ತಳಮಳದಳಲು
ಕಣ್ಣ ಕೊಳದಲಿ ನಡೆದ
ದೃಷ್ಟಿ ಯುದ್ಧಕೆ ಬೆದರಿದ
ಕಂಪಿತ ತುಟಿಯಲದೇನೋ
ಮೂಡಿತು ಹೊಸತು ಸಿರಿ
ಎದೆಪದರದಲದುರಿದ
ಹೃದಯದಾ ಪದಪಲ್ಲವಿಗೆ
ಬೆನ್ನ ಕಾಲುವೆಗುಂಟ ಹರಿಯಿತು
ನವಿರು ಬೆವರ ಝರಿ
ಸೋಕಿದಾ ಬೆರಳ ತುದಿಯ
ತಾಕಿದಮೃತ ಸಿಂಚನವ
ನಾಸಿಕದೆ ಮೂಸಿ ನಾಲಿಗೆಯಲಿ
ನೆಕ್ಕಲೊಲವಿನಲುಲಿಯಿತೈಸಿರಿ
ಓದುಗೂಳಿಗಳ ತೆರ ಪುಟ
ಪುಟವ ತಿರುವಿ ಹರವಿದ
ತೀರದಾಸೆಯ ಹಿಂದೆಯೇ
ಕಡಲ ಕಣಿವೆಯ ವನಸಿರಿ
ಹುಚ್ಚುಗುದುರೆಯ ಖುರಪುಟಕೆ
ಒಳತೋಟಿಯಲರಳುತಿದೆ
ಅವನ ಹರವಾದೆದೆಯಲಿ
ಹುದುಗಿ ಸುಖಿಸುವ ಸಂಧಿಯುರಿ
-ನೀ ಶ್ರೀಶೈಲ ಹುಲ್ಲೂರು