ಕಲಬುರಗಿಯ ವಾತ್ಸಲ್ಯದ ಹೊನಲು ಮುಗಿಲಿಗೂ ಮಿಗಿಲು
ಬಳ್ಳಾರಿಗೆ ಎರಡೇ ಎರಡು ಕಾಲ. ಒಂದು ಬೇಸಿಗೆ ಮತ್ತೊಂದು ಅತಿ ಬೇಸಿಗೆ ಕಾಲ. ಇದನ್ನು ಹೇಳಿದ್ದು ಹರಪನಹಳ್ಳಿಯ ಸಾಹಿತಿ ಬೀಚಿ. ಅವರು ಅದನ್ನು ಹೇಳಿದ್ದು ಕೇವಲ ವಿನೋದಕ್ಕಾಗಿ ಅಲ್ಲ. ಅವರ ಹೇಳಿಕೆಯಲ್ಲಿ ಅಕ್ಷರಶಃ ಬಿಸಿಲನಾಡಿನ ಭರಪೂರ ಬಿಸಿಲಿನ ತಾಪವಿದೆ. ಅದರ ಜತೆಗೆ ಅದು ಬಯಲು ಸೀಮೆಯ ಬರಗಾಲದ ಬಿಸುಪನ್ನು ಸಹಿತ ಆವಾಹಿಸಿಕೊಂಡಿದೆ.
ಕಳೆದೆರಡೂವರೆ ದಶಕಗಳ ಕಾಲ ಬಳ್ಳಾರಿಯ ಭೂಮ್ತಾಯಿ ಮೈಮೇಲೆ ಗಣಿಗಾರಿಕೆ ಹೆಸರಲ್ಲಿ ಜರುಗಿದ ಅತ್ಯಾಚಾರ, ಅಪಸವ್ಯಗಳು ಅಲ್ಲಿನ ಒಟ್ಟು ಬದುಕಿನ ಮೇಲೆ ಘೋರ ಪರಿಣಾಮ ಬೀರಿವೆ. ಧರೆಯೊಡಲ ಅಂತರ್ಜಲ ಬತ್ತಿಹೋಗಿದೆ. ಪ್ರಕೃತಿಯೊಳಗೆ ಏರುಪೇರಿನ ದುಸ್ತರ. ಜೀವಸಂಕುಲಕ್ಕೆ ಪರಿಶುದ್ಧ ಕುಡಿಯುವ ನೀರಲ್ಲ ನೀರೆಂಬ ಪದಾರ್ಥಕ್ಕೇ ತತ್ವಾರ. ಆದರೆ ಅಲ್ಲಿನ ಗಣಿದಣಿಗಳ ಕುಟುಂಬ ನಿತ್ಯವೂ ಬಿಸ್ಲೇರಿ ನೀರಿನಲ್ಲೇ ಜಳಕ ಮಾಡುತ್ತಿದ್ದುದು ಮರೆಯಲಾದೀತೇ.?
ವರ್ತಮಾನದ ಅಕಾಲಿಕ ಮಳೆ, ಭೂ ತಾಪಮಾನದ ಏರಿಕೆ. ಇಂತಹ ಅನೇಕ ಅವಗಡಗಳಿಗೆ ಭೂಮಿಯ ಮೇಲಿನ ಅನಾಚಾರ, ಗಣಿಗಾರಿಕೆಯಂತಹ ಅನೇಕ ಸಂಗತಿಗಳೇ ಕಾರಣಗಳು. ಮಳೆನೀರು ಸಂಗ್ರಹ, ಮರು ಪೂರಣದ ನೈಸರ್ಗಿಕ ಮತ್ತು ವೈಜ್ಞಾನಿಕ ವಿಧಾನಗಳನ್ನು ಜಲತಜ್ಞರು, ಪ್ರಾಜ್ಞರು ಹೇಳುವ ಪಾರಂಪರಿಕ ಜಲಮೂಲಗಳ ರಕ್ಷಣೆ ಸಾರ್ವಜನಿಕರು ಮತ್ತು ಸರಕಾರದ ಆದ್ಯ ಕರ್ತವ್ಯ.
ಬಳ್ಳಾರಿ ಸೀಮೆ ಬಿಸಿಲುನಾಡು ಓಕೆ. ಆದರೆ ಬಳ್ಳಾರಿಯನ್ನು ಬರದ ನಾಡೆಂದು ಕರೆಯೋದೇಕೆ ಎಂಬ ಅನುಮಾನಗಳಿಗೆ ಎಡೆಯಾಗುವಷ್ಟು ಬಳ್ಳಾರಿಯ ಬೆಳವಣಿಗೆಗಳು. ಅಂತೆಯೇ ಅದಕ್ಕೆ ಗಣಿ ದಣಿಗಳ ನಾಡೆಂಬ ಪ್ರತೀತಿ. ಕೈ ಬೆರಣಿಕೆಯ ದಣಿಗಳ ಗಣಿಗಾರಿಕೆಯ ತತ್ಪರಿಣಾಮದಿಂದ ಬಳ್ಳಾರಿ ರಾಜಕಾರಣದ ಪರಿಭಾಷೆಯೇ ಬದಲಾಗಿದೆ. ಅಷ್ಟೇ ಯಾಕೆ ಕರ್ನಾಟಕದ ಚುನಾವಣೆಗಳಿಗೆ ಅಲ್ಲಿನ ಗಣಿ ದಣಿಗಳು ಬಲಿ ಪ್ರಯೋಗಾಲಯದ ಹೊಸಹುಟ್ಟನ್ನು ಹುಟ್ಟು ಹಾಕಿದರು. ಆ ಹುಟ್ಟು, ಕಪಟ ಕೀರ್ತಿಗೆ ಹೆಸರಾಗುವಂತಾಗಿದ್ದುದು ಹಳೆಯ ಸುದ್ದಿ.
ಎಲ್ಲಿಂದಲೋ ಬಂದ ಹರಪನಹಳ್ಳಿ ತಾಲೂಕಿನ ಠಾಣೆಯೊಂದರ ಸಾಮಾನ್ಯ ಪೋಲಿಸ್ ಕಾನಸ್ಟೇಬಲ್ ಮಕ್ಕಳಾಗಿದ್ದವರು., ನಂತರದ ಗಣಿ ದಣಿಗಳಾಗಿ ಅವರ ಬದುಕು ಧಿಡೀರಂತ ಬದಲಾದುದು ಸೋಜಿಗದ ಕಥನ. ತಾರಾ ತಿಗಡಿ ಬಾರಾ ಭಾನಗಡಿಯ ಗಣಿ ವಿದ್ಯೆಯ ಮೂಲಕ ಅವರು ಬಳ್ಳಾರಿ ರಾಜಕೀಯ ಪ್ರಭುತ್ವಕ್ಕೆ ಅಮರಿಕೊಂಡರು. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿ ಕೊಂಡರು. ಆದರೆ ಅದೇ ಗಣಿಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿದ ಬಳ್ಳಾರಿಯ ಸಾಮಾನ್ಯರ ಬದುಕು ಮಾತ್ರ ಬದಲಾಗಲಿಲ್ಲ. ಅದು ಹಿಂದಿನಂತೆಯೇ ಇಂದಿಗೂ ಹಾಗೇ ಇದೆ. ಜನ ಸಾಮಾನ್ಯರ ಬವಣೆಗಳು ಕಡಿಮೆ ಆಗಿಲ್ಲ. ಹಾಗೆಯೇ ಅಲ್ಲಿನ ಪ್ರಖರ ಬಿಸಿಲು ಭೀಕರತೆ ಮುಟ್ಟಿರುವುದು ಸುಳ್ಳಲ್ಲ.
ಭೂಗರ್ಭ ಭೇದಿಸಿರುವ ಗಣಿಗಾರಿಕೆಯಿಂದಾಗಿ ನೈಸರ್ಗಿಕ ಪರಿಸರದ ಮೇಲೆ ಗಾಢ ಪರಿಣಾಮ ಉಂಟಾಗಿದೆ. ಅದು ಸಹಜ ಫಸಲಿನ ಬೆಳೆಗಳ ಮೇಲೆ ಘೋರ ಪರಿಣಾಮ ಬೀರದಿರಲು ಹೇಗೆ ತಾನೇ ಸಾಧ್ಯ.? ಗಣಿಗಾರಿಕೆಯ ರಕ್ಕಸ ದೂಳು ಜನರ ಉಸಿರಿನ ನಾಳಗಳನ್ನೇ ನುಂಗಿ ಹಾಕಿದೆ. ಅದೇ ಪ್ರಮಾಣದಲ್ಲಿ ಕೃಷಿ, ಹೈನುಗಾರಿಕೆ, ಹಣ್ಣುಹಂಪಲು, ಪ್ರಾಣಿ ಪಕ್ಷಿ ಎಲ್ಲ ಜೀವಸಂಕುಲಗಳ ಮೇಲೆ ದುಷ್ಪರಿಣಾಮ ಬೀರಿದೆ. ಅದು ಕಣ್ಣಿಗೆ ಕಾಣುವ ಕೆಂಡ ಮಾರುತದಂತಹ ಬಿರು ಬಿಸಿಲಿನಷ್ಟೇ ಸತ್ಯ.
ಬಳ್ಳಾರಿ ಎಂದರೆ ಗಣಿಗಾರಿಕೆ, ಗಣಿ ದಣಿಗಳು ಮತ್ತು ಚುನಾವಣೆ ಎಂಬುದು ರಾಷ್ಟ್ರ ಮಟ್ಟದಲ್ಲಿ ಹುಚ್ಚಾಟದ ಪ್ರಸಿದ್ಧಿ. ಹಾಗೇನೇ ಅದಕ್ಕಾಗಿ ದಣಿಯ ದಶಕ ಮೀರಿದ ಸೆರೆಮನೆ ವಾಸವೂ ಅಷ್ಟೇ ಪ್ರತೀತವಾದುದು. ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ಅವರಿಗೇನಾದರೂ ಅವಕಾಶ ದೊರಕಿದರೆ ಅದೇನು ವಕ್ಕರಿಕೆಗಳು ನಾಡಿಗೆ ಕಾದಿವೆಯೆಂಬ ಅಳುಕಿನ ಹೇವರಿಕೆಗಳು ಹೇಳಲು ಬಾರದು.
* * *
ಬಳ್ಳಾರಿಯ ಬಿಸಿಲಿಗಿಂತ ನಮ್ಮ ಕಲಬುರ್ಗಿಯ ಖಡಕ್ ಬಿಸಿಲಿನ ಪರಿತಾಪ ಘನ ಭಯಂಕರವಾದುದು. ಅಲ್ಲಿಯಂತೆ ನಮ್ಮಲ್ಲಿಯೂ ಎರಡು ಕಾಲಗಳು. ಒಂದು ಕೆಂಡದ ಬಿಸಿಲಿನ ಬೇಸಿಗೆ ಕಾಲ. ಮತ್ತೊಂದು ಬಿಸಿಲಿಗಿಂತ ಭಯಾನಕವಾದ ಬರಗಾಲ. ಈ ಎರಡೂ ಕಾಲಗಳ ‘ರವರವ’ ನರಕಗಳಲ್ಲಿ ನರಳಿದವರು ನಾವು. ಅಜಮಾಸು ಮೂರು ದಶಕಗಳಿಂದ ರೈತರ ಹೊಲಗಳಿಗಿಂತ ಹರಿಯ ಬಾರದ ಕಡೆ ಕೃಷ್ಣೆ ಹರಿಯುತ್ತಿದ್ದರೂ ನಮ್ಮನೆಲದ ಹಸಿವು ಹಿಂಗಿಲ್ಲ. ಆದರೆ ಕಲಬುರ್ಗಿಯ ಕಪ್ಪುನೆಲಕ್ಕೆ ತಂಪಿನ ಸಣ್ಣದೊಂದು ತಣಿವು ದೊರಕಿದೆ. ದುಷ್ಕಾಳದ ದುರಿತ ದಿನಗಳು ನೆನಪಿನ ಭಾವಕೋಶದಿಂದ ತುಸು ದೂರ ಸರಿದಿವೆಯಷ್ಟೇ.
ಆದರೆ ಲೋಕಿಗರ ನಿಜದ ನೆಲೆಯ ಹಸಿವಿನ ಬವಣೆಗಳು ಮಾತ್ರ ನೀಗಿಲ್ಲ. ” ಯುದ್ಧದೇವನು ಬಂದ ಬುದ್ಧದೇವನು ಬಂದ ಅನ್ನದೇವ ಇನ್ನೂ ಬರಲಿಲ್ಲೋ, ಇನ್ನೂ ಬರಲಿಲ್ಲ ” ಎನ್ನುವ ವರಕವಿ ಬೇಂದ್ರೆಯವರ ಸಚ್ಚಿದಾನಂದ ಕಾವ್ಯ ನುಡಿಗಳಂತೆ ನಿಜವಾದ ಅನ್ನದೇವ ಇನ್ನೂ ಬಂದಿಲ್ಲ. ಹೊಟ್ಟೆಯ ಹಸಿವು ಮೀರಿದ ಸ್ವಾಭಿಮಾನದ ಹಸಿವು ನೀಗುವ ದಿನಗಳು ದಿನೇ ದಿನೇ ದೂರ ಸರಿಯುತ್ತಲಿವೆ. ಜ್ಞಾನದ ಕೇಂದ್ರಗಳಾದ ವಿಶ್ವ ವಿದ್ಯಾಲಯಗಳಲ್ಲಿ ಸ್ವಜನ ಪಕ್ಷಪಾತ, ಜಾತಿಪ್ರಜ್ಞೆಯ ಗಬ್ಬುನಾತಗಳು.
ಮನುಷ್ಯ ಮನುಷ್ಯರ ನಡುವೆ ಘೋರ ಕಂದಕಗಳು. ಒಬ್ಬ ಪ್ರಾಧ್ಯಾಪಕನನ್ನು ಕಂಡರೆ ಇನ್ನೊಬ್ಬನಿಗೆ ನಿಗಿ ನಿಗಿ ಕೆಂಡದಂತಹ ಕಣ್ಣುರಿ. ಇದು ಎಲ್ಲಾ ವಿಶ್ವ ವಿದ್ಯಾಲಯಗಳಲ್ಲಿ ಕಂಡು ಬರುವ ಬಚ್ಚಲುಗುಣಿಗಳ ಹೊಲಸು ನಾತದ ಕಥೆ.
ಮತ್ತೊಂದು ಕಡೆ ನಾಡಿನ ಕೆಲವು ಮಠಗಳಲ್ಲಿ ರಾಜಕಾರಣ ಬೆರೆತ ಧರ್ಮಕಾರಣದ ಮೇಲಾಟ. ಜನಸಂಸ್ಕೃತಿಯೊಳಗೆ ಧರ್ಮದ ಸೇರ್ಪಡೆ. ಅದರ ಜತೆಗೆ ಧರ್ಮ ಮತ್ತು ರಾಜಕಾರಣದ ವೈರಾಣುವಿನ ಮಹಾರೋಗ ಗ್ರಾಮ ಗ್ರಾಮಗಳ ಗಲ್ಲಿಗಲ್ಲಿಗಳಿಗೂ ಪ್ಯಾಂಡಮಿಕ್ಕಾಗಿ ಹಬ್ಬಿಕೊಂಡಿದೆ. ಅದರಿಂದ ಹಳ್ಳಿಗಳ ಸಹಬಾಳ್ವೆ, ಸುಮಧುರ ಸಾಮರಸ್ಯದ ಬದುಕಿಗೆ ಕೊಳ್ಳಿ ಬಿದ್ದಿದೆ. ಸಾಮಾಜಿಕ ಜಾಲತಾಣಗಳ ಸಮೂಹ ಸಂವಹನ ಸಾಧನಗಳ ಬಳಕೆ ಇಂತಹ ಜೀವವಿರೋಧಿ ವಿಸಂಗತಿಗಳಿಗೆ ಹೆಚ್ಚು ಹೆಚ್ಚು ಬಳಕೆ ಆಗುತ್ತಿರುವುದು ಸಾಮಾಜಿಕ ದುರಂತವೇ ಸೈ!. ನಿರಾಯಾಸವಾಗಿ ಅವು ಹಳ್ಳಿ ಹಳ್ಳಿಗಳ ನೆಲಧರ್ಮ ಸಂಸ್ಕೃತಿ ಧ್ವಂಸಗೊಳಿಸಲು ಮುನ್ನೆಲೆಗೆ ಬರುತ್ತಿವೆ. ಅವೀಗ ಹಳ್ಳಿಯ ಮನ ಮನಗಳ ಮನೆ ಮನೆಗೂ ದಾಳಿ ಇಡುತ್ತಲಿವೆ. ಹಸನಾದ ಹಾಡು ಪಾಡುಗಳ ಹಳ್ಳಿಗಳು ಹೊಲಬುಗೇಡಿ ರಾಜಕಾರಣದ ವಿಕೃತ ಸೈತಾನಗಳ ರೂಪ ತಾಳುತ್ತಲಿವೆ.
ಇದೊಂದು ಬಗೆಯ ಇಭ್ರತಿ ಸಂಸ್ಕೃತಿಯ ವೈಪರೀತ್ಯದ ವಿಷಮಗಾಳಿ. ಅದರ ರಣ ಹೊಡೆತಕ್ಕೆ ಬಹುಮುಖಿ ಜೀವ ಸಂಸ್ಕೃತಿಯ ನರಳಾಟ. ಅದನ್ನೆಲ್ಲ ಸರಿದೂಗಿಸ ಬಹುದಾದ ಸ್ವಾಸ್ಥ್ಯ ಸಮತ್ವದ ಗಾಳಿ ಯಾವಾಗ ಬೀಸ ಬಲ್ಲದು. ಅದರಿಂದ ಅಕಾಲಿಕ ಮಳೆ ಗಾಳಿ ಚಳಿಗಳು ಕಣ್ಮರೆಯಾಗಬಲ್ಲವೇ.? ಕಾರ್ಗತ್ತಲೆ ಬಯಲಾಗಿ ಮತ್ತೆ ಕಾಣಬಲ್ಲವೇ ನಿಸರ್ಗದತ್ತದ ಸುಂದರ ಬೆಳಕಿನ ಸುದಿನಗಳನು.?
* * *
ಇದು ಕೇವಲ ಬಿಸಿಲು ಕಲ್ಯಾಣದ ಕುರಿತಾದ ಬರಿ ಬೆಳಗಿನ ಮಾತುಕತೆಯಲ್ಲ. ಸಮಗ್ರ ಕರ್ನಾಟಕ ಮತ್ತು ದೇಶದ ಬೆಳಗು ಕುರಿತು ಕಾಣಬಲ್ಲವೇ ಎಂಬ ಕನಸಿನ ಮಾತುಕತೆಯ ಮಜಕೂರಗಳು.
ಅಂದಹಾಗೆ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ” ಕಡಕೋಳ ನೆಲದ ನೆನಪುಗಳು ” ಪುಸ್ತಕ ಬಿಡುಗಡೆಗೆ ಮುಂದಾಗಿದೆ. ವಾಸ್ತವವಾಗಿ ಅದು ಕಡಕೋಳ ನೆಲದಲ್ಲೇ ಕಳೆದ ತಿಂಗಳು ಬಿಡುಗಡೆಯಾಗಬೇಕಿತ್ತು. ಕಡಕೋಳ ನೆಲದ ನೆನಪುಗಳು ಎಂಬುದು ಹಚ್ಚಿಟ್ಟ ಕರ್ಪೂರ. ಅಂತಹ ಹಚ್ಚಿಟ್ಟ ಕರ್ಪೂರದಲ್ಲಿ ಕೆಲವರು ಇದ್ದಿಲು ಹುಡುಕಲು ಹೋದವರಿಂದಾಗಿ ಅದು ಕಳೆದ ತಿಂಗಳು ಬಿಡುಗಡೆಯಾಗಲಿಲ್ಲ. ಹಾಗೆ ನೋಡಿದರೆ ಕಲಬುರ್ಗಿಯ ಕನ್ನಡ ಸಾಹಿತ್ಯ ಪರಿಷತ್ತಿನ ಸುವರ್ಣ ಸಭಾಭವನದಲ್ಲಿ ಲೋಕಾರ್ಪಣೆ ಆಗುತ್ತಿರುವ ಇದು ನನ್ನ ಎರಡನೇ ಪುಸ್ತಕ.
ಮೊದಲ ಪುಸ್ತಕ ” ಯಡ್ರಾಮಿ ಸೀಮೆ ಕಥನಗಳು “ ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಖರ್ಚಾಗಿಯೂ ಬಿಟ್ಟಿತು. ಅಷ್ಟು ಮಾತ್ರವಲ್ಲದೇ ಅದು ಯಡ್ರಾಮಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿಯೂ ಬಿಡುಗಡೆ ಆಗಿ ಅಲ್ಲಿನ ನೆಲಧರ್ಮ ಪ್ರೀತಿ, ನೇವರಿಕೆಗಳಿಗೂ ಭಾಜನವಾಯಿತು. ಕೆಲವೇ ದಿನಗಳಲ್ಲಿ ಅದಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯದ ಅತ್ಯುತ್ತಮ ಪುಸ್ತಕ ಪ್ರಶಸ್ತಿಯ ಶಿರಪೇಷು. ಮತ್ತೆ ಕೆಲವೇ ಅವಧಿಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕಾರದ ಕಿರೀಟ. ಅದರ ಬೆನ್ನಲ್ಲೇ ಕರ್ನಾಟಕ ಸರಕಾರದ ಗ್ರಂಥಾಲಯ ಇಲಾಖೆಗೆ ಆಯ್ಕೆ. ನನ್ನ ಬಳಿ ಇಲಾಖೆಗೆ ಒದಗಿಸಲು ಅಷ್ಟು ಪುಸ್ತಕಗಳೇ ಉಳಿದಿರಲಿಲ್ಲ. ಓದುಗರ ಪ್ರೀತಿ ಅದನ್ನೆಲ್ಲ ಗಳಿಸಿಕೊಂಡಿತ್ತು.
ಅನೇಕರ ಒತ್ತಾಸೆಯಾಗಿ ಅದು ಎರಡನೇ ಪರಿಷ್ಕೃತ ಮುದ್ರಣಕ್ಕೆ ಸಿದ್ಧಗೊಳ್ಳುತ್ತಿದೆ. ಅದಕ್ಕೆ ಮುನ್ನ ಇನ್ನೊಂದು ಪುಸ್ತಕ ಅದೇ ಕಲಬುರಗಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮೇ ಹದಿನಾಲ್ಕರಂದು (ನಾಳೆಯೇ) ಲೋಕಾರ್ಪಣೆಗೆ ಅಣಿಯಾಗಿದೆ. ಎಂದಿನಂತೆ ನನ್ನೊಳಗೆ ಹುಟ್ಟೂರು ಕಡಕೋಳದಷ್ಟೇ ಸದಾ ಜೀವಂತವಾಗಿರುವ ಕಲಬುರಗಿಯ ವಾತ್ಸಲ್ಯದ ಹೊನಲು ಮುಗಿಲಿಗೂ ಮಿಗಿಲು. ಅಂತೆಯೇ ಆ ಪ್ರೀತಿ ಪರಾಮಳಿಕೆಗಳು ಕಡಕೋಳ ನೆಲದ ನೆನಪುಗಳ ಮೇಲಿರಲಿಯೆಂಬ ಆರ್ದ್ರಭಾವ.
ಮರೆತಮಾತು : ಕಲರ್ಸ್ ಕನ್ನಡದ ಎದೆತುಂಬಿ ಹಾಡುವೆನು ಖ್ಯಾತಿಯ ಗಡಿಲಿಂಗದಹಳ್ಳಿ ಗೆಳೆಯ ಸೂರ್ಯಕಾಂತ ಪುಸ್ತಕ ಲೋಕಾರ್ಪಣೆಯ ಸನ್ನಿಧಿಯಲಿ ಹಾಡುತ್ತಾನೆ. ಅವು ಸಾಮಾನ್ಯ ಹಾಡುಗಳಲ್ಲ. ಕಡಕೋಳ ಮಡಿವಾಳಪ್ಪನ ಮಹಾಬಯಲು ತುಂಬಿದ ಅಂತಃಕರಣದ ಮಹಾಮಳೆ. ಮರೆಯದೇ ಸವಡು ಮಾಡಿಕೊಂಡು ಬರ್ರಿ ಸಂಭ್ರಮಿಸಿರಿ.
ಮಲ್ಲಿಕಾರ್ಜುನ ಕಡಕೋಳ
9341010712