ಮಗಳೊಂದಿಗೆ ಪರೀಕ್ಷೆ ಬರೆದಿದ್ದ ತಾಯಿ, ಮಗನೊಂದಿಗೆ ಪರೀಕ್ಷೆ ಬರೆದಿದ್ದ ತಂದೆ ಪಾಸಾಗಿದ್ದಾರೆ.

e-ಸುದ್ದಿ ಬೆಂಗಳೂರು

ಈ ಬಾರಿ ಎಸ್ಸೆಸ್ಸೆಲ್ಸಿ  ಪರೀಕ್ಷೆ ಫಲಿತಾಂಶ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಮಗಳೊಂದಿಗೆ ಪರೀಕ್ಷೆ ಬರೆದಿದ್ದ ತಾಯಿ ಪಾಸಾಗಿದ್ದಾರೆ. ಅದೇ ರೀತಿ ಮಗನೊಂದಿಗೆ ಪರೀಕ್ಷೆ ಬರೆದಿದ್ದ ತಂದೆ ಪಾಸಾಗಿದ್ದಾರೆ.

ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ತಾಯಿ-ಮಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. 37 ವರ್ಷದ ಸವಿತಾ 2002 -03ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ವಿದ್ಯಾರ್ಥಿನಿಯಾಗಿದ್ದರು. ನಂತರದಲ್ಲಿ ಅವರು ಮದುವೆಯಾದ ಕಾರಣ ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಲಿಲ್ಲ. ಈಗ ಮಗಳು ಚೇತನಾ ಅವರೊಂದಿಗೆ ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ತೇರ್ಗಡೆಯಾಗಿದ್ದಾರೆ. ಚೇತನ ಶೇ.85ರಷ್ಟು ಅಂಕ ಪಡೆದುಕೊಂಡಿದ್ದು, ತಾಯಿ ಸವಿತಾ ಶೇ45ರಷ್ಟು ಅಂಕ ಪಡೆದಿದ್ದಾರೆ.
ಕಂಪ್ಲಿ ತಾಲೂಕಿನ ದೇವಲಾಪುರದಲ್ಲಿ 41 ವರ್ಷದ ಗೌಡ್ರು ಷಣ್ಮುಖಪ್ಪ ಖಾಸಗಿಯಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು 307 ಅಂಕಗಳಿಸಿ ಉತ್ತೀರ್ಣರಾಗಿದ್ದಾರೆ. ಅವರ ಮಗ ಭರತ್ 500 ಅಂಕ ಗಳಿಸಿದ್ದಾರೆ. 1999ರಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದ ಷಣ್ಮುಖಪ್ಪ 2019 ರಿಂದ 21ರವರೆಗೆ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷರಾಗಿದ್ದರು. ಆಗ ಅವರ ಪುತ್ರಿ ಸುಜಾತರೊಂದಿಗೆ 2020 -21 ನೇ ಸಾಲಿನಲ್ಲಿ ಖಾಸಗಿಯಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಕನ್ನಡ-ಹಿಂದಿ ವಿಷಯಗಳಲ್ಲಿ ಉತ್ತೀರ್ಣರಾಗಿದ್ದರು. ಮತ್ತೆ ಪರೀಕ್ಷೆ ಕಟ್ಟಿದ ಅವರು ಇಂಗ್ಲಿಷ್, ಸಮಾಜ ವಿಷಯಗಳಲ್ಲಿ ಉತ್ತೀರ್ಣರಾಗಿದ್ದು, ಈ ಬಾರಿ ಪುತ್ರ ಭರತ್ ಅವರೊಂದಿಗೆ ಮತ್ತೆ ಪರೀಕ್ಷೆ ಬರೆದು ಗಣಿತ, ವಿಜ್ಞಾನ ವಿಷಯಗಳಲ್ಲಿ ಪಾಸಾಗುವ ಮೂಲಕ ಎಸ್‌ಎಸ್‌ಎಲ್ಸಿ ಪರೀಕ್ಷೆ ಪೂರ್ಣಗೊಳಿಸಿದ್ದಾರೆ.

Don`t copy text!