ಸಾಹಿತ್ಯ,ಶೈಕ್ಷಣಿಕ ಮತ್ತು ಸಮಾಜ ಪರ ಕಾರ್ಯಕ್ರಮಗಳಿಗೆ ಟ್ರಸ್ಟ್ ಬದ್ದ — ಶ್ರೀಮತಿ ಶ್ರೀದೇವಿ ಸಿ.ರಾವ್
e-ಸುದ್ದಿ, ಮುಂಬಯಿ
ದಿ.ಚಂದ್ರಶೇಖರ್ ರಾವ್ ಮೆಮೋರಿಯಲ್ ಟ್ರಸ್ಟ್ ನ ವತಿಯಿಂದ ದಿನಾಂಕ 14 ಏಪ್ರಿಲ್ 2022 ರ ಗುರುವಾರದಂದು ಸಂಜೆ ದಿ. ಚಂದ್ರಶೇಖರ್ ರಾವ್ ಅವರ 5 ನೇ ಪುಣ್ಯ ತಿಥಿ ಅಂಗವಾಗಿ ಭಾಂಡೂಪ್ ನ ಅವರ ನಿವಾಸದಲ್ಲಿ ಮುಂಬಯಿಯ ಕವಿ,ಸಾಹಿತಿಗಳಿಗೆ ಸ್ವರಚಿತ ಕಾವ್ಯ ವಾಚನ ಮತ್ತು ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮುಂಬಯಿಯ ಹಿರಿಯ ಸಾಹಿತಿ,ಲೇಖಕಿ,ಕವಯತ್ರಿ ಡಾ.ದಾಕ್ಷಾಯಣಿ ಯಡಹಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಂಬಯಿಯ ಖ್ಯಾತ ಕವಯತ್ರಿ ಸಾಹಿತಿ, ಲೇಖಕಿ ಮುಂಬಯಿ ಚುಕ್ಕಿ ಸಂಕುಲ ಬಳಗದ ಡಾ.ಜಿ.ಪಿ ಕುಸುಮಾ ಅವರು ಆಗಮಿಸಿ ಕವಿತೆ ಕಟ್ಟುವುದು ಸುಲಭವಲ್ಲ. ಯಾವಾಗ ನಾವು ಓದುವ ಅಥವಾ ಬರೆದ ಕವಿತೆ ಕೇಳುಗರ, ಓದುಗರ ಹೃದಯವನ್ನು ಮುಟ್ಟಿ ಪ್ರತಿಸ್ಪಂದಿಸುತ್ತದೆಯೋ ಆಗ ಕವಿ ಮತ್ತು ಕವಿತೆ ಗೆದ್ದಂತೆ ಎಂದು ಸ್ವರಚಿತ ಕವನ ಪ್ರಸ್ತುತ ಪಡಿಸಿದ ಎಲ್ಲ ಸಾಹಿತಿಗಳನ್ನು ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಡಾ.ದಾಕ್ಷಾಯಣಿ ಯಡಹಳ್ಳಿ ಅವರು ಚಂದ್ರಶೇಖರ್ ರಾವ್ ಅವರೊಂದಿಗಿನ ಒಡನಾಟ ನಮ್ಮಲ್ಲಿ ಇನ್ನೂ ಹಸಿರಾಗಿದೆ. ಅವರು ಹರಟೆ ಕವಿಗಳಾಗಿದ್ದರು. ಮತ್ತು ದಂಪತಿಗಳಿಬ್ಬರೂ ಸದಾ ಹಸನ್ಮುಖಿಗಳು. ದಿ. ಚಂದ್ರಶೇಖರ್ ರಾವ್ ಅವರು ತಮ್ಮ ಕವಿತೆ ಮತ್ತು ಹರಟೆ ಮೂಲಕ ನಮ್ಮೆಲ್ಲರ ಮದ್ಯೆಯೇ ಇದ್ದಾರೆ ಎಂದರು.
ಚುಕ್ಕಿ ಸಂಕುಲ ಮುಂಬಯಿ ಬಳಗ ಸದಾ ಟ್ರಸ್ಟಿಗೆ ಸಹಕಾರ, ಪ್ರೋತ್ಸಾಹ ನೀಡುತ್ತಾ ಬಂದಿದೆ. ಮುಂದೆಯೂ ತಮ್ಮೆಲ್ಲ ಕವಿ,ಸಾಹಿತಿಗಳ ಬೆಂಬಲ ಪ್ರೀತಿ ಸ್ನೇಹ ಸದಾ ಬಯಸುತ್ತೇನೆ.ಸಾಹಿತ್ಯ ಪರ ಕಾರ್ಯಕ್ರಮಕ್ಕೆ,ಅರ್ಹ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಮತ್ತು ಸಮಾಜ ಮುಖಿ ಕಾರ್ಯಕ್ರಮ ಹಾಗೂ ಸಹಕಾರಕ್ಕೆ ಯಾವಾಗಲೂ ಟ್ರಸ್ಟ್ ತಮ್ಮೊಂದಿಗೆ ಇದೆ. ಎಂದು ಟ್ರಸ್ಟ್ ನ ಅಧ್ಯಕ್ಷೆ ಶ್ರೀಮತಿ ಶ್ರೀದೇವಿ ಸಿ.ರಾವ್ ಅವರು ಹೇಳಿದರು.
ಕುಮುದಾ ಶೆಟ್ಟಿ ,ಡಾ.ದಾಕ್ಷಾಯಣಿ ಯಡಹಳ್ಳಿ, ಶಾರದಾ ಅಂಬೇಸಂಗೆ ವೇದಾವತಿ ಭಟ್,ಅಂಜಲಿ ಶಿಧೋರೆ,ಜಿ.ಪಿ ಕುಸುಮಾ,ಲಲಿತಾ ಅಂಗಡಿ ಮತ್ತು ಸರೋಜಾ ಅಮಾತಿ ತಮ್ಮ ತಮ್ಮ ಸ್ವರಚಿತ ಕವನ ವಾಚನ ಮಾಡಿದರು.ಡಾ.ಜಿ.ಪಿ. ಕುಸುಮಾ ಅವರು ದಿ. ಚಂದ್ರಶೇಖರ ರಾವ್ ಅವರ ರಚನೆಯ ಎರಡು ಕವಿತೆಗಳನ್ನು ವಾಚನ ಮಾಡಿದರು. ವಿಜಯಾ ಗೌಡ,ಸರೋಜಾ ಅಮಾತಿ,ಅಂಜಲಿ ಶಿಧೋರೆ, ಡಾ.ದಾಕ್ಷಾಯಿಣಿ ಯಡಹಳ್ಳಿ ಹಾಗೂ ಲಲಿತಾ ಅಂಗಡಿ ಅವರು ಗಾಯನ ಸಾದರ ಪಡಿಸಿದರು.
ಪುಟಾಣಿ ಪ್ರಣಮ್ಯಾ ಬಲು ಸುಂದರವಾಗಿ ಸಂಸ್ಕೃತದಲ್ಲಿ ಶ್ಲೋಕ ವಾಚಿಸಿ ಎಲ್ಲರ ಕಣ್ಮನ ಸೆಳೆದು ಹಾಡನ್ನೂ ಹಾಡಿ ಸೇರಿದ ಕನ್ನಡಿಗರೆಲ್ಲರ ಮನ ಗೆದ್ದಳು.ಅರುಣ್ ಕುಮಾರ್ ಶೇಟ್,ಸಂಧ್ಯಾ ರಾಯ್ಕರ ಮತ್ತು ಕೃಷ್ಣ ಅವರು ದಿ. ಚಂದ್ರಶೇಖರ್ ರಾವ್ ಅವರ ಬಗ್ಗೆ ಮಾತನಾಡಿದರು.ಇನ್ನೂ ಹಲವಾರು ಹಿರಿ ಕಿರಿಯ ಬಂಧುಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ವಿಜಯಾ ಗೌಡ ಅವರು ಪ್ರಾರ್ಥನೆಗೈದರು.ಸರೋಜಾ ಅಮಾತಿ ಕಾರ್ಯಕ್ರಮ ನಿರೂಪಣೆ ಮಾಡಿ ವಂದಿಸಿದರು.