“ಬಸವ ಬಾರೈ ಮರ್ತ್ಯಲೋಕದೊಳಗೆ”

ಬಸವ ಬಾರೈ ಮರ್ತ್ಯಲೋಕದೊಳಗೆ”

ಬಸವ ಬಾರೈ ಮರ್ತ್ಯಲೋಕದೊಳಗೆ | ಭಕ್ತರುಂಟೆ? ಹೇಳಯ್ಯಾ 
ಮತ್ತಾರೂ ಇಲ್ಲಯ್ಯಾ | ಮತ್ತಾರೂ ಇಲ್ಲಯ್ಯಾ ಮತ್ತಾರೂ ಇಲ್ಲಯ್ಯಾ
ನಾನೊಬ್ಬನೆ ಭಕ್ತನು | ಮರ್ತ್ಯಲೋಕದೊಳಗಣ ಭಕ್ತರೆಲ್ಲರೂ ಜಂಗಮ 
ಲಿಂಗ ನೀನೇ ಅಯ್ಯಾ | ಕೂಡಲಸಂಗಮದೇವಾ 
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-80 / ವಚನ ಸಂಖ್ಯೆ-894)
ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.
ಮರ್ತ್ಯಲೋಕ : ಭೂಲೋಕ

ಜಿಡ್ಡುಗಟ್ಟಿದ್ದ ಶ್ರೇಣೀಕೃತ ಸಮಾಜಕ್ಕೆ ವೈಚಾರಿಕತೆಯ ಸ್ಪರ್ಷ ನೀಡಿ ಹೊಸ ಸಮ ಸಮಾಜವನ್ನು ನಿರ್ಮಿಸುವಲ್ಲಿ ಶ್ರಮವಹಿಸಿದ ಬಸವಾದಿ ಶರಣರ ಜೀವಿತದ 12 ನೇ ಶತಮಾನದ ಕಾಲಾವಧಿ ಕರ್ನಾಟಕದ ಇತಿಹಾಸದಲ್ಲಿ ವಿಶಿಷ್ಠವಾದ ಕಾಲಘಟ್ಟ.
ಸರ್ವ ಸಮಾನತೆಯ ಹರಿಕಾರರಾದ ಬಸವೇಶ್ವರರು ಇಂಥ ಶ್ರೇಣೀಕೃತ ಸಮಾಜದ ಸಂಕೋಲೆಗಳನ್ನು ಕಿತ್ತೊಗೆದು ಎಲ್ಲರನ್ನು ಅಪ್ಪಿಕೊಂಡು ಒಪ್ಪಿಕೊಂಡು ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಬಿತ್ತಿದವರು.

ಸಮಾನತೆಯ ಬೀಜ ಬಿತ್ತಿ, ಶೋಷಣೆ ಮತ್ತು ಮೂಢನಂಬಿಕೆಗಳ ವಿರುದ್ಧ ಕ್ರಾಂತಿಯನ್ನು ಮಾಡಿದವರು ಬಸವೇಶ್ವರರು. ಆಚಾರಕ್ಕೆ ಮತ್ತು ವಿಚಾರಕ್ಕೆ ಬಸವೇಶ್ವರರು ಪ್ರಾಮುಖ್ಯತೆಯನ್ನು ನೀಡಿದರು. ಮನುಷ್ಯನ ಯೋಗ್ಯತೆಯನ್ನು ಅಳೆಯುವುದು ಅವರ ಜನ್ಮ ಅಥವಾ ಜಾತಿಯಿಂದಲ್ಲ. ಅವನ ಆಚಾರ ವಿಚಾರಗಳಿಂದ, ಗುಣ ಧರ್ಮಗಳಿಂದ ಎಂದು ಹೇಳಿದ್ದಲ್ಲದೇ ನುಡಿದಂತೆ ನಡೆದವರು ಬಸವೇಶ್ವರರು.

ಆವ ಕುಲವಾದಡೇನು? | ಶಿವಲಿಂಗವಿದ್ದವನೆ ಕುಲಜನು ||
ಕುಲವನರಸುವರೆ ಶರಣರಲ್ಲಿ | ಜಾತಿ ಸಂಕರನಾದ ಬಳಿಕ? ||
ಶಿವಧರ್ಮ ಕುಲೇ ಜಾತಃ | ಪುನರ್ಜನ್ಮ ವಿವರ್ಜಿತಃ ||
ಉಮಾ ಮಾತಾ ಪಿತ ರುದ್ರಃ | ಐಶ್ವರ್ಯಂ ಕುಲಮೇವಚ ಎಂದುದಾಗಿ ||
ಒಕ್ಕುದ ಕೊಂಬೆನವರಲ್ಲಿ | ಕೂಸ ಕೊಡುವೆ ||
ಕೂಡಲಸಂಗಮದೇವಾ | ನಂಬುವೆ ನಿಮ್ಮ ಶರಣನು ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-66 / ವಚನ ಸಂಖ್ಯೆ-718)

ಕುಲವನರಸುವರೆ ಶರಣರಲ್ಲಿ ಜಾತಿ ಸಂಕರನಾದ ಬಳಿಕ? ಎಂದ ಬಸವೇಶ್ವರರು ಕಾಯಕ ಯೋಗಿಗಳನ್ನು ಒಟ್ಟುಗೂಡಿಸಿ ಅವರ ಕಾಯಕವನ್ನು ದೈವತ್ವಕ್ಕೆ ಹೋಲಿಸುತ್ತಾರೆ. ಎಲ್ಲ ಕುಶಲಕರ್ಮಿಗಳನ್ನು “ಆಯಗಾರರು” ಎಂಬ ವಿಶಿಷ್ಠ ಹೆಸರನ್ನು ಬಳಸಿದ ಬಸವೇಶ್ವರರು ಭಕ್ತಿ ಚಳುವಳಿಯ ಮೂಲಕ ತಂದ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ ಕ್ರಾಂತಿ ಇಡೀ ವಿಶ್ವದಲ್ಲಿಯೇ ಅತ್ಯದ್ಭುತ. ಎಲ್ಲರನ್ನೂ ಜಗತ್ತಿನ ಮೊದಲನೇ ಆಧ್ಯಾತ್ಮಿಕ ಪಾರ್ಲಿಮೆಂಟ್ ಎಂದು ಕರೆಯಿಸಿಕೊಂಡ ಅನುಭವ ಮಂಟಪಕ್ಕೆ ಕರೆ ತಂದರು.
ಕಲ್ಯಾಣದಲ್ಲಿ ಕ್ರಾಂತಿಯಾಗಿ ಸುಮಾರು 900 ವರ್ಷಗಳು ಕಳೆದಿವೆ. ವಿಶ್ವಮಟ್ಟದಲ್ಲಿ ಬಸವೇಶ್ವರರ ಸಾಮಾಜಿಕ ಕ್ರಾಂತಿಯ ಬಗ್ಗೆ ಇಂದಿಗೂ ತುಲನಾತ್ಮಕ ಅಧ್ಯಯನ ನಡೀತಾ ಇದೆ ಅಂದರೆ ಬಸವೇಶ್ವರರ ನಾಯಕತ್ವ ಎಂಥ ಮಹತ್ವದ್ದಾಗಿತ್ತು, ಎಂಥ ಶ್ರೇಷ್ಠ ಮಟ್ಟದ್ದಾಗಿತ್ತು ಎನ್ನುವುದನ್ನು ನಾವು ಅರಿತುಕೊಳ್ಳಬೇಕು.

ಸರಿ ಸುಮಾರು 1400 ಕ್ಕೂ ಹೆಚ್ಚು ವಚನಗಳು ನಮಗೆ ಇಲ್ಲಿಯವೆರೆಗೆ ಲಭ್ಯವಾಗಿವೆ. ಎಲ್ಲ ವಚನಗಳು ಸಾಮಾಜಿಕ ಸಾಮರಸ್ಯದ ಚಿಂತನೆ, ಆಧ್ಯಾತ್ಮಿಕ ಬೆಳಕು ನೀಡುವ ವಚನಗಳಾಗಿವೆ. ಶ್ರೇಷ್ಠಮಟ್ಟದ ಸಾಮಾಜಿಕ ಕಳಕಳಿ ಮತ್ತು ಸಮಾಜ ಸುಧಾರಣೆಯ ಪ್ರತಿಬಿಂಬಗಳು ಎಂದರೂ ತಪ್ಪಾಗಲಾರದು. ಅವುಗಳಲ್ಲಿ ಒಂದಾದ ಬಸವೇಶ್ವರರು ತಮ್ಮ ಆತ್ಮ ವಿಮರ್ಶೆಯನ್ನು ಮಾಡಿಕೊಳ್ಳುವ ಒಂದು ವಚನವನ್ನು ಇಲ್ಲಿ ವಿಶ್ಲೇಷಿಸುವ ಪ್ರಯತ್ನವನ್ನು ಮಾಡುತ್ತಿದ್ದೇನೆ.

ಬಸವಣ್ಣನವರ ಬದುಕೇ ಒಂದು ತೆರೆದ ಪುಸ್ತಕ. ಅಲ್ಲಿ ಎಲ್ಲವೂ ಮುಕ್ತ ಮುಕ್ತ ಮುಕ್ತ ಮತ್ತು ಸಾಮಾಜಿಕ ಸಮತೋಲನದ ಮೌಲ್ಯಗಳು ಬಿಂಬಿತವಾಗಿವೆ. ಎನಗಿಂತ ಕಿರಿಯರಿಲ್ಲ ಎನ್ನುವ ಭಾವ ವ್ಯಕ್ತವಾಗಿವೆ. ಪ್ರಸ್ತುತ ವಚನದಲ್ಲಿ ವ್ಯಕ್ತವಾಗಿರುವ “ನಾನೊಬ್ಬನೇ ಭಕ್ತನು ಮರ್ತ್ಯಲೋಕದೊಳಗಣ ಭಕ್ತರೆಲ್ಲರೂ ಜಂಗಮ” ಎನ್ನುವುದು ಬಸವಣ್ಣನವರ ಸಮಷ್ಠಿಯ ಎಲ್ಲ ಶರಣ-ಶರಣೆಯರಿಗೆ ಒಂದು ಗೌರವ ಸೂಚಕ ಪದಪುಂಜವಾಗಿದೆ. ನುಡಿದಂತೆ ನಡೆದ, ನಡೆದಂತೆ ನುಡಿದ ಮಹಾನ್ ದಾರ್ಶನಿಕ ಬಸವಣ್ಣನವರು. ಈ ತತ್ವವನ್ನು ಅವರ ಒಂದು ವಚನದಲ್ಲಿ ಅತ್ಯಂತ ಸರಳವಾಗಿ ನಿರೂಪಿಸಿದ್ದಾರೆ.

ಭಕ್ತಿ ಸುಭಾಷೆಯ ನುಡಿವೆ || ನುಡಿದಂತೆ ನಡೆವೆ ||
ನಡೆಯೊಳಗೆ ನುಡಿಯ | ಪೂರೈಸುವೆ ||
ಮೇಲೆ ತೂಗುವ ತ್ರಾಸು | ಕಟ್ಟಳೆ ನಿಮ್ಮ ಕೈಯಲ್ಲಿ ||
ಒಂದು ಜವೆ | ಕೊರತೆಯಾದಡೆ ||
ಎನ್ನನದ್ದಿ ನೇನೆದ್ದು ಹೋಗು | ಕೂಡಲಸಂಗಮದೇವಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-43 / ವಚನ ಸಂಖ್ಯೆ-441)
ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.
ತ್ರಾಸು : ಬಂಗಾರ ತೂಗುವ ತಕ್ಕಡಿ
ಕಟ್ಟಳೆ : ನೇಮ, ನಿಯಮ
ಜವೆ : ಕೂದಲೆಳೆಯಷ್ಟು ಸಣ್ಣ

ಇಂಥ ನಡೆ ನುಡಿಗಳಲ್ಲಿ ವ್ಯತ್ಯಾಸವಾದರೂ ಬಂಗಾರ ತೂಗುವ ತಕ್ಕಡಿಯಲ್ಲಿ ಒಂದು ಎಳೆ ಕೂದಲಿನಲ್ಲಿ ವ್ಯತ್ಯಾಸವಾದರೂ ಬಹುದೊಡ್ಡ ನಷ್ಟವಾಗುವ ಹಾಗೆ ಆಗುತ್ತದೆ. ಎಂಥ ನಿದರ್ಶನವನ್ನು ನಮ್ಮೆದುರಿಗೆ ಬಸವಣ್ಣನವರು ನಿಲ್ಲಿಸುತ್ತಾರೆ. ಹಾಗೆಯೇ ಈ ವಚನದಲ್ಲಿ ಬಸವಣ್ಣನವರು ನಾನು ಭಕ್ತ ಉಳಿದವರೆಲ್ಲರೂ ಶ್ರೇಷ್ಠ ಜಂಗಮರೆಂದು ನಿರೂಪಣೆ ಮಾಡಿದ್ದಾರೆ.

ಬಸವ ಬಾರೈ ಮರ್ತ್ಯಲೋಕದೊಳಗೆ ಭಕ್ತರುಂಟೆ? ಹೇಳಯ್ಯಾ” ಎಂದು ನುಡಿಯುವುದರ ಮೂಲಕ ಮತ್ತೆ ನಾನು ಭಕ್ತನಾಗಿ ಬರಲು ಅಪ್ಪಣೆ ಮಾಡಯ್ಯ ಅಂತಾ ಕೂಡಲಸಂಗಮದೇವನನ್ನು ಪ್ರಾರ್ಥಿಸುತ್ತಾರೆ. ಇಂಥ ಕಿಂಕರತ್ವ ಮತ್ತು ಸರಳತೆಯಲ್ಲಿ ಸರಳ ಭಾವವನ್ನು ವ್ಯಕ್ತ ಮಾಡುವುದರ ಮೂಲಕ ಶ್ರೇಣೀಕೃತ ಸಮಾಜದಲ್ಲಿ ಕೀಳು ಭಾವನೆಯಿಂದ ನೋಡುತ್ತಿದ್ದ ಶರಣ ಸಂಕುಲಕ್ಕೆ ಒಂದು ಮಾನಸಿಕ ಧೈರ್ಯ-ಸ್ಥೈರ್ಯವನ್ನು ತುಂಬುವುದರ ಮೂಲಕ ಅವರನ್ನು ಕೀಳು ಭಾವನೆಯ ಚಿಪ್ಪಿನಿಂದ ಹೊರ ತರುವ ಪ್ರಯತ್ನವನ್ನು ಬಸವಣ್ಣನವರು ಮಾಡುತ್ತಾರೆ.

ಈ ವಚನದ ಒಟ್ಟಾರೆ ಆಶಯ ಅಂದರೆ ಕೆಳವರ್ಗದ ಶರಣರ ಹೃದಯದಲ್ಲಿದ್ದ ಕಳೆಯನ್ನು ಕೀಳಲು ಪ್ರಯತ್ನಿಸಿ ಅವರಿಗೆ ಜಂಗಮ ಸ್ಥಾನವನ್ನು ನೀಡಿದ್ದಾರೆ. ಮತ್ತೆ ಭಕ್ತನಾಗಿ ಹುಟ್ಟುವ ಮನೊಸ್ಥೈರ್ಯವನ್ನು ತಮ್ಮ ಅಂತರಂಗದಲ್ಲಿ ಭಕ್ತಿಯ ಪರಾಕಾಷ್ಠತೆಯನ್ನು ನಿರೂಪಿಸಿದ್ದಾರೆ. ವಚನದಲ್ಲಿ ನಿರೂಪಿಸಿದಂತೆ ಭಕ್ತಿಯ ವಿಕಾಸದ ಎಲ್ಲ ಹಂತಗಳಲ್ಲಿಯೂ ಸುಜ್ಞಾನಫಲದ ಆಪೇಕ್ಷೆಯನ್ನು ವ್ಯಕ್ತಪಡಿಸುತ್ತಾರೆ ಬಸವಣ್ಣನವರು.

ಅಂಗ ಲಿಂಗದಲ್ಲಿ | ತರಹರವಾಗಿ ||
ಸಮತೆ ಶಾಂತಿಯಲ್ಲಿ | ತರಹರವಾಗಿ ||
ಮನ ಜ್ಞಾನದಲ್ಲಿ | ತರಹರವಾಗಿ ||
ಭಾವ ನಿರ್ಭಾವದಲ್ಲಿ | ತರಹರವಾಗಿ ||
ಇರಬಲ್ಲಡೆ ಆತನೆ ಅಚ್ಚ ಶರಣನು | ಕಾಣಾ ಗುಹೇಶ್ವರಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-180 / ವಚನ ಸಂಖ್ಯೆ-540)
ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.
ತರಹರವಾಗು : ಹೊಂದಿಕೊಳ್ಳು, ಶಾಂತವಾಗು, ಲೀಯವಾಗು, ಲೀನವಾಗು

ಸತ್ಯನಿಷ್ಠ ಶರಣನಾಗಲು ನಿರಂತರ ಹೋರಾಟ ಮತ್ತು ನಿಷ್ಠೆ ಅಮೂಲ್ಯವಾದ ಚಿಂತನೆ. ಅದೇ ಶರಣರ ಸಂಪತ್ತು ಮತ್ತು ಆಸ್ತಿ. ಅಂತರಂಗ ಮತ್ತು ಬಹಿರಂಗ ಶುದ್ಧಿ ಅತ್ಯವಶ್ಯಕ. ಹಾಗೆಯೇ ಬಸವಣ್ಣನವರು ಇಂಥ ನಡೆ ನುಡಿ ಶುದ್ಧಿಯಿಂದ ನಮಗೆಲ್ಲ ಬೆಳಕಾಗಿ ಬಂದರು. ಬಸವ ಜಯಂತಿಯ ಪವಿತ್ರ ದಿನದಂದು ಬಸವಣ್ಣನವರ ಆದರ್ಶ ಗುಣಗಳನ್ನು ನಾವೆಲ್ಲರೂ ಪಾಲಿಸುವುದರ ಮೂಲಕ ಶರಣರಾಗುವ ದಿಸೆಯಲ್ಲಿ ಹೆಜ್ಜೆಯಿಡೋಣ ಅಂತ ಹೇಳತಾ ಈ ಲೇಖನಕ್ಕೆ ವಿರಾಮ ಹೇಳುತ್ತೇನೆ.

ಸಂಗ್ರಹ ಮತ್ತು ಲೇಖನ :
ವಿಜಯಕುಮಾರ ಕಮ್ಮಾರ
“ಸವಿಚರಣ” ಸುಮತಿ ಸ್ಕೂಲ್ ಹತ್ತಿರ
ಕ್ಯಾತ್ಸಂದ್ರ, ತುಮಕೂರು – 572 104
ಮೋಬೈಲ್ ನಂ : 97413 57132 / 97418 89684
ಈ-ಮೇಲ್ : vijikammar@gmail.com

Don`t copy text!