ಸಂಭ್ರಮದಿಂದ ನಡೆದ ಶ್ರೀ ರೇಣುಕಾಚಾರ್ಯರರ ಜಯಂತಿ
e-ಸುದ್ದಿ ಲಿಂಗಸುಗೂರು
ವರದಿ- ವೀರೇಶ ಅಂಗಡಿ ಗೌಡುರು
ಲಿಂಗಸುಗೂರು ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ರವಿವಾರ ತಾಲೂಕು ಜಂಗಮ ಸಮಾಜದವರು ಆಯೋಜಿಸಿದ್ದ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಹಾಗೂ ಜಂಗಮ ಸಮಾವೇಶ ಕಾರ್ಯಕ್ರಮವನ್ನು ವಿವಿಧ ಮಠಗಳ ಮಠಾಧೀಶರು ಹಾಗೂ ರಾಜಕೀಯ ಗಣ್ಯರು ಸಮ್ಮುಖದಲ್ಲಿ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮರೇಶ್ವರದ ಗುರು ಅಭಿನವ ಗಜದಂಡ ಶ್ರೀಗಳು ವಹಿಸಿದ್ದರು. ಕಾರ್ಯಕ್ರಮದ ಪೂರ್ವದಲ್ಲಿ ನಗರದ ರಾಯಚೂರ ರಸ್ತೆಯ ಲಕ್ಷ್ಮಿ ದೇವಸ್ಥಾನದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಕುಂಭ ಕಳಸ ಭಾಜಾ-ಭಜಂತ್ರಿಯೊಂದಿಗೆ ಭವ್ಯ ಮೆರವಣಿಗೆ ಸಾಗಿ ಬಂದಿದ್ದು ವಿಶೇಷವಾಗಿ ಕಂಡು ಬಂದಿತು. ಕಾರ್ಯಕ್ರಮದ ಅಂಗವಾಗಿ ಜಂಗಮ ವಠುಗಳಿಗೆ ಅಯ್ಯಾಚಾರ ದೀಕ್ಷೆ ಮಾಡಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಆಂದೋಲದ ಕರುಣೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿಗಳು ಜಂಗಮ ಜಾತಿಯವರಿಗೆ ಬೇಡ ಜಂಗಮ ಪ್ರಮಾಣ ಪತ್ರ ದೊರೆಯಬೇಕಾದರೆ ಸಮಾಜದ ರಾಜಕೀಯ ಮುಖಂಡರು ಹಿರಿಯರು ಎಲ್ಲರೂ ಒಗ್ಗಟ್ಟಾಗಿ ಸೇರಿ ಸರ್ಕಾರದ ಮೇಲೆ ಒತ್ತಡ ಹಾಕಿದಾಗ ಮಾತ್ರ ಸಾಧ್ಯವಾಗುತ್ತದೆ. ಪ್ರತಿಯೊಬ್ಬರು ಕೂಡಾ ಈ ನಿಟ್ಟಿನಲ್ಲಿ ಜಾಗೃತರಾಗಬೇಕಾದ ಅವಶ್ಯಕತೆ ಇದೆ ಎಂದರು.
ಜಗದ್ಗುರು ರೇಣುಕಾಚಾರ್ಯರಿಂದ ಸ್ಥಾಪಿತವಾದ ವೀರಶೈವ ಧರ್ಮ ಶ್ರೇಷ್ಠ ಧರ್ಮವಾಗಿದೆ. ಇಂತಹ ವಿರಶೈವ ಧರ್ಮದ ವಿಘಟನೆಗೆ ಪಕ್ಷವೊಂದರ ಮುಖಂಡರು ಪ್ರಯತ್ನಿಸುತ್ತಿರುವುದು ಖೆದಕರ ಸಂಗತಿಯಾಗಿದೆ. ಜಂಗಮರಾದಿಯಾಗಿ ವೀರಶೈವರು ಸಂಘಟಿತರಾಗಿ ಭಿನ್ನತೆ ಬಿಟ್ಟು ಏಕತೆಯನ್ನು ಮೆರೆದಾಗ ಮಾತ್ರ ಅಭಿವೃದ್ಧಿ ಹೊಂದಲು ಎಂದು ಹೇಳಿದರು .
ರೇಣುಕಾಚಾರ್ಯರ ಸಮಾಜ ಇದು ಕೇಸರಿ ಸಮಾಜ .ಕೇಸರಿ ಎಂದರೆ ಮತ್ತೆ ಬಿಜೆಪಿ ಸಮಾಜ ಅಲ್ಲ ಕೇಸರಿ ಎಂದರೆ ತ್ಯಾಗದ ಸಮಾಜ ಎಂಬುದನ್ನು ಅರಿತುಕೊಳ್ಳಬೇಕು ಎಂದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಶಾಸಕ ಡಿ ಎಸ್ ಹೂಲಗೇರಿ, ವಿಧಾನಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ, ಹಟ್ಟಿಚಿನ್ನದಗಣಿ ಕಂಪನಿ ಅಧ್ಯಕ್ಷ ಮಾನಪ್ಪ ವಜ್ಜಲ್ ಸೇರಿದಂತೆ ಹಲವು ಮಠಗಳ ಶ್ರೀಗಳು ಮಾತನಾಡಿದರು.
ಈ ಸಂದರ್ಭದಲ್ಲಿ ಸಜ್ಜಲಗುಡ್ಡದ ದೊಡ್ಡಬಸವ ಶಿವಾಚಾರ್ಯ ಸ್ವಾಮೀಜಿ, ಮಸ್ಕಿಯ ವರರುದ್ರಮುನಿ ಶಿವಾಚಾರ್ಯರು,ಮಹಾಂತ ಶಿವಾಚಾರ್ಯರ ಸ್ವಾಮಿಜಿ, ಸಿದ್ದರಾಮೇಶ್ವರ ಮಠದ ಮುರುಘರಾಜೇಂದ್ರ ಸ್ವಾಮೀಜಿ, ಹುನಕುಂಟಿಯ ಶರಣಯ್ಯ ತಾತ, ಮಾಣಿಕೇಶ್ವರಿ ಮಠದ ಮಾತಾ ನಂದೀಶ್ವರಿ ಅಮ್ಮನವರು, ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್ ಅನ್ವರಿ, ವಿಧಾನಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ, ಶಾಸಕರಾದ ಡಿ.ಎಸ್.ಹೂಲಗೇರಿ,ಮಾಜಿ ಶಾಸಕ ಹಟ್ಟಿ ಚಿನ್ನದ ಗಣಿ ಕಂಪನಿಯ ಅಧ್ಯಕ್ಷ ಮಾನಪ್ಪ ವಜ್ಜಲ್, ಜೆಡಿಎಸ್ ಮುಖಂಡ ಸಿದ್ದು.ವೈ.ಬಂಡಿ, ಪುರಸಭೆ ಅಧ್ಯಕ್ಷೆ ಸುನಿತಾ ಕೆಂಭಾವಿ, ನ.ಯೋ.ಪ್ರಾ ಅಧ್ಯಕ್ಷ ಡಾ .ಶಿವಬಸಪ್ಪ ಹೆಸರೂರು, ಶರಣಪ್ಪ ಮೇಟಿ,ಅಮರಗುಂಡಪ್ಪ ಮೇಟಿ,ಕಿಡಣಯ್ಯ ಸ್ವಾಮಿ, ಸೇರಿದಂತೆ ಜಂಗಮ ಸಮಾಜದ ಸಹಸ್ರಾರು ಜನ ಭಾಗವಹಿಸಿದ್ದರು.
ಪ್ರಭು ಸ್ವಾಮಿ ಅತ್ತನೂರು ಸ್ವಾಗತಿಸಿದರು. ಅಮರಯ್ಯ ಸ್ವಾಮಿ ಬಲ್ಲಟಗಿ ಪ್ರಾಸ್ತಾವಿಕವಾಗಿ ಮಾಡಿದರು.