ಕ್ರಾಂತಿಕಾರಕ ಪುರುಷ ಬಸವಣ್ಣ
ಬಸವಣ್ಣನವರು 12ನೆಯ ಶತಮಾನದಲ್ಲಿದ್ದ ಶಿವಶರಣ, ಪ್ರಸಿದ್ದ ವಚನಕಾರ, ಸಮಾಜ ಸುಧಾರಕ, ಅಂದು ಕರ್ನಾಟಕದಲ್ಲಿ ನಡೆದ ಧಾರ್ಮಿಕ-ಸಾಮಾಜಿಕ ಮಹಾಕ್ರಾಂತಿಯೊಂದರ ನೇತಾರ.
ಬಸವಣ್ಣನವರಿಗೆ ಸಂಬಂಧಿಸಿದಂತೆ ಹಿರಿಯೂರು ಶಾಸನ ಅರ್ಜುನವಾಡ ಶಾಸನ (1260) ಚೌಡದಾನಪುರ ಶಾಸನ, ಕಲ್ಲೇದೇವರಪುರಶಾಸನ, ಮರಡಿಪುರ ಶಾಸನ, ಹೊಯ್ಸಳ ಸೋಮೇಶ್ವರನ ಕಣ್ಣಾನೂರು ಶಾಸನ ಇವುಗಳಲ್ಲಿ ಮಾಹಿತಿಗಳು ದೊರಕುತ್ತವೆ. ಅರ್ಜುನವಾಡ ಶಾಸನದಲ್ಲಿ ಬಸವಣ್ಣನವರ ವಂಶ ಚಿತ್ರವೂ ದೊರೆಯುತ್ತದೆ.
ಆದರೆ ಈ ಶಾಸನಗಳೆಲ್ಲ ಬಸವಣ್ಣನವರ ಕಾಲಕ್ಕಿಂತ ಸುಮಾರು ಒಂದು ಶತಮಾನದಷ್ಟು ಈಚಿನವು. ಬಸವಣ್ಣನವರನ್ನು ಕುರಿತಂತೆ ಕನ್ನಡದಲ್ಲಿ ಬಸವರಾಜದೇವರ ರಗಳೆ, ಅಮಲ ಬಸವಚಾರಿತ್ರ, ಬಸವಪುರಾಣ, ವೃಷಭೇಂದ್ರವಿಜಯ ಮುಂತಾದ ಅನೇಕ ಕಾವ್ಯಗಳು ರಚಿತವಾಗಿವೆ. ತೆಲುಗಿನಲ್ಲಿ ಸಹ ಒಂದು ಬಸವಪುರಾಣವಿದೆ. ಆದರೆ ಇವುಗಳಲ್ಲಿ ಬಸವಣ್ಣನವರ ಸಮಗ್ರ ಚಿತ್ರ ಮೂಡಿಬಂದಿಲ್ಲ; ಪವಾಡಗಳಲ್ಲಿ ಅದನ್ನು ಹುಗಿಸಿಬಿಟ್ಟಿವೆ. ಆದರೆ ಇವರ ವಚನಗಳಲ್ಲಿ ಇವರ ವ್ಯಕ್ತಿತ್ವದ ಜೀವಂತ ಚಿತ್ರ ಮೂಡಿನಿಂತಿದೆ. ಆ ಹಿನ್ನೆಲೆಯಲ್ಲಿ ಪುರಾಣಗಳಲ್ಲಿ ಸೂಚಿತವಾಗಿರುವ ಚಾರಿತ್ರಿಕ ಅಂಶಗಳನ್ನು ಜಾಲಾಡಿ, ಅದರಿಂದ ಇವರ ಜೀವನದ ಕಥಾಚಿತ್ರವನ್ನು ಸಾಧನೆಗಳನ್ನೂ ಸ್ಥೂಲವಾಗಿ ಕಂಡುಕೊಳ್ಳಬಹುದು.
ಬಿಜಾಪುರ ಜಿಲ್ಲೆಯ ಬಾಗೇವಾಡಿ ಬಸವಣ್ಣನವರ ಜನ್ಮ ಸ್ಥಳ. ಹಿಂದೆ ಇದು ಪ್ರಸಿದ್ಧ ಅಗ್ರಹಾರವಾಗಿತ್ತು. ಆ ಅಗ್ರಹಾರದ ಅಧಿಪತಿ ಅಂಪತಿ. ಮಾದಿರಾಜ, ಅವನ ಪತ್ನಿ ಮಾದಲಾಂಬೆ- ಇವರು ಬಸವಣ್ಣನವರ ತಂದೆ -ತಾಯಿಗಳು ಬಸವಣ್ಣನವರಿಗೆ ದೇವರಾಜ ಎಂಬ ಅಣ್ಣ ನಾಗಮ್ಮ ಎಂಬ ಅಕ್ಕ ಇದ್ದರು. ಶಿವ ತತ್ತ್ವ ಚಿಂತಾಮಣಿ ಮತ್ತು ಕಾಲಜ್ಞಾನದ ನೀಡುವ ಮಾಹಿತಿಗಳು ಒಂದೇ ಆಗಿದ್ದು 1134ರಲ್ಲಿ ಬಸವಣ್ಣನವರು ೨೨ರಬೇಕೆಂದು ವಿದ್ವಾಂಸರ ಅಭಿಪ್ರಾಯ.
ಬಸವಣ್ಣನವರ ಬಾಲ್ಯಜೀವನ ಕೂತೂಹಲಕಾರಿಯಾದುದು .ಎಂಟು ವರ್ಷದ ಬಾಲಕರಾಗಿದ್ದಾಗಲೇ ಇವರಲ್ಲಿ ಸಾಮಾಜಿಕ, ಧಾರ್ಮಿಕ ವಿಚಾರಗಳನ್ನು ಒರೆಗೆ ಹಚ್ಚುವ ಪ್ರೌಢ ವಿಚಾರಸರಣಿ ಗೋಚರವಾಯಿತು. ಬಸವಣ್ಣನವರು ಆ ವಯಸ್ಸಿನಲ್ಲಿ ನಡೆಯಬೇಕಾಗಿದ್ದ ಉವನಯನವನ್ನು ಒಪ್ಪದೆ, ಅದನ್ನು ತಿರಸ್ಕರಿಸಿ ನಡೆದರೆಂದು ಕೆಲವು ಪುರಾಣಕರ್ತೃಗಳು ಹೇಳಿದರೆ, ಮೊದಲು ಉಪನಯನವಾಯಿತೆ೦ದು ಮುಂದೆ ಕೆಲವು ಕಾಲದ ಅನಂತರ ಯಜ್ಞೋಪವೀತವನ್ನು ಕಿತ್ತು ಹಾಕಿದರೆಂದೂ ಹರಿವರ ಹೇಳುತ್ತಾನೆ. ಅದೇನೇ ಇರಲಿ ವೈದಿಕ ಧರ್ಮದ ಚತುರ್ವರ್ಣಗಳ ವಿಭಜನೆಯನ್ನೂ ಅದರಿಂದ ಸಮಾಜದಲ್ಲಿ ಉಂಟಾದ ಮೇಲು ಕೀಳುಗಳನ್ನೂ ಇವರು ಒಪ್ಪಿಕೊಳ್ಳಲಾರದೇ ಹೋದರೆ೦ಬುದು ಸತ್ಯ ಸಂಗತಿಯಾಗಿದೆ. ಈ ಘಟನೆ ನಡೆದ ಅನಂತರ ಬಸವಣ್ಣನವರು ಹುಟ್ಟಿದೂರನ್ನು ಬಿಟ್ಟು ಸಂಗಮ ಕ್ಷೇತ್ರಕ್ಕೆ ಹೋದರು. ಈ ಸಂದರ್ಭದಲ್ಲಿ ಇವರ ಅಕ್ಕ ನಾಗಮ್ಮನೂ ಬಸವಣ್ಣನವರನ್ನು ಹಿಂಬಾಲಿಸಿದರು. ಈ ವೇಳೆಗೆ ಆಕೆಗೆ ಮದುವೆಯಾಗಿದ್ದು, ಅವರ ಪತಿ ಶಿವಸ್ವಾಮಿ ಬಹುಶಃ ಸಂಗಮದವನೇ ಆಗಿದ್ದಂತೆ ತೋರುತ್ತದೆ.
ಆ ಕಾಲದಲ್ಲಿ ಸಂಗಮ ಕ್ಷೇತ್ರ ಪ್ರಸಿದ್ಧವಾಗಿತ್ತು. ಅದರ ಸ್ನಾನ ಪತಿಗಳಾದ ಜಾತವೇದದನಿ ಅಥವಾ ಈಶಾನ್ಯ ಗುರುಗಳು ಸಂಗಮೇಶ್ವರ ಸ್ವಾಮಿಗಳೆಂದು ಪ್ರಸಿದ್ಧರಾಗಿದ್ದರು. ಅವರು ಬಸವಣ್ಣನವರ ವಿದ್ಯಾಭ್ಯಾಸಕ್ಕೆ ಅನುಕೂಲಗಳನ್ನು ಕಲ್ಪಿಸಿಕೊಟ್ಟರು. ಬಸವಣ್ಣನವರು ಇಲ್ಲಿ ಸುಮಾರು ಹತ್ತು ಹನ್ನೆರಡು ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಿರಬೇಕು ಕೃಷ್ಣಾ ಮಲಪ್ರಭಾ ನದಿಗಳ ಸಂಗಮದ ಆ ಸುಂದರ ಪರಿಸರದಲ್ಲಿ ಇವರ ಹೃದಯದ ಭಾವನೆಗಳಿಗೆ ಅನುಭವದ ಶ್ರೀಮಂತಿಕೆ ದೊರೆಯಿತು. ಸಂಗಮೇಶ್ವರ ಗುರುಗಳು ಇವರ ವೈಚಾರಿಕ ಬೆಳವಣಿಗೆಗೆ ನೀರು ಗೊಬ್ಬರ ಹಾಕಿ ಅದು ತಿರುಗಬೇಕಾದ ದಿಕ್ಕನ್ನು ನಿರ್ದೇಶಿಸಿದರು. ಮಂಗಳವಾಡದಲ್ಲಿ ಕಳಚುರಿ ಬಿಜ್ಜಳನ ಬಳಿಯಲ್ಲಿ ಭಂಡಾರಿಯಾಗಿದ್ದ ಇವರ ಸೋದರಮಾವ ಬಲದೇವ ತನ್ನ ಒಬ್ಬಳೇ ಮಗಳು ಗಂಗಾಂಬಿಕೆಯನ್ನು ಬಸವಣ್ಣನವರಿಗೆ ಮದುವೆ ಮಾಡಿಕೊಡಲು ಪ್ರಯತ್ನಿಸಿದುದು ಬಹುಶಃ ಗುರುಗಳೇ ಇವರನ್ನು ಮದುವೆಗೆ ಒಪ್ಪಿಸಿ ಸಂಗಮದಿಂದ ಮಂಗಳವಾಡಕ್ಕೆ ಕಳಿಸಲು ಕಾರಣರಾಗಿರಬೇಕು. ಬಸವಣ್ಣನವರ ಜೊತೆ ಶಿವಸ್ವಾಮಿ ನಾಗಮ್ಮರೂ ಹೊರಟು ಬಂದಂತೆ ತೋರುತ್ತದೆ. ಆ ವೇಳೆಗಾಗಲೇ ಅವರಿಗೆ ಚೆನ್ನಬಸವಣ್ಣನೆಂಬ ಮಗ ಹುಟ್ಟಿದ್ದು, ಆತ ಹತ್ತು ವರ್ಷದ ಬಾಲಕನಾಗಿದ್ದು ಆತನೂ ತನ್ನ ತಂದೆ ತಾಯಿಗಳ ಜೊತೆಗೆ ಬಸವಣ್ಣನವರನ್ನು ಹಿಂಬಾಲಿಸಿದಂತೆ ತೋರುತ್ತದೆ.
ಬಸವಣ್ಣನವರು ಮಂಗಳವಾಡಕ್ಕೆ ಬಂದಮೇಲೆ, ಗಂಗಾಂಬಿಕೆಯ ಜೊತೆಗೆ ನೀಲಾಂಬಿಕೆಯನ್ನೂ ಮದುವೆಯಾದರು. ಅಲ್ಲದೆ ನೀಲಾಂಬಿಕೆ ಬಹುಶಃ ಸಿದ್ಧರಸನ ಮಗಳಾಗಿದ್ದು ಚಿಕ್ಕಂದಿನಲ್ಲಿಯೇ ತಂದೆತಾಯಿಗಳನ್ನು ಕಳೆದುಕೊಂಡು ಬಿಜ್ಜಳನ ಆಶ್ರಯದಲ್ಲಿ ಬೆಳೆದು ಆತನ ಸಾಕುತಂಗಿಯಾಗಿದ್ದಿರಬೇಕೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಗಂಗಾಂಬಿಕೆ ನೀಲಾಂಬಿಕೆಯರು ಅಗಲಲಾರದ ಆತ್ಮೀಯ ಗೆಳತಿಯರಾಗಿ ಬೆಳೆದಿದ್ದಿರಬೇಕು. ಬಸವಣ್ಣನವರು ಬಹುಶಃ ಆ ಕಾರಣಕ್ಕಾಗಿಯೇ ನೀಲಾಂಬಿಕೆಯನ್ನು ಮದುವೆಯಾಗಬೇಕಾಗಿ ಬಂದಿರಬೇಕು; ಆದರೆ ಸ್ಪಷ್ಟ ಕಾರಣ ತಿಳಿಯದು.
ಬಿಜ್ಜಳನ ಭಂಡಾರದಲ್ಲಿ ಬಸವಣ್ಣನವರಿಗೆ ಒಂದು ಕೆಲಸವೂ ದೊರೆಯಿತು. ದುಡಿಯದೆ ತಿನ್ನುವ ಹಕ್ಕಿಲ್ಲವೆಂಬುದನ್ನು ನಿಶ್ಚಿತವಾಗಿ ನಂಬಿದ್ದ ಇವರು ರಾಜಾಸ್ಥಾನದಲ್ಲಿ ಕೆಲಸವನ್ನು ಒಪ್ಪಿಕೊಳ್ಳಲು ಹಿಂದೆ ಮುಂದೆ ನೋಡಲಿಲ್ಲ. ಮುಂದೆ ಸ್ವಲ್ಪ ಕಾಲದಲ್ಲಿಯೇ ಬಲದೇವ ದೈವಾಧೀನನಾಗಲು ಆತನ ಸ್ಥಾನಕ್ಕೆ ಬಸವಣ್ಣನವರನ್ನೇ ರಾಜ್ಯದ ಭಂಡಾರಿಯನ್ನಾಗಿ ಬಿಜ್ಜಳ ನೇಮಿಸಿದ.
ಹೀಗೆ ರಾಜ್ಯದ ಭಂಡಾರಿಯಾದುದರ ಜೊತೆಗೆ ಇವರ ಅಂತರಂಗದ ಸಾಧನೆಯೂ ಬೆಳೆಯುತ್ತಾ ಭಕ್ತಿಭಂಡಾರಿಯೂ ಆಗಿ ಪರಿಣಮಿಸಿದರು ಮತ್ತು ತಮ್ಮ ಆಧ್ಯಾತ್ಮಿಕ ದೃಷ್ಟಿಯ ಕ್ರಾಂತಿಕಾರಕ ಭಾವನೆಗಳನ್ನು ಸಮಾಜದ ಮೇಲೂ ಬೀರತೊಡಗಿದರು. ವ್ಯಕ್ತಿಯ ಯೋಗ್ಯತೆಯನ್ನು ಹುಟ್ಟಿನಿಂದಲೇ ಅಳೆಯುವುದನ್ನು ತೊಡೆದು ಹಾಕಿ ಗುಣದಿಂದ ಯೋಗ್ಯತೆಯನ್ನು ನಿರ್ಧರಿಸಬೇಕೆಂದು ಸಾರಿದರು.
ಈ ವೇಳೆಗೆ, ಬಹುಶಃ ಬಸವಣ್ಣನವರು ಮಂಗಳವಾಡಕ್ಕೆ ಬಂದ ಒಂದೆರಡು ವರ್ಷಗಳಲ್ಲಿಯೇ, ಅಂದಿನ ರಾಜಕೀಯ ಬದಲಾವಣೆ ತಲೆದೋರಿತು. ಮೂರನೆಯ ಸೋಮೇಶ್ವರನ ಕಾಲಾನಂತರ ಚಾಳುಕ್ಯರು ದುರ್ಬಲರಾದರು. ಅವರ ಸಾಮಂತನಾಗಿದ್ದ ಬಿಜ್ಜಳ ಚಾಳುಕ್ಯ ಚಕ್ರವರ್ತಿ ತೈಲಪನನ್ನು ತಳ್ಳಿ ತಾನೇ ಸಿಂಹಾಸನವನ್ನೇರಿದ. ಅನಂತರ ಆತ ಮಂಗಳವಾಡದಿಂದ ಕಲ್ಯಾಣಕ್ಕೆ ಬರಬೇಕಾಯಿತು. ತನ್ನ ವಿಶ್ವಾಸದಿಂದ ಬಂಧಿಸಿ ಬಸವಣ್ಣನವರನ್ನೂ ಕಲ್ಯಾಣಕ್ಕೆ ಬರುವಂತೆ ಮಾಡಿ ಇಡೀ ರಾಜ್ಯದ ಮಹಾಭಂಡಾರಿಯನ್ನಾಗಿ ಇವರನ್ನು ನೇಮಿಸಿದ. ಇದರಿಂದ ಬಸವಣ್ಣನವರ ಅಧಿಕಾರ ಕ್ಷೇತ್ರ ಹಾಗೂ ಧಾರ್ಮಿಕ ಕ್ಷೇತ್ರ ವ್ಯಾಪಕವಾಯಿತು.
ಕಲ್ಯಾಣ ಬಸವಣ್ಣನವರ ಕಾರ್ಯಕ್ಷೇತ್ರವಾಗಿತ್ತು. ಈ ಅವಧಿಯಲ್ಲಿ ಇವರು ಸಾಧಿಸಿದ ಸಾಧನೆಯ ಪರಿಣಾಮ, ಜನಜೀವನದ ಮೇಲೆ ಬೀರಿದ ಪ್ರಭಾವ ಅದ್ವಿತೀಯವಾದುದು. ಬಹುಶಃ ಹಿಂದಾವ ಧಾರ್ಮಿಕ ಪುರುಷರೂ ಪ್ರವಾದಿಗಳೂ ಈ ಮಾರ್ಗದಲ್ಲಿ ಇಂಥ ಸಾಧನೆಯನ್ನುಂಟು ಮಾಡಿರಲಿಲ್ಲ. ಬಸವಣ್ಣನವರು ಇಡೀ ಯುಗವನ್ನು ಎಚ್ಚರಿಸಿದ ಯುಗಪ್ರವರ್ತಕ ಶಕ್ತಿಯಾಗಿ ಪರಿಣಮಿಸಿದರು. ಧರ್ಮ ಸಾರ್ವತ್ರಿಕ ಶಕ್ತಿಯಾಗಿ ಸಮಷ್ಟಿ ಮನಸ್ಸನ್ನು ಮುಟ್ಟಿತು. ಆ ಯುಗದ ಮಹಾವ್ಯಕ್ತಿಗಳೆಲ್ಲರನ್ನೂ ಬಸವಣ್ಣನವರ ವ್ಯಕ್ತಿತ್ವ ಕಲ್ಯಾಣದತ್ತ ಆಕರ್ಷಿಸಿತು; ಚುಂಬಕ ಗಾಳಿಯಂತೆ ಅಸಂಖ್ಯಾತ ಸಾಧಕರನ್ನೂ ಶರಣರನ್ನೂ ಸೆಳೆಯಿತು. ಅವರೆಲ್ಲರನ್ನೂ ಅನುಭವ ಮಂಟಪದಲ್ಲಿ ಸಮಾವೇಶಗೊಳಿಸಿ ಅವರ ವಿಚಾರಮಂಥನದಿಂದ ಬಸವಣ್ಣನವರು ಧರ್ಮದ ನವನೀತವನ್ನು ತೆಗೆದರು. ಅಲ್ಲಮ ಪ್ರಭುವಿನಂಥ ಮಹಾಮೇರು ಸದೃಶ ವ್ಯಕ್ತಿಗಳೂ ಬಸವಣ್ಣನವರ ವ್ಯಕ್ತಿತ್ವಕ್ಕೆ ಮಾರುಹೋಗಿ ಕಲ್ಯಾಣದಲ್ಲಿ ಕೆಲವು ಕಾಲ ಅನುಭವ ಮಂಟಪವನ್ನು ನಿರ್ದೇಶಿಸಿದರು.
ಹೀಗಿರುವಲ್ಲಿ ಬಸವಣ್ಣನವರ ಕ್ರಾಂತಿಕಾರಕ ಭಾವನೆಗಳು ವೈದಿಕ ಪರಂಪರೆಯನ್ನು ಕೆರಳಿಸಿದುವು. ಇವರನ್ನು ಪದಚ್ಯುತಗೊಳಿಸಲು ಆಗದವರು ಹವಣಿಸಿದರು. ಬಸವಣ್ಣನವರು ರಾಜ್ಯ ಭಂಡಾರದ ಹಣವನ್ನು ದುರ್ವಿನಿಯೋಗ ಮಾಡಿ ದಾಸೋಹ ನಡೆಸುತ್ತಿರುವರೆಂದು ಬಿಜ್ಜಳನ ಬಳಿಯಲ್ಲಿ ದೂರಿದರು. ಇನ್ನೂ ಇತರ ಅನೇಕ ಆರೋಪಗಳನ್ನು ಇವರ ಮೇಲೆ ಹೇರಿದರು; ಅವೆಲ್ಲಾ ವ್ಯರ್ಥವಾದುವು. ಆದರೆ *ಸಮಗಾರ ಹರಳಯ್ಯನ ಮಗನಿಗೂ ಬ್ರಾಹ್ಮಣರ ಮಧುವರಸ (ಮಧುವಯ್ಯ)ನ ಮಗಳಿಗೂ* ವಿವಾಹವನ್ನು ಮಾಡಿದಾಗ ಅದನ್ನು ಅಂದಿನ ಸಮಾಜ ಅರಗಿಸಿಕೊಳ್ಳಲಾರದೆ ಹೋಯಿತು. ವರ್ಣಸಂಕರವಾಯಿತೆಂದು ಹುಯಿಲೆಬ್ಬಿಸಿದರು. ಇದರೊಡನೆ ರಾಜಕೀಯ ಪಿತೂರಿಯೂ ಸೇರಿ ಹರಳಯ್ಯ ಮಧುವರಸರಿಗೆ ಬಿಜ್ಜಳ ಮರಣದಂಡನೆ ವಿಧಿಸುವಂತಾಯಿತು. ಆದಾದ ಸ್ವಲ್ಪ ಕಾಲದಲ್ಲೇ ಬಿಜ್ಜಳನ ಕೊಲೆಯೂ ಆಯಿತು. ಆ ಅಪರಾಧವನ್ನು ಶರಣರ ತಲೆಯ ಮೇಲೆ ಹಾಕುವ ಕುಟಿಲ ರಾಜಕೀಯವೂ ನಡೆಯಿತು. ಇದರಿಂದಾಗಿ ಕಲ್ಯಾಣದಲ್ಲಿ ಬಸವಣ್ಣವನರ ಕಾರ್ಯಚಟುವಟಿಕೆ ಧ್ವಂಸಗೊಂಡಿತು. ರಾಜಾಜ್ಞೆಯಂತೆ ಕಲ್ಯಾಣವನ್ನು ಬಿಟ್ಟು ಕೂಡಲ ಸಂಗಮ ಕ್ಷೇತ್ರಕ್ಕೆ ಹೋಗಿದ್ದ ಬಸವಣ್ಣನವರು ಅಲ್ಲೇ ಐಕ್ಯರಾದರು. ಈ ಘಟನೆ 1196ರಲ್ಲಿ ಸಂಭವಿಸಿರಬೇಕೆಂದು ಇತಿಹಾಸ ತಜ್ಞರು, ವಿದ್ವಾಂಸರು ನಿರ್ಧರಿಸಿದ್ದಾರೆ.
ಇದು ಒಂದು ರೀತಿಯಲ್ಲಿ ಬಸವಣ್ಣನವರ ಜೀವನ ಕಥೆಯ ರೂಪರೇಷೆ. ಲೌಕಿಕದ ಅಧಿಕಾರದಲ್ಲಿದ್ದೂ ಆಂತರಿಕವಾಗಿ ಮಹಾನುಭಾವಿಯಾದುದು ಇವರ ಅಂತರಂಗದ ಕಥೆ. ಇವರ ವಚನಗಳಲ್ಲಿ ಅದರ ಉಜ್ವಲವಾದ ಚಿತ್ರಣ ಮೂಡಿ ಬಂದಿದೆ. ತ್ರಿವಿಧ ದಾಸೋಹದಿಂದ ಷಟ್‌ಸ್ಥಲದ ನಿಚ್ಚಣಿಕೆಯನ್ನೇರಿ ಲಿಂಗಾಂಗ ಸಾಮರಸ್ಯದ ನಿಲುವಿಗೇರಿದುದನ್ನು ಅಲ್ಲಿ ಕಾಣಬಹುದು. ಅಂತೆಯೇ ಸಾಮಾಜಿಕ ಮತ್ತು ಧಾರ್ಮಿಕವಾದ ಇವರ ವಿಚಾರಧಾರೆಗಳು ಕಾಲದೇಶಗಳ ಹಂಗನ್ನು ಹರಿದು ಎಲ್ಲ ದೇಶಕಾಲಗಳಿಗೂ ಮಾನ್ಯವಾಗಿ ನಿಲ್ಲಬಲ್ಲ ಸಾರ್ವತ್ರಿಕತೆಯನ್ನು ಜೀವಂತಿಕೆಯನ್ನೂ ಪಡೆದಿವೆ.
ಬಸವಣ್ಣನವರು ಕವಿಹೃದಯವುಳ್ಳ ವಚನಕಾರರು. ಇವರ ವಚನಗಳಲ್ಲಿ ಭಾವಗೀತೆಯ ತೀವ್ರತೆ ಹಾಗೂ ಮಧುರತೆಗಳು ಕಂಡುಬರುತ್ತವೆ. ಇದುವರೆಗೆ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಇವರ ವಚನಗಳು ದೊರೆತಿವೆ. ‘ಕೂಡಲ ಸಂಗಮದೇವ’ ಎಂಬುದು ಇವರ ವಚನಗಳ ಅಂಕಿತ. ಈ ವಚನಗಳು ಬಸವಣ್ಣನವರ ಸಾಮಾಜಿಕ ಹಾಗೂ ಧಾರ್ಮಿಕ ಜೀವನದ ಬಹುಮುಖ ಅನುಭವಗಳ ಮೇಲೆ ಬೆಳಕು ಚೆಲ್ಲುತ್ತವೆಯಲ್ಲದೆ ಇವರ ಜೀವನದೃಷ್ಟಿಯನ್ನೂ ಪ್ರತಿಪಾದಿಸುತ್ತವೆ.
ಬಸವಣ್ಣನವರ ಮೂಲ ಉದ್ದೇಶ ಸಾಹಿತ್ಯ ರಚನೆಯಲ್ಲದಿದ್ದರೂ ಇವರ ವಚನಗಳು ಉತ್ತಮ ಕಾವ್ಯದ ಎಲ್ಲ ಅಂಶಗಳನ್ನೂ ಒಳಗೊಂಡಿವೆ. ತಾನು ಹೇಳಬೇಕೆಂದು ಯೋಚಿಸಿದ ವಿಷಯವನ್ನು ಸರಳಭಾಷೆಯಲ್ಲಿ ನೇರವಾಗಿ, ಸಮಯೋಚಿತ ದೃಷ್ಟಾಂತ ಹೋಲಿಕೆಗಳೊಂದಿಗೆ ಮನಮುಟ್ಟುವಂತೆ ಹೇಳುವುದು ಇವರ ವಚನಗಳ ವೈಶಿಷ್ಟ್ಯ. ಇವರ ಯಾವ ವಚನದಲ್ಲೂ ಭಾಷೆಯ ಆಡಂಬರ ಅಬ್ಬರವಾಗಲೀ ಭಾವದ ಕ್ಲಿಷ್ಟ ಹಾಗೂ ಸಂದಿಗ್ಧ ಅಭಿವ್ಯಕ್ತಿಯಾಗಲೀ ಕಂಡು ಬರುವುದಿಲ್ಲ. ನುಡಿದರೆ ಮುತ್ತಿನ ಹಾರದಂತಿರಬೇಕು! ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು! ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು! ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು? ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನೆಂತೊಲಿವನಯ್ಯ? ಎಂಬ ಬಸವಣ್ಣನವರ ಮಾತುಗಳೇ ಅವರ ವಚನಗಳಿಗೆ ಸಂಪೂರ್ಣವಾಗಿ ಅನ್ವಯವಾಗುತ್ತವೆ. ಬಸವಣ್ಣನವರ ವಚನಗಳಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶವೆಂದರೆ ಸಮಸ್ಯೆಯ ಸುಳಿಗೆ ಸಿಕ್ಕ ಸಾಧಕನೊಬ್ಬನ ಮನಸ್ಸಿನ ತೊಳಲಾಟವನ್ನೂ ಒಳತೋಟಿಯನ್ನೂ ಅಂತರಂಗದ ತಳಮಳವನ್ನೂ ಚಂಚಲ ಸ್ವರೂಪವನ್ನೂ ಪರಿಣಾಮಕಾರಿಯಾಗಿ ಚಿತ್ರಿಸಿರುವ ರೀತಿ. ಇವರ ಸ್ವವಿಮರ್ಶೆಯ ವಚನಗಳಲ್ಲಿ ಈ ಅಂಶ ಘನೀಭೂತವಾಗಿದೆ. ಎನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯ; ತುಪ್ಪದ ಸವಿಗೆ ಅಲಗನೆಕ್ಕುವ ಸೊಣಗನಂತೆನ್ನ ಬಾಳುವೆ; ವಿಷಯವೆಂಬ ಹಸುರನಿಗೆ ಮುಂದೆಪಸರಿಸದಿರಯ್ಯಾ, ಓತಿ ಬೇಲಿ ಏರಿದಂತೆ ಎನ್ನ ಮನವಯ್ಯಾ* – ಈ ಮುಂತಾದ ವಚನಗಳು ಶುದ್ಧ ಭಾವಗೀತೆಯ ಸತ್ವವನ್ನು ಒಳಗೊಂಡಿವೆ.
ಇಹಲೋಕದ ಜೀವನವನ್ನು ಸಾಧನೆಯ ಮಾರ್ಗಕ್ಕೆ ಅಳವಡಿಸಿಕೊಳ್ಳುವುದೇ ಬಸವಣ್ಣನವರು ಬೋಧಿಸಿದ ಮುಖ್ಯ ತತ್ತ್ವ. ಅದಕ್ಕೆ ಜಾತಿ, ಮತ, ಉದ್ಯೋಗ, ವಯಸ್ಸು ಯಾವುದೂ ಅಡ್ಡಿಯಾಗಲಾರದು. ಅಂಥ ನೈತಿಕ ಜೀವನವನ್ನೂ ಸಾಮಾಜಿಕ ಸಮತೆಯನ್ನೂ ಸಾಧಿಸುವ ಸಾಹಸ ಇವರದು. ಕೊಲ್ಲುವವನೇ ಮಾದಿಗ, ಹೊಲಸು ತಿಂಬುವನೇ ಹೊಲೆಯ, ಕುಲವೇನೋ ಅವಂದಿರ ಕುಲವೇನೋ, ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ನಮ್ಮ ಕೂಡಲ ಸಂಗನ ಶರಣರೆಲ್ಲಾ ಕುಲಜರು – ಎಂದು ಹೇಳಿದುದು ಮಾತ್ರವಲ್ಲ ಅದನ್ನು ಆಚರಣೆಗೂ ತಂದರು. ಹರಳಯ್ಯ, ಮಧುವಯ್ಯ, ಡೋಹರ ಕಕ್ಕಯ್ಯ, ಶಿವನಾಗಯ್ಯ ಮೊದಲಾದ ಅಸ್ಪೃಶ್ಯರು ಬಸವ ತತ್ತ್ವದ ಆಶ್ರಯವನ್ನು ಪಡೆದು ಶರಣರಾದರು. ಅನುಭಾವಿಗಳಾದರು, ಬಸವಣ್ಣನವರ ಮಹದಾಶೆಯ ಸಾಕಾರಮೂರ್ತಿಗಳಾದರು.
ಬಸವಣ್ಣನವರ ಕಾಯಕದ ಕಲ್ಪನೆ ಸಮಗ್ರ ಜೀವನದರ್ಶವನ್ನು ಒಳಗೊಳ್ಳುತ್ತದೆ. ವ್ಯಕ್ತಿ ಕೈಗೊಂಡ ಉದ್ಯೋಗ ಸಮಾಜದ ಅವಶ್ಯಕತೆಗಳನ್ನು ಪೂರೈಸುವಂತಿರಬೇಕು. ಅದರ ಫಲ ತನಗೆ ಮಾತ್ರವೇ ಅಲ್ಲದೆ ಸಮಾಜಕ್ಕೂ ದೊರೆಯಬೇಕು. ಆಗ ಸ್ವಾರ್ಥ ಅಳಿದು ವಿಶ್ವಶಕ್ತಿ ಅಂತರಂಗದೊಳಗೆ ಇಳಿದುಬರಲು ಸಹಾಯಕವಾಗುತ್ತದೆ. ಈ ಕಾಯಕದಲ್ಲಿ ಮೇಲು ಕೀಳುಗಳಿಲ್ಲ. ಪ್ರತಿಯೊಬ್ಬರೂ ತಮ್ಮ ತಮ್ಮ ಉದ್ಯೋಗಗಳನ್ನು ಮಾಡಲೇಬೇಕು. ಅಲ್ಲದೆ ಈ ಕಾಯಕ ತತ್ತ್ವದ ಇನ್ನೊಂದು ಮುಖ್ಯವಾದ ಅಂಶವೆಂದರೆ ಅಂದಂದಿನ ಕಾಯಕ ಅಂದಂದು ಮಾಡಿ ಶುದ್ಧರಾಗಬೇಕು. ಅಂದರೆ ತನಗೆ ಅಗತ್ಯವಾದುದಕ್ಕಿಂತ ಹೆಚ್ಚಾಗಿ ಶೇಖರಿಸಿಟ್ಟುಕೊಳ್ಳಬಾರದು. ಇದು ಧಾರ್ಮಿಕ ಸಮತೆಗೂ ತಳಹದಿಯಾಗಿ ಸ್ತ್ರೀ ಪುರುಷರೆಂಬ ಭೇದವನ್ನೂ ಅಳಿಸಿಹಾಕಿತು. ಅಕ್ಕಮಹಾದೇವಿ, ಮಹಾದೇವಮ್ಮ ಕಲ್ಯಾಣಮ್ಮ, ಲಕ್ಕಮ್ಮ, ಲಿಂಗಮ್ಮ, ಗಂಗಾಂಬಿಕೆ, ನೀಲಾಂಬಿಕೆ – ಈ ಮೊದಲಾದ ಅನೇಕ ಶರಣೆಯರು ಇದಕ್ಕೆ ಉಜ್ವಲ ಸಾಕ್ಷಿಯಾಗಿದ್ದಾರೆ.
ಬಸವಣ್ಣನವರ ಧಾರ್ಮಿಕ ಆಚರಣೆಯ ಇನ್ನೊಂದು ಮುಖ್ಯವಾದ ಅಂಶವೆಂದರೆ ಅವರವರ ಪೂಜೆಯನ್ನು ಅವರೇ ಮಾಡಬೇಕು; ಅವರ ಉದ್ದಾರವನ್ನು ಅವರೇ ಕಂಡುಕೊಳ್ಳಬೇಕು ಎಂಬುದು. ತನ್ನ ಪರವಾಗಿ ಇನ್ನಾರೋ ಪೂಜೆಯನ್ನು ಮಾಡುವುದು ಧಾರ್ಮಿಕ ಶೋಷಣೆಗೆ ಕಾರಣವಾಗುತ್ತದೆ. ತಾನುಂಬ ಊಟವನು, ತನ್ನಾಶ್ರಯದ ರತಿಸುಖವನು ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೇ? ಎಂಬ ಸಾದೃಶ್ಯದಿಂದ ಬಸವಣ್ಣನವರು ಕಟುವಾಗಿ ಅದನ್ನು ನಿರಾಕರಿಸಿದ್ದಾರೆ. ಹಾಗೆಯೇ ಪ್ರಾಣಿವಧೆಗೆ ಕಾರಣವಾದ ಯಜ್ಞ ಯಾಗಾದಿಗಳನ್ನೂ ಕರ್ಮವಾದವನ್ನೂ ಅಂಧಶ್ರದ್ಧೆಯನ್ನೂ ಖಂಡಿಸಿದ್ದಾರೆ. ಇವರ ಕೆಲವು ವಚನಗಳಲ್ಲಿ ಸಾಮಾಜಿಕ ವಿಡಂಬನೆ ಮೊನಚಾಗಿ ಬಂದಿದೆ. ಶ್ರೀಮಂತಿಕೆಯ ಮದವೇರಿದ ಲೋಲುಪರನ್ನು ಕುರಿತು ಹೇಳಿರುವ ಒಂದು ವಚನ ಹೀಗಿದೆ :
ಹಾವು ತಿಂದವರ ನುಡಿಸಬಹುದು
ಗರಹೊಡೆದವರ ನುಡಿಸಬಹುದು
ಸಿರಿಗರ ಹೊಡೆದವರ ನುಡಿಸಲು ಬಾರದು ನೋಡಯ್ಯಾ ಬಡತನವೆಂಬ ಮಂತ್ರವಾದಿ ಹೋಗಲು
ಒಡನೆ ನುಡಿವರು ಕೂಡಲ ಸಂಗಮದೇವ
ನೂರೆಂಟು ದೇವರುಗಳನ್ನು ಪೂಜಿಸುವ ಅವಿವೇಕಿಗಳನ್ನು ಕುರಿತು ಹೇಳಿರುವ ಒಂದು ವಚನ ಹೀಗಿದೆ :
ಮಡಕೆ ದೈವ ಮೊರ ದೈವ ಬೀದಿಯ ಕಲ್ಲು ದೈವ
ಹಣಿಗೆ ದೈವ ಬಿಲ್ಲನಾರಿ ದೈವ ಕಾಣಿರೋ
ಕೊಳಗ ದೈವ ಗಿಣ್ಣಿಲು ದೈವ ಕಾಣಿರೋ
ದೈವದೈವವೆಂದು ಕಾಲಿಡಲಿಂಬಿಲ್ಲಾ
ದೈವನೊಬ್ಬನೆ ಕೂಡಲ ಸಂಗಮದೇವ
ಒಟ್ಟಿನಲ್ಲಿ ಹೇಳುವುದಾದರೆ ಬಸವಣ್ಣನವರ ವೈಚಾರಿಕ ದೃಷ್ಟಿ ಬೌದ್ಧಿಕ ವಿಕಾಸಕ್ಕೆ, ಧಾರ್ಮಿಕ ಸ್ವಾತಂತ್ರ್ಯಕ್ಕೆ, ಆಧ್ಯಾತ್ಮಿಕ ಪ್ರಗತಿಗೆ ತಳಹದಿಯಾಗಿದೆ. ಕನ್ನಡ ಭಾಷೆ ಒಂದು ಅಪೂರ್ವವಾದ ಶಕ್ತಿಯನ್ನು ಶ್ರೀಮಂತಿಕೆಯನ್ನು ಇವರ ವಚನಗಳಿಂದ ಪಡೆಯಿತು. ಇವರ ಮಾತು ಮಾಣಿಕ್ಯದ ದೀಪ್ತಿಯಾಯಿತು. ನುಡಿದುದೆಲ್ಲಾ ಧರ್ಮವಾಯಿತು. ಇವರ ವ್ಯಕ್ತಿತ್ವ ಕಾಲದೇಶಗಳ ಪರಿಮಿತಿಯನ್ನು ಮೀರಿ ಮಾನವ ಜನಾಂಗ ಬೆಳೆದಂತೆ ತಾನೂ ಬೆಳೆಯುವ ಯುಗಪ್ರವರ್ತಕ ಶಕ್ತಿಯಾಗಿ ಪರಿಣಮಿಸಿದೆ.
ಬಸವಣ್ಣನವರು ಲಿಂಗವನ್ನು ವಾಸ್ತವಿಕ ನೋಡಿ ಎರೆದರೆ ನೆನೆಯದು ಮರೆದರೆ ಬಾಡದು .ಎಂದು ಹೇಳಿ
ಸ್ಥಾವರಕ್ಕಿಂತ ಜಂಗಮಕ್ಕೆ ಮಹತ್ವ ಕೊಟ್ಟು ಜಂಗಮ ವೆಂಬುದು ಒಂದು ಜಾತಿಯ ಜನದ ಒಂದು ಒಳಪಂಗಡವಲ್ಲವೆಂದು ಅರುಹಿ ನಟ್ಟ ಕಲ್ಲಿನ ಲಿಂಗವು ಸ್ಥಾವರವೆನಿಸಿದರೆ ನಡೆದಾಡುವ ಜನವೆಲ್ಲಾ ಜಂಗಮ ವೆಂದೇ ಅವರ ಭಾವನೆ.
ಒಟ್ಟಿನಲ್ಲಿ ಬಸವಣ್ಣನವರ ಮುಖ್ಯ ಕಾಳಜಿ ಸಮಾಜ ಸುಧಾರಣೆ ಆಗಿತ್ತು.ಜಾತಿ -ಕುಲ-ಲಿಂಗಭೇದಗಳಿಂದ ಹೊರತಾದ ಸಮಾಜ ನಿರ್ಮಿತಿ ಅವರ ಪ್ರಮುಖ ಗುರಿಯಾಗಿದ್ದಿತು.
ಜನರ ಅಜ್ಞಾನ , ಕಂದಾಚಾರ ,ಜಾತಿ ಸಂಕರಗಳನ್ನು ಕುರಿತು ಅವರ ವಚನಗಳು ಚಿಂತಿಸಿವೆ.ಉಪದೇಶ ವಿಡಂಬನೆ ಮುಂತಾದ ಗುಣಗಳನ್ನು ಅಲ್ಲಿ ಕಾಣಬಹುದು.
ಬಸವಣ್ಣನವರು ಕಾಯಕದ ಮಹತ್ವ ವನ್ನು ಜಗತ್ತಿಗೆ ಸಾರಿದ ಮಹಾಪುರುಷ ಮಹಾಮನೆಯಲ್ಲಿ ವಿವಿಧ ಮಾರ್ಗದ ವಚನಕಾರರು ಒಂದೆಡೆ ಕಲಿಯುವಂತೆ ಮಾಡಿದ ಬಸವಣ್ಣನವರ ಸಂಘಟನಾ ಶಕ್ತಿಯ ಜೊತೆ ಜೊತೆಗೆ ಯುಗಪರಿವರ್ತನೆಗೆ ಶ್ರಮಿಸಿದ ಸಂಕಲ್ಪಬಲವೂ ಅತ್ಯಂತ ಗಮನಾರ್ಹವಾದುದು.ಅವರ ವಚನಗಳಲ್ಲಿ ಸಾರ್ವಕಾಲಿಕ ಗುಣವಿದೆ.ಮಾನವೀಯತೆ ಹೃದಯ ವಿಶಾಲತೆಯಿದೆ.
–ಶ್ರೀಮತಿ ಸಾವಿತ್ರಿ ಮಹದೇವಪ್ಪ ಕಮಲಾಪೂರ
ಮೂಡಲಗಿ