ಕಾಯಕದ ಒಡಲಲ್ಲಿ ಅರಳಲಿ ಈ ದಿನ
( ಮೇ ೧ ಕಾರ್ಮಿಕರ ದಿನದ ನೆನಪಿನಲ್ಲಿ )
ಪ್ರಸ್ತುತದಲ್ಲಿ ಕಾರ್ಮಿಕರ ದಿನಾಚರಣೆಯನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಇದಕ್ಕೊಂದು ಇತಿಹಾಸವೂ ಇದೆ. ಹಾಗೆಯೇ ಮನುಷ್ಯ ಸಹಜ ಸ್ವಭಾವದಂತೆ ಪರಂಪರೆಯಾಗಿ ಬಳೆಸಿಕೊಂಡು ಬರುತ್ತಿರುವುದರಲ್ಲೇನು ಆಶ್ಚರ್ಯವಿಲ್ಲ.
ವಿವಿಧ ದೇಶಗಳಲ್ಲಿ ಆಚರಿಸಲಾದರೂ ಅಲ್ಲಿಯ ಸಾಮಾಜಿಕ, ರಾಜಕೀಯ ಹಿನ್ನೆಲೆಯಲ್ಲಿ ಆಲೋಚಿಸಲಾಗುತ್ತದೆ. ಒಟ್ಟಾರೆ ಮನುಷ್ಯನ ಶ್ರಮ ಸಂಸ್ಕೃತಿಯನ್ನು ಪರಿಗಣಿಸಿ ಮಾಡಿದ ಒಂದು ಚಿಂತನಾ ಕ್ರಮವಿದು.
ಮನುಷ್ಯ ಒಬ್ಬನೇ ಮಾನಸಿಕವಾಗಿ ಸದೃಢನಾದ ಪ್ರಾಣಿ. ದೈಹಿಕ ಶ್ರಮವನ್ನು ತನ್ನ ಬುದ್ಧಿವಂತಿಕೆಯ ಮೂಲಕ ಬಳಸ ಬಲ್ಲ ಪ್ರಜ್ಞಾವಂತ. ಈ ಕಾರ್ಯ ಕ್ಷಮತೆಯೆ ಮನುಷ್ಯನನ್ನು ಎಲ್ಲಾ ಪ್ರಾಣಿಗಳಿಂದ ಭಿನ್ನವಾಗಿ ಬಿಂಬಿಸುವುದು.
ಅಭಿವೃದ್ಧಿ ಹೊಂದಿದಂತೆಲ್ಲ ಮನುಷ್ಯ ಮನುಷ್ಯನ ನಡುವೆ ಸ್ಪರ್ಧೆ ಪ್ರತಿಸ್ಪರ್ಧೆಗಳು ಹೆಚ್ಚಾದವು. ಆಗ ಹುಟ್ಟಿಕೊಂಡಿದ್ದು ಆಳುವ ವರ್ಗ ಮತ್ತು ತುಳಿತಕ್ಕೊಳಗಾದವರ ವರ್ಗ. ಹೀಗಾದಾಗ ಶೋಷಿತರು ನ್ಯಾಯಕ್ಕಾಗಿ ದನಿ ಎತ್ತುವುದು ಅವಶ್ಯಕವೆನಿಸಿತು. ಸಹಿಸುವುದೂ ಮಹಾಪರಾಧವೆಂದು ಹೇಳಲಾಗುತ್ತದೆ. ಅದು ಮಾನವನ ಮೂಲಭೂತ ಹಕ್ಕು ಕೂಡ ಹೌದು.
ಇಂದು ಗೂಗಲ್ ನಲ್ಲಿ ಹೋಗಿ ‘Labour’s Day’ ಟೈಪ್ ಮಾಡಿ ಸರ್ಚ್ ಬಟನ್ ಒತ್ತಿದರೆ ಸಾಕು, ಎಲ್ಲಾ ಮಾಹಿತಿಗಳು ದೊರೆಯುತ್ತವೆ. ಈ ಕಾರ್ಮಿಕರ ದಿನಾಚರಣೆಯ ಹಿಂದೆ ಒಂದು ಇತಿಹಾಸವೇ ಇದೆ. ಅದರಲ್ಲಿ ತುಳಿತಕ್ಕೊಳಗಾದವರ ಧ್ವನಿ ಅಡಗಿದೆ, ಸಹಿಸಲಾಗದೆ ಪ್ರತಿಭಟಿಸಿದ ಹೋರಾಟವಿದೆ, ಸಂಘರ್ಷದಲ್ಲಿ ಪ್ರಾಣ ತೆತ್ತವರ ಕೂಗಿದೆ, ಉದ್ದೇಶ ಈಡೇರಿದ ಸಂತೋಷವೂ ಇದೆ. ಹೀಗೆಲ್ಲಾ ಭಾವನಾತ್ಮಕ ಅಂಶಗಳು ಒಂದು ದಿನಾಚರಣೆಯನ್ನು ಆಚರಿಸುವ ಬಗೆಗೆ, ಕಾಲಗರ್ಭದಲ್ಲಿ ಕತೆಯಾಗಿ ಅಡಗಿ ಹೂತು ಹೋಗಿದೆ.
ಮಾನವೀಯ ದೃಷ್ಟಿಕೋನದ ಒಂದು ನೋಟವನ್ನು ಮನದಲ್ಲಿ ಇರಿಸಿಕೊಂಡು ನೋಡಬೇಕಾದುದು ಅತ್ಯವಶ್ಯಕ. ಇಂದು ನಾನಾ ದೇಶಗಳಲ್ಲಿ ಆಚರಿಸುತ್ತಿದ್ದರೂ ಎಲ್ಲರ ಉದ್ದೇಶವೂ ಒಂದೇ ಆಗಿರುತ್ತದೆ. ದುಡಿಯ ಬೇಕು, ದುಡಿದು ಊಟ ಮಾಡಬೇಕು, ಎಲ್ಲರ ಹೊಟ್ಟೆಗೆ ರೊಟ್ಟಿ ಸಿಗಲೇ ಬೇಕು. ಯಾರೂ ಉಪವಾಸ ಇರಬಾರದು.
‘ಹುಟ್ಟಿಸಿದ ದೇವರು ಹುಲ್ಲು ಮೇಯಿಸುತ್ತಾನೆಯೇ?’ ಎಲ್ಲಿಯಾದರೂ ಅನ್ನದ ರುಣ ಇದ್ದೇ ಇರುತ್ತದೆ ಎಂದು ಮನುಷ್ಯ ಕೈಕಟ್ಟಿಕೊಂಡು ಕುಳಿತರೆ, ರೊಟ್ಟಿ ತಾನಾಗಿಯೆ ನಡೆದುಕೊಂಡು ಬರುವುದಿಲ್ಲ ಎನ್ನುವ ಸತ್ಯವು ಎಲ್ಲರಿಗೂ ತಿಳಿದಿದೆ. ‘ಕೈ ಕೆಸರಾದರೆ ಬಾಯಿ ಮೊಸರು.’ ಪ್ರಾಥಮಿಕ ಶಾಲಾ ಮಟ್ಟದಿಂದಲೇ ಕಲಿಸುತ್ತ ಬರುತ್ತಿದ್ದೇವೆ.
ಜೀವನದಲ್ಲಿ ಕಲಿಕೆ ಮತ್ತು ದುಡಿಮೆ ಒಟ್ಟೊಟ್ಟಿಗೆ ಸಾಗಿ ಬದುಕು ಕಟ್ಟಿಕೊಳ್ಳುವ ಪದ್ಧತಿಯನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡ ಆಧುನಿಕ ಜಗತ್ತು ಇಂದು ನಮ್ಮದಾಗಿದೆ. ಎಲ್ಲರೂ ಅವರವರ ಬುದ್ಧಿವಂತಿಕೆ, ಜಾಣ್ಮೆ, ಕ್ರಿಯಾಶೀಲತೆಗನುಗುಣವಾಗಿ ತನ್ನ ವೃತ್ತಿ ಮತ್ತು ಖಾಸಗಿ ಬದುಕನ್ನು ರೂಪಿಸಿಕೊಳ್ಳುತ್ತಾರೆ.
ಈ ವೃತ್ತಿಯಿಂದಲೇ ಜಾತಿ ಎಂದು ಮೊಟ್ಟಮೊದಲಿಗೆ ಹೇಳಿಕೊಟ್ಟವರು ಬಸವಾದಿ ಶರಣರು. ಬಸವಣ್ಣನವರು ಸಾಮಾಜಿಕ ಕ್ರಾಂತಿಕಾರರಾಗಿ ಹುಟ್ಟಿನಿಂದ ಜಾತಿಯಲ್ಲ ಎನ್ನುವುದನ್ನು ನಿರೂಪಿಸಿದರು. ಅಂದು ಹನ್ನೆರಡನೇ ಶತಮಾನದಲ್ಲಿ ಸಮಗಾರ ಹರಳಯ್ಯ, ಅಂಬಿಗರ ಚೌಡಯ್ಯ, ನುಲಿಯ ಚಂದಯ್ಯ, ಮಡಿವಾಳ ಮಾಚಿದೇವ ಮುಂತಾದ ಕಸುಬಿನ ಹೆಸರಿನಲ್ಲಿ ವ್ಯಕ್ತಿಯನ್ನು ಗುರುತಿಸಲಾಯಿತು.
ಇಂದು ನಾವು ಹೇಳುವ Job, Career, ಕೆಲಸ, ವೃತ್ತಿ, ಉದ್ಯೋಗ, ಶಬ್ದಗಳಿಗೆ ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಪ್ರೀತಿ ಗೌರವಾದರಗಳಿಂದ ‘ಕಾಯಕ’ ಎಂದು ಕರೆದರು. ‘ಕಾಯಕವೇ ಕೈಲಾಸ’ ವೆಂಬಂತೆ ಬದುಕಿ ಆದರ್ಶಪ್ರಾಯರಾದರು. ತಮ್ಮನ್ನು ಮತ್ತು ತಮ್ಮ ಬದುಕಿಗಾಗಿ ಮಾಡುವ ಕಾಯಕದಲ್ಲಿ ಜೀವನ ಪ್ರೀತಿಯನ್ನು ಸಾಕ್ಷಾತ್ಕರಿಸಿ ತೋರಿಸಿದರು. ದುಡಿಮೆ ಯಾವುದಾದರೇನು ಗೌರವದಿಂದ ಕಾಣಬೇಕು ಎನ್ನುವ ಮನೋಧರ್ಮವನ್ನು ಹುಟ್ಟು ಹಾಕಿದರು. ‘ನುಡಿದಂತೆ ನಡೆ’ ಎಂದು ಹೇಳುತ್ತ ಹಾಗೆಯೇ ಮಾಡಿ ತೋರಿದ ಶರಣರು ನಮಗಿಂದು ಆದರ್ಶವಾಗಬೇಕಾದ ತುರ್ತು ಇದೆ.
ಈ ಜಗತ್ತಿನ ಪರಿಕ್ರಮದ ಸೂತ್ರಧಾರನೊಬ್ಬನಿರುವಾಗ, ಮನುಜರಾದ ನಾವೆಲ್ಲರೂ ಕಾರ್ಮಿಕರೇ ಎನ್ನುವ ಸಮಾನ ದೃಷ್ಟಿಕೋನದ ಸತ್ಯವನ್ನು ಅರಿತು, ಸೋಮಾರಿಗಳಾಗದ ಬದುಕು ರೂಪಿಸಿಕೊಳ್ಳುವುದನ್ನು ಕಲಿಯ ಬೇಕಾದ್ದು ಪ್ರತಿಯೊಬ್ಬರ ಆದ್ಯ ಕರ್ತವ್ಯ.
–ಸಿಕಾ ಕಲಬುರ್ಗಿ