ಅಲ್ಲ ನಾನು
ಅಲ್ಲ ನಾನು ಅಬಲೆ ಅಸಹಾಯಕಿ
ಅಲ್ಲ ನಾನು ಅಹಲ್ಯೆ ರಾಮನ ಆಗಮನಕೆ ಕಾಯುವ ಕಲ್ಲು ಅಲ್ಲ ನಾನು ಸೀತೆ
ಗಂಡನ ಬೆನ್ನು ಹತ್ತಿ ಅಡವಿಯ ವನವಾಸ ಅನುಭವಿಸಿದವಳು
ಯಮನ ಜೊತೆ ಕಾದಾಡಿ ಗಂಡನ ಬದುಕಿಸಿದ ಸಾವಿತ್ರಿ
ರಾವಣನ ಸಾವು ಕಂಡರೂ ಮರುಗದ ಮಂಡೋದರಿ
ಒಂಟಿಗಾಲಿನ ಮೇಲೆ ಗಂಡನನ ಆಗಮನಕೆ
ನೀರಿಕ್ಷೆಯ ಊರ್ಮಿಳೆಯ ಗಟ್ಟಿಗೊಂಡ ನಿಟ್ಟುಸಿರು
ಕಟ್ಟಲಾರೆ ಕಣ್ಣಿಗೆ ಬಟ್ಟೆ ಬಳಲಿವೆ
ಗಾಂಧಾರಿಯ
ಕನವರಿಸುವ ಕನಸುಗಳು
ಹಾರಲಾರೆ ಪಾರ್ವತಿಯಂತೆ
ದಕ್ಷನ ಬೆಂಕಿ ಯಜ್ಞ ಕುಂಡದಲ್ಲಿ
ಜೀವ ತೇಯಲಾರೆ ಬಳಲಲಾರೆ ಒಪ್ಪಲಾರೆ
ಮನುವಿನ ಕಟ್ಟಳೆ ಬಂಧಿಯಾಗದು ಸೂತ್ರ
ಹೌದು ನಾನೊಂದು ಹೆಣ್ಣು
ಧಿಕ್ಕರಿಸುವೆ ಸ್ತ್ರೀ ಶೋಷಣೆ
ಬಾಳುವೆ ಮೌಲ್ಯಗಳ ಘೋಷಣೆ
ಸಂವೇದಿ ಸಂಘರ್ಷ ಹೋರಾಟ ನನ್ನ ಭಾಷೆ
ಗಂಡನ ತಿದ್ದಿದಳು ಆಯ್ದಕ್ಕಿ ಲಕ್ಕಮ್ಮ
ದಾಸಯ್ಯನ ಜೊತೆಗೂಡಿ ಸೀರೆ ನೇಯ್ದ ದುಗ್ಗಳೆ
ಕೇತಯ್ಯನ ಪಣವಿಟ್ಟ ಗೆದ್ದಳು ಸಾತವ್ವ ತಾಯಿ
ಅಪ್ಪ ಬಸವನ ಕ್ರಾಂತಿ ನೀಲಲೋಚನೆ ಕಾಂತಿ
ಅಲ್ಲಮನ ಸೆಣೆಸಿದಳು ಅಕ್ಕ ಮುಕ್ತಾಯಿ
ಹೆಣ್ಣೆಂದು ನಾವು ಮೂಗು ಮುರಿಯಲು ಬೇಡಿ
ತೊಟ್ಟಿಲು ತೂಗಿದಳು ಜಗ ತೂಗಲಾರಳೆ?
ದೇವಲೋಕದ ಬಟ್ಟೆ ಸತ್ಯ ಶಿವ ಶರಣೆ
ಸ್ನೇಹ ಪ್ರೀತಿ ಪ್ರೇಮ ಕರುಣೆ ಅಲ್ಲ ನಾನು ಅಬಲೆ ಆಹಲ್ಯೆ ಸೀತೆ ಸಾವಿತ್ರಿ
– ರೇಖಾ ಸ್ ವಡಕಣ್ಣವರ್
ಲಕ್ಷ್ಮೇಶ್ವರ