ಲಿಂಗಸುಗೂರಿನಲ್ಲಿ 17 ರಂದು ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ಜಂಗಮ ಸಮಾವೇಶ :- ಪ್ರಭುಸ್ವಾಮಿ ಅತ್ತನೂರು.
ವರದಿ ವೀರೇಶ ಅಂಗಡಿ ಗೌಡೂರು
ವೀರಶೈವ ಧರ್ಮ ಬೋಧನೆಯ ಪ್ರಥಮರಾಗಿ ಪರಶಿವನ ಅಂಶದಿಂದ ಅವತರಿಸಿ ಜೀವಾತ್ಮ – ಪರಮಾತ್ಮನಾಗುವ ಸಿದ್ಧಾಂತ ಬೋಧಿಸಿದ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ಹಾಗೂ ಜಂಗಮ ಸಮಾವೇಶವನ್ನು ದಿನಾಂಕ 17-4-2022 ರಂದು ಬೆಳಿಗ್ಗೆ 11 ಗಂಟೆಗೆ ಲಿಂಗಸುಗೂರು ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆಚರಿಸಲಾಗುವುದು ಎಂದು ಜಂಗಮ ಸಮಾಜದ ಮುಖಂಡರಾದ ಪ್ರಭುಸ್ವಾಮಿ ಅತ್ತನೂರು ಹೇಳಿದರು.
ಶುಕ್ರವಾರ ಸ್ಥಳೀಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಈ ಸಮಾವೇಶಕ್ಕೆ ಜೇವರ್ಗಿ ತಾಲೂಕಿನ ಆಂದೋಲನದ ಶ್ರೀ ಕರುಣೇಶ್ವರ ಮಠದ ಪೀಠಾಧಿಪತಿಗಳಾದ ಷ.ಬ್ರ. ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ಆಂದೋಲ ಶ್ರೀಗಳು ಆಗಮಿಸಿ ವಿಶೇಷ ಆಶೀರ್ವಚನ ನೀಡಲಿದ್ದಾರೆ. ಜೊತೆಗೆ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಲೋಕಸಭಾ ಕ್ಷೇತ್ರದ ಸಂಸದರಾದ ಷ. ಬ್ರ. ಶ್ರೀ ಜಯಸಿದ್ದೇಶ್ವರ ಮಹಾಸ್ವಾಮಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಆಶೀರ್ವಚನ ನೀಡಲಿದ್ದಾರೆ.
ಅಂದು ಹರ ಗುರು ಚರ ಮೂರ್ತಿಗಳ ಸಾನಿಧ್ಯದಲ್ಲಿ ಜಂಗಮ ವಟುಗಳಿಗೆ ಅಯ್ಯಾಚಾರ ದೀಕ್ಷಾ ಸಂಸ್ಕಾರವನ್ನು ನೆರವೇರಿಸಲು ವೀರಶೈವ ಜಂಗಮ ಸಮಾಜ ನಿರ್ಧರಿಸಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಸಮಾವೇಶದ ದಿವ್ಯ ಸಾನಿಧ್ಯವನ್ನು ಷ. ಬ್ರ. ಶ್ರೀ. ಜಯಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಬೃಹನ್ಮಠ ಜಾಲಹಳ್ಳಿಯವರು ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಷ. ಬ್ರ. ಶ್ರೀ. ಅಮರೇಶ್ವರ ಗುರು ಗಜದಂಡ ಶಿವಾಚಾರ್ಯ ಮಹಾಸ್ವಾಮಿಗಳು ತೊಪಿನಕಟ್ಟಿ ಬೃಹನ್ಮಠ ದೇವರ ಭೂಪುರ ವಹಿಸಿಕೊಳ್ಳಲಿದ್ದಾರೆ. ಸಮಾಜದ ಅನೇಕ ಸ್ವಾಮಿಜಿಗಳು ಹಾಗೂ ಮಾಜಿ ಹಾಗೂ ಹಾಲಿ ಸಂಸದರು, ಶಾಸಕರು, ಹಿರಯ ರಾಜಕೀಯ ಮುಖಂಡರು ಗಣ್ಯರು ಭಾಗವಹಿಸಲಿದ್ದಾರೆ.
ಕಾರಣ ಮಾತೆಯರು ಮಹಿಳೆಯರು ಮಕ್ಕಳು ಸೇರಿದಂತೆ ಜಂಗಮ ಸಮಾಜ ಹಿರಿಯರು, ಬಾಂಧವರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಜಯಂತೋತ್ಸವ ಮತ್ತು ಜಂಗಮ ಸಮಾವೇಶ ಯಶಸ್ವಿಗೊಳಿಸಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ವೀರಭದ್ರಯ್ಯ ಸ್ವಾಮಿ ಹಿರೇಮಠ , ಅಂಬರೀಶ ಹಿರೇಮಠ,ಮಹೇಶ್ ನಂದಿಕೋಲು ಮಠ, ವೀರಭದ್ರಸ್ವಾಮಿ ಗುಂತಗೋಳ, ಅಮರೇಶ ಗಂಭೀರಮಠ, ಶರಣಯ್ಯ ಸೇರಿದಂತೆ ಮುಂತಾದವರು ಹಾಜರಿದ್ದರು.