ನನ್ನಮ್ಮನ ಹಸಿರು ಪೀತಾಂಬರ

ನನ್ನಮ್ಮನ ಹಸಿರು ಪೀತಾಂಬರ

ಆ ಗಗನದ ಬೆಳ್ಳಿ ಚುಕ್ಕೆ
ಆಗಸದಲಿ ಹೊಳೆಯುವ
ಬೆಳಗು ನೀನು ಅಮ್ಮಾ..

ತಿಂಗಳ ಬೆಳಕಿನ ನಸುಕಿನಲಿ
ನಿನ್ನ ಸೀರೆಯ ನಕ್ಷತ್ರಗಳನು
ಎಣಿಸಿ ಸಂಬ್ರಮಿಸಿದೆ..

ಪಚ್ಚೆ ಬಣ್ಣ ಜರತಾರಿ ಮೃದು
ಸೀರೆಯಲ್ಲಿ ನಿನ್ನ ನಗೆ
ಕಂಡು ಹರ್ಷಿಸಿದೆ.

ನೀನಿಲ್ಲದೆ ಸೋತಾಗ ಬೆತ್ತಲೆ
ಯಾದ ಮನದಲ್ಲಿ ನಿನ್ನನ್ನು
ಹುಡುಕಿದೆ.

ನಿನ್ನ ಸೌಂದರ್ಯದಷ್ಟೆ ನಿನ್ನ
ಸೀರೆಯ ಕಾಂತಿ ಹೊಳಪು
ಅಮ್ಮಾ..

ದೂರ ದಿಗಂತದಲ್ಲಿ ಕಾಣುವ
ಹೂವಿನ ಸೌಂದರ್ಯದಲ್ಲಿ
ನಿನ್ನದೆ ಛಾಯೆ ಅಮ್ಮಾ..

ಸೊಬಗಿನ ಸೌಂದರ್ಯದಲಿ
ಪ್ರಕೃತಿಯ ವಿಶಾಲತೆಯಲಿ ನಿನ್ನ ಸೀರೆಯನು ಮಡಿಕೆ
ಮಾಡಲಾರೆ..

ನಿನ್ನ ಸೀರೆಯ ಅಂಚಿನಲ್ಲಿ
ಚಂದನದ ಸುವಾಸನೆ ಶಶಿಯ
ಬೆಳಗಿನ ನಗೆ ನೋಡಿ ಹರ್ಷಿಸಿದೆ.

ಸ್ತ್ರೀಯ ಮಂಗಳ ಸ್ನಾನಕ್ಕೆ
ವಿವಾಹದ ಪವಿತ್ರತೆಗೆ
ನಿನ್ನ ಮಡಿಯೇ ಬೇಕು
ಅಮ್ಮಾ..

ಬಿಡು ಬಾಹ್ಯದೊಳು ಡಂಬವ
ಎಂದು ಹಾಡುತ್ತಾ ಸತ್ಯದ
ದಶ೯ನವನ್ನು ನೀಡಿದವಳು..

ಎನ್ನ ಕೋಮಲ ಚಿತ್ತದಲಿ
ಭಕ್ತಿಯ ಚೈತನ್ಯವನ್ನು
ಕೊಟ್ಟವಳು ನೀನಲ್ಲವೇ..

ಮೋಡದ ಮರೆಯಲಿ ನೀನು
ಮರೆಯಾದರೂ ಬೆಳದಿಂಗಳ
ಶುಭ್ರತೆಯಲ್ಲಿ ನಿನ್ನ ಕಾಣುವೆ..

ಸಂಸಾರದ ನೊಗವು ಭಾರ
ವಾದಾಗ ನೋವಿನ ಕಲ್ಮಷವ
ಕಿತ್ತಿದವಳಲ್ಲವೆ..

ಕನಸಿನಲಿ ಕನವರಿಕೆಯಲಿ
ನನ್ನನ್ನು ಎಚ್ಚರಿಸುತ್ತಾ
ವಿವೇಕದ ಕಂಪನವನ್ನು
ಕೊಟ್ಟವಳಲ್ಲವೆ.

ಆ ದೂರ ದಿಗಂತದ ಗಿರಿಯ
ಮೇಲೊದಿಕೆಯೇ ನನ್ನಮ್ಮನ
ಹಸಿರು ಪೀತಾಂಬರ..

ಪಂಚಭೂತಗಳಲ್ಲಿ ಒಂದಾದ
ನನ್ನಬ್ಬೆಯ ಸೀರೆಯೆಂದು
ದುಃಖಿತಳಾದೆ.

ಸಹಸ್ರಾರು ನಕ್ಷತ್ರಗಳಲ್ಲಿ
ಬೆಳದಿಂಗಳ ನಗುವಿನಲ್ಲಿ
ಮರಣವೇ ಮಹಾ
ನವಮಿ ಎಂದು ಮೌನಿಯಾದೆ.

ಡಾ.ಸರ್ವಮಂಗಳ ಸಕ್ರಿ
ಕನ್ನಡ ಉಪನ್ಯಾಸಕರು
ರಾಯಚುರು

Don`t copy text!