ಕಾರ್ಮಿಕರ ದಿನಾಚರಣೆಯ ಶುಭಾಶಯಗಳು
ನನ್ನ ಐದನೇ ಕೃತಿ ‘ಕಟ್ಟಿರುವೆ ಸಾಲು’
ಸಂಕಲನದ ಒಂದು ಕವನ

* ಕರ್ಮಯೋಗಿ ! *

ಬೆವರ ಹನಿಯ ಸೀಳಿ
ಉಸಿರುಗರೆದು
ಟಿಸಿಲೊಡೆದಿದೆ ಕಾವ್ಯ
ಉರಿಯಲರಳಿ
ಮರಳಿ ನರಳುತಿದೆ
ಎದೆಯ ಅಗ್ನಿದಿವ್ಯ

ಮಣ್ಣನೆತ್ತಿ ಹೊತ್ತ
ಬೆನ್ನಿಗೆ ಉದರ
ಮೆತ್ತಿಕೊಂಡ ಬಡ ದೇಹ
ಧೂಳಿನುಸಿರನೆ ನೆಕ್ಕಿ
ನೀರ್ಗುಡಿದರೂ
ಬಿಡದು ದುಡಿವ ದಾಹ

ಕಾಳರಾತ್ರಿಯಲಿ ಬೀಳ್ವ
ಸಿರಿತನದ ಕನಸಿಗಿಲ್ಲ
ಲಂಗು ಲಗಾಮು
ತೇಪೆಯ ಬದುಕಲೇ
ತೇಲುತಿರುವ ಜೀವಂತ
ಶವಕಿಲ್ಲ ಮದ್ದು ಮುಲಾಮು

ಎಳೆಗರುವ ಎತ್ತಾಗಿಸಿ
ಮಳೆಗಾಗಿ ಅಂಡಲೆವ
ಭಂಡ ಬದುಕು
ನಿಡುಸುಯ್ವ ಮನಕಿಲ್ಲ
ತಂಪೆರೆವ ತಂಗಾಳಿ,
ಘಟ ಸರ್ಪವೇ
ಎದುರಿಗೆ ಎಲ್ಲದಕು

ಹೀಚು ಎದೆಯಲಿ
ಮುಖವಿಟ್ಟವನ ದುಗುಡ
ತಣಿಸಲೆಳೆಸಿದವಳ ಬೆರಳಿಗೆ
ತಾಕುತಿಹುದು ಒಣಮೈ
ಮಕ್ಕಳೊಲವಿಗೆ ಕನ್ನವನಿಕ್ಕಿ
ದಣಿದ ಜೋಡಿ ಜೀವ
ಮಂಡೆಯೂರಿ ನಿಂತಿವೆ
ತೋರಿ ಬರಿಗೈ

ನೀ. ಶ್ರೀಶೈಲ ಹುಲ್ಲೂರು
ಮಂದಹಾಸ ಬಸವೇಶ್ವರ ವೃತ್ತ
ಜಮಖಂಡಿ – 587301
🌠9448591167

Don`t copy text!