ನಿಸಾರರ ಉವಾಚ

ನಿಸಾರರ ಉವಾಚ

ಏನ್ಮಾಡ್ಲಿ ದೇವ್ರು ಕೊನೆಗೂ
ಬಾ ಬಾಬಾ ಎಂದು ಕರ್ಕೊಂಡ್ಬಿಟ್ಟ.
ನನಗಿನ್ನೂ ಕನ್ನಡಮ್ಮನ ಸೇವೆ
ಮಾಡ್ಬೇಕು, ಪದಗಳ ಹೊಸೆಬೇಕು,
ಜೋಗದ ಸಿರಿಗೆ ಇನ್ನೊಂದಿಷ್ಟು
ಹೊಸ ಬೆಳಕು ಹರಿಸೋಣ,
ಕನ್ನಡ ತಾಯಿಗೆ
ಅಕ್ಷರಗಳ ರಂಗೋಲಿ ಹಾಕೋಣ
ಎಂಬಿತ್ಯಾದಿ ಸಾವಿರಾರು ಕನಸು.

ನನ್ನೀ ಶರೀರಕ್ಕೆ ಬಾಧಿಸಿದ್ದು,
ಕರೋನವಲ್ಲ, ಕ್ಯಾನ್ಸರ್.
ಇವುಗಳಿಗಿಂತ
ಕಣ್ಣಮುಂದೆ ಕರುಳಬಳ್ಳಿ ಅಗಲಿದ್ದು.

ಇರಲಿಬಿಡಿ, ಹಸುವನ್ನು
ಕರು ಹಿಂಬಾಲಿಸಿದಂತೆ
ತಂದೆಯೇ ಜಗ ತೊರೆದು
ನಡೆಯಬೇಕಾಯ್ತು ಮಗನಿರುವನೆಡೆಗೆ.

ಇಲ್ಲಿ ಯಾವ ಗೌಜು -ಗದ್ದಲವಿಲ್ಲ
ಕುರಾನ್ -ಗೀತಾ – ಬೈಬಲ್, ಇತ್ಯಾದಿಗಳ
ಶ್ರೇಷ್ಠ – ಕನಿಷ್ಠವೆಂಬ ತಾರತಮ್ಯ ಇಲ್ಲವೇ ಇಲ್ಲ.
ಅಲ್ಲಾನು ಇಲ್ಲ – ಈಶ್ವರನೂ ಇಲ್ಲ
ದಲಿತನೂ ಇಲ್ಲ – ಅಲ್ಪಸಂಖ್ಯಾತರು ಇಲ್ಲ
ಕ್ರಿಸ್ತ – ಹಿಂದೂ -ಮುಸ್ಲಿಂ – ಬೌದ್ಧ – ಜೈನ -ಸಿಖ್
ಯಾವ ಪಂಗಡಗಳೂ ಇಲ್ಲವೇ ಇಲ್ಲ.
ಇಲ್ಲಿರುವರಿಗೆಲ್ಲ ಒಂದೇ ಹೆಸರು ‘ಅಮರರು’.

ನನ್ನ ಬರುವಿಕೆಗಾಗಿ ಕಾಯುತ್ತಾ ಇದ್ದ,
ಬಂಧು – ಬಾಂಧವರು, ನಿಸಾರ್ ಮುಸ್ಲಿಂ ಎಂದು
ಬೇಧ – ಭಾವಮಾಡದೆ ಕಲಿಸಿದ ಗುರುಗಳು
ಒಡನಾಡಿ ಗೆಳೆಯರು ಸ್ವಾಗತಿಸಿದರು.
ಯಾವ ಹೂ – ತುರಾಯಿಗಳನ್ನು
ಹಿಡಿದಿರಲಿಲ್ಲ. ಮುಖದಲ್ಲಿ ಮಂದಸ್ಮಿತವಿತ್ತು.
“ಬಾರಯ್ಯ ಬಾ ಬಾ ನಿಸಾರ
ಭೂಗರ್ಭ ಮಾಸ್ತರ..
ಹೇಗಿದೆಯಯ್ಯ ಭೂ – ಲೋಕ
ಅಲ್ಲಿರುವ ಕುರಿಗಳು.. ”
ಎಂದು ಕಿಚಾಯಿಸಿದರು..
ನಾನೆಂದೆ, ಸರ್.. ಕುರಿಗಳ್ ಸಾರ್ ಕುರಿಗಳು
ಸಿಕ್ಕ ಕಡೆ ಮೇಯುತ್ತಾ’ ಆಡು ಮುಟ್ಟದ ಸೊಪ್ಪಿಲ್ಲ ‘
ಎಂಬ ಮಾತಿಗೆ ಅನ್ವರ್ಥಕವಾಗಿ ಸುಖವ್ವಾಗಿವೆ ಎಂದೆ.

ಎಲ್ಲರೂ ಒಕ್ಕೊರಳಲಿ ಹೇಳಿದರು.
ಇರಲಿಬಿಡು ಭೂಲೋಕದ ಕಹಿಕಳಚಿ
ಸವಿನೆನಪುಗಳ ಹೊತ್ತು ಬಾ
ಬಾ ಬಾ ನಿಸಾರ್, ಇಲ್ಲೇ ಬರೆಯೋಣ
ಕನ್ನಡ ಕವನಗಳನ್ನ….
ಬಾಗಿಲಲ್ಲೇ ನಿಂತ ಮಗನ
ಕಣ್ಣಲ್ಲಿ ಆನಂದ ಬಾಷ್ಪ ಜಿನುಗುತ್ತಿತ್ತು
ಕಳೆದೋದ ಮಗ ಸಿಕ್ಕ ನನಗೆ ಹೊಸಲೋಕ ತೆರೆದಿತ್ತು.
ಮರುಹುಟ್ಟು ಇದ್ದರೆ, ಮನಸು ಮತ್ತೆ ಕನ್ನಡ ನಾಡೆಂದಿತ್ತು.

ಶಿವಶರಣ ಯು.
(ಹಂಸಪ್ರಿಯ)
ವಿಜಯಪುರ.

Don`t copy text!