ಅಕ್ಕನಿಗೊಂದು ಓಲೆ…
ಅಕ್ಕ , ನೋಡಬೇಕೆನಿಸುತ್ತಿದೆ
ನಿನ್ನ ಕದಳಿ ವನವನ್ನೊಮ್ಮೆ
ಕಲ್ಲು ಚಪ್ಪಡಿಯ ಕೆಳಗಿರುವ
ಪುಟ್ಟ ಗವಿಯಲಿ, ಹೇಗಿರುವಿ
ನಿನ್ನ ಚನ್ನಮಲ್ಲಯ್ಯನೊಡನೆ..?
ಅತ್ತ ಹೋದಮೇಲೆ ನೀನು
ಇತ್ತ ಬರೀ ಕತ್ತಲು,
ದ್ವೇಷ ಜಾತಿ ದೌರ್ಜನ್ಯಗಳ
ಹೆಪ್ಪುಗಟ್ಟಿದ ಗಾಢ ಕತ್ತಲು…
ಎತ್ತಲೂ ಮಸುಕು ಮುಸುಕಿ
ಕಪ್ಪು ಕಪ್ಪಾಗಿ ಬೆಳೆಯುತ್ತ
ನುಂಗುತ್ತಿವೆ ಲೋಕವನು;
ನರ ಸತ್ತಂತಾಗಿವೆ ಎಲ್ಲವೂ…
ನಿನ್ನ ಜೊತೆಗೇ ಒಯ್ದೆಯಲ್ಲ
ಅನುಭಾವದ ಬೆಳಕಿನ ಗೂಡನ್ನು ..!
ಅದಕ್ಕೇ ತಡಕಾಡುತ್ತ ಬಳಲುತ್ತಿದ್ದೇವೆ
ಸುತ್ತಿದ ಕತ್ತಲುಗಳ ರಾಶಿಯಲಿ..
ಆದರೂ, ನಿನ್ನ ವಚನಗಳ
ಹಣತೆಯ ಬೆಳಕಿನಲಿ,
ಹೋರಾಡುತ್ತ, ಸಮಜಾಯಿಷಿ ಹೇಳುತ್ತ,
ಪ್ರತಿಭಟಿಸಿ ಗೆಲ್ಲುತ್ತ ಉಸಿರಾಡುತ್ತಿದ್ದೇವೆ
ಕತ್ತಲುಗಳ ಕತ್ತು ಹಿಸುಕಿ ಕೊಲ್ಲುತ್ತ…
ಅದೇನೇ ಇರಲಿ, ಬರಬೇಕೆನಿಸುತ್ತಿದೆ
ನಿನ್ನ ಕದಳಿವನಕ್ಕೊಮ್ಮೆ,
ಬರಲೇ ಅಕ್ಕ…?
ರಚನೆ: ಹಮೀದಾ ಬೇಗಂ ದೇಸಾಯಿ. ಸಂಕೇಶ್ವರ.