ತಾಲೂಕು ಆರೋಗ್ಯ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಸದ ರಾಜಾ ಅಮರೇಶ್ವರ ನಾಯಕ
ವರದಿ : ವೀರೇಶ ಅಂಗಡಿ ಗೌಡೂರು
e-ಸುದ್ದಿ ಲಿಂಗಸುಗೂರು
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ 75ನೇ ಆಜಾದಿ ಕಾ ಅಮೃತಮಹೋತ್ಸವ ನಿಮಿತ್ತವಾಗಿ ಲಿಂಗಸುಗೂರು ತಾಲೂಕು ಮಟ್ಟದ ಆರೋಗ್ಯ ಮೇಳ ಕಾರ್ಯಕ್ರಮಕ್ಕೆ ಸಂಸದರಾದ ಅಮರೇಶ್ವರ ನಾಯಕ ಜ್ಯೋತಿ ಬೆಳಗುವುದರ ಮೂಲಕ ಚಾಲನೆ ನೀಡಿದರು.
ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಆರೋಗ್ಯ ಮೇಳ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಸಾರ್ವಜನಿಕರು ಆರೋಗ್ಯ ಮೇಳದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಕರೋನದಂತಹ ಕಠಿಣ ಸಂದರ್ಭದಲ್ಲಿ ಕೇಂದ್ರದ ನರೇಂದ್ರ ಮೋದಿ ತೆಗೆದುಕೊಂಡ ಕೆಲವು ನಿರ್ಧಾರಗಳು ಹಾಗೂ ಉಚಿತವಾಗಿ ವ್ಯಾಕ್ಸಿನೇಷನ್ ನೀಡಿಕೆ ಪರಿಣಾಮ ಭಾರತ ಸದೃಢವಾಗಿ ಬೆಳೆಯಲು ಸಾಧ್ಯವಾಗಿದೆ.
ಸಂಸದರ ಅನುದಾನದಲ್ಲಿ ತುರ್ತು ಆರೋಗ್ಯ ಸೇವೆಗಾಗಿ ವಿವಿಧ ತಾಲೂಕುಗಳಿಗೆ ಏಳು ಆಂಬುಲೆನ್ಸ್ ಗಳನ್ನು ನೀಡಲಾಗಿದೆ. ಅಲ್ಲದೆ ಲ್ಯಾಬ್ ಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಆಯುಷ್ಮಾನ್ ಕಾರ್ಡುಗಳು ಜನತೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ದೊರೆಯುವಂತೆ ಮಾಡಲಾಗುವುದು. ವಾಡಿ-ಗದಗ ರೈಲ್ವೆ ಯೋಜನೆಗೆ ಲಿಂಗಸುಗೂರು ಮತ್ತು ಸುರುಪುರು ತಾಲೂಕಿನಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು ಹಲವು ಕಡೆಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು ಆದಷ್ಟು ಬೇಗನೆ ಕಾಮಗಾರಿ ಕೈಗೊಳ್ಳಲಾಗುವದು ಎಂದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಡಿ.ಎಸ್ ಹೋಲಗೇರಿ ವೈದ್ಯರು ದೇವರಿದ್ದಂತೆ ತಾಲೂಕಿನ ಎಲ್ಲಾ ವೈದ್ಯಾಧಿಕಾರಿಗಳು ತಮ್ಮಲ್ಲಿ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡಬೇಕು. ಮುಖ್ಯವಾಗಿ ಕಾರ್ಮಿಕ ಮತ್ತು ರೈತ ವರ್ಗದವರಿಗೆ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ದೊರೆಯುವಂತಾಗಬೇಕು ಎಂದರು.
ನಂತರ ಮಾಜಿ ಶಾಸಕ ಹಟ್ಟಿಚಿನ್ನದಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ಮಾತನಾಡಿ ಗುಡ್ಡಗಾಡಿನ ಹಳ್ಳಿಗಳಲ್ಲಿ ವಾಸ ಮಾಡುವ ಬಹುತೇಕ ಜನರಿಗೆ ಆಯುಷ್ಮನ್ ಆರೋಗ್ಯ ಕಾರ್ಡ್ ಸೇವೆ ಸಿಗಲಿ . ಪ್ರತಿ ಹಳ್ಳಿಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯ ಸೌಲಭ್ಯಗಳ ಕುರಿತು ತಿಳಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ತಾಲೂಕಿನ ತಜ್ಞ ವೈದ್ಯರು ಹಾಗೂ ಆಯುಷ್ ಇಲಾಖೆ ವೈದ್ಯರ ಆರೋಗ್ಯ ಮೇಳದಲ್ಲಿ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ಮಾಡಿದರು.1300 ಜನರಿಗೆ ಆಯುಷ್ಮನ್ ಆರೋಗ್ಯ ಕಾರ್ಡ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಸುನೀತಾ ಕೆಂಬಾವಿ,ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಡಾ: ಶಿವಬಸ್ಸಪ್ಪ ಹೆಸರೂರು,ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಮಕೃಷ್ಣ ತಾಲೂಕು ವೈದ್ಯಾಧಿಕಾರಿ ಡಾ. ಅಮರೇಶ ಪಾಟೀಲ್, ಡಾ.ಚಂದ್ರಕಾಂತ ,ಡಾ ವಿಕ್ರಂ ಪಾಟೀಲ್, ಸೇರಿದಂತೆ ಹಿರಿಯ ಮುಖಂಡರು ಆರೋಗ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಣೇಶ್ ಜೋಶಿ ನಿರೂಪಿಸಿದರು.