ಅವ್ವ……!
ಕತ್ತಲ ಗರ್ಭದ ಮಿಸುಕಿಗೆ
ರಕ್ತ ಬಸಿದು ಉಸಿರು ಕೊಟ್ಟ
ಜೀವ-ಭಾವದ ಬೆಳಕು….
ಸ್ವರ್ಗದ ಮಡಿಲು ಅಮೃತ ದ್ರವ
ಕಲ್ಪವೃಕ್ಷದ ಒಡತಿ
ಸಾಲು ದೇವತೆಗಳಿಗೆ ಮೇಲು….
ಕಡಲಿನಾಳ ಬಯಲ ವಿಸ್ತಾರ
ಮುಗಿಲೆತ್ತರ ವಾತ್ಸಲ್ಯದ
ಬದುಕಿನ ಅಚ್ಚರಿ……
ಸಾನಿಧ್ಯ ಒಂದು ಸಾಕು
ಕಣ್ಣೀರ ಒರತೆ ಭರವಸೆಯಾಗಿ ಚಿಮ್ಮಲು..
ದನಿಯ ಅಂತಃಕರಣಕೆ
ದಿಕ್ಕೆಟ್ಟಿತು ದಿನದ ದಣಿವು…..
ಸಾವಿರ ದೇವರು ದೂರ ಸರಿದವು
ಅಮ್ಮ ಹರಸಲೆಂದು…..
ತೂಕ-ಹೋಲಿಕೆಗೆ ಸಿಗದ
ಜನ್ಮ ಕಳೆದರೂ
ಇಳಿಯದ ಋಣ ಭಾರ….
ಮೌನ ಭಾಷೆಯ
ಪದಗಳ ಮೆರುಗಿಲ್ಲದ
ಸೋಲುವ ಸಾಲುಗಳ
ಸಹನೆ-ತ್ಯಾಗದ ಮೇರು ಕಾವ್ಯ….
ಅವ್ವ…..!
-ಪ್ರೊ ಜಯಶ್ರೀ.ಎಸ್.ಶೆಟ್ಟರ.
ಇಳಕಲ್ಲ.