ಪುಸ್ತಕ ಪರಿಚಯ
“ಆಮ್ರಪಾಲಿ”
– ಐತಿಹಾಸಿಕ ಕಾದಂಬರಿ
ಕೃತಿಕಾರರು:- ಗಾಯತ್ರಿ ರಾಜ್
ಪ್ರಕಾಶನ:- ರಾಜ್ ಪ್ರಕಾಶನ
ಬೆಲೆ:-125/-
“ಆಮ್ರಪಾಲಿಯಿಂದ ಅಂಬೆಪಾಲಿಯವರೆಗೆ”
ಓದುಗನನ್ನು ಕ್ರಿ ಪೂ 500 ನೇ ಶತಮಾನಕ್ಕೆ ಸೆಳೆದೊಯ್ಯುವ, ಅಭೂತಪೂರ್ವವಾಗಿ ಮನಸನ್ನು ತಲ್ಲಣಗೊಳಿಸುವ ಐತಿಹಾಸಿಕ ಕಾದಂಬರಿ ಗಾಯತ್ರಿ ರಾಜ್ ಅವರ “ಆಮ್ರಪಾಲಿ”. ಒಬ್ಬ ದೇಶಭಕ್ತೆಯ ಕಥಾ ಹಂದರ, ಒಬ್ಬ ಸೌಂದರ್ಯದ ಗಣಿಯಾದ ಹೆಣ್ಣು ಎದುರಿಸುವ ರಾಶಿ ರಾಶಿ ಸವಾಲುಗಳ, ಮನದ ತಾಕಲಾಟಗಳ ಕೂಡು ಸಂಗಮ.
ಕ್ರಿಸ್ತ ಪೂರ್ವ ಅಥವಾ ಕ್ರಿಸ್ತ ಶಕೆಯ ಅನೇಕ ಶತಮಾನಗಳಲ್ಲಿ ಈ ಕಥಾ ವಸ್ತುವಿನ ನಾಯಕಿಯಂತೆ ಅನೇಕ ಹೆಣ್ಣು ಮಕ್ಕಳು ಆಗಿನ ರಾಜರ ಅಥವಾ ಪುರುಷರ ದಬ್ಬಾಳಿಕೆಗೆ ತಮ್ಮ ಸರ್ವಸ್ವವನ್ನೂ ಅರ್ಪಿಸಿದ್ದಾರೆ. ತಮ್ಮ ದೇಹದ ಸೌಂದರ್ಯ ಮತ್ತು ಲೈಂಗಿಕ ಶಕ್ತಿ ಹೀನವಾಗುವವರೆಗೆ ನಿರಂತರವಾಗಿ ಪುರುಷರೊಂದಿಗೆ ಅನಿವಾರ್ಯವಾಗಿಯೋ, ಒತ್ತಾಯ ಪೂರ್ವಕವಾಗಿಯೋ ರಾತ್ರಿ ಕಳೆದದ್ದಿದೆ. ಆದರೆ ಈ “ಆಮ್ರಪಾಲಿ” ಏಕೆ ವಿಶಿಷ್ಟ, ಹೇಗೆ ಭಿನ್ನಳು ಎಂಬುದಕ್ಕೆ ಒಂದೇ ಒಂದು ಕಾರಣ ಅದು ದೇಶ ಪ್ರೇಮ, ದೇಶ ಭಕ್ತಿ. ಎಂದಿಗೂ ತಮ್ಮ ರಾಜ್ಯ ಒತ್ತೆಯಾಳಾಗಬಾರದು, ಪರಾಜಯವಾಗಬಾರದು ಎಂಬ ಮಹಾನ್ ಚಿಂತನೆ.
ಅನಾಥವಾದ ಹೆಣ್ಣು ಮಗು ವೈಶಾಲಿಗೆ ಪ್ರವೇಶಿಸಿ, ತಾನು ಯಾವ ರಾಜ್ಯಕ್ಕಾಗಿ, ಯಾವ ರಾಜ್ಯದ ಜನರಿಗಾಗಿ, ಯಾವ ಗಣತಂತ್ರಕ್ಕಾಗಿ ತನ್ನ ಅಷ್ಟೂ ಯವ್ವನವನ್ನು, ಶೀಲವನ್ನು, ಕುಲವಧು ಪಟ್ಟವನ್ನು, ಪ್ರೇಮಿಸುವ ಸ್ವಾತಂತ್ರ್ಯವನ್ನು, ತಾಯ್ತನದ ಬಾಂಧವ್ಯ ತಂತುವನ್ನು ಕಳೆದುಕೊಂಡಳೋ ಕೊನೆಗೆ ಅದೇ ರಾಜ್ಯ, ಅದೇ ರಾಜ್ಯದ ನಿರ್ದೋಷಿ, ಅಮಾಯಕ ಜನರ ಮಾರಣ ಹೋಮಕ್ಕೆ, ಇಡೀ ವೈಶಾಲಿಯೇ ಮನಷ್ಯ ಪ್ರಾಣಿ ಇಲ್ಲದೆ ಅನಾಥವಾದದ್ದಕ್ಕೆ ತಾನೇ ಕಾರಣವಾಗುತ್ತೇನೆ ಎಂದು ಅಂದುಕೊಂಡಿರಲಿಕ್ಕಿಲ್ಲ. ಅದು ವಿಧಿಯ ಪೂರ್ವಯೋಜಿತ ಸಂಚೋ ಎನ್ನಿಸುವಂತೆ ಓದುಗನನ್ನು ಬಿಟ್ಟು ಬಿಡದೆ ಕಾಡುವ ಘಟನೆ.
ಜನಪದ ಕಲ್ಯಾಣಿ, ನಗರವಧು, ರಾಜ ನರ್ತಕಿ, ಉಪಸಂಭೋಗಿನಿ, ರಾಜ ವೇಶ್ಯೆ, ದೇವಿ, ಅಂಬೆ, ಗಣಿಕೆ ಹೀಗೆ ನಾನಾ ಹೆಸರಿನಿಂದ ಕರೆಸಿಕೊಂಡು ಎಲ್ಲ ಹೆಸರುಗಳನ್ನೂ ತ್ಯಜಿಸಿ ಒಬ್ಬ ಬೌದ್ಧ ಭಿಕ್ಷಿಣಿಯಾಗಿ ಐಹಿಕ ಬದುಕಿನಿಂದ ಪರಿತ್ಯಕ್ತಳಾಗಿ ಆಮ್ರಪಾಲಿಯಿಂದ ಅಂಬೆಪಾಲಿಯಾಗುತ್ತಾಳೆ. ಈ ನಡುವೆ ಸರಸ ಸಲ್ಲಾಪ, ಪ್ರೇಮ, ಸಂತಾನ, ತ್ಯಾಗ, ಎಲ್ಲವನ್ನು ಆಮ್ರಪಾಲಿ ಅನುಭವಿಸುತ್ತಾಳೆ. ರಾಜ (ಅ) ನೀತಿ ಎಂಬ ಸ್ತ್ರೀ ಶೋಷಣಾ ನಿಯಮಗಳಿಗೆ, ರಾಜರ ಕುತಂತ್ರಕ್ಕೆ ಬಲಿಯಾಗುತ್ತಾಳೆ. ಅಕ್ಷರಶಃ ದೇವದಾಸಿಯಂತೆ ನಗರವಧು ಆಗುತ್ತಾಳೆ. ಒಂದು ವ್ಯತ್ಯಾಸವೆಂದರೆ ಆ ದಿನದ ರಾತ್ರಿ ಭೋಗಕ್ಕೆ ವ್ಯಕ್ತಿಯ ಆಯ್ಕೆ ಅವಳದ್ದೆಂಬುದಷ್ಟೆ.
ದೇಶದ ಮಾನ ಉಳಿಸಲು ಹೋಗಿ, ದೇಹಾಭಿಮಾನ, ಶೀಲಾಭಿಮಾನ, ಹೃದಯಾಭಿಮಾನ ಎಲ್ಲವನ್ನೂ ಹಾಸಿಗೆಯಲ್ಲಿ ಹರಿಯುವ ಬೆವರಿನಲ್ಲಿ ಇಷ್ಟವಿಲ್ಲದೆಯೂ ಹರಿಸುತ್ತಾಳೆ. ದೇಹವೇನೋ ಪರಿಸ್ಥಿತಿಗೆ ಹೊಂದಿಕೊಂಡು ಬಿಡ್ತು, ಬೇಕೋ ಬೇಡದೆಯೋ ದೇಹ ಸ್ರವಿಸುವ ದ್ರವಕ್ಕೆ ಅಣಿಯಾಗಿ ಬಿಡ್ತು. ಆದರೆ ಮನಸು ಮಾತ್ರ ನಿಷ್ಕಲ್ಮಷ ಪ್ರೇಮಕ್ಕಾಗಿ ಕೊನೆಯವರೆಗೂ ಹಾತೊರೆಯುತ್ತಲೇ ಇತ್ತು. ನಡು ನಡುವೆ ಸಿಕ್ಕಂತಾದರೂ ಅದನ್ನು ರಾಜಾರೋಷವಾಗಿ ಹೇಳಿಕೊಳ್ಳುವ ಅನುಭವಿಸುವ ಹಣೆಬರಹ ಆಮ್ರಪಾಲಿಗಿರಲಿಲ್ಲ. ಇದಕ್ಕೆ ಕಾರಣವೇ ರಾಜ ನೀತಿ. ವೈಶಾಲಿ ಮತ್ತು ಮಗಧ ರಾಜ್ಯಗಳ ನಡುವಿನ ಬಗೆಹರಿಯಲಾಗದ ವೈಷಮ್ಯ.
ಕೇವಲ ಆಮ್ರಪಾಲಿ ಮಾತ್ರವಲ್ಲ, ಈ ಕಾದಂಬರಿಯಲ್ಲಿ ಬರುವ, ಕುಮಾರ ಭಟ್ಟ, ಮಲ್ಲಿಕೆ, ಪುಷ್ಪಕುಮಾರ, ರಾಜ ಮನುದೇವ, ಮಹಾ ಅಮಾತ್ಯರು, ಚಂದ್ರಮೌಳಿ, ಬಿಂಬಸಾರ, ಅಜಾತಶತ್ರು, ಪುರಂಧರ, ರಾಜಮಾತೆ, ಗಾತಮ ಬುದ್ಧ, ದೇವದತ್ತ, ಸುಪ್ರಭಾ, ಸೋಮ, ಆನಂದ, ಅಮಾತ್ಯ ವರ್ಷಾಕರ್, ಅಂಗದ, ಬಲಭದ್ರ ಸೇನ, ಕೌಕಾಲಿಕ ಮುಂತಾದ ಪಾತ್ರಗಳೂ ಓದುಗನನ್ನು ಬಹುವಾಗಿ ಆಕರ್ಷಿಸುತ್ತವೆ. ಪ್ರತೀ ಪಾತ್ರಕ್ಕೂ ನ್ಯಾಯ ಒದಗಿಸಿದ ಕೀರ್ತಿ ಲೇಖಕಿಯವರದ್ದು ಎಂಬುದನ್ನು ಮರೆಯುವಂತಿಲ್ಲ.
ಇಲ್ಲಿ ಆಮ್ರಪಾಲಿ ಒಂದು ಸುಂದರ ಗೊಂಬೆ, ಅದನ್ನು ಆಡಿಸಿದವರು, ಬಳಸಿಕೊಂಡವರು ಬಹಳ ಜನ. ಪ್ರೇಮದಿಂದ, ಕಾಮದಿಂದ, ಕುತಂತ್ರದಿಂದ, ಸ್ನೇಹದಿಂದ ಸೌಂದರ್ಯದ ಗಣಿಯನ್ನು ಕಬಳಿಸುತ್ತಲೇ ಹೋದರು.
ಬಿಂಬಸಾರನ ಸಾವಿಗೆ ಅಜಾತಶತ್ರು ಕಾರಣವಾದದ್ದು, ಗರ್ಭದಲ್ಲಿರುವಾಗಲೇ ತಂದೆಯ ರಕ್ತದ ಬಯಸಿದ ಅಜಾತಶತ್ರು, ಹುಟ್ಟಿದೊಡನೇ ತಿಪ್ಪೆಗೆ ಎಸೆದ ತಾಯಿ, ಅಜಾತಶತೃವಿನ ಕಿರುಬೆರಳನ್ನು ಹುಂಜ ತಿಂದದ್ದು, ಬೆರಳನ್ನು ಬಿಂದುಸಾರ ಬಾಯಲ್ಲಿಟ್ಟುಕೊಂಡದ್ದು, ಇದನ್ನೆಲ್ಲ ತಾಯಿ ಅಜಾತಶತೃವಿಗೆ ಹೇಳಿದ್ದು, ಅವನ ಪಶ್ಚಾತ್ತಾಪ ಒಂದು ಕಡೆ ಓದುಗರನ್ನು ಸೆಳೆದರೆ,
ಅತ್ತ ದೇವದತ್ತ ಗೌತಮ ಬುದ್ಧನನ್ನು ಭಿಕ್ಷುವಾಗಿಯೇ ಕುತಂತ್ರದಿಂದ ಸೋಲಿಸಲು ಹೋಗಿ ಪದೇ ಪದೇ ತಾನೇ ಸೋತು ಕೊನೆಗೆ ಶರಣಾಗಿ ಅಣ್ಣನ ಮಡಿಲಲ್ಲಿ ಪಶ್ಚಾತ್ತಾಪ ಪಟ್ಟು ಅಸುನೀಗೋದು ಮತ್ತೊಂದು ಕಡೆ ಓದುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.
ಮತ್ತೆ ಬಿಂಬಸಾರ ಮತ್ತು ಅಜಾತಶತ್ರು ಇಬ್ಬರ ಪ್ರೇಮಕ್ಕೂ ಹಾತೊರೆದ ಆಮ್ರಪಾಲಿ ಬಿಂಬಸಾರನಿಂದ ಸಂತಾನ ಪಡೆದು ಖುಷಿ ಪಟ್ಟರೆ, ಅಜಾತಶತೃವಿನ ಮೂರ್ಖತನದಿಂದ ವೈಶಾಲಿಯಲ್ಲಿ ಸಂಪೂರ್ಣವಾಗಿ ಕೊನೆಯ ಸಂತಾನವೂ ನಿಶ್ಯೇಶವಾಗಿ ಹರಣವಾದುದನ್ನು ಕಂಡು ಸಂತಾಪ ಪಡುತ್ತಾಳೆ.
ಈ ಘಟನೆಯ ಮರು ಕ್ಷಣದಿಂದಲೇ ಆಮ್ರಪಾಲಿಯಿಂದ ದೂರವಾದ ಅಜಾತಶತ್ರು ಪಶ್ಚಾತ್ತಾಪದಿಂದ ಬೆಂದು, ತಂದೆಯ ಹಾದಿಂತೆ ತಾನೂ ಬುದ್ಧನ ಉಪದೇಶದಿಂದ ಶಾಂತಿದೂತನಾಗುತ್ತಾನೆ.
ಯಾವ ವೈಶಾಲಿಗಾಗಿ ತನ್ನನ್ನು ತಾನು ಅರ್ಪಿಸಿಕೊಂಡಳೋ ಅದೇ ವೈಶಾಲಿಯ ಸರ್ವನಾಶ ಕಂಡ ಆಮ್ರಪಾಲಿಗೆ ಕೊನೆಯ ಆಯ್ಕೆ ಆಮ್ರವನದ ಗೌತಮ ಬುದ್ಧನ ಶಾಂತಿಯ ಮಡಿಲು. ಅಲ್ಲೇ ಅವಳು ಮಹಾಸಾದ್ವಿಯಾಗಿ ಸನ್ಯಾಸ ಸ್ವೀಕರಿಸುತ್ತಾಳೆ.
ಅಲ್ಲಿಗೆ ಕಾದಂಬರಿ ಓದು ಅಂತ್ಯಗೊಂಡರೂ, ಓದುಗ ಮಾತ್ರ ಆಮ್ರಪಾಲಿಯಿಂದ ಹೊರಬರಲಾರ. ಒಂದು, ಎರಡು, ಮೂರು ದಿನವಲ್ಲ ಶಾಶ್ವತವಾಗಿ ನಮ್ಮ ಹೃದಯಗಳಲ್ಲಿ ದೇಶಭಕ್ತೆಯಾಗಿ, ರಾಜ್ಯದ ರಕ್ಷಣಾ ಮಂತ್ರಿಯಾಗಿ ರಾಷ್ಟ್ರಪ್ರೇಮದ ಸೌಧವನ್ನು ಕಟ್ಟಿ ಸಿಂಹಾರೂಢಳಾಗಿ ಇರುತ್ತಾಳೆ. ಪರಸ್ಪರ ಭೇಟಿಯ, ಪ್ರಣಯದ, ಪ್ರತಿರೋಧದ, ಮುಂತಾದ ಅನೇಕ ಘಟನೆಗಳು ಕಾದಂಬರಿಯಲ್ಲಿ ಕಾಣಸಿಗುತ್ತವೆ. ಅವುಗಳನ್ನು ಓದಿಯೇ ಸವಿಯಬೇಕು, ಕಾದಂಬರಿಯಲ್ಲಿ ನಾವೂ ಲೀನವಾಗಿ ವೈಶಾಲಿಯಲ್ಲಿ ಮಿಂದೆದ್ದು ಬರಬೇಕು.
(ಲೇಖಕಿ-ಗಾಯತ್ರಿ ರಾಜ)
ಇಷ್ಟು ಆಮ್ರಪಾಲಿ ಕಾದಂಬರಿಯದ್ದಾದರೆ, ಈ ಮಹಾನ್ ಐತಿಹಾಸಿಕ ವ್ಯಕ್ತಿತ್ವವನ್ನು ನಮಗೆ ದಯಪಾಲಿಸಿದ ಲೇಖಕಿಯವರೂ ಸಹ ಓದುಗರ ಮನವನ್ನು ಕದ್ದು ಹೌದೌದು ಎನಿಸಿಕೊಳ್ಳುತ್ತಾರೆ. ಕಲ್ಪನಾ ಲೋಕದ ಕಾದಂಬರಿಗಳೇ ಬೇರೆ, ಪೌರಾಣಿಕ, ಐತಿಹಾಸಿಕ ಕಾದಂಬರಿಗಳೇ ಬೇರೆ. ಇಲ್ಲಿ ಕಲ್ಪನೆಗೆ ಇತಿಮಿತಿ ಇರುತ್ತದೆ. ವಾಸ್ತವತೆಗೆ ಒತ್ತು ಇರುತ್ತದೆ. ಈ ವಾಸ್ತವ ಸಂಗತಿಯನ್ನು ಕಲೆ ಹಾಕಲು ಒಂದು ಸಂಶೋಧನೆಯನ್ನೇ ಮಾಡಬೇಕು. ಒಂದು ಕಾದಂಬರಿಗಾಗಿ ಹಲವಾರು ಕಾದಂಬರಿ, ಕಥೆ, ಲೇಖನಗಳನ್ನು, ಗ್ರಂಥಗಳನ್ನು, ಐತಿಹಾಸಿಕ ಕೃತಿಗಳನ್ನು ಅಧ್ಯಯನ ಮಾಡಬೇಕು. ಆ ಸ್ಥಳ ದರ್ಶನ ಮಾಡಿ ಐತಿಹ್ಯ ದಾಖಲೆ, ಕುರುಹುಗಳನ್ನು ಪರಿಶೀಲಿಸಿಬೇಕು, ಘಟನಾವಳಿಗಳ ಬಗ್ಗೆ ಅಭ್ಯಸಿಸಬೇಕು. ಆ ನಿಟ್ಟಿನಲ್ಲಿ ಸಹೋದರಿ ಶ್ರೀಮತಿ ಗಾಯತ್ರಿ ರಾಜ್ ಅವರ ಕಾರ್ಯ ವರ್ಣನಾತೀತ, ರೋಚಕ, ಅಪರೂಪ ಮತ್ತು ಶ್ಲಾಘನೀಯವಾದುದು. ಇನ್ನೂ ಅವರಿಂದ ಮತ್ತಷ್ಟು, ಮೊಗದಷ್ಟೂ ಇಂತಹ ಕಾದಂಬರಿಗಳು ಬರಲಿ ಎಂದು ಆಶಯಪಡುತ್ತ, ಅವರಿಗೆ ಮನಃಪೂರ್ವಕ ಅಭಿನಂದನೆಗಳು
– ವರದೇಂದ್ರ ಕೆ ಮಸ್ಕಿ
9945253030
ಪ್ರತಿಗಳಿಗಾಗಿ ಸಂಪರ್ಕಿಸಿ
—— ಶ್ರೀಮತಿ ಗಾಯತ್ರಿ ರಾಜ್
91485 68846