ವಿಮಾನ ನಿಲ್ದಾಣಕ್ಕೆ ಬಿ.ಎಸ್.ಯಡಿಯೂರಪ್ಪ ಹೆಸರು ಅಂತಿಮ: ಸಿಎಂ ಬೊಮ್ಮಾಯಿ

 

ಶಿವಮೊಗ್ಗದಲ್ಲಿ ನಿರ್ಮಾಣವಾಗಲಿರುವ ವಿಮಾನ ನಿಲ್ದಾಣಕ್ಕೆ ಬಿ.ಎಸ್.ಯಡಿಯೂರಪ್ಪ ಹೆಸರು ಅಂತಿಮ: ಸಿಎಂ ಬೊಮ್ಮಾಯಿ

e-ಸುದ್ದಿ ಶಿವಮೊಗ್ಗ

ಶಿವಮೊಗ್ಗ, ಎ.20:  ಶಿವಮೊಗ್ಗದಲ್ಲಿ ನಿರ್ಮಾಣವಾಗಲಿರುವ ವಿಮಾನನಿಲ್ದಾಣಕ್ಕೆ ಬಿ.ಎಸ್.ಯಡಿಯೂರಪ್ಪ ಅವರ ಹೆಸರನ್ನು ಇಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸೋಗಾನೆಯಲ್ಲಿರುವ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ, ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಯಡಿಯೂರಪ್ಪ ಅವರ ಹೆಸರು ಇಡಲು ಸಚಿವ ಸಂಪುಟ ತೀರ್ಮಾನಿಸಿದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಲಾಗಿದೆ ಎಂದು ತಿಳಿಸಿದರು.


ಕಾಮಗಾರಿಗೆ ಮತ್ತಷ್ಟು ಅನುದಾನ: ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗಾಗಿ ರೈತರು ಹೆಚ್ಚುವರಿ ಜಮೀನು ನೀಡಿದ್ದಾರೆ. ಅದಕ್ಕೆ ಪರಿಹಾರ ನೀಡಬೇಕಿದೆ. ರನ್ ವೇ ಕಾಮಗಾರಿ ಪೂರ್ಣಗೊಳಿಸಲು, ವಿಮಾನ ನಿಲ್ದಾಣ ಸುತ್ತಲು ರಸ್ತೆ ನಿರ್ಮಾಣಕ್ಕೆ 40 ರಿಂದ 50 ಕೋಟಿ ರೂ. ಅನುದಾನ ಬೇಕಿದೆ. ಈ ಹಣ ಒದಗಿಸಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.
ಗುಣಮಟ್ಟದ ರಸ್ತೆ: ಅಕ್ಕಪಕ್ಕದ ಗ್ರಾಮದ ರೈತರ ಓಡಾಟಕ್ಕೆ ವಿಮಾನ ನಿಲ್ದಾಣದ ಪಕ್ಕದಲ್ಲಿ ಅಸ್ಫಾಲ್ಟ್ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಇನ್ನು, ವಿಮಾನ‌ ನಿಲ್ದಾಣಕ್ಕೆ ವಿದೇಶಿಯರು, ಬೇರೆ ಕಡೆಯಿಂದ ಪ್ರವಾಸಿಗರು ಬರುತ್ತಾರೆ. ಆದ್ದರಿಂದ ವಿಮಾನ ನಿಲ್ದಾಣದ ಸಂಪರ್ಕಕ್ಕೆ ಅಂತಾರಾಷ್ಟ್ರೀಯ ಗುಣಮಟ್ಟದ ರಸ್ತೆ ನಿರ್ಮಿಸಲಾಗುತ್ತದೆ ಎಂದು ಸಿಎಂ ತಿಳಿಸಿದರು.

ನಮ್ಮ ನಾಯಕರಾದ ಯಡಿಯೂರಪ್ಪನವರು ಶಿವಮೊಗ್ಗ ಏರ್ ಪೋರ್ಟ್ 2006-07 ರಿಂದ ಪ್ರಾರಂಭ ಮಾಡಲು ಯೋಜನೆ ರೂಪಿಸಿದ್ದರು. 2020 ರಲ್ಲಿ ಯೋಜನೆಗೆ ಅನುಮೋದನೆ ನೀಡಿ ಹಣ ಬಿಡುಗಡೆ ಮಾಡಿದ್ದಾರೆ. ಬೆಂಗಳೂರು ನಂತರ ಶಿವಮೊಗ್ಗ ವಿಮಾನನಿಲ್ದಾಣದಲ್ಲಿ 3200 ಮಿ ಉದ್ದದ ರನ್ ವೇ ಇರಲಿದೆ. ಏರ್ ಬಸ್ ಲ್ಯಾಂಡ್ ಆಗುವ ವ್ಯವಸ್ಥೆ ಆಗುತ್ತಿದೆ. ಅಂತರರಾಷ್ಟ್ರೀಯ ಮಟ್ಟದ ವಿಮಾನನಿಲ್ದಾಣವಾಗಲು ಎಲ್ಲ ಮೂಲಸೌಕರ್ಯಗಳು ಇಲ್ಲಿ ಸಿಗಲಿವೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವೈಯಕ್ತಿಕವಾಗಿ ಈ ಭಾಗದ ಅಭಿವೃದ್ಧಿಗೆ ಸಾಕಷ್ಟು ಶ್ರಮ ವಹಿಸಿ ಅವರ ಆಡಳಿತದ ಅವಧಿಯಲ್ಲಿ  ಹಲವಾರು ಮೂಲಭೂತ ಸೌಕರ್ಯಗಳನ್ನು ಶಿವಮೊಗ್ಗ ಜಿಲ್ಲೆಗೆ ಕಲ್ಪಿಸಿದ್ದಾರೆ. ವಿಮಾನ ನಿಲ್ದಾಣ ಬರುವ ದಿನಗಳಲ್ಲಿ  ಕರ್ನಾಟಕದ  ಸಮಗ್ರ ಅಭಿವೃದ್ಧಿ  ಈ ಭಾಗದ ಕೈಗಾರಿಕಾ, ವಾಣಿಜ್ಯ ಅಭಿವೃದ್ಧಿಗೆ  ಪ್ರಮುಖ ಪಾತ್ರ ವಹಿಸಲಿದೆ. ಕರ್ನಾಟಕದ ಹೆಮ್ಮೆಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇದಾಗಲಿದೆ ಎಂದರು.

Don`t copy text!