎಂಬುದು ಈ ವಚನದ ಅರ್ಥ.
ಇನ್ನೂ ಅನೇಕ ಮತ್ತು ಅರ್ಥಪೂರ್ಣವಾದ ವಚನಗಳನ್ನು ಅಕ್ಕನು ರಚಿಸಿ ಸಮಾಜದ ಉದ್ಧಾರತೆಗಾಗಿ ಮತ್ತು ಸಮಾನತೆಯ ಹೋರಾಟಕ್ಕಾಗಿ ಶ್ರಮಿಸಿದ ಮಹಾಸಾಧ್ವಿ ಈ ಅಕ್ಕಮಹಾದೇವಿ.
ಕೃಷ್ಣ ನಾರಾಯಣ ಬೀಡಕರ
ನಿವೃತ್ತಬ್ಯಾಂಕ ವ್ಯವಸ್ಥಾಪಕರು
ಕೆಎಚ್ ಬಿ ಕಾಲನಿ
ವಿಜಯಪುರ. -3
ದೂರವಾಣಿ 9972087473