ಸರ್ವಕಾಲಕ್ಕೂ ಸಲ್ಲುವ ಸಾತ್ವಿಕ ಪುರುಷ ಅಣ್ಣ ಬಸವಣ್ಣ.
“ಒಳ್ಳೆದು ಬಾಳ ದಿನಾ ಬಾಳತೈತಿ” ಅನ್ನುವದು ಎಷ್ಟು ಸತ್ಯ. ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ಅದು ಸದಾ ಪ್ರಜ್ವಲಿಸುತ್ತಲೇ ಇರುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಬಸವಾದಿ ಶರಣರ ವಚನ ಸಾಹಿತ್ಯ.
ಪ್ರಸಿದ್ಧ ವಿಜ್ಞಾನಿ “ಐನಸ್ಟೀನ ಅವರು ಹೇಳುವಂತೆ “ಧರ್ಮ ರಹಿತ ವಿಜ್ಞಾನ ಕುಂಟು, ವಿಜ್ಞಾನ ರಹಿತ ಧರ್ಮ ಕುರುಡು”. ಅಂದರೆ ಧರ್ಮದ ನೀತಿ ನಿಯಮಗಳು, ವಿಧಿ ನಿಷೇಧಗಳು ವೈಚಾರಿಕ ಹಿನ್ನೆಲೆಯಿದ್ದಾಗ ಮಾತ್ರ ಆ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ. ಅದೇ ರೀತಿ ಬಸವ ಯುಗ ವೈಚಾತರಿಕ ತಳಹದಿಯಲ್ಲಿ ಸಾತ್ವಿಕ ನೆಲೆಗಟ್ಟಿನ ಮೇಲೆ ನಿರ್ಮಾಣವಾದ ವಿಜ್ಞಾನ ಸಹಿತ, ಅಂತರಂಗದ ಅರಿವಿನ ಅಮೃತದ ಫಲವಾದ ಸತ್ಯವನ್ನು ಪ್ರತಿಪಾದಿಸುವ ಜನಪರ ಧರ್ಮವಾಗಿತ್ತು. ಆದ್ದರಿಂದ ವಚನ ಸಾಹಿತ್ಯವು ಸಾರ್ವಕಾಲಿಕ ಸತ್ಯವಾಗಿ ಮೂಡಿಬಂದಿದೆ. “ ಹಸಿವು ಮುಕ್ತ ಸಮಾಜಕ್ಕೆ ಬಸವಾದಿ ಶರಣರು ಕಂಡುಕೊಂಡ ದಿವ್ಯ ಮಂತ್ರ ಯಾವುದೆಂದರೆ ಜೀವನವನ್ನು ಸಾರ್ಥಕ್ಯಗೊಳಿಸುವ ಭಕ್ತಿಮಾರ್ಗದ ಜೊತೆಗೆ ದಾಸೋಹ ಮತ್ತು ಕಾಯಕತತ್ವ. ಇವು ಇಂದಿಗೂ ಜಗಕೆ ಮಾದರಿಯಾಗಿವೆ.
ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ;
ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯಾ;
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯಾ; ಕೂಡಲಸಂಗಮದೇವಾ.
ಶರಣರು ಬಳಸುವ ಅಂಕಿತನಾಮಗಳೆ ಅವರು ಪ್ರಮಾಣೀಕರಿಸಿ ಹೇಳಿದ ಪದಗಳು. ಬಸವಣ್ಣನವರು ಹೇಳಿದ್ದು ನಾವು ಮೊದಲು ಇಲ್ಲಿ ಸಲ್ಲುವ ಕಾರ್ಯಮಾಡಬೇಕಾಗಿದೆ. ಅಂದರೆ ನನ್ನ ಒಳಿತಿನ ಜೊತೆಗೆ ಸಮಾಜದ ಒಳಿತು ಆಗಬೇಕು. ಅಂದಾಗ ನಾವು ಇಲ್ಲಿ ಸಲ್ಲಲು ಯೋಗ್ಯರಾಗುತ್ತೆವೆ. ಅಂದರೆ ಮಾನವೀಯತೆಯಿಂದ ಅರಿತು ಬಾಳಬೇಕಾಗಿದೆ. ಅರಿತು ನಡೆದಾಗ ಯಾವುದೇ ಪಾಪಕರ್ಮಗಳು ನಮ್ಮಿಂದ ಘಟಿಸುವದಿಲ್ಲ. ಅಂದಾಗ ಮಾತ್ರ ಸಾತ್ವಿಕ ಸಮಾಜ ನಿರ್ಮಾಣ ಸಾಧ್ಯ.
ಮನ ಮನ ಬೆರಸಿದಲ್ಲಿ ತನು ಕರಗದಿದ್ದಡೆ
ಸೋಂಕಿನಲ್ಲಿ ಪುಳಕಂಗಳು ಹೊರಹೊಮ್ಮದಿದ್ದಡೆ
ಕಂಡಾಗಳಶ್ರುಜಲಂಗಳು ಸುರಿಯದಿದ್ದಡೆ
ನುಡಿವಲ್ಲಿ ಗದ್ಗದಂಗಳು ಪೊಣ್ಮದಿದ್ದಡೆ
ಕೂಡಲಸಂಗಮದೇವರ ಭಕ್ತಿಗಿದು ಚಿಹ್ನ ಎನ್ನಲ್ಲಿ ಇವಿಲ್ಲಾಗಿ
ಆನು ಡಂಬಕ ಕಾಣಿರೇ.
ಎಷ್ಟೋ ವಚನಗಳಲ್ಲಿ ಅಣ್ಣನವರ ಆತ್ಮ ನೀರಿಕ್ಷಣೆಯನ್ನು ಕಾಣುತ್ತೆವೆ. ಕಾಯ ವಿಕಾರ ಮನೋವಿಕಾರದಿಂದಾಗಿ ಮಾಯೆ ಆವರಿಸಿ ನಮಗರಿಯದಂತೆ ಎಷ್ಟೋ ತಪ್ಪುಗಳು ಆಗುತ್ತವೆ. ಆ ತಪ್ಪುಗಳ ಅರಿವು ನಮಗುಂಟಾದಾಗ ಅಂತರಂಗದ ಅರಿವು ನಿಚ್ಚಳವಾಗುತ್ತ ಸಾಗುತ್ತದೆ. ಆಗ ಮಾನವೀಯತೆಯ ಸಾಕಾರ ಸ್ವರೂಪರಾಗುತ್ತೆವೆ. ಸಮಾಜಕ್ಕೆ ಪೂರಕರಾಗುತ್ತೆವೆ.
ತನುವ ತೋಂಟವ ಮಾಡಿ
ಮನವ ಗುದ್ದಲಿ ಮಾಡಿ
ಅಗೆದು ಕಳೆದೆನಯ್ಯಾ ಭ್ರಾಂತಿನ ಬೇರ
ಒಡೆದು ಸಂಸಾರದ ಹೆಂಟೆಯ ಬಗಿದು
ಬಿತ್ತಿದೆನಯ್ಯಾ ಬ್ರಹ್ಮಬೀಜವ.
ಅಖಂಡಮಂಡಲವೆಂಬ ಬಾವಿಪವನವೆ ರಾಟಾಳ
ಸುಷುಮ್ನನಾಳದಿಂದ ಉದಕವ ತಿದ್ದಿ
ಬಸವಗಳೈವರು ಹಸಗೆಡಿಸಿಹವೆಂದು
ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ
ಆವಾಗಳೂ ಈ ತೋಂಟದಲ್ಲಿ ಜಾಗರವಿದ್ದು
ಸಸಿಯ ಸಲಹಿದೆನು ಕಾಣಾ ಗುಹೇಶ್ವರಾ.
ಅಲ್ಲಮ ಪ್ರಭುಗಳು ಈ ಒಂದು ವಚನ ಪ್ರತಿ ಹೆಜ್ಜೆ ಹೆಜ್ಜೆಯಲ್ಲಿಯೂ ನಮ್ಮನ್ನು ಎಚ್ಚರಿಸುವ, ಆತ್ಮವನ್ನು ಶುದ್ಧೀಕರಿಸುವ ಸ್ಪಟಿಕದಂತೆ ಎದ್ದುಕಾಣುತ್ತದೆ.
ತನುವೆಂಬ ತೋಟವನ್ನು ಸದಾ ಜಾಗರವಿದ್ದು ಸಲುಹಬೇಕು ಎಂದಿದ್ದಾರೆ. ಬಿತ್ತಿದ ಬ್ರಹ್ಮ ಬೀಜ ವ್ಯರ್ಥವಾಗದಂತೆ ಪಂಚ ವಿಕಾರಗಳನ್ನು ಜಯಿಸುವ ಪರಿಯನ್ನು ವಿವರಿಸಿದ್ದಾರೆ. ಅಂದರೆ ಕಠಿಣ ಪರಿಶ್ರಮವಿರದೆ ಸಾಧನೆಯಾಗಲಾರದು, ಸಿದ್ಧಿಯ ಶಿಖರವೇರಲು ಒಂದು ಹೆಜ್ಜೆಯು ತಪ್ಪಾಗದಂತೆ ಅರಿವಿನಿಂದ ಇರಿಸಬೇಕಾಗಿದೆ. ಸಮಾಜವನ್ನು ಸರಿದರಿಯಲ್ಲಿ ನಡೆಸಬೇಕಾಗಿದೆ.
“ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿ
ಲಿಂಗವಾದರೂ ಕಾಯಕದಿಂದಲೇ ಶಿಲೆಯ ಕುಲ ಹರಿವುದು
ಜಂಗಮವಾದರೂ ಕಾಯಕದಿಂದಲೇ ವೇಷ ಪಾಶ ಹರಿವುದು
ಇದು ಚೆನ್ನಬಸವಣ್ಣಪ್ರಿಯ ಚಂದೇಶ್ವರ ಲಿಂಗದ ಅರಿವು”
ಹುಟ್ಟಿದ ಪ್ರತಿ ಜೀವಿಗೂ ಅನ್ನ ಆಶ್ರಯಗಳ ಅವಶ್ಯಕತೆಯಿದೆ. ಆ ಅವಶ್ಯಕತೆಗಳನ್ನು ತಾನೇ ಪೂರೈಸಿಕೊಳ್ಳಬೇಕು. ಆದರೆ ಮಾನವನಿಗೆ ಅನ್ನ ಆಶ್ರಯಗಳ
ಜೊತೆಗೆ ಹಲವಾರು ಬೇಡಿಕೆಗಳಿರುತ್ತವೆ ಅವುಗಳನ್ನು ಪೂರೈಸಿಕೊಳ್ಳಲು ಅವನು ಶ್ರಮಿಸಲೇ ಬೇಕು. ಅದಕ್ಕೆ ಬಸವಾದಿ ಶರಣರು ಸತ್ಯ ಶುದ್ಧ ಕಾಯಕದ
ಪರಿಕಲ್ಪನೆಯನ್ನು ಕೊಟ್ಟು ಆರ್ಥಿಕ ಸ್ವಾತಂತ್ರತೆಯ ಮಹತ್ವವನ್ನು ತಿಳಿಸಿದರು. ಇದು ಅವರ ಅಸ್ತಿತ್ವವನ್ನು ಅರಿಯಲು ಸಹಾಯವಾಯಿತು.
“ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ
ಸತ್ಯಶುದ್ಧವಿಲ್ಲದುದು ಕಾಯಕವಲ್ಲ
ಆಸೆಯೆಂಬುದು ಭವದ ಬೀಜ
ನಿರಾಸೆಯೆಂಬುದು ನಿತ್ಯಮುಕ್ತಿ
ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ ಕಾಣವ್ವಾ.”
ತಮ್ಮದೇ ಆದ ಕಾಯಕವಿಲ್ಲದವರು ಭಕ್ತರಲ್ಲ ಎಂದಿದ್ದಾರೆ ಶರಣರು, ಸತ್ಯ ಶುದ್ಧ ಕಾಯಕದ ಜೊತೆಗೆ ಆಸೆಯೆಂಬ ಭವದ ಬೀಜವನ್ನು ಬಿತ್ತದೆ ನಿತ್ಯ ಮುಕ್ತಿಯ ಕಡೆಗೆ ಸಾಗುವ ವಿಧಾನವನ್ನು ವಿವರಿಸಿದ್ದಾರೆ. ಬದುಕು ಸಾರ್ಥಕವಾಗುವದು ನಿತ್ಯ ಮುಕ್ತಿಯಿಂದ. ಆಸೆಯಿಂದ ದುರಾಸೆ ಹುಟ್ಟಿ ಅದರಿಂದ ಎಷ್ಟೊ ಅಪರಾಧಗಳು ಆಗುತ್ತವೆ. ಇವುಗಳನ್ನು ತಡೆಗಟ್ಟುವ ಉತ್ತಮ ಮಾರ್ಗ ಆಸೆಗಳಿಗೆ ಕಡಿವಾಣ ಹಾಕುವದು.
ಇಂದಿನ ಸಮಾಜಕ್ಕೆ ಬಸವಾದಿ ಶರಣರ ವಚನಗಳು ದಿವ್ಯ ಔಷಧಿಯ ರೂಪದಲ್ಲಿ, ಸಾತ್ವಿಕ ಮಾರ್ಗವನ್ನು ತೋರುವ ಸಂಜೀವಿನೆಯಾಗಿವೆ. ಸಧೃಢ ಸಂಪದ್ಭರಿತ ಸತ್ಯ ಸಮಾಜ ನಿರ್ಮಾಣಕ್ಕೆ ವಚನಗಳೇ ರಹದಾರಿಯಾಗಿವೆ. ಬಸವ ತತ್ವ ಬದುಕನ್ನು ಸರಳೀಕರಣಗೊಳಿಸಿ ಸಮಾಜಕ್ಕೆ ಪೂರಕವಾಧ ಬದುಕನ್ನು ನೀಡುತ್ತವೆ. ಆದ್ದರಿಂದ ಬಸವತತ್ವದ ಗಟ್ಟಿ ಬೇರು ನಾವಾಗೋಣ. ಬಸವ ತತ್ವದ ಹೆಮ್ಮರವನ್ನು ಬೆಳೆಸೋಣ.
ಮುಂದಿನ ಸಮಾಜಕ್ಕೆ ನೆಮ್ಮದಿಯ ನೆರಳಾಗಿ ತಂಪಾದ ತಂಗಾಳಿಯಾಗೋಣ. ಸಿಹಿ ಫಲವನ್ನು ನೀಡೋಣ. ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ
ಆಚರಿಸಿ ಬಸವತತ್ವದ ಕಂಪ ಬೀರೋಣ. ಶರಣು ಶರಣಾರ್ಥಿಗಳು.
–ಸವಿತಾ ಮಾಟೂರು ಇಲ್ಲಕಲ್ಲ