ನೆನಪಾಗುತ್ತಾಳೆ
ಅವ್ವ ದೂರ ಸಾಗಿ
ಎಷ್ಟೋ ದಿನಗಳು ಕಳೆದರೂ
ಸುಳಿದಾಡುತ್ತಾಳೆ
ನಮ್ಮನಡುವೆ….
ತೋರಣದ ಹಸಿರೊಳಗೆ
ಹಸಿರಾಗಿ
ಹೂರಣದ ಸಿಹಿಯೊಳಗೆ
ಸಿಹಿಯಾಗಿ
ಹೊಳಿಗೆ ಮೇಲಿನ
ತುಪ್ಪದೊಳಗೆ ಘಮವಾಗಿ
ನೆನಪಾಗುತ್ತಾಳೆ ಘಳಿಗೆಘಳಿಗೆಗು…
ಬಂಧು ಬಳಗದ
ಮಾತೊಳಗೆ ಋಣವಾಗಿ
ಉಟ್ಟಿಟ್ಟ ಇಳಕಲ್
ಸೀರೆಯ ಮಡಿಕೆಯೊಳಗೆ
ಮೃದುವಾಗಿ
ಹೊದ್ದ ದುಪ್ಪಟಿಯ
ದಾರದೊಳಗೆಗಟ್ಟಿಯಿಗಿ
ನೆನಪಾಗುತ್ತಾಳೆ ಘಳಿಗೆಘಳಿಗೆಗು…
ಬೆಸಿಗೆಯ ಮಾಳಿಗೆಯ
ಬಿಸಿಲೊಳಗೆ
ಖಾಲಿಯಾದ
ಹಪ್ಪಳ, ಸಂಡಿಗೆ, ಶಾವಿಗೆ
ಡಬ್ಬದೊಳಗೆ
ಕೊಂಡುತಂದ ಉಪ್ಪಿನ
ರುಚಿಯೊಳಗೆ
ನೆನಪಾಗುತ್ತಾಳೆ ಘಳಿಗೆಘಳಿಗೆಗು…
ತವರಿನ ಬುತ್ತಿಯ
ಗಂಟೆಯೊಳಗೆ
ಕರುಳಕುಡಿಗಳ ಪ್ರೀತಿಯು ನಂಟೊಳಗೆ
ಸವೆದು ಸಂಬಂಧದ
ಅಂಟೊಳಗೆ
ಪ್ರೀತಿ ಕದಡಿದ
ಮನದೊಳಗೆ
ನೆನಪಾಗುತ್ತಾಳೆ ಘಳಿಗೆಘಳಿಗೆಗು…
ಧನ ಕನಕಕ್ಕಿಂತಲೂ
ಹೆಚ್ಚೆಂದು ಅರಿವಾದಾಗ
ತವರ ಅಂಗಳ
ಭಣಗುಟ್ಟಿದಾಗ
ಅವಳಿಲ್ಲವೆನ್ನುವ ಸತ್ಯ
ಒಪ್ಪಿಕೊಳ್ಳಲು ಮನ ಹಟ ಮಾಡಿದಾಗ
ನೆನಪಾಗುತ್ತಾಳೆ ಘಳಿಗೆಘಳಿಗೆಗು…
-ಡಾ. ನಿರ್ಮಲ ಬಟ್ಟಲ
೮.೫.೨೦೨೨