ಬಸವಣ್ಣ ಅಸಹಾಯಕರಿಗೆ ದನಿಯಾದ ಪರಿ
ಆಳಿಗೊಂಡಿಹರೆಂದು ಅಂಜಲದೇಕೆ?
ನಾಸ್ತಿಕವಾಡಿಹರೆಂದು ನಾಚಲದೇಕೆ ?
ಆರಾದಡಾಗಲಿ ಶ್ರೀ ಮಹಾದೇವನಿಗೆ ಶರಣೆನ್ನಿ
ಏನೂ ಅರಿಯೆನೆಂದು ಮೋನಗೊಂಡಿರಬೇಡ
ಕೂಡಲಸಂಗಮದೇವರ ಮುಂದೆ ದಂದಣ ದತ್ತಣ ಎನ್ನಿ.
ಹನ್ನೆರಡನೇ ಶತಮಾನದ ಬಸವಣ್ಣನವರು ಸಮಾಜ ಸುಧಾರಣೆಯ ಹರಿಕಾರರಾಗಿ ಆಗಿಹೋದರೂ ಇಂದಿಗೂ ಪ್ರಸ್ತುತರು. ಮಾನವೀಯ ಸಮಾಜದ ಕನಸು ಕಂಡ ಅವರ ಮನಸಿಗೆ ಇಡೀ ಜಗತ್ತೇ ಮನೆಯಾಗಿ ತೋರಿತು. ‘ವಿಶ್ವವೇ ನನ್ನ ಮನೆ ಮಾನವ ಜನಾಂಗವೇ ನನ್ನ ಕುಟುಂಬ‘ ಎಂದು ಭಾವಿಸುತ್ತ ನವ ಸಮಾಜದ ನಿರ್ಮಾಣಕ್ಕೆ ಮುಂದಾಗಿ ಪರಿವರ್ತನೆ ತರಲು ಬಯಸಿದರು.
ಆಳಿಗೊಂಡಿಹರೆಂದು ಅಂಜಲದೇಕೆ?
ಅಂದು ಬಸವಣ್ಣನವರು ಬಿಜ್ಜಳರಾಜನ ಆಸ್ಥಾನದಲ್ಲಿ ಪ್ರಧಾನಿಯಾಗಿದ್ದುಕೊಂಡು ಜನಪರ ಕಾಳಜಿಯ ಸೇವೆಯನ್ನು ಮಾಡುತ್ತಿದ್ದರು. ಆ ಕಾಲಘಟ್ಟದಲ್ಲಿ ರಾಜರ ಆಳ್ವಕೆ ಪದ್ಧತಿ ಚಾಲ್ತಿಯಲ್ಲಿರುವುದು ಇತಿಹಾಸದಿಂದ ತಿಳಿದು ಬರುತ್ತದೆ. ರಾಜಸತ್ತೆಗೆ ಪ್ರಜೆಗಳು ಭಯಭೀತರಾಗಿ ಬದುಕುವುದು ಸಾಮಾನ್ಯವಾಗಿತ್ತು. ಈ ಅಂತರವನ್ನು ಹೋಗಲಾಡಿಸುವ ಪ್ರಯತ್ನ ಅಣ್ಣ ಬಸವಣ್ಣನವರದಾಗಿರುತ್ತದೆ.
ರಾಜನಿರುವುದು ಪ್ರಜೆಗಳಿಗಾಗಿಯೇ ಎನ್ನುವುದನ್ನು ಜನಸಾಮಾನ್ಯರಲ್ಲಿ ಮನದಟ್ಟು ಮಾಡಲು ಅವರು ಅನೇಕ ರೀತಿಯ ಬದಲಾವಣೆಗಳನ್ನು ತಂದರು. ಪ್ರಜೆಗಳಲ್ಲಿ ರಾಜನ ಕುರಿತು ಭಯ, ಹೆದರಿಕೆ, ಸಂಕೋಚ ಇರಬಾರದೆನ್ನುವುದು ಅವರ ಅಭಿಮತ. ರಾಜನ ಆಳ್ವಿಕೆಗೆ ಒಳಪಟ್ಟಿದ್ದೇವೆಂದು ಅಂಜುವ ಅವಶ್ಯಕತೆ ಇಲ್ಲವೆಂದು ಸಮಾಜಕ್ಕೆ ತಿಳಿಸುತ್ತಾರೆ.
ನಾಸ್ತಿಕವಾಡಿಹರೆಂದು ನಾಚಲದೇಕೆ?
ಅಂದು ಬಸವಣ್ಣನವರು ಸಮಾಜದಲ್ಲಿ ತಂದ ಬಹುದೊಡ್ಡ ಬದಲಾವಣೆ ಎಂದರೆ ‘ಏಕದೇವೋಪಾಸನೆ’. ಜನರೆಲ್ಲಾ ಗುಡಿ ಗುಂಡಾರದ ಹಿಂದೆ ಬಿದ್ದ ಸಂದರ್ಭದಲ್ಲಿ ಅದನ್ನು ಬಿಡಿಸಿ, ‘ಇಷ್ಟಲಿಂಗ’ ಪೂಜಿಸುವಂತೆ ಪ್ರೇರಣೆ ನೀಡಿದರು.
ಶರಣರು ಮೂರ್ತಿ ಪೂಜೆ ವಿರೋಧಿಸಿದಾಗ ಪುರೋಹಿತಶಾಹಿಗಳ ಸ್ವಾರ್ಥ ಜಾಗ್ರತವಾಯಿತು. ಹಾಗಾಗಿ ನಾಸ್ತಿಕರೆಂದು ಬೇಕೆಂದೇ ಹೀಯಾಳಿಸುವ ಹುನ್ನಾರ ಹೂಡಿದರು.
ಆಗ ಅನೇಕ ಶರಣರು ತಮ್ಮ ವಚನಗಳಲ್ಲಿ, ‘ಕಲ್ಲು ದೇವರು ದೇವರಲ್ಲ, ಮಣ್ಣು ದೇವರು ದೇವರಲ್ಲ’, ‘ದಯವೇ ಧರ್ಮದ ಮೂಲವಯ್ಯ’, ‘ದೇಹವೇ ದೇವಾಲಯ’ ಎಂದು ಹೇಳಿದರು. ಹಾಗೆಯೇ ನಡೆದು ತೋರಿಸಿದರು. ಅನೇಕ ವಚನಗಳು ಅದೇ ಭಾವವನ್ನು ಬಿಂಬಿಸುತ್ತವೆ.
ಜನ ಸಾಮಾನ್ಯರೆಲ್ಲರೂ ಶಿವಯೋಗದ ಇಷ್ಟಲಿಂಗ ಪೂಜಾ ವಿಧಾನಗಳನ್ನು ಅಳವಡಿಸಿಕೊಂಡು, ದೇವಸ್ಥಾನ ತ್ಯಜಿಸಿದಾಗ, ನಾಸ್ತಿಕರಿವರು ಎಂದು ಆಡಿಕೊಳ್ಳುವ ಜನರಿಗೇನು ಕಡಿಮೆ ಇರಲಿಲ್ಲ. ಅಂಥವರು ದೇವರನ್ನು ನಂಬದವರೆಂದು ತಿಳಿದರೂ ಪರವಾಗಿಲ್ಲ, ಅವರ ವ್ಯಂಗ್ಯ ನುಡಿಗೆ ನಾಚುವುದು ಸರಿಯಲ್ಲವೆಂದು ಮನವರಿಕೆ ಮಾಡುತ್ತಾರೆ.
ಆರಾದಡಾಗಲಿ ಶ್ರೀ ಮಹಾದೇವನಿಗೆ ಶರಣೆನ್ನಿ
ಮನುಷ್ಯನಾಗಿ ಹುಟ್ಟಿದವರೆಲ್ಲರೂ ಒಂದೇ ಜಾತಿ. ಯಾವುದೇ ಮೇಲು ಕೀಳು ಎಂಬ ಬೇಧವಿಲ್ಲ. ಈ ಸೃಷ್ಟಿಕರ್ತನಾದ ಮಹಾದೇವನಿಗೆ ಎಲ್ಲರೂ ಕೈಮುಗಿಯಬೇಕು. ವರ್ಣ, ವರ್ಗ, ಜಾತಿಗೆ ಮೀರಿ ಮಾನವನಾದವರೆಲ್ಲರೂ ಒಂದೇ ಎನ್ನುವ ಭಾವನೆಯಿಂದ ಶರಣೆನ್ನಬೇಕು. ಬಸವಣ್ಣನವರ ಕಾಲಘಟ್ಟದಲ್ಲಿ ‘ಶರಣು’ ಪದ ಬಹಳ ಮಹತ್ವದ್ದು ಮತ್ತು ಅರ್ಥಪೂರ್ಣವಾದುದು.
ಏನೂ ಅರಿಯೆನೆಂದು ಮೋನಗೊಂಡಿರಬೇಡ
ಅಂದು ಪುರೋಹಿತಶಾಹಿಗಳು ಜನ ಸಾಮಾನ್ಯರನ್ನು ಅತ್ಯಂತ ಕೀಳಾಗಿ ಕಾಣುತ್ತಿದ್ದರು. ಆ ಕೀಳರಿಮೆ ಕೆಳವರ್ಗದವರಲ್ಲಿ ಸ್ಥಾಯಿಯಾಗಿ ನೆಲೆಗೊಂಡಿತ್ತು. ಅದನ್ನು ಹೊಡೆದೋಡಿಸುವ ಇಚ್ಛೆಯಿಂದ ಆ ಜನರಲ್ಲಿ ಜಾಗೃತಿ ಮೂಡಿಸಿದವರು ಅಣ್ಣ ಬಸವಣ್ಣನವರು. ಅವರಿಗೆ ಅನೇಕ ರೀತಿಯಲ್ಲಿ ಬೋಧಿಸುತ್ತಾರೆ. ಅರಿವಿನ ಬೀಜ ಬಿತ್ತಿ ಫಲಾಪೇಕ್ಷೆಯಿಂದ ನಿರೀಕ್ಷಿಸುವ ಆಶಾವಾದಿ ಮನಸು ಅವರದು.
ಸಾಮಾನ್ಯರಲ್ಲಿ ತಾವೂ ಒಬ್ಬರಾಗಿ ಕುಳಿತು ತಿಳಿ ಹೇಳುತ್ತಾರೆ. ಅದೆಷ್ಟೋ ಕಾಲದಿಂದ ಮೌನವಾಗಿ ಕುಳಿತ ಜನರಿಗೆ ದನಿಯಾಗುತ್ತಾರೆ.
ಕೂಡಲಸಂಗಮದೇವರ ಮುಂದೆ ದಂದಣ ದತ್ತಣ ಎನ್ನಿ.
ಬಸವಣ್ಣನವರು ಬಹಳ ಕಾಳಜಿಯಿಂದ ಸಮಾಜದಲ್ಲಿ ಸಮಾನತೆ ತರುವ ಪ್ರಯತ್ನ ಮಾಡುತ್ತಾರೆ. Root level cure ಅನ್ನುತ್ತಾರಲ್ಲ ಹಾಗೆ ಕೆಳವರ್ಗದಿಂದ ಆರಂಭಿಸಿ ಮೇಲ್ವರ್ಗದವರೆಗೆ ಸುಧಾರಣೆ ಮಾಡುವ ಉನ್ನತವಾದ ಆಸೆ ಅವರದಾಗಿರುತ್ತದೆ.
ಪ್ರತಿಯೊಬ್ಬ ವ್ಯಕ್ತಿಯು, ಯಾರಿಗೂ ಅಂಜುವುದಾಗಲಿ, ಮೌನವಾಗಿರುವುದಾಗಲಿ, ‘ಸರಿಯಲ್ಲ’ ಎನ್ನುವುದನ್ನು ಸ್ಪಷ್ಟಪಡಿಸುತ್ತಾರೆ. ಹೇಗೆ ಧೈರ್ಯ ತುಂಬುತ್ತಾರೆಂದರೆ, ‘ಆ ಕೂಡಲಸಂಗಮದೇವರ ಮುಂದೆ ಮನಸು ಬಿಚ್ಚಿ ಹಾಡಿ ಕುಣಿಯಿರಿ. ಅದು ‘ನಿಮ್ಮ ಜನ್ಮದ ಹಕ್ಕು’ ಎಂದು ಹೇಳಿ ಕೊಡುತ್ತಾರೆ. ದಂದಣ ದತ್ತಣವೆಂದರೆ ಮನಸಿಗೆ ತಿಳಿದಂತೆ ಹೇಳಿಕೊಳ್ಳಿ ಎಂದರ್ಥ. ಇಲ್ಲಿ ‘ಪ್ರತಿಭಟಿಸು’, ‘ಸುಮ್ಮನಿರಬೇಡ’ ಎನ್ನುವ ಭಾವವಿದೆ.
ಹೀಗೆ ಬಸವಣ್ಣನವರು ತಮ್ಮ ವಚನದಲ್ಲಿ ಬರೆದಂತೆ, ಅಂದು ನಡೆದುಕೊಂಡರು ಎನ್ನುವುದು ಮಹತ್ವದ ಸಂಗತಿ. ಸಾಹಿತ್ಯಕ, ಸಾಮಾಜಿಕ, ರಾಜಕೀಯ ಎಲ್ಲಾ ದೃಷ್ಟಿಯಿಂದಲೂ ಅವರು ತಮ್ಮ ಯೋಜನೆಗಳನ್ನು ಚಾಲ್ತಿಗೆ ತರುತ್ತಾರೆ. ಅವರೊಬ್ಬ ಪ್ರಧಾನಿಯಾಗಿ, ವಚನಗಳನ್ನು ರಚಿಸುತ್ತ, ಹೋರಾಟದ ಹಾದಿ ಹಿಡಿದು, ಚಳುವಳಿಯ ಮಾರ್ಗ ಕಂಡುಕೊಂಡು, ಬಂಡಾಯದ ದನಿಯೆತ್ತಿದವರು.
ಸಿಕಾ ಕಲಬುರ್ಗಿ