ಲೀಕ್ ಔಟ್
ಅಕ್ಷತಾ ಪಾಂಡವಪುರ ಅವರ ಚೊಚ್ಚಲ ಕಥಾ ಸಂಕಲನ ಲೀಕ್ ಔಟ್ ಮೂಲತಃ ರಂಗಭೂಮಿ ಕಲಾವಿದೆಯಾದೆ ಆದ ಅಕ್ಷತಾ ನೀನಾಸಂ ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಹೆಚ್ಚಿನ ವಿಧ್ಯಾಭ್ಯಾಸ ಮುಗಿಸಿಬಂದು ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ನಟಿಸಿದ ಒಬ್ಬಳು ಏಕವ್ಯಕ್ತಿ ಪ್ರಸ್ತುತಿ ರಾಜ್ಯಾದ್ಯಂತ ಅನೇಕ ಪ್ರದರ್ಶನಗಳನ್ನು ಕಂಡಿದೆ.ಅನೇಕ ಚಲನಚಿತ್ರಗಳಲ್ಲಿ ನಟಿಸಿರುವ ಇವರು ಪಲ್ಲಟ ಚಿತ್ರಕ್ಕೆ ರಾಜ್ಯ ಪ್ರಶಸ್ತಿಯನ್ನು ಪಿಂಕಿ ಎಲ್ಲಿ ಎಂಬ ಚಿತ್ರಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.
ಪಾಕ ಪ್ರವೀಣೆಯೂ ಆಗಿರುವ ಅಕ್ಷತಾ ಫ್ಯಾಷನ್ ಡಿಸೈನರ್ ಕೂಡಾ ಆಗಿದ್ದಾರೆ ಬಹುಮುಖ ಪ್ರತಿಭೆಯ ಈಕೆ ಬಿಗ್ ಬಾಸ್ ನಲ್ಲಿ ಭಾಗವಹಿಸುವ ಮೂಲಕ ರಾಜ್ಯದ ಜನತೆಯ ಚಿರಪರಿಚಿತರಾಗಿದ್ದಾರೆ ಇಂತಹ ಅಕ್ಷತಾ ಇದೀಗ ತಮ್ಮ ಚೊಚ್ಚಲ ಕಥಾ ಸಂಕಲನ ಲೀಕ್ ಔಟ್ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಆರಂಗೇಟ್ರಂ ಮಾಡಿದ್ದಾರೆ. ಪ್ರಸ್ತುತ ಈ ಕೃತಿಯಲ್ಲಿ ಒಟ್ಟು ಹನ್ನೊಂದು ಕಥೆಗಳಿವೆ. ಹಳ್ಳಿಯಲ್ಲಿ ಹುಟ್ಟಿ ನಗರದಲ್ಲಿ ವಾಸಿಸುತ್ತಿರುವ ಇವರ ಕಥೆಗಳಲ್ಲಿ ಸ್ವಾಭಾವಿಕವಾಗಿ ಹಳ್ಳಿ ಮತ್ತು ನಗರ ಜೀವನದ ವಿವಿಧ ಮುಖಗಳು ಅನಾವರಣಗೊಂಡಿವೆ.
ಮೊದಲರ್ಧ ಭಾಗ ನಗರ ಜೀವನ ಕುರತಾಗಿದ್ದರೆ ಉತ್ತರಾರ್ಧದ ಕತೆಗಳಲ್ಲಿ ಹಳ್ಳಿಯ ಸೊಗಡು ಕಾಣಿಸಿಕೊಂಡಿವೆ. ಇಲ್ಲಿಯ ಕಥೆಗಳಿಗೆ ತಮ್ಮ ಚಿತ್ರಗಳನ್ನು ಪೂರೈಸಿರಿವ ಚೇತನ ತೀರ್ಥಹಳ್ಳಿ ಅವರು ಆಕರ್ಷಕ ಮುನ್ನುಡಿ ಬರೆದು “ಅತ್ಯಂತ ಸಹಜವಾಗಿ ಯಾವುದೇ ನಾಟಕೀಯತೆ ಇಲ್ಲದೇ ನಾವು ನಿತ್ಯ ಬಳಸುವ ಭಾಷೆಯನ್ನು ಬೆರೆಸಿ ಕಥೆ ಕಟ್ಟಿರುವ ಅಕ್ಷತಾ ಮೊದಲ ಪ್ರಯತ್ನದಲ್ಲಿ ಬಹುತೇಕ ಗೆದ್ದಿದ್ದಾರೆ” ಎಂದು ಅಭಿಮಾನ ಪೂರ್ವಕವಾಗಿ ದಾಖಲಿಸಿದ್ದಾರೆ.” ಟ್ರೋಲ್ ಕನ್ನಡತಿ ಟ್ರೋಲ್” ಕಥೆಯು ಇಂದಿನ ದಿನಮಾನಗಳಲ್ಲಿ ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಯಗಳಲ್ಲಿ ಟ್ರೋಲ್ ಆಗುತ್ತಿರುವ ಕುರಿತು ಮತ್ತು ಅದರಿಂದಾಗುತ್ತಿರುವ ಕೌಟುಂಬಿಕ ಹಾಗು ಸಾಮಾಜಿಕ ಅವಾಂತರಗಳ ಕುರಿತು ಹೇಳಿದರೆ ” ಸೂತಕದ ಮನೆಯಲ್ಲಿ “ ಎಂಬ ಕಥೆ ಲಿವಿಂಗ್ ಟುಗೆದರ್ ನಿಂದಾಗುವ ಪರಿಣಾಮಗಳ ಮೇಲೆ ಬೆಳಕು ಚೆಲ್ಲುತ್ತದೆ ”
ಏನೇನೋ ಆಟ ಆಡ್ದೋರೆಲ್ಲ ಜೀವನದಲ್ಲಿ ಚೆನ್ನಾಗಿರ್ತಾರೆ ಪಾಪದವರೇ ಸಾಯೋದು” ಎಂಬ ಮಾರ್ಮಿಕ ಮಾತಿನೊಂದಿಗೆ ಈ ಕಥೆ ಅಂತ್ಯವಾಗುತ್ತದೆ. ಇಡೀ ಸಂಕಲನದ ಕೇಂದ್ರ ಕಥೆ ಎಂದರೆ ” ಒಗ್ಗರಣೆ” ಹಳ್ಳಿಯ ಘಮವನ್ನು ಆದ್ಯಂತವಾಗಿ ಪಸರಿಸುವ ಈ ಕಥೆ ದುರಂತ್ಯವಾಗುವವರೆಗೂ ಒಂದೇ ಉಸಿರಿನಲ್ಲಿ ಓದಿಸಿಕೊಂಡು ಹೋಗುತ್ತದೆ.” ನೆನಪಿರಲಿ ಇದು ಕಥೆಯಲ್ಲ ಜೀವನ.ಬರೆಯುತ್ತಿರುವವಳು ಬರಹಗಾರ್ತಿ ಅಲ್ಲ ಜೀವನಗಾರ್ತಿ” ಎನ್ನುವ ಸಾಲುಗಳೊಂದಿಗೆ ಅಂತ್ಯವಾಗುವ ಅಲ್ಲಲ್ಲ ಮುಂದುವರಿಯುವ ಇಲ್ಲಿನ ಕಥೆಗಳು ಬಹುಕಾಲ ಕಾಡುತ್ತವೆ. ಸಹೃದಯಿ ಕನ್ನಡಿಗರು ಸಾರಸ್ವತ ಲೋಕಕ್ಕೆ ಅಕ್ಷತಾ ಪಾಂಡವಪುರ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಬೇಕಷ್ಟೇ………….
.
.– ಶ್ರೀಶೈಲ ಜಾಲಿಹಾಳ