ಆಚಾರವೇ ಸ್ವರ್ಗ

ಪುಣ್ಯ ಪಾಪವೆ೦ಬುವು ತಮ್ಮಿಷ್ಟ ಕಂಡಿರೇ ”ಅಯ್ಯಾ” ಎಂದಡೆ ಸ್ವರ್ಗ ಎಲವೋ” ಎಂದಡೆ ನರಕ*
ದೇವ ಭಕ್ತಿ – ಜಯ – ಜೀಯಾ ಎಂಬ ನುಡಿಯೊಳಗೆ ಕೈಲಾಸವೈದುವುದ

                                         -ಕೂಡಲಸಂಗಮದೇವಾ

ಪುಣ್ಯ ಪಾಪವೆ೦ಬುವು ತಮ್ಮಿಷ್ಟ ಕಂಡಿರೇ ”ಅಯ್ಯಾ” ಎಂದಡೆ ಸ್ವರ್ಗ ಎಲವೋ” ಎಂದಡೆ ನರಕ

ಈ ಜಗತ್ತಿನಲ್ಲಿ  ಸುಖವಾಗಲೀ ದುಃಖವಾಗಲೀ ಬೇರೆಲ್ಲೂ ಇಲ್ಲ. ನಮ್ಮಲ್ಲಿಯೇ ಇವೆ. ಸುಖಕ್ಕಾಗಲೀ, ದುಃಖಕ್ಕಾಗಲೀ ನಿರ್ದಿಷ್ಟವಾದ ಮೌಲ್ಯಮಾಪನಗಳಿಲ್ಲ ಅವರವರ ಭಾವಕ್ಕೆ ಸುಖ ದುಃಖಗಳು ಪರಿಣಾಮ ಬೀರುತ್ತವೆ.

ಆದರೆ ಮನುಷ್ಯ ಬಾಲ್ಯದಿಂದಲೂ ಸುಶೀಲನಾಗುವುದಕ್ಕೆ ಪ್ರಯತ್ನಿಸುತ್ತಿರಬೇಕು, ಅಂದರೆ ಆತ ಮನಷ್ಯತ್ವವನ್ನು ಪಡೆಯಬಲ್ಲನು.  ಯುದ್ಧ ನಡೆಯುವುದು ಮೊದಲು ಅಂತರಂಗದಲ್ಲಿ, ಅನಂತರ ರಣರಂಗದಲ್ಲಿ’ ಎಂಬ ಮಾತಿದೆ. ಹೌದು, ಯುದ್ಧಕ್ಕೆ ಕಾರಣ ಪರಸ್ಪರ ದ್ವೇಷ, ಅಸೂಯೆ ಹಾಗೂ ವೈರ ಮನೋಭಾವವೇ, ಅರ್ಥಾತ್ ಪ್ರೀತಿಯ ಕೊರತೆಯೇ ಇದರಿಂದಾಗಿ ಮನದಲ್ಲಿದ್ದ ಕಿಡಿ ಹೃದಯವನ್ನು ಸುಡತೊಡಗುತ್ತದೆ. ಪರಸ್ಪರ ಅಸೂಯೆ, ಅಶಾಂತಿ, ಅಸಮಾಧಾನಗಳು ಭುಗಿಲೇಳುತ್ತವೆ. ಕ್ರೋಧ ತಾಂಡವವಾಡುತ್ತದೆ.

ಪೂರ್ವಾಪರ ವಿವೇಕ ಕಣ್ಮರೆಯಾಗುತ್ತದೆ. ಪ್ರೀತಿ ಕಣ್ಮರೆಯಾಯಿತು ಎಂದರೆ ಆಗದವನ ರೀತಿ, ನೀತಿ, ಆಚಾರ ವಿಚಾರ, ಅಲಂಕಾರ ವ್ಯವಹಾರಗಳೆಲ್ಲ ಅಸಹನೀಯವಾಗುತ್ತವೆ. ಆ ಬಗ್ಗೆ ಮನಸ್ಸು ರೋಸಿ ಹೋಗುತ್ತದೆ. ಅವನ ಅವನತಿಯ ಹಾರೈಕೆಯೇ ಹಿತವೆನಿಸುತ್ತದೆ. ಆತನ ನೋವು ಈತನ ನಲಿವಿಗೆ ಕಾರಣವಾಗುತ್ತದೆ; ಆತನ ಯಾತನೆ ಈತನ ನೆಮ್ಮದಿಗೆ ಮೂಲವಾಗುತ್ತದೆ.

. ನಾವು ಜಗತ್ತನ್ನು ಪ್ರೀತಿಸಿದರೆ ಜಗತ್ತು ನಮ್ಮನ್ನು ಪ್ರೀತಿಸುತ್ತದೆ ಭಗವಂತನ ಪ್ರೇಮದಲ್ಲಿ ತನ್ಮಯನಾದವನನ್ನು ಖಂಡಿತವಾಗಿಯೂ ಸುಖಿಯಾಗಿರಿಸುತ್ತಾನೆ, ಪ್ರೇಮವು ಎಲ್ಲ ಸಾಧನಗಳ ಪ್ರಾಣವಾಗಿದೆ. ಭಕ್ತಿಗೆ ಇನ್ನೊಂದು ಹೆಸರು ಪ್ರೇಮ, ಭಗವಂತನಿಗೆ ಪ್ರೇಮವನ್ನು ಬಿಟ್ಟರೆ ಬೇರೇನೂ ಬೇಕಾಗಿಲ್ಲ, ನಿಸ್ವಾರ್ಥ ಬುದ್ದಿಯು ಪ್ರೇಮದಿಂದ ಭಗವಂತನೂ ಗುಲಾಮನಾಗುವಂತೆ ಮಾಡುವುದು ಸಾಧ್ಯ ಭಗವಂತನ ಪ್ರೇಮದ ದೊಡ್ಡ ಹುಚ್ಚು; ಆ ಹುಚ್ಚು ಹಿಡಿದವನು ಮಹಾ ಭಾಗ್ಯವಂತನೇ ಸರಿ; ಯಾರು ಬಹುಜನರಿಗೆ ಪ್ರಿಯರಾಗಿರುವರೋ ಅವರು ಭಗವಂತನನ್ನು ಹೊಂದಿದವರೆಂದು ತಿಳಿಯಬೇಕು. ರೋಗದಿಂದ ಬಳಲುವವನಿಗೆ ಒಂದು ಪ್ರೇಮದ ನುಡಿಯ ನೂರಾರು ಡಾಕ್ಟರುಗಳ ಔಷಧಿಗಿಂತ ಹೆಚ್ಚು ಪರಿಣಾಮಕಾರಿಯಾದೀತು; ಪ್ರೇಮವು ಒಂದು ಮಹಾಶಕ್ತಿ; ಆದರಿಂದ ಜಗತ್ತನ್ನೇ ಗೆಲ್ಲಬಹುದಾಗಿದೆ. ಇದೆಲ್ಲವೂ ಪ್ರೇಮದಪವಾಡ .ಸುವಿಚಾರಿಗಳೊಡನೆ ಗೆಳೆತನ ಸುಜ್ಜಾನಿಗಳ ಸಹವಾಸ ಬೇಕು.ಅಂಥವರಲ್ಲಿ ಪೂಜ್ಯವಾದ ಭಾವನೆ ವಿಶ್ವಾಸಬೇಕು. ಅವರ ಜ್ಞಾನಾಮೃತವನ್ನು ನಾವು ಕಿಂಚಿತ್ತಾದರೂ ಪಡೆಯಲು ಪ್ರಯತ್ನಿಸಬೇಕು.ಅದರಲ್ಲಿ ವಿನಯ ವಿಧೇಯತೆಗಳು ಅತ್ಯವಶ್ಯ ನಿಷ್ಠೆಬೇಕು.ವಿನಯವು ಶೀಲದ ಮತ್ತೊಂದು ಮುಖ ನಿಷ್ಠೆಯು ಭಕ್ತಿಯ ಇನ್ನೊಂದು ಮುಖವೆನ್ನುತ್ತಾರೆ ಅನುಭವಿಗಳು.
ಆದ್ದರಿಂದಲೇ ಪುಣ್ಯ ಕಾರ್ಯವೆಂದರೆ ನಮ್ಮಿಂದ ಸುಲಭಸಾಧ್ಯವಲ್ಲವೆಂದು ತಟಸ್ಥರಾಗುವರು ಓಲುವರು. ಇದು ಸರಿಯಾದ ಮಾರ್ಗವೆನಿಸಬಹುದೇ ?

ಪಾಪ – ಪುಣ್ಯಗಳೆರಡರಲ್ಲಿ ಯಾವುದನ್ನು ಗಳಿಸುವುದೂ ಸುಲಭವೇ : ಆದರೆ ಗಳಿಸುವ ದಾರಿ ಮಾತ್ರ ಹಲವಾರು, ”ಅಯ್ಯಾ” ಎಂದು ಪರಸ್ಪರ ಗೌರವಭಾವಗಳಿಂದ ಜನರೊಡನೆ ವ್ಯವಹರಿಸಿದರೆ ನಮ್ರತೆಯಿಂದ ನಡೆದುದಾದರೆ ಪುಣ್ಯದ ದಾರಿಯಲ್ಲಿ ನಡೆದ ಹಾಗೆಯೇ, ಅದರಿಂದ ಬೇರೆಯವರ ಮನನೋಯದು. ತನಗೂ ತೊಂದರೆಯಾವರಿಸರು, ಮನಕ್ಕೂ ನೆಮ್ಮದಿ ಲಭಿಸುವುದು. ಕಾರ್ಯಕ್ಕೆ ಯಾವುದೇ ತರಹದ ಕುಂದು ಕೊರತೆಯೂ ಬರದು, ಇದೇ ಸ್ವರ್ಗ ಸುಖವಲ್ಲವೇ ? “ಎಲವೋ’ ಎಂದು ಪ್ರತಿಷ್ಠೆಯಿಂದ ದುರಹಂಕಾರದಿಂದ ಸೊಕ್ಕಿನಿಂದ ಸಮಾಜದ ವಿರುದ್ಧ ರೀತಿಯಲ್ಲಿ ನಡೆದುಕೊಂಡರೆ ಅದುವೇ ಮಾನ, ಆದ್ದರಿಂದ ಬೇರೆಯವರ ಮನ ನೋಯುವುದು ಖಂಡಿತ. ಅದರಿಂದ ತನಗೂ ಮಾನಸಿಕ ನೆಮ್ಮದಿ ಲಭಿಸದು. ಕೆಲಸಗಳೂ ಸರಿಯಾಗಿ ಸಾಗುವುದಿಲ್ಲ. ಇದುವೇ ನರಕಯಾತನೆಯ ರೀತಿ; ಪುಣ್ಯಪಾಪಗಳೆ೦ಬುವು – ಸ್ವರ್ಗ ನರಕಗಳೆಂಬುವು, ನಮ್ಮ ನಮ್ಮ ಕೈ ಬಾಯಿಗಳಿಂದ ಮಾಡಿಕೊಂಡಂಥ ಸ್ವಂತ ಸೃಷ್ಟಿಗಳು, ಅದಕ್ಕೆ ನಾವೇ ಹೊಣೆಗಾರರು ಎಂದು ಬಸವಣ್ಣನವರು ಸಾರಿ ಸಾರಿ ಹೇಳಿದರು. ಅದೇ ರೀತಿ ದೇವಲೋಕವೆಂಬುದು ಆಕಾಶದಲ್ಲೆಲ್ಲೂ ಇಲ್ಲ. ಸತ್ಯ ಮಾತನಾಡಿದರೆ ಆ ಪರಿಸರವೆಲ್ಲವೂ ದೇವ ಲೋಕವಾಗಿ ಮಾರ್ಪಡುವುದು ಎಂದಿನಂತೆ ದುರಾಚಾರವನ್ನೇ ಮುಂದುವರಿಸಿದರೆ ನಾವು ನಿಂತ ನೆಲ-ಹೊಲ -ಮೇರೆಯಲ್ಲ, ಮರ್ತ್ಯಲೋಕವಾಗಿ ಉಳಿಯುವುದು, ಸ್ವರ್ಗ ನರಕಗಳ ಮಾತೂ ಅಷ್ಟೆ; ಅನಾಚಾರದಿಂದ ಈ ನೆಲವೇ ನರಕವಾಗುವುದು, ಸದಾಚಾರದಿಂದಸ್ವರ್ಗವಾಗುವುದು, ಅಂತೆಯೇ ಪ್ರತಿಯೊಬ್ಬರೂ ಈ ಭೂ ಲೋಕದಲ್ಲಿ ತಮ್ಮ ತಮ್ಮ ಪರಿಧಿಯನ್ನು ಪ್ರದೇಶವನ್ನಾದರೂ ಸತ್ಯದಿಂದ ಸದಾಚಾರದಿಂದ ದೇವಲೋಕವನ್ನಾಗಿ ಮಾರ್ಪಡಿಸಬೇಕು, ಸ್ವರ್ಗವನ್ನಾಗಿಸಬೇಕು; “ದೇವ ಭಕ್ತಿ – ಜಯ – ಜೀಯಾ ಎಂಬ ನುಡಿಯೊಳಗೆ ಕೈಲಾಸವೈದುವುದು

ಶರಣ ಸಾಹಿತ್ಯ ಅಪಾರವಾದುದು.ಅದು ಜೀವನದ ಮಾರ್ಗದರ್ಶಿ ನಿಜದ ನಿಲುವನ್ನು ಕಾಣಲು ಸಹಕಾರಿ.ಸರಿಯಾಗಿ ಜೀವನ ಸಾಗಿಸಿದಾಗ ಕೈಲಾಸವೇ ಇಲ್ಲಿಗೆ ಬರುವುದು ಶರಣರ ಅಂಗವೇ ವಾರಣಾಸಿ ದಾನವನಾದ ಮಾನವನು ದೇವನಾಗುವ ಶಾಲೆಯೇ ಇದು.
ಹೀಗೆ ದೇವನೆನಿಸಿಕೊಳ್ಳಬೇಕಾದರೆ
ಶರಣನು ಸಮಾಜದ ಜನರೆಲ್ಲರ ಜೊತೆಗೆ ನಯ-ವಿನಯತೆಯಿಂದ ನಡೆದುಕೊಳ್ಳಬೇಕು. ಸದಾಚಾರ ಸಂಪನ್ನನಾಗಿ ಎಲ್ಲರ ಜೊತೆಗೆ ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ಕೂಡಾ ಅಹಂಕಾರ ತೋರದೇ ನಡೆದು ನುಡಿದು ತೋರಿಸಿದವರು .
ದೇವ, ಭಕ್ತ. ಜಯ-ಜೀಯಾ ಎಂಬ ನುಡಿಯೊಳಗೆ ಕೈಲಾಸವನ್ನೇ ಕಾಣಬಹುದು ಎಂದು ಅರುಹಿದರು ಶರಣರು. ಪಾಪಕ್ಕಾಗಲೀ – ಪುಣ್ಯಕ್ಕಾಗಲೀ ಎಡೆಯಿಲ್ಲ. ನಾವು ಮಾತ್ರ ನಮ್ರರಾಗಿದ್ದು ನಿಜ ಜೀವನದತ್ತ ಸಾಗಬೇಕು, ಆ ದಯಾಮಯನಲ್ಲಿ ನಮ್ಮ ಪಾಪ ಪರಿಹರಿಸುವ ಕೃಪೆ ಮಾಡೆಂದು ಕೈಯೊಡ್ಡಿ ಪ್ರಾರ್ಥಿಸಬೇಕು. ”ಅಯ್ಯಾ’ ಎಂದರೆ ಸ್ವರ್ಗ, ”ಎಲವೋ” ಎಂದರೆ ನರಕ ಎನ್ನುವಲ್ಲಿ ನಯವಿನಯ ಶೀಲರು ಸ್ವರ್ಗ ಸುಖವನ್ನೇ ಅನುಭವಿಸುವರು, ಅಂಥ ಮಹಾನುಭಾವರು ನುಡಿದುದೇ ವೇದ, ನಡೆದುದೆ ಶಿವಮಾರ್ಗವಾಯಿತು.

ಪರೋಪಕಾರಾರ್ಥಂ ಇದಂ ಶರೀರಂ

ಶ್ರೀಮತಿ ಸಾವಿತ್ರಿ ಮಹದೇವಪ್ಪ ಕಮಲಾಪೂರ ಮೂಡಲಗಿ*

Don`t copy text!