ಮಡಿಲು
ಮನನೊಂದು ಹೃದಯ ಕಲಕಿ
ಅತ್ತು ಹಗುರಾಗಬೇಕೆಂದಾಗ
ಅವ್ವನ ಮಡಿಲು ನೆನಪಾಗುತ್ತದೆ
ಜನಜಂಗುಳಿಯಲ್ಲಿಯು
ಒಂಟಿಭಾವ ಕಾಡಿದಾಗ
ಅವ್ವನ ಮಡಿಲು ನೆನಪಾಗುತ್ತದೆ
ಆಪ್ತರ ನಡುವೆಯೂ
ಅನಾಥಪ್ರಜ್ಞೆ ಕಾಡಿದಾಗ
ಅವ್ವನ ಮಡಿಲು ನೆನಪಾಗುತ್ತದೆ
ಹೇಳಿಕೊಳ್ಳಲಾಗದ ಅವಮಾನ ಅಣುಅಣುವಾಗಿ ಹಿಂಸಿಸುವಾಗ
ಅವ್ವನ ಮಡಿಲು ನೆನಪಾಗುತ್ತದೆ
ನವಮಾಸ ತುಂಬಿ
ಹಗಲು ರಾತ್ರಿ ಎಣಿಸುವಾಗ
ಅವ್ವನ ಮಡಿಲು ನೆನಪಾಗುತ್ತದೆ
ಹೆರಿಗೆ ಬೇನೆ
ಜೀವ ಹಿಂಡುವಾಗ
ಅವ್ವನ ಮಡಿಲು ನೆನಪಾಗುತ್ತದೆ
ನಂಬಿದವರೆ ಬೆನ್ನಿಗೆಚೂರಿಹಾಕಿ
ಸಾಂತ್ವನ ಹೇಳುವಾಗ
ಅವ್ವನ ಮಡಿಲು ನೆನಪಾಗುತ್ತದೆ
ಹುಸಿಪ್ರೀತಿ ನಟಿಸಿ ಆಡಿಕೊಂಡು ನಗುವವರ ಮಾತು ಕಿವಿಗೆ ಬಿದ್ದಾಗ
ಅವ್ವನ ಮಡಿಲು ನೆನಪಾಗುತ್ತದೆ
ಲೆಕ್ಕಾಚಾರವಿಟ್ಟು ಉಪಚರಿಸಿ
ಹಂಗಿಸುವ ಸಂಬಂಧ ಕಂಡಾಗ
ಅವ್ವನ ಮಡಿಲು ನೆನಪಾಗುತ್ತದೆ
ಬದುಕು ಪೆಟ್ಟು ಕೊಟ್ಟಾಗಲೆಲ್ಲ
ಮತ್ತೆ ಮಗುವಾಗಿ ಅವ್ವನ ಗರ್ಭ
ಸೇರಬೇಕೆಂದಾಗ
ಅವ್ವನ ಮಡಿಲು ನೆನಪಾಗುತ್ತದೆ…!!
–ಡಾ. ನಿರ್ಮಲ ಬಟ್ಟಲ
Excellant ……
👏👏👏👏👏