ಪೇಡಾದೊಂದಿಗೆ ಒಂದು ದಿನ

 

ಪೇಡಾದೊಂದಿಗೆ ಒಂದು ದಿನ

‘ಪೇಡಾ!’
‘ಆಹಾ ಎಂಥ ರುಚಿ!!’
‘ಸವಿಯಾದ ಸಿಹಿ ಸಿಹಿ ತಿನಿಸು!!!’
ಯಾಕಿಷ್ಟು ಪೇಡಾ ವರ್ಣನೆ ಅಂತೀರಾ? ಅಯ್ಯೋ ಇದೇನು ಅಂತ ನಿಮಗೆ ಅನಿಸಿರಬಹುದು. ಆದರೆ ಪೇಡಾ ಅಂದರೆ ಅಷ್ಟೊಂದು ಪ್ರೀತಿ. ಇದರ ಹೆಸರು ಹೇಳಿದ ಕೂಡಲೆ ಅದೇನೋ ಸಿಹಿ ಸಿಹಿ ಭಾವನೆಗಳು ಮೂಡಿ ಮನಕೆ ಮುದ. ಅದನ್ನ ನಾಲಿಗೆಯ ಮೇಲೆ ಇಟ್ಟು, ಕಣ್ಣುಮುಚ್ಚಿ, ಆನಂದದಿಂದ ಸವಿದಾಗ ಆಗುವ ಅನುಭವ ಹೇಗೆ ವರ್ಣಿಸಲಿ? ಅಬ್ಬಾ ಅಸಾಧ್ಯ! ಅನುಭವಿಸಿಯೇ ತೀರಬೇಕು.

ಈ ಹಾಲಿನಿಂದಲೇ ತಯಾರಾದ ಸಿಹಿ ಪಾದಾರ್ಥ ನನ್ನನ್ನು ಮೋಡಿ ಮಾಡಿದ ಬಗೆ ಅನನ್ಯ. ನನಗೂ ಪೇಡಾಗೂ ಎಲ್ಲಿಲ್ಲದ ನಂಟು. ಹುಟ್ಟೂರು ಬೀದರನಲ್ಲಿ ಪೇಡಾ ತಿಂದದ್ದಕ್ಕೆ ಲೆಕ್ಕ ಇಟ್ಟು ನೋಡಿದರೆ, ಎಣಿಕೆಗೆ ಸಿಗುವುದೇ ಇಲ್ಲ.

ಬಾಲ್ಯದಲ್ಲಿ ಪೇಡಾ ತಿಂದ ನೆನಪುಗಳ ಮೆಲುಕು ಹಾಕಿದರೆ, ಇಂದು ಅದೇನೊ ಥ್ರಿಲ್ ಕೊಡುತ್ತದೆ. ಅದನ್ನೇ ಆ ದಿನದ ಆಹಾರ ಮಾಡಿಕೊಂಡು, ತಿಂದು, ಒಂದು ದಿನ ಪೂರ್ತಿ ಕಳೆದ ದಾಖಲೆಯೂ ಇದೆ. ನನಗೆ ಅಷ್ಟೊಂದು ಅಪ್ಯಾಯಮಾನವಾದ ಸಿಹಿ ತಿನಿಸದು. ಸದಾ ನನ್ನನ್ನು ಒಂದಲ್ಲ ಒಂದು ರೀತಿಯಲ್ಲಿ ಆವರಿಸಿ ಬಿಡುತ್ತಿತ್ತು. ಒಮ್ಮೆ ದೂದ್ ಪೇಡಾ, ಖೋವಾ ಪೇಡಾ, ಧಾರವಾಡ ಪೇಡಾ, ಜಬ್ಬರ್ ಹೋಟೆಲ್ ಪೇಡಾ ಮುಂತಾದ ರೂಪದಲ್ಲಿ ನನ್ನ ಮುಂದೆ ಹಾಜರಾಗಿ ಆಕರ್ಷಿಸುತ್ತ ನಿಲ್ಲುತ್ತಿತ್ತು. ಹತ್ತು ವರ್ಷದವಳಿದ್ದಾಗಿನಿಂದ ಇದರ ಮೋಹಕೆ ಬಿದ್ದ ನೆನಪು.

ಬೀದರಿನ ತರಕಾರಿ ಮಂಡಿಗೆ ಹೋಗುವಾಗ ಮುಖ್ಯ ದ್ವಾರದ ಬಳಿ, ಎರಡೂ ಬದಿಯಲ್ಲಿ ಸ್ವೀಟ್ ಅಂಗಡಿ ಇತ್ತು. ನೂರಾಎಂಟು ಬಗೆಯ ಸಿಹಿ ತಿನಿಸುಗಳಿದ್ದರೂ, ಪೇಡಾ ಒಂದಕ್ಕೆ ಮಾತ್ರ ನನ್ನ ಗಮನ ಸೆಳೆವ ಶಕ್ತಿ ಇತ್ತು. ಅದಕ್ಕೆ ಮಾತ್ರ ಮನಸೋತು ಕರಗುತ್ತಿತ್ತು. ಸರಿ ನಾಲ್ಕಾಣೆ ಅಂದರೆ ಇಪ್ಪತ್ತೈದು ಪೈಸೆ ಕೊಟ್ಟರೆ, ಬೊಗಸೆ ತುಂಬುವಷ್ಟು ಪೇಡಾವನ್ನು ಕಾಕಾ ನ್ಯೂಸ್ ಪೇಪರನಲ್ಲಿ ಕಟ್ಟಿ ಕೊಡುತ್ತಿದ್ದ.

ಆಗಾಗ ಕಾಕಾನ ಅಂಗಡಿಗೆ ಹೋಗೋದು, ಪೇಡಾ ಖರೀದಿಸೋದು, ಅಲ್ಲೇ ನಿಂತು ತಿನ್ನೋದು, ಆಮೇಲೆ ಓಡಿ ಹೋಗೋದು. ಇದನ್ನು ನೋಡಿ ನೋಡಿ ಕಾಕಾಗೆ, ಈ ಹುಡುಗಿ ಪೇಡಾ ತಿನ್ನಲೇ ಅಂಗಡಿಗೆ ಬರುತ್ತಾಳೆಂದು ತಿಳಿಯಿತು. ಅಂಗಡಿಗೆ ಹೋದ ಕೂಡಲೆ, ಹೇಳುವ ಮೊದಲೇ ಪೇಡಾ ಪ್ಯಾಕ್ ಮಾಡುತ್ತಿದ್ದ. ನನ್ನ ದೃಷ್ಟಿ ಕಾಕಾ ಕಟ್ಟುತ್ತಿದ್ದ ಪೇಡಾದ ಮೇಲೇ ಇರುತ್ತಿತ್ತು. ಅದು ನನ್ನ ಕೈ ಸೇರುವವರೆಗೂ ಅಲ್ಲಿಂದ ಕದಲುತ್ತಿರಲಿಲ್ಲ. ಕಾಕಾ ಮುಗುಳ್ನಗುತ್ತ ನನ್ನ ಕೈಯಲ್ಲಿಡುತ್ತಿದ್ದ. ಆಸೆಗಣ್ಣಿನಿಂದ ನಗುನಗುತ್ತ ತೆಗೆದುಕೊಂಡು ಇಪ್ಪತ್ತೈದು ಪೈಸೆ ಅವನ ಅಂಗೈಯಲ್ಲಿಟ್ಟು ತಿನ್ನುವ ತವಕದಲ್ಲಿ ಓಡುತ್ತಿದ್ದೆ.

ಇನ್ನೊಂದು ಘಟನೆ ಬಹಳ ಸ್ವಾರಸ್ಯಕರ. ಬಂಧುಗಳ ಮನೆಯಲ್ಲಿ ಪೂಜೆ ನಡೆದಿತ್ತು. ಎಲ್ಲರೂ ಸಾಲಾಗಿ ಕುಳಿತು ಪೂಜೆಯ ವಿಧಿವಿಧಾನ ಗಮನಿಸುತ್ತ ಕುಳಿತಿದ್ದೆವು. ನಿದ್ರೆ ಆವರಿಸಿದಂತಾಗಿ ತೂಕಡಿಸುವುದೊಂದೇ ಬಾಕಿ. ಅಷ್ಟರಲ್ಲಿ ಪೂಜೆ ಮುಗಿಯುವ ಸನ್ನಾಹದಂತೆ ತೋರಿತು. ದೇವರ ಮುಂದಿಟ್ಟಿದ್ದ ದೊಡ್ಡ ಪೇಡಾ ಡಬ್ಬಿ ಹಿಡಿದು ಪ್ರಸಾದ ಹಂಚಲು ಶುರು. ನನ್ನ ನಿದ್ರೆ, ತೂಕಡಿಕೆ ಓಡಿ ಹೋಯಿತು. ಕಣ್ಣೆಲ್ಲಾ ಪೇಡಾದ ಮೇಲೇ ಇತ್ತು. ಹಂಚುತ್ತಿದ್ದ ಅಣ್ಣನ ಕೈಯನ್ನು ಗಮನಿಸುತ್ತಲೇ ಇದ್ದೆ. ಬೇರೆ ಎಲ್ಲೂ ನನ್ನ ಚಿತ್ತ ವಿಚಲಿತವಾಗುವ ಮಾತೇ ಇಲ್ಲ. ಹೀಗೆ ಪೇಡಾವನ್ನು ಸಾಲಾಗಿ ಹಂಚುತ್ತ ಹಂಚುತ್ತ ನನ್ನ ಬಳಿ ಬರುವಷ್ಟರಲ್ಲಿ ಮುಗಿದೇ ಹೋಗಬೇಕೆ? ಅಳುವುದೊಂದು ಬಾಕಿ! ಆದರೂ ಪ್ರಯತ್ನಪಟ್ಟು ಸುಮ್ಮನಿದ್ದೆ.

ಅಣ್ಣ ಇನ್ನೊಂದು ಡಬ್ಬಿ ತರಿಸಿದಾಗ ಮತ್ತೆ ಜೀವ ಬಂತು. ಅಬ್ಬಾ! ನಿಟ್ಟುಸಿರಿನೊಂದಿಗೆ ಮತ್ತೆ ಸಜ್ಜಾಗಿ ಕುಳಿತೆ. ಅವನು ಹಂಚಲು ಆರಂಭಿಸಿದ. ನನ್ನ ಪುಟ್ಟ ಕೈಗಳನ್ನು ಸಂಕೋಚದಿಂದ ಚಾಚಿದ್ದು ಅವನ ಗಮನಕ್ಕೇ ಬರಲಿಲ್ಲ. ನನಗೆ ಕೊಡುವುದು ಬಿಟ್ಟು ಹಾಗೇ ಮುಂದೆ ಹೋದ. ನನಗಾದ ನಿರಾಸೆಗೆ ಆತ್ಮಹತ್ಯೆ ಮಾಡಿಕೊಳ್ಳುವ ತೀವ್ರತೆ ಇತ್ತು. ಅಷ್ಟರಲ್ಲಿ ಅಂಕಲ್ ಒಬ್ಬರು, ‘ಏ ಬೆಟಾ ಇಕಿ ರಾಣಿ ಕೈಯಾಗ ಒಂದು ಪೇಡಾ ಕುಡು’ ಅಂದರು. ಆಗ ಅಪ್ಪನ ಗೆಳೆಯ ಅಂಕಲ್ ಜೀವ ದಾನಿಯಂತೆ ಕಂಡರು. ಅದುವರೆಗೂ ಯಮಧೂತನಂತೆ ಕಾಣುತ್ತಿದ್ದ ಅಣ್ಣ, ಈಗ ಅಣ್ಣನಂತೆ ಕಾಣಲಾರಂಭಿಸಿದ. ಅವನ ಕೈಗಳ ಮೇಲಿದ್ದ ನನ್ನ ದೃಷ್ಟಿ ಕಳಚಬೇಕಾದರೆ, ಪೇಡಾ ನನ್ನ ಅಂಗೈ ಸೇರಬೇಕಾಯಿತು. ಆಗ ನಿರಾಳವಾದ ನಿಟ್ಟುಸಿರು ಬಿಡುತ್ತ, ಇಷ್ಟಿಷ್ಟೇ ಇಷ್ಟಿಷ್ಟೇ ತಿನ್ನತೊಡಗಿದೆ. ಎಲ್ಲಿ ಮುಗಿದೇ ಹೋಗುತ್ತದೊ ಎನ್ನುವ ಟೆನ್ಷನ್ ಕಾಡುತ್ತಲೇ ಇತ್ತು.

ಇನ್ನೊಂದು ಘಟನೆ. ಆಗ ಸುಮಾರು ಹನ್ನೊಂದು ವರ್ಷದವಳಿದ್ದೆ. ವಿಪರೀತ ಜ್ವರ ಬಂದಿತ್ತು. ಔರಾದಿನಿಂದ ಸೋದರತ್ತೆ ಬಂದಿದ್ದಳು. ‘ಅಕ್ಕೊ ಮಗಾ ರಾಣಿ ನಿನಗ್ ಉರಿ ಬಂದಾವೆ ಬೆಟಾ’ ಅಂದರು. ಹಣೆ ಮುಟ್ಟಿ, ಕುತ್ತಿಗೆ ಮುಟ್ಟಿ, ಬೆನ್ನು ಸವರಿದಳು. ‘ಪೋರಿಗ್ಯಾಕ್ ಉರಿ ಬಂತೊ ಯಾನೊ?’ ತನಗೆ ತಾನೇ ಮಾತನಾಡಿಕೊಂಡಳು. ಆ ಸಹಾನುಭೂತಿ ನೋಡಿ ದುಃಖ ಉಕ್ಕಿ ಬಂತು. ಅಳತೊಡಗಿದೆ.

‘ಅಳಬ್ಯಾಡ ಬೆಟಾ ನಿನಗ್ ಯಾನ್ ಬೇಕ್ ಹೇಳ್ ತಿಲ್ಲಾಕ್ ಕುಡುಸ್ತಾ’, ಅಷ್ಟು ಹೇಳಿದ್ದೇ ತಡ, ‘ಅತ್ತೆ ನನಗ್ ಪೇಡಾ ಕೊಡ್ಸು, ಯಾರಿಗೂ ಹೇಳ್ಬ್ಯಾಡ’ ಅಂದೆ. ಅತ್ತೆ ನಗತೊಡಗಿದಳು. ‘ಏ ವೈನಿ ರಾಣಿ ನೋಡು. ಜ್ವರ ಬಂದಾಗ ಪೇಡಾ ತಿಂತಾಳಂತ’ ಅತ್ತೆಯ ನಗು ನನಗೆ ಸಿಟ್ಟು ತರಿಸಿತು. ಆದರೂ ಸುಮ್ಮ‌ನಿರುವುದು ಅನಿವಾರ್ಯ. ಅತ್ತೆ ಅಷ್ಟೊಂದು ಪ್ರೀತಿ ಮಾಡುವವಳು ಅವ್ವನಿಗೆ ಹೇಳಬೇಡ ಅಂದರೂ ಹೇಳಿದಳು. ಅವಳು ನಿಜ ನನ್ನನ್ನು ಪ್ರೀತಿಸುತ್ತಾಳಾ?

ಮರುದಿನ ಊರಿಗೆ ಹೋಗುವಾಗ ಅತ್ತೆ ಒಂದು ಪೇಡಾ ಡಬ್ಬಿ ತಂದು ಅವ್ವನ ಕೈಯಲ್ಲಿಟ್ಟು, ‘ರಾಣಿಗ್ ಅರಾಮಾಗಣ ಕುಡು ವೈನಿ’ ಅತ್ತೆಯ ಮಾತು ಕೇಳಿದಾಗ ಅವಳ ಮೇಲೆ ಮತ್ತೆ ಪ್ರೀತಿಯ ಕಾರಂಜಿ ಚಿಮ್ಮಿತು. ಜ್ವರ ಬಿಟ್ಟು ಜೀವಕ್ಕೆ ಅರಾಮಾಗುವವರೆಗೆ ಪೇಡಾ ತಿನ್ನಲು ಕಾಯಬೇಕಾಯಿತು. ಅದು ಬದುಕಿನ ಬಹುದೊಡ್ಡ ಕಾಯುವಿಕೆ ಎನಿಸಿ ಬೇಸರಿಸಿಕೊಂಡಿದ್ದೆ.

ಆಗ ಮಲಗಿದಾಗ ಕನಸಿನಲ್ಲೂ ಅದೇ ಬರುತ್ತಿತ್ತು. ಪೇಡಾ ತಂದು ಯಾರೋ ಕೊಟ್ಟ ಹಾಗೆ, ಬಾಯಲ್ಲಿ ಇರಿಸಿದ ಹಾಗೆ, ಎಲ್ಲರಿಗೂ ಹಂಚಿದ ಹಾಗೆ, ಎನೇನೋ… ಒಟ್ಟಾರೆ ಪೇಡಾದ ಡಬ್ಬಿ ನನ್ನ ಸುತ್ತಲೂ ಸುತ್ತುತ್ತಿತ್ತು. ಕಣ್ಣು ಬಿಟ್ಟಾಗ ವಿಚಿತ್ರ ಅನುಭವ. ಅರೆ ಆ ಕನಸೇ ಎಷ್ಟೊಂದು ಚೆನ್ನಾಗಿತ್ತಲ್ಲ? ಎನ್ನುವ ವಿಷಾದ ಮೂಡಿ ಮುಖ ಸಪ್ಪೆಯಾಗಿ ಕಳಾಹೀನ.

ಬಾಲ್ಯದ ನೆನಪು ಮನಸಿಗೆ ಮುದ ನೀಡಿತು. ಈಗ ಅರ್ಥ ಆಯಸ್ಸು ಕಳೆದ ವಯಸ್ಸು. ಮಕ್ಕಳೆಲ್ಲಾ ದೊಡ್ಡವರಾಗಿ ತಮ್ಮ ತಮ್ಮ ಓದು, ವ್ಯವಹಾರದಲ್ಲಿ ಬಿಡುವಿಲ್ಲದಂತೆ ಓಡಾಡುತ್ತಿದ್ದಾರೆ. ಹಬ್ಬಕ್ಕೆ ಹಂಚಲು ನೂರಾರು ಪೇಡಾ ಡಬ್ಬಿಗಳನ್ನು ನನ್ನ ರೂಮಿನಲ್ಲೇ ತಂದಿಟ್ಟಿದ್ದಾರೆ. ನಾನು ಅವುಗಳೊಂದಿಗೆ ಇದ್ದು ಇಪ್ಪತ್ನಾಲ್ಕು ಗಂಟೆಗಳಾಗಿವೆ. ಸ್ಯಾಂಪಲ್ ತಿಂದು ನೋಡಿದ್ದ ಡಬ್ಬಿಯ ಮುಚ್ಚಳ ಅರೆ ತೆರೆದುಕೊಂಡು ಬಿದ್ದಿದೆ. ಕಣ್ಣಲ್ಲೇ ನೋಡುತ್ತೇನೆಯೆ ಹೊರತು ಅದನ್ನು ಮುಟ್ಟುವುದಿಲ್ಲ. ‘ಅದೆಂಥ ಗಟ್ಟಿ ಮನಸು! ಅಬ್ಬಾ!’ ನನ್ನ ಬಗ್ಗೆ ನನಗೇ ಶಹಬಾಸಗಿರಿ ಕೊಡುವಂತಾಯಿತು. ನನಗೆ ನಾನೇ ಬೆನ್ನು ತಟ್ಟಿಕೊಂಡೆ.

ಹಿರಿಯ ಮಗ ಬೆಳಗ್ಗೆ ಚೀಲದಲ್ಲಿ ಪೇಡ ದಬ್ಬಿಗಳನ್ನು ಹಾಕಿಕೊಳ್ಳುತ್ತ, ‘ಮಾ ಪೇಡಾ ಗೀಡಾ ಹೊಡ್ದಿ ಏನು?’ ತಮಾಶೆಯಿಂದ ಕೇಳಿದ. ‘ಅಣ್ಣ ಹಂಗ್ ಕೇಳ್ ಬ್ಯಾಡೊ’ ಕಿರಿಯ ಮಗ ಅಂದ. ‘ಮಜಾಕ್ ಮಜಾಕ್ ಮೆ ಅಬ್ದುಲ್ಲಾ ರಜಾಕ್’ ಅನ್ನುತ್ತ ಇಬ್ಬರೂ ನಗುತ್ತ ಹೋದರು. ಪೇಡಾ ಎದುರಿಗೇ ಇದ್ದರೂ ನಾ ಮುಟ್ಟುವುದಿಲ್ಲ ಎನ್ನುವ ಖಾತ್ರಿ ಮಕ್ಕಳಿಗಿತ್ತು. ಆದರೂ ನಾನೇನಾದರೂ ಮನಸು ಕರಗಿ ತಿಂದರೆ ನನ್ನ ಬ್ಲಡ್ ರಿಪೋರ್ಟ್ ಅದನ್ನು ಹೇಳೇ ಬಿಡುತ್ತದೆ. ಮನಸು ವಿಷಾದದ ನಗೆ ಚೆಲ್ಲಿ ತಲೆಯ ಮೇಲೆ ತಿರುಗದೆ ನಿಂತಿದ್ದ ಫ್ಯಾನಿನಲ್ಲೇ ದೃಷ್ಟಿ ನೆಟ್ಟಿತು.

ಸಿಕಾ ಕಲಬುರ್ಗಿ

Don`t copy text!